ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಕಾವು ಏರುತ್ತಿದ್ದಂತೆ ಚುನಾವಣೆ ಅಕ್ರಮದ ಘಾಟು ಕೂಡ ವ್ಯಾಪಿಸುತ್ತಿದ್ದು ಈವರೆಗೆ 39.38 ಕೋಟಿ ರೂ. ಮೌಲ್ಯದ ಅಕ್ರಮ ಪತ್ತೆಯಾಗಿದೆ.
ಫ್ಲೈಯಿಂಗ್ ಸ್ಕ್ವಾಡ್, ಸರ್ವೇಕ್ಷಣಾ ತಂಡ ಮತ್ತು ಪೊಲೀಸರು 7.07 ಕೋಟಿ ರೂ. ನಗದು, 5.80 ಲಕ್ಷ ಮೌಲ್ಯದ 1,156 ಲೀಟರ್ ಮದ್ಯ, 21.76 ಲಕ್ಷ ಮೌಲ್ಯದ 39.25 ಕೆಜಿ ಮಾದಕ ವಸ್ತು, 9.58 ಕೋಟಿ ರೂ ಮೌಲ್ಯದ ಉಚಿತ ಕೊಡುಗೆ (ಸೀರೆ, ಕುಕ್ಕರ್ ಇತ್ಯಾದಿ)ಗಳನ್ನು ವಶಕ್ಕೆ ಪಡೆದುಕೊಂಡಿದ್ದು ಒಟ್ಟು 172 ಎಫ್ಐಆರ್ ದಾಖಲಿಕೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆ 3.90 ಕೋಟಿ ರೂ. ಗಳನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಅಬಕಾರಿ ಇಲಾಖೆ 11.66 ಕೋಟಿ ರೂ. ಮೌಲ್ಯದ 1,93,051 ಲೀಟರ್ ಮದ್ಯ, 1.81 ಲಕ್ಷ ಮೌಲ್ಯದ 12 ಕೆ.ಜಿ. ಮಾದಕ ವಸ್ತು ವಶಕ್ಕೆ ತೆಗೆದುಕೊಂಡು 264 ಪ್ರಕರಣ ದಾಖಲಿಸಿಕೊಂಡಿದೆ. ವಿವಿಧ ಬಗೆಯ 150 ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ನಗದು, ಮದ್ಯ, ಮಾದಕ ವಸ್ತು, ಇನ್ನಿತರ ವಸ್ತುಗಳು ಸೇರಿ ಒಟ್ಟು 39.38 ಕೋಟಿ ರೂ. ಮೌಲ್ಯದ ಚುನಾವಣಾ ಅಕ್ರಮವನ್ನು ಪತ್ತೆಹಚ್ಚಲಾಗಿದೆ. ಇವಿಜಿಲ್ ಅಪ್ಲಿಕೇಷನ್ ಮೂಲಕ 266 ದೂರುಗಳನ್ನು ನಾಗರಿಕರು ದಾಖಲಿಸಿದ್ದು ಅನುಮತಿ ಇಲ್ಲದೆ ಪೋಸ್ಟರ್, ಬ್ಯಾನರ್ ಅಂಟಿಸಿದ ಪ್ರಕರಣ (97) ಹೆಚ್ಚಿವೆ. ಉಳಿದಂತೆ ಹಣದ ವಿತರಣೆ 8, ಪೇಯ್ಡ ನ್ಯೂಸ್ 3, ಗಿಫ್ಟ್, ಕೂಪನ್‌ಗಳ ವಿತರಣೆ 8, ಮದ್ಯದ ವಿತರಣೆ 5, ಆಸ್ತಿಯ ವಿರೂಪ 5, ಅನುಮತಿಯಿಲ್ಲದೆ ವಾಹನಗಳ ಮೆರವಣಿಗೆಯ 8 ದೂರುಗಳು ಬಂದಿವೆ. ಈ ಪೈಕಿ 238 ದೂರುಗಳು ನೈಜವಾಗಿದ್ದು ಕ್ರಮ ತೆಗೆದುಕೊಳ್ಳಲಾಗಿದೆ. ಎನ್‌ಜಿಆರ್‌ಎಸ್ ಪೋರ್ಟಲ್‌ನಲ್ಲಿ 958 ದೂರು ದಾಖಲಾಗಿದ್ದು 572 ದೂರುಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಆಯೋಗ ತಿಳಿಸಿದೆ.
ಪ್ರಸ್ತುತ 2,040 ಫ್ಲೈಯಿಂಗ್ ಸ್ಕ್ವಾಡ್, 2,605 ವಿಚಕ್ಷಣ ದಳಗಳು ಸಕ್ರಿಯವಾಗಿದೆ ಎಂದು ಆಯೋಗ ಹೇಳಿದೆ.