ಕೋಲ್ಕತ್ತಾ: ಬಿಜೆಪಿಯ ರ್‍ಯಾಲಿಯಲ್ಲಿ ಪೊಲೀಸರ ಮೇಲೆ ಹಲ್ಲೆ ಮತ್ತು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬುಧವಾರ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಹೋರಾಟಕ್ಕೆ ಸಿಎಂ ತಿರುಗೇಟು: ಗಂಗಾ ಕಲ್ಯಾಣ ಅಕ್ರಮದ ತನಿಖೆ ನಡೆಸುತ್ತೇನೆ; ಸಿಎಂ
ಬೆಲಿಯಾಘಾಟಾ, ಟಾಪ್ಸಿಯಾ ಮತ್ತು ಬೌಬಜಾರ್ ಪ್ರದೇಶಗಳಲ್ಲಿ ರಾತ್ರಿಯಿಡಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು ಇಂದು ಬ್ಯಾಂಕ್‌ಶಾಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವಿವರ: ಕೋಲ್ಕತ್ತಾ ಪೊಲೀಸರು ಹೌರಾ ಸೇತುವೆ ಬಳಿ ಬಿಜೆಪಿ ರ್‍ಯಾಲಿಯನ್ನು ತಡೆದಾಗ, ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿತ್ತು. ಬಳಿಕ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.
ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ದೇಬಜಿತ್ ಚಟ್ಟೋಪಾಧ್ಯಾಯ ಅವರನ್ನು ಬೌಬಜಾರ್ ಪ್ರದೇಶದಲ್ಲಿ ಕೆಲವರು ಬೆನ್ನಟ್ಟಿ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಕೋಲ್ಕತ್ತಾ ಪೊಲೀಸ್ ಪ್ರಧಾನ ಕಚೇರಿ ಲಾಲ್‌ಬಜಾರ್ ಬಳಿ ಪೊಲೀಸ್ ವಾಹನಕ್ಕೂ ಬೆಂಕಿ ಹಚ್ಚಲಾಗಿದೆ. ಈ ಘಟನೆಯಿಂದಾಗಿ ಸುಮಾರು 27 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಕೋಲ್ಕತ್ತಾ ಪೊಲೀಸರು ಹೇಳಿದ್ದಾರೆ.
ಕೋಲ್ಕತ್ತಾ ಪೊಲೀಸರು ವಿವಿಧ ಪೊಲೀಸ್ ಠಾಣೆಗಳಲ್ಲಿ ಅಪರಿಚಿತ ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ಸೇರಿದಂತೆ ಒಟ್ಟು ಆರು ಪ್ರಕರಣಗಳನ್ನು ದಾಖಲಿಸಿದ್ದಾರೆ.