ಅರಕಲಗೂಡು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಂಪಾಪುರ ಬಳಿ 13 ವರ್ಷಗಳ ಹಿಂದೆ 2 ಎಕರೆಯಲ್ಲಿ ನಿವೇಶನ ರಹಿತರಿಗೆ ವಿಂಗಡಣೆ ಮಾಡಿದ್ದ 352 ನಿವೇಶನಗಳ ಹಂಚಿಕೆ ಮಾಡಲು ಮತ್ತೆ ಕಾಲ ಕೂಡಿ ಬಂದಿದೆ. ಈ ಬಗ್ಗೆ ಕ್ರಮಕೈಗೊಳ್ಳಲು ವಸತಿ ಸಚಿವ ಸೋಮಣ್ಣ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಈ ನಿವೇಶನ ಹಂಚಿಕೆ ಪ್ರಕ್ರಿಯೆ 2007ರಿಂದಲೂ ನಡೆಯುತ್ತಿದ್ದು, ರಾಜಕೀಯ ಕೆಸರೆರಚಾಟದಿಂದಕಾಲ ಕೂಡಿ ಬಂದಿರಲಿಲ್ಲ. 2006-2007ರಲ್ಲಿ ಶಾಸಕರಾಗಿದ್ದ ಎ.ಟಿ ರಾಮಸ್ವಾಮಿ ಬಂಗಿತಿಮ್ಮನಕೊಪ್ಪಲು 55 ಹಾಗೂ ಅರವಟ್ಟಿಕೆತಿಟ್ಟದಲ್ಲಿ 86 ನಿವೇಶನ ಹಂಚಿಕೆ ಮಾಡಿದ್ದನ್ನು ಹೊರೆತುಪಡಿಸಿದರೆ, ಉಳಿದ 353 ನಿವೇಶನಗಳು ನನೆಗುದಿಗೆ ಬಿದ್ದಿದ್ದವು. ಇದು ಹಾಲಿ-ಮಾಜಿ ಶಾಸಕರ ರಾಜಕೀಯಕಿತ್ತಾಟಕ್ಕೂ ದಾರಿ ಆಯಿತು.
2018ರ ವಿಧಾನಸಭಾ ಚುನಾವಣೆ ವೇಳೆ ಮಾಜಿ ಸಚಿವ ಎ.ಮಂಜು 353 ನಿವೇಶನಗಳ ಹಂಚಿಕೆಗೆ ಎಲ್ಲಾ ತಯಾರಿ ಮಾಡಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದರು. ದುರಾದೃಷ್ಟವಶಾತ್ ಪಟ್ಟಿ ಕಾನೂನು ಬಾಹಿರವಾಗಿ ಸಿದ್ಧಪಡಿಸಲಾಗಿದೆ, ಇದರ ಬಗ್ಗೆ ತನಿಖೆಯಾಗಲಿ ಎಂದು ಜೆಡಿಎಸ್ ಮುಖಂಡರು ಪಪಂ ಮುಂದೆ ಪ್ರತಿಭಟನೆಗೆ ಮುಂದಾದರು.
ಇವರ ಪ್ರತಿಭಟನೆಗಳು ಮುಗಿಯುವಷ್ಟರಲ್ಲಿ ಚುನಾವಣೆ ದಿನಾಂಕ ಪ್ರಕಟವಾಗಿ, ನೀತಿಸಂಹಿತೆ ಜಾರಿಗೆಬಂದಕಾರಣಪಟ್ಟಿಯು ನನೆಗುದಿಗೆ ಬಿತ್ತು. ಅಂದಿನ ಡೀಸಿ ರೋಹಿಣಿ ಸಿಂಧೂರಿ ಈ ಪಟ್ಟಿಯನ್ನು ಅಸಿಂಧುಗೊಳಿಸಿದರು. ನಂತರ ಚುನಾವಣೆಯಲ್ಲಿ ಶಾಸಕ ಎ.ಟಿ.ರಾಮಸ್ವಾಮಿ ಆಯ್ಕೆಯಾದರು. ನಿವೇಶನ ಹಂಚಿಕೆಗೆ ಮುಂದಾಗುವಷ್ಟರಲ್ಲಿ ರಾಜೀವ್ ಗಾಂಧಿ ವಸತಿ ನಿಗಮವು ಹಂಚಿಕೆ ಪ್ರಕ್ರಿಯೆಯನ್ನೇ ರದ್ದುಗೊಳಿಸಿ, ಆ ಸ್ಥಳಗಳಲ್ಲಿ ಜಿ+1 ಮಾದರಿಯಲ್ಲಿ ಮನೆ ನಿರ್ಮಾಣಕ್ಕೆಆದೇಶಿಸಿತು. ಆದರೆ, ಆ ಮಾದರಿಯ ಮನೆಗೆ ನಿರ್ಮಾಣಕ್ಕೆ ಕೇವಲ 35 ಅರ್ಜಿ ಬಂದ ಕಾರಣ ಆ ಪ್ರಕ್ರಿಯೆಯು ಆಗೆಯೇ ಉಳಿಯಿತು.
ಇದನ್ನು ಮನಗಂಡ ಶಾಸಕರು, ವಸತಿ ಸಚಿವ ವಿ.ಸೋಮಣ್ಣಗೆ ಮಾ.19ರಂದು ಪತ್ರಬರೆದು ನಮ್ಮ ವ್ಯಾಪ್ತಿಯ ಕಡುಬಡವರಿಗೆಜಿ +1 ಮನೆ ನಿರ್ಮಾಣ ಮಾಡಿಕೊಳ್ಳುವ ಶಕ್ತಿ ಇಲ್ಲ.ಆದ್ದರಿಂದಈ ಆದೇಶವನ್ನುಹಿಂಪಡೆದು ನಿವೇಶನಗಳ ಹಂಚಿಕೆಗೆ ಅವಕಾಶ ಮಾಡುವಂತೆ ಮನವಿ ಮಾಡಿದರು.
ಈ ಮನವಿಗೆ ಸ್ಪಂದಿಸಿದ ಸಚಿವ ವಿ.ಸೋಮಣ್ಣ ಸಂಬಂಧಿಸಿದ ಅಧಿಕಾರಿಗಳಿಗೆ ಪರಿಶೀಲಿಸಿ, ನಿವೇಶನ ಹಂಚಿಕೆಗೆ ಅವಕಾಶ ಮಾಡಿಕೊಡುವಂತೆ ನಿರ್ದೇಶನ ನೀಡಿದ್ದಾರೆ. ಈಗಲಾದ್ರೂ ಫಲಾನುಭವಿಗಳಿಗೆ ನಿವೇಶನ ಸಿಗುವುದೇಕಾದು ನೋಡಬೇಕಿದೆ.