ಡಂಬುಲ: ಆತಿಥೇಯ ಶ್ರೀಲಂಕಾ ವಿರುದ್ಧದ ಮೊದಲೆರಡೂ ಟಿ20 ಪಂದ್ಯಗಳನ್ನು ಗೆದ್ದ ಭಾರತದ ವನಿತೆಯರು ಈಗಾಗಲೇ ಸರಣಿ ಗೆದ್ದು ಸಂಭ್ರಮ ಆಚರಿಸಿದ್ದಾರೆ. ಮುಂದಿನ ಗುರಿ ವೈಟ್‌ವಾಶ್.
ಸೋಮವಾರ 3ನೇ ಹಾಗೂ ಅಂತಿಮ ಮುಖಾಮುಖಿ ನಡೆಯಲಿದ್ದು, ಹರ್ಮನ್‌ಪ್ರೀತ್ ಕೌರ್ ಪಡೆ ಇದನ್ನೂ ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಆಗಿ ವಶಪಡಿಸಿಕೊಳ್ಳುವ ಯೋಜನೆಯಲ್ಲಿದೆ.
ಭಾರತದ ಈವರೆಗಿನ ಸಾಧನೆಯನ್ನು ಗಮನಿಸಿದಾಗ ಕ್ಲೀನ್ ಸ್ವೀಪ್ ಅಸಾಧ್ಯ ವೇನಲ್ಲ. ಆದರೆ ಶ್ರೀಲಂಕಾಕ್ಕೂ ಗೆಲುವಿನ ಅನಿವಾರ್ಯತೆ ಇದೆ. ಪ್ರತಿಷ್ಠೆಗಾಗಿ ಅದು ಗೆಲ್ಲಲೇಬೇಕಿದೆ. ಸತತ 2 ಸರಣಿ ಗಳಲ್ಲಿ ಮೂರೂ ಪಂದ್ಯಗಳಲ್ಲಿ ಸೋಲ ನುಭವಿಸುವುದನ್ನು ಅದು ಯಾವ ಕಾರಣಕ್ಕೂ ಸಹಿಸದು. ಕಳೆದ ಪಾಕಿಸ್ಥಾನ ವಿರುದ್ಧದ ಸರಣಿಯಲ್ಲೂ ಲಂಕಾ 3-0 ವೈಟ್‌ವಾಶ್ ಸಂಕಟಕ್ಕೆ ಸಿಲುಕಿತ್ತು. ಹೀಗಾಗಿ ಅತಪಟ್ಟು ಪಡೆಯ ಮೇಲೆ ಭಾರೀ ಒತ್ತಡ ಇರುವುದು ಸುಳ್ಳಲ್ಲ.
ಅಧಿಕಾರಯುತ ಜಯ
ಎರಡೂ ಪಂದ್ಯಗಳಲ್ಲಿ ಭಾರತದ್ದು ಅಧಿಕಾರಯುತ ಜಯ. ಬ್ಯಾಟಿಂಗ್‌ಗೆ ವಿಶೇಷವಾಗಿ ಸಹಕರಿಸದ ಡಂಬುಲ ಟ್ರ್ಯಾಕ್ ಮೇಲೆ ಭಾರತದ ನಾರಿಯರು ಕ್ರಮವಾಗಿ 34 ರನ್ ಹಾಗೂ 5 ವಿಕೆಟ್ ಅಂತರದ ಗೆಲುವು ಸಾಧಿಸಿದ್ದರು. ಇದೇ ಲಯದಲ್ಲಿ ಸಾಗಿದರೆ ಭಾರತದಿಂದ ಹ್ಯಾಟ್ರಿಕ್ ಜಯಭೇರಿಯನ್ನು ನಿರೀಕ್ಷಿಸ ಲಡ್ಡಿಯಿಲ್ಲ. ಇದರಿಂದ ಮುಂಬರುವ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತ ತಂಡದ ಆತ್ಮವಿಶ್ವಾಸ ದೊಡ್ಡ ಮಟ್ಟದಲ್ಲೇ ಹೆಚ್ಚಲಿದೆ.
ಡಂಬುಲದ ನಿಧಾನ ಗತಿಯ ಟ್ರ್ಯಾಕ್ ಮೇಲೆ ಭಾರತದ ಬೌಲರ್ ಅತ್ಯುತ್ತಮ ಪ್ರದರ್ಶನ ಕಾಯ್ದುಕೊಂಡು ಬಂದಿದ್ದಾರೆ. ಇದಕ್ಕೆ ದ್ವಿತೀಯ ಪಂದ್ಯವೇ ಸಾಕ್ಷಿ. ಶ್ರೀಲಂಕಾ ವಿಕೆಟ್ ನಷ್ಟವಿಲ್ಲದೆ 80ರ ಗಡಿ ದಾಟಿದಾಗ ದೊಡ್ಡ ಮೊತ್ತದ ಸಾಧ್ಯತೆ ಗೋಚರಿಸಿತ್ತು. ಆದರೆ ಈ ಹಂತದಲ್ಲಿ ತಿರುಗಿ ಬಿದ್ದ ಭಾರತದ ಬೌಲರ್, ಲಂಕೆಯನ್ನು 125ಕ್ಕೆ ಹಿಡಿದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದರು. ಮೊದಲ ಪಂದ್ಯದಲ್ಲಿ 138 ರನ್ನುಗಳ ಸಾಮಾನ್ಯ ಮೊತ್ತವನ್ನು ಬೌಲರ್‌ಗಳೇ ಉಳಿಸಿಕೊಟ್ಟಿದ್ದರು.
ಶಫಾಲಿ ವರ್ಮ, ಎಸ್. ಮೇಘನಾ, ಯಾಸ್ತಿಕಾ ಭಾಟಿಯ ಬಿರುಸಿನ ಆಟಕ್ಕಿಳಿದರೆ ಭಾರತ ಇನ್ನೂ ದೊಡ್ಡ ಮೊತ್ತ ಪೇರಿಸಬಹುದು. ಆಗ ಗೆಲುವು ಕೂಡ ಸುಲಭವಾಗಲಿದೆ.