Advertisement

Mangaluru 3ನೇ ಹಂತದ ಜೆಟ್ಟಿ ಕಾಮಗಾರಿ ವರ್ಷಾಂತ್ಯಕ್ಕೆ ಆರಂಭ: ಸಚಿವ ದಿನೇಶ್‌ ಗುಂಡೂರಾವ್‌

12:10 AM Dec 03, 2023 | Team Udayavani |

ಮಂಗಳೂರು: ಮಂಗಳೂರು ಮೀನುಗಾರಿಕೆ ಬಂದರಿನ ಬಹುಕಾಲದ ನಿರೀಕ್ಷೆಯಾಗಿರುವ 3ನೇ ಹಂತದ ಜೆಟ್ಟಿ ಕಾಮಗಾರಿಗೆ ಸಚಿವ ಸಂಪುಟದಲ್ಲಿ ಈಗಾಗಲೇ ಅನುಮೋದನೆ ದೊರಕಿದ್ದು, ವಾರದೊಳಗೆ ಪರಿಷ್ಕೃತ ಅಂದಾಜು ಪಟ್ಟಿ ತಯಾರಿಸಿ ಡಿಸೆಂಬರ್‌ ಅಂತ್ಯದೊಳಗೆ ಟೆಂಡರ್‌ ಕರೆದು ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಮಂಗಳೂರು ಮೀನುಗಾರಿಕೆ ಬಂದರಿನ ಅಭಿವೃದ್ಧಿ ಕುರಿತಂತೆ ಶನಿವಾರ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ತೃತೀಯ ಹಂತದ ಜೆಟ್ಟಿ ನಿರ್ಮಾಣದ ಕಾಮಗಾರಿಗೆ 2022ರ ಡಿಸೆಂಬರ್‌ನಲ್ಲಿ ಅಂದಾಜುಪಟ್ಟಿ ಸಲ್ಲಿಸಲಾಗಿತ್ತು. ಇತ್ತೀಚೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರಕಿದೆ. ಆದರೆ ಈ ನಡುವೆ ಎಸ್‌ಆರ್‌ ದರ ಹೆಚ್ಚಳವಾಗಿದೆ. ಹಾಗಾಗಿ ಕೆಲವೊಂದು ಬದಲಿ ಕಾಮಗಾರಿ ಗಳೊಂದಿಗೆ ಪರಿಷ್ಕೃತ ಅಂದಾಜು ಪಟ್ಟಿ ತಯಾರಿಸುವಂತೆ ಇಲಾಖೆಯಿಂದ ನಿರ್ದೇಶನ ಬಂದಿದ್ದು, ಪಟ್ಟಿ ತಯಾರಿಸಲಾಗುತ್ತಿದೆ ಎಂದು ಬಂದರು ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.

ಮಂಗಳೂರು ದಕ್ಕೆಯಲ್ಲಿ 3.95 ಕೋಟಿ ರೂ. ವೆಚ್ಚದಲ್ಲಿ ಬರ್ತ್‌ ಡ್ರೆಜ್ಜಿಂಗ್‌ ನಡೆಯುತ್ತಿದ್ದು, 27 ಕೋಟಿ ರೂ. ವೆಚ್ಚದಲ್ಲಿ ಬಂದರು ಇಲಾಖೆಯಿಂದ 7 ಮೀಟರ್‌ ಆಳದಲ್ಲಿ ಬೃಹತ್‌ ಡ್ರೆಜ್ಜಿಂಗ್‌ಗೆ ಟೆಂಡರ್‌ ಅನುಮತಿಗೆ ಸಂಬಂಧಪಟ್ಟ ಇಲಾಖೆಗೆ ಕಳುಹಿಸಿದ್ದು, ಈ ವಾರ ಅನುಮತಿ ಸಿಗುವ ಸಾಧ್ಯತೆ ಇದೆ ಎಂದರು.

ಮಲ್ಟಿ ಲೆವೆಲ್‌ ಫಿಶ್‌ ಬಾಕ್ಸ್‌ ವ್ಯವಸ್ಥೆ ಜಾರಿಗೊಳಿಸಿ ಬಂದರಿನಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಅನುಷ್ಠಾನ, ರಖಂ ಮತ್ತು ಕಮಿಷನ್‌ ಮೀನು ಹರಾಜಿಗೆ ಪ್ರತ್ಯೇಕ ಜಾಗ, ಅಗ್ನಿಶಾಮಕ ದಳದ ವ್ಯವಸ್ಥೆ, ಸೀ ಆ್ಯಂಬುಲೆನ್ಸ್‌ ಅಗತ್ಯತೆಯ ಬಗ್ಗೆ ಮೀನುಗಾರ ಪ್ರಮುಖರು ಸಭೆಯಲ್ಲಿ ವಿಷಯ ಪ್ರಸ್ತಾವಿಸಿದರು. ದಕ್ಕೆಯಲ್ಲಿ ಶುಚಿತ್ವ ಇಲ್ಲವಾಗಿದೆ. ಗುತ್ತಿಗೆ ವಹಿಸಿಕೊಂಡವರು ನಿಯಮಗಳಂತೆ ನಿಗದಿತ ರೀತಿಯಲ್ಲಿ ಸ್ವಚ್ಛತೆ ನಡೆಸಬೇಕು. ನೈರ್ಮಲ್ಯ ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ಅಚ್ಚುಕಟ್ಟಾಗಿ ಮಾಡಬೇಕು ಎಂದು ಸಚಿವರು ಸೂಚಿಸಿದರು.

Advertisement

ಕಡಲ್ಕೊರೆತ ಸಮಸ್ಯೆಯನ್ನು ಒಳಗೊಂಡು ಎಲ್ಲ ಸಮಸ್ಯೆಗಳಿಗೆ ಪರಿಹಾರ ವಾಗಿ “ಶೋರ್‌ಲೈನ್‌ ಮ್ಯಾನೇಜ್‌ಮೆಂಟ್‌ ಪ್ಲಾನ್‌’ ಶೀಘ್ರವೇ ಜಾರಿಗೊಳ್ಳಲಿದೆ. ಇದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯರಾದ ಮಂಜುನಾಥ ಭಂಡಾರಿ, ಹರೀಶ್‌ ಕುಮಾರ್‌, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ದ.ಕ. ಜಿ.ಪಂ. ಸಿಇಒ ಡಾ| ಆನಂದ್‌, ಪಾಲಿಕೆ ಆಯುಕ್ತ ಆನಂದ್‌, ಡಿಸಿಪಿ ಸಿದ್ಧಾರ್ಥ ಗೋಯಲ್‌ ಉಪಸ್ಥಿತರಿದ್ದರು.

ಕುಡಿಯುವ ನೀರು: ಮುನ್ನೆಚ್ಚರಿಕೆಗೆ ಸೂಚನೆ
ದ.ಕ. ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಕೆಲವೆಡೆ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುವುದರಿಂದ ಅಗತ್ಯವಿದ್ದಲ್ಲಿ ಬೋರ್‌ವೆಲ್‌, ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ಸಿದ್ಧತೆ ನಡೆಸಬೇಕು ಎಂದು ಸಚಿವ ದಿನೇಶ್‌ ಗುಂಡೂರಾವ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next