Advertisement

4.18 ಲಕ್ಷ ವಾಹನ ನೋಂದಣಿ, ತಪಾಸಣಾ ಕೇಂದ್ರ ಕೇವಲ 6

09:51 PM Sep 13, 2019 | Lakshmi GovindaRaju |

ಹಾಸನ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಸಂಚಾರ ನಿಯಮ ಉಲ್ಲಂಘನೆಗೆ ನಿಗದಿಪಡಿಸಿರುವ ದಂಡದ ಪ್ರಮಾಣ ಕಂಡು ವಾಹನ ಚಾಲಕರು ಆತಂಕಗೊಂಡಿದ್ದಾರೆ. ವಾಹನ ಖರೀದಿ ಸಂದರ್ಭದಲ್ಲಿಯೇ ಬಹುಪಾಲು ದಾಖಲಾತಿಗಳು ವಾಹನ ಮಾಲಿಕರು ಮತ್ತು ಚಾಲಕರ ಕೈ ಸೇರುತ್ತವೆ.

Advertisement

ಆದರೆ, ವಾಹನಗಳ ಮಾಲಿನ್ಯ ತಪಾಸಣೆಯನ್ನು ಪ್ರತಿ 6 ತಿಂಗಳಿಗೊಮ್ಮೆ ಮತ್ತು ವರ್ಷಕ್ಕೊಮ್ಮೆ ಮಾಡಿಸಿ ಪ್ರಮಾಣಪತ್ರವನ್ನು ಚಾಲಕರು ವಾಹನದಲ್ಲಿಟ್ಟುಕೊಂಡು ಪೊಲೀಸರು ತಪಾಸಣೆ ಮಾಡುವಾಗ ಹಾಜರುಪಡಿಸಬೇಕು. ವಾಹನದ ಮಾಲಿನ್ಯ ತಪಾಸಣೆ ಮಾಡಿಸಿದ್ದರೆ 5 ಸಾವಿರ ರೂ. ವರೆಗೂ ದಂಡ ವಿಧಿಸುವ ಅವಕಾಶ ಇರುವುದರಿಂದ ಈಗ ವಾಹನಗಳ ಮಾಲಿನ್ಯ ತಪಾಸಣೆ ಮತ್ತು ಪ್ರಮಾಣಪತ್ರ ಪಡೆಯಲು ನೂಕು ನುಗ್ಗಲು ಉಂಟಾಗಿದೆ.

ವಾಹನ ಸಂಖ್ಯೆಗೆ ತಕ್ಕ ಮಾಲಿನ್ಯ ತಪಾಸಣಾ ಕೇಂದ್ರಗಳಿಲ್ಲ: ಇದುವರೆಗೂ ಮಾಲಿನ್ಯ ತಪಾಸಣೆಯ ಬಗ್ಗೆ ಗಂಭೀರವಾಗಿ ಪೊಲೀಸರು ಪರಿಗಣಿಸುತ್ತಿರಲಿಲ್ಲ. ಆದರೆ ಈಗ ದಂಡದ ಪ್ರಮಾಣ ಹೆಚ್ಚಿರುವುದರಿಂದ ವಾಹನಗಳ ಮಾಲಿನ್ಯ ತಪಾಸಣೆ ಮಾಡಿಸಿ ಪ್ರಮಾಣಪತ್ರ ಪಡೆಯಲು ವಾಹನಗಳ ಮಾಲಿಕರು, ಚಾಲಕರು ಮುಗಿಬಿದ್ದಿದ್ದಾರೆ. ಹಾಸನ ಜಿಲ್ಲೆಯಲ್ಲಿ ಒಟ್ಟು 4,18,727 ಕ್ಕೂ ಹೆಚ್ಚು ವಾಹನಗಳಿವೆ. ಆದರೆ ಜಿಲ್ಲೆಯಲ್ಲಿರುವುದು ಮಾತ್ರ 4 ಮಾಲಿನ್ಯ ತಪಾಸಣಾ ಕೇಂದ್ರ ಮಾತ್ರ. ಹಾಸನ ಮತ್ತು ಸಕಲೇಶಪುರ ಹೊರತುಪಡಿಸಿ ತಾಲೂಕು ಕೇಂದ್ರಗಳಲ್ಲಿ ವಾಹನಗಳ ಮಾಲಿನ್ಯ ತಪಾಸಣಾ ಕೇಂದ್ರಗಳು ಇಲ್ಲ.

ಬಹುತೇಕರು ತಪಾಸಣೆ ನಡೆಸಿಲ್ಲ: ಜಿಲ್ಲೆಯ ವಾಹನಗಳ ಪೈಕಿ ಗೂಡ್ಸ್‌ ಕ್ಯಾರಿಯರ್‌, ಟ್ರ್ಯಾಕ್ಟರ್‌, ಬೈಕ್‌, ಕಾರುಗಳ ಸಂಖ್ಯೆಯೇ ಹೆಚ್ಚು. ಈ ವಾಹನಗಳ ಪೈಕಿ ಬಹುಪಾಲು ವಾಹನ ನೋಂದಣಿ ಸಂದರ್ಭ ಬಿಟ್ಟರೆ ಮತ್ತೆ ಮಾಲಿನ್ಯ ತಪಾಸಣೆ ಮಾಡಿಸಿಯೇ ಇಲ್ಲ. ಈಗ ದಂಡದ ಪ್ರಮಾಣಕ್ಕೆ ಹೆದರಿ ಮಾಲಿನ್ಯ ತಪಾಸಣೆ ಮಾಡಿಕೊಳ್ಳಲು ವಾಹನಗಳ ಮಾಲಿಕರು ಮುಂದಾಗಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಸಂಚಾರ ನಿಯಮ ಉಲ್ಲಂಘನೆಗೆ ನಿಗದಿಪಡಿಸಿರುವ ದಂಡದ ನಿಯಮಗಳ ಪ್ರಕಾರ ಪೊಲೀಸರು ವಾಹನ ಚಾಲಕರನ್ನು ತಪಾಸಣೆ ಮಾಡಿ ದಂಡ ವಿಧಿಸಲು ಮುಂದಾಗಿದ್ದಾರೆ. ಆದರೆ, ಸರ್ಕಾರ ಸದ್ಯಕ್ಕೆ ಹೊಸ ದಂಡದ ದರ ಜಾರಿಗೆ ತಡೆ ನೀಡಿದೆ. ಆದರೆ, ಮುಂದಿನ ದಿನಗಳಲ್ಲಿ ಪರಿಷ್ಕೃತ ದಂಡದ ನಿಯಮ ಜಾರಿಯಾಗುವುದು ಖಚಿತ. ಹೀಗಾಗಿ ವಾಹನಗಳ ಮಾಲಿಕರು ಮಾತ್ರ ದಂಡದ ಪ್ರಮಾಣಕ್ಕೆ ಹೆದರಿ ವಾಹನಗಳ ದಾಖಲಾತಿ, ಮಾಲಿನ್ಯ ತಪಾಸಣೆ ಮಾಡಿಸಲು ಮಾತ್ರ ಧಾವಂತದಲ್ಲಿದ್ದಾರೆ.

Advertisement

ಎಮಿಷನ್‌ ಟೆಸ್ಟ್‌ ಈಗ ಸುಧಾರಿಸಿದೆ: ಜಿಲ್ಲೆಯಲ್ಲಿ ಮಾಲಿನ್ಯ ತಪಾಸಣಾ ಕೇಂದ್ರಗಳ ಕೊರತೆಯಿದೆ. ಸಕಲೇಶಪುರದಲ್ಲಿ ಎಆರ್‌ಟಿಒ ಕಚೇರಿ ಇರುವುದರಿಂದ ಅಲ್ಲಿ 2 ಕೇಂದ್ರ ನಿರ್ವಹಿಸುತ್ತಿವೆ. ಹಾಸನದಲ್ಲಿ 4 ಕೇಂದ್ರ ಕಾರ್ಯ ನಿರ್ವಹಣೆಯಲ್ಲಿವೆ. ಈಗ ಮಾಲಿನ್ಯ ತಪಾಸಣೆಯೂ ಆನ್‌ಲೈನ್‌ ಆಗಿರುವುದರಿಂದ ಹಾಗೂ ಪ್ರಮಾಣ ಪತ್ರದಲ್ಲಿ ವಾಹನಗಳ ಸಂಖ್ಯೆಯೂ ಸೇರಿ ಫೋಟೋ ದಾಖಲಾಗಲಿದೆ. ಹೀಗಾಗಿ ವ್ಯವಸ್ಥಿತವಾಗಿ ಮಾಲಿನ್ಯ ತಪಾಸಣೆ ನಡೆಯುತ್ತಿದೆ. ಬೇಲೂರು ಮತ್ತು ಚನ್ನರಾಯಪಟ್ಟಣದಲ್ಲಿ ಮಾಲಿನ್ಯ ತಪಾಸಣಾ ಕೇಂದ್ರ ಆರಂಭವಾಗಿದ್ದರೂ ಮುಚ್ಚಿ ಹೋಗಿವೆ. ಮಾಲಿನ್ಯ ತಪಾಸಣಾ ಕೇಂದ್ರ ಸ್ಥಾಪನೆಗೆ ಯಾರೇ ಮುಂದೆ ಬಂದರೂ ಸಾರಿಗೆ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕೆ. ಅಶೋಕ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಮಾಲಿನ್ಯ ತಪಾಸಣೆ ಕಡ್ಡಾಯ: ಹೊಸ ವಾಹನಗಳು ನೋಂದಣಿಯಾದ ನಂತರ 2 ವರ್ಷ ಮಾಲಿನ್ಯ ತಪಾಸಣೆ ಅಗತ್ಯವಿಲ್ಲ. ಆನಂತರ ವರ್ಷಕೊಮ್ಮೆ ಮಾಲಿನ್ಯ ತಪಾಸಣೆ ನಿಯಮವಿದೆ. ಬಿಎಸ್‌ -3 ವಾಹನಗಳಿಗೆ ಮಾತ್ರ 6ತಿಂಗಳಿಗೊಮ್ಮೆ ಮಾಲಿನ್ಯ ತಪಾಸಣೆ ಮಾಡಿಸುವುದು ಕಡ್ಡಾಯವಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕೆ.ಅಶೋಕ್‌ ಕುಮಾರ್‌ ತಿಳಿಸಿದ್ದಾರೆ.

ಹಾಸನ ಆರ್‌ಟಿಒ-ಸಕಲೇಶಪುರ ಎಆರ್‌ಟಿಒ ಕಚೇರಿ ನೋಂದಣಿಯಾಗಿರುವ ಒಟ್ಟು ವಾಹನ
ಮೋಟರ್‌ ಸೈಕಲ್‌-ಸ್ಕೂಟರ್‌ 2, 87, 057
ಮೊಪೆಡ್‌ 28, 147
ಮೋಟಾರ್‌ ಕಾರು 51, 402
ಗೂಡ್ಸ್‌ ಕ್ಯಾರಿಯರ್ 11,579
ತ್ರಿ ವೀಲರ್‌ ಗೂಡ್ಸ್‌ 1,559
ತ್ರಿ ವೀಲರ್‌ ಪ್ಯಾಸೆಂಜರ್‌ 4,041
ಮ್ಯಾಕ್ಸಿಕ್ಯಾಬ್‌ 1,174
ಮೋಟಾರ್‌ ಕ್ಯಾಬ್‌ 3,746
ಕೃಷಿ ಟ್ರೈಲರ್ 9,851
ಕೃಷಿ ಟ್ರ್ಯಾಕ್ಟರ್‌ 15, 893
ಕಮರ್ಷಿಯಲ್‌ ಟ್ರ್ಯಾಕ್ಟರ್‌ 496
ಪವರ್‌ ಟಿಲ್ಲರ್ 839
ಬಸ್‌ 1,074
ಸ್ಕೂಲ್‌ಬಸ್‌ 169
ಓಮ್ನಿ ಬಸ್‌ 288
ಎಸ್ಕವೇಟರ್ 210
ಆ್ಯಂಬುಲೆನ್ಸ್‌ 75

* ಎನ್‌.ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next