Advertisement

371(ಜೆ) ಕಾರ್ಯಾನುಷ್ಠಾನಕ್ಕೆ ಮೀನಮೇಷ

03:29 PM Feb 14, 2017 | |

ಕಲಬುರಗಿ: ದಶಕಗಳ ಹೋರಾಟದ ಫಲವಾಗಿ ಪಡೆಯಲಾದ 371ನೇ (ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮೀನಾಮೇಷ ಏಣಿಸುತ್ತಿದೆಯೇ? ಕಲಂ ಜಾರಿ ಲಾಭಗಳು ಹೈದ್ರಾಬಾದ ಕರ್ನಾಟಕ ಭಾಗದ ಜನರಿಗೆ ದೊರಕಿಸದೆ ಕನ್ನಡಿಯೊಳಗಿನ ಗಂಟಾಗಿಸಲು ವ್ಯವಸ್ಥಿತ ಷಡ್ಯಂತ್ರ ನಡೆದಿದೆಯೇ? 

Advertisement

ಕಲಂ ಜಾರಿಯಲ್ಲಿನ ನ್ಯೂನತೆ ಬಗೆಹರಿಸುವ ನಿಟ್ಟಿನಲ್ಲಿ ಸ್ಪಂದಿಸಬೇಕಾದ ಸಚಿವ ಸಂಪುಟದ ಉಪ ಸಮಿತಿ ನಡಾವಳಿಗಳು, ಹೈ.ಕ ಭಾಗ ಹೊರತುಪಡಿಸಿ ರಾಜ್ಯದ ಇತರ ಭಾಗದಲ್ಲಿ ಶೇ.8ರ ಮೀಸಲಾತಿ ಕಲ್ಪಿಸದಿರುವುದು, ಹುದ್ದೆಗಳ ಭರ್ತಿಯಲ್ಲಿ ನಿಖರತೆ ತೋರದಿರುವುದು, ಅಧಿಸೂಚನೆಗಳನ್ನು ಬೇಕಾಬಿಟ್ಟಿಯಾಗಿ ಹೊರಡಿಸುತ್ತಿರುವುದು,

ಹುದ್ದೆಗಳ ಭರ್ತಿಯಲ್ಲಿ ಹೈ.ಕ ಭಾಗದವರು ಈಗಾಗಲೇ ಹೊರ ಭಾಗದಲ್ಲಿ ಸೇವೆಯಲ್ಲಿರುವುದನ್ನು ಮೀಸಲಾತಿ ಹುದ್ದೆಗಳಲ್ಲಿ ಪರಿಗಣಿಸುತ್ತಿರುವುದು ಸೇರಿದಂತೆ ಇತರ ಕಾರ್ಯಗಳನ್ನು ಅವಲೋಕಿಸಿದರೆ 371ನೇ (ಜೆ) ವಿಧಿ ಪರಿಣಾಮಕಾರಿ ಅನುಷ್ಠಾನಕ್ಕೆ ಸರ್ಕಾರ ಇಚ್ಚಾಶಕ್ತಿ ಹೊಂದಿಲ್ಲ ಎನ್ನುವುದನ್ನು ತೋರಿಸುತ್ತದೆ. 

ಹೈ.ಕ ಭಾಗ ಹೊರತುಪಡಿಸಿ ರಾಜ್ಯದ ಇತರ ಭಾಗದಲ್ಲಿ ಒಟ್ಟಾರೆ ನೇಮಕಾತಿ ಹುದ್ದೆಗಳಲ್ಲಿ ಶೇ. 8ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಎಂದು ಮೂರು ವರ್ಷಗಳ ಹಿಂದೆ 371ನೇ ವಿಧಿ ಜಾರಿ ಸಂದರ್ಭದಲ್ಲಿ ಸಂಪುಟ ಉಪಸಮಿತಿ ಬೊಬ್ಬೆ ಹಾಕಿದ್ದೇ ಹಾಕಿದ್ದು. ಆದರೆ ಇಂದಿನ ದಿನದವರೆಗೂ ಎಲ್ಲೂ ಶೇ. 8ರ ಮೀಸಲಾತಿ ಜಾರಿಯಾಗಿಲ್ಲ.

ಈ ಬಗ್ಗೆ ಕೇಳಿದರೆ ಶೇ.8ರ ಮೀಸಲಾತಿಗೆ ಕೆಎಟಿ ತಡೆಯಾಜ್ಞೆ ನೀಡಿದೆ ಎಂದು ಸರ್ಕಾರ ಸಬೂಬು ಹೇಳುತ್ತಿದೆ. ಆಶ್ಚರ್ಯದ ಸಂಗತಿ ಎಂದರೆ ಸರ್ಕಾರ ತಡೆಯಾಜ್ಞೆ ತೆರವುಗೊಳಿಸಲು ಒಂದೇ ಒಂದು ಪ್ರಯತ್ನ ಮಾಡಿಲ್ಲ. ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಜಾರಿಯಾಗುತ್ತಿದೆ ಎಂಬುದಾಗಿ ಸಬೂಬು ಮಾತ್ರ ಹೇಳಲಾಗುತ್ತಿದೆ. 

Advertisement

ಒಂದು ವೇಳೆ ಶೇ. 8ರ ಮೀಸಲಾತಿ ಜಾರಿಯಲ್ಲಿದ್ದರೆ ಪಿಡಿಒ ಸೇರಿದಂತೆ ಇತರ ಹುದ್ದೆಗಳಲ್ಲಿ ಕನಿಷ್ಠ 325ಕ್ಕೂ ಹೆಚ್ಚು ಹುದ್ದೆಗಳು ಹೈ.ಕ ಭಾಗದವರಿಗೆ ಸಿಗುತ್ತಿದ್ದವು. ಇದಕ್ಕೆಲ್ಲ ಯಾರು ಹೊಣೆ? ಎಂದು ಕೇಳಿದರೆ ಸರ್ಕಾರದ ಬಳಿ ಉತ್ತರವೇ ಇಲ್ಲ. ಇನ್ನುಳಿದಂತೆ ಹೈ.ಕ ಭಾಗದಲ್ಲಿನ ಖಾಲಿ ಹುದ್ದೆಗಳ ಭರ್ತಿ ಸಂಬಂಧವಾಗಿ ಎರಡೂರು ರೀತಿಗಳಲ್ಲಿ ಅಂಕಿ ಸಂಖ್ಯೆಗಳನ್ನು ನೀಡಲಾಗುತ್ತಿದೆ.

ವಾರದ ಹಿಂದೆ ಜಂಟಿ ಸಭೆಯನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದಲ್ಲಿ ಹೈ.ಕ ಭಾಗದಲ್ಲಿ 13135 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಪ್ರಸ್ತಾಪಿಸಲಾಗಿದೆ. ಆದರೆ ವಿಧಾನ ಪರಿಷತ್‌ ಸದಸ್ಯ ಅಮರನಾಥ ಪಾಟೀಲ ಸದನದಲ್ಲಿ ಕೇಳಿದ ಪ್ರಶ್ನೆಗೆ 9501 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಉತ್ತರಿಸಲಾಗಿದೆ.

ಆದರೆ ವಾಸ್ತವವಾಗಿ 3098 ಮಾತ್ರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಉಳಿದ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆಯಷ್ಟೇ. ಸರ್ಕಾರಿ, ಅರೆ ಸರ್ಕಾರಿ ಇಲಾಖೆಗಳಲ್ಲಿ  ವೃಂದವಾರು ಖಾಲಿ ಹುದ್ದೆಗಳನ್ನು ನಿಖರವಾಗಿ ಗುರುತಿಸದಿರುವುದು, ಮುಂಬಡ್ತಿ ಪ್ರಕ್ರಿಯೆ ಕೈಗೊಳ್ಳದೇ ಮೀಸಲಾತಿಯಿಂದ ವ್ಯವಸ್ಥಿತವಾಗಿ ವಂಚಿತರನ್ನಾಗಿಸಲಾಗುತ್ತಿದೆ.

ಈ ಬಗ್ಗೆ ಮಾಹಿತಿ ಕೇಳಿದರೆ ಉತ್ತರವನ್ನೇ ನೀಡುತ್ತಿಲ್ಲ. ಕರ್ನಾಟಕ ಸಾರ್ವಜನಿಕ ಉದ್ಯೋಗ ಆದೇಶ 2013ರ 13ಬಿ ಅನ್ವಯ ನೇಮಕಾತಿಗಳಲ್ಲಿ ಹೈ. ಕ ಭಾಗದ ಅರ್ಹ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಹಾಗೂ ಕೃಪಾಂಕ ಜತೆಗೆ ಇತರ ವಿನಾಯಿತಿ ನೀಡಬಹುದಾಗಿದೆ. ಈ ಕುರಿತು ಹೋರಾಟ, ಒತ್ತಾಯವಾಗಿದ್ದರೂ ಕಾರ್ಯರೂಪಕ್ಕೆ ತರದೇ ಸಬೂಬು ಹೇಳುತ್ತಿರುವುದು ಷಡ್ಯಂತ್ರಕ್ಕೆ ಹಿಡಿದ ಕನ್ನಡಿಯಾಗಿದೆ.

ಅದೇ ರೀತಿ ಅಧಿಸೂಚನೆ, ಆದೇಶಗಳನ್ನು ಕಾನೂನು ಚೌಕಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ನಿರ್ಣಯಗಳನ್ನು ಬೇಕಾಬಿಟ್ಟಿಯಾಗಿ ತಿದ್ದುಪಡಿ ತಂದು ಮೂಲ ಉದ್ದೇಶಕ್ಕೆ ಧಕ್ಕೆ ಉಂಟು ಮಾಡಲಾಗುತ್ತಿದೆ. ಒಂದು ಕಡೆ ರಾಜ್ಯಪಾಲರ ಆದೇಶಗನುಸಾರ ಎಂದರೆ ಮತ್ತೂಂದೆಡೆ ರಾಜ್ಯ ಸರ್ಕಾರ ನಿರ್ಣಯ ಎಂದು ಉಲ್ಲೇಖೀಸಲಾಗುತ್ತಿದೆ.  

* ವಿಶೇಷ ವರದಿ 

Advertisement

Udayavani is now on Telegram. Click here to join our channel and stay updated with the latest news.

Next