ಅಹಮ್ಮದಾಬಾದ್: ಎಲ್ ಪಿಜಿ ಸಿಲೆಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶನಿವಾರ(ಜುಲೈ 24) ಗುಜರಾತ್ ನ ಅಹಮ್ಮದಾಬಾದ್ ನಗರದಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಕುತೂಹಲಕ್ಕೆ ಕಾರಣವಾದ ಮುರುಗೇಶ ನಿರಾಣಿ- ಬಸವರಾಜ ಪಾಟೀಲ್ ಸೇಡಂ ಗೌಪ್ಯ ಮಾತುಕತೆ
ಅನಿಲ ಸೋರಿಕೆಯಿಂದ ಎಲ್ ಪಿಜಿ ಸಿಲಿಂಡರ್ ಸ್ಫೋಟಗೊಂಡು, ಬೆಂಕಿ ಹೊತ್ತಿಕೊಂಡಿತ್ತು. ಇದರ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿ ಹತ್ತು ಮಂದಿ ಗಂಭೀರವಾದ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಘಟನೆ ಜುಲೈ 20ರಂದು ನಡೆದಿತ್ತು ಎಂದು ಅಸ್ಲಾಲಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪಿಆರ್ ಜಡೇಜಾ ವಿವರ ನೀಡಿರುವುದಾಗಿ ವರದಿ ಹೇಳಿದೆ.
ಇದರಲ್ಲಿ ಮೂವರು ಮಂದಿ ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲಿಯೇ ಗುರುವಾರ ಸಾವನ್ನಪ್ಪಿದ್ದರು. ಶುಕ್ರವಾರ ಐದು ಮಂದಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಇಂದು ಬೆಳಗ್ಗೆ ಒಬ್ಬರು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಸಿಲಿಂಡರ್ ನಿಂದ ಗ್ಯಾಸ್ ಸೋರಿಕೆಯಾಗುತ್ತಿರುವ ಸಂದರ್ಭದಲ್ಲಿ ಕಾರ್ಮಿಕರು ತಮ್ಮ ಕುಟುಂಬ ಸದಸ್ಯರ ಜತೆ ಪುಟ್ಟ ಕೋಣೆಯಲ್ಲಿ ನಿದ್ದೆಗೆ ಶರಣಾಗಿದ್ದರು. ಈ ಸಂದರ್ಭದಲ್ಲಿ ನೆರೆಮನೆಯ ವ್ಯಕ್ತಿಯೊಬ್ಬರು ಗ್ಯಾಸ್ ವಾಸನೆ ಬರುತ್ತಿರುವ ಬಗ್ಗೆ ವಿಷಯ ತಿಳಿಸಲು ಬಾಗಿಲು ತಟ್ಟಿದ್ದರು. ಆಗ ಮನೆಯೊಳಗಿದ್ದ ವ್ಯಕ್ತಿ ಎದ್ದು ಬಲ್ಬ ಸ್ವಿಚ್ ಆನ್ ಮಾಡಿದಾಗ ಏಕಾಏಕಿ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿತ್ತು ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.
ಘಟನೆಯಲ್ಲಿ ಮಾಹಿತಿ ನೀಡಲು ಬಂದ ವ್ಯಕ್ತಿ ಸೇರಿದಂತೆ ಹತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಂಪೈಯಾರಿ (56ವರ್ಷ), ರಾಜುಭಾಯಿ (31ವರ್ಷ), ಸೋನು (21ವರ್ಷ), ಸೀಮಾ (25ವರ್ಷ), ಸರ್ಜು(22ವರ್ಷ), ವೈಶಾಲಿ (7ವರ್ಷ), ನಿತೇಶ್ (6ವರ್ಷ), ಪಾಯಲ್ (4ವರ್ಷ) ಮತ್ತು ಆಕಾಶ್ (2 ವರ್ಷ) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಮಧ್ಯಪ್ರದೇಶದ ಗುನಾ ಜಿಲ್ಲೆಯ ನಿವಾಸಿಳಾಗಿದ್ದಾರೆ ಎಂದು ವರದಿ ತಿಳಿಸಿದೆ.
ಘಟನೆಯಲ್ಲಿ ಗಾಯಗೊಂಡಿದ್ದ ನೆರೆಮನೆಯ ವ್ಯಕ್ತಿಯನ್ನು ಕುಲ್ ಸಿನ್ ಭೈರವ್ (30ವರ್ಷ) ಎಂದು ಗುರುತಿಸಲಾಗಿದೆ. ಈತನ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಡೇಜಾ ಅವರು ತಿಳಿಸಿದ್ದಾರೆ.