ಪಣಜಿ: ಇಲ್ಲಿ ಸಾಗಿದ ರಾಷ್ಟ್ರೀಯ ಗೇಮ್ಸ್‌ನ ಅಂತಿಮ ದಿನವಾದ ಗುರುವಾರ ಮಹಾ ರಾಷ್ಟ್ರವು ಯೋಗಾಸನದಲ್ಲಿ ಮೂರು ಮತ್ತು ಶೂಟಿಂಗ್‌ನಲ್ಲಿ ಒಂದು ಚಿನ್ನದ ಪದಕ ಗೆದ್ದುಕೊಂಡಿದೆ. ಈ ಮೂಲಕ ಒಟ್ಟಾರೆ 80 ಚಿನ್ನ, 69 ಬೆಳ್ಳಿ ಮತ್ತು 79 ಕಂಚಿನ ಪದಕ ಸಹಿತ 228 ಪದಕ ಗೆದ್ದಿರುವ ಮಹಾರಾಷ್ಟ್ರ ರಾಜ ಬಲೀಂದ್ರ ಸಿಂಗ್ ರೋಲಿಂಗ್ ಟ್ರೋಫಿಯನ್ನು ಗೆದ್ದುಕೊಂಡಿದೆ.
1994ರ ಗೇಮ್ಸ್ ಬಳಿಕ ಮಹಾ ರಾಷ್ಟ್ರ ಇದೇ ಮೊದಲ ಸಲ ಅಗ್ರ ಸ್ಥಾನ ಪಡೆದ ಸಾಧನೆ ಮಾಡಿದೆ. ಸರ್ವೀಸಸ್ ದ್ವಿತೀಯ ಮತ್ತು ಹರಿಯಾಣ ಮೂರನೇ ಸ್ಥಾನ ಪಡೆದರೆ ಮಧ್ಯಪ್ರದೇಶ 4ನೇ ಮತ್ತು ಕೇರಳ 5ನೇ ಸ್ಥಾನ ಪಡೆಯಿತು.
ಎಂಟು ಚಿನ್ನ, ಒಂದು ಬೆಳ್ಳಿ ಮತ್ತು ಕಂಚು ಗೆದ್ದಿರುವ ಕರ್ನಾಟಕದ ಈಜುಪಟು ಶ್ರೀಹರಿ ನಟರಾಜ್ ಗೇಮ್ಸ್‌ನ ಶ್ರೇಷ್ಠ ಪುರುಷ ಆ್ಯತ್ಲೀಟ್ ಪ್ರಶಸ್ತಿ ಪಡೆದರು. ತಲಾ 4 ಚಿನ್ನ ಮತ್ತು ಒಂದು ಬೆಳ್ಳಿ ಗೆದ್ದಿರುವ ಒಡಿಶಾದ ಜಿಮ್ನಾಸ್ಟ್ ಸನ್ಯುಕ್ತಾ ಪ್ರಸೆನ್ ಕಾಳೆ ಮತ್ತು ಪ್ರಣತಿ ನಾಯಕ್ ಅವರು ಶ್ರೇಷ್ಠ ವನಿತಾ ಆ್ಯತ್ಲೀಟ್ ಪ್ರಶಸ್ತಿ ಪಡೆದುಕೊಂಡರು.
ಕ್ರೀಡಾಪಟುಗಳನ್ನು ಬೆಂಬಲಿಸಿ ರಾಷ್ಟ್ರೀಯ ಗೇಮ್ಸ್‌ನ ಸಮಾರೋಪ ಸಮಾರಂಭದಲ್ಲಿ ಭಾಗವ ಹಿಸಿದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರು ಸರಕಾರ ಮಾತ್ರ ವಲ್ಲದೇ ಸಾರ್ವಜನಿಕ ಮತ್ತು ಖಾಸಗಿ ವಲಯದ ಕಂಪೆನಿಗಳು ಕ್ರೀಡಾಪಟುಗಳನ್ನು ದತ್ತು ತೆಗೆದು ಕೊಂಡು ಪೂರ್ಣ ರೀತಿಯಲ್ಲಿ ಬೆಂಬಲಿಸಬೇಕು. ಇಂತಹ ಒಳ್ಳೆಯ ಕಾರ್ಯದಿಂದ ದೇಶದ ಪ್ರಯತ್ನಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ ಎಂದರು.