ಲಿಂಗಸುಗೂರು: ಶಾಲೆಯಲ್ಲಿ ಸತತ ಗೈರು ಹಾಜರಿ ಸೇರಿ ಇನ್ನಿತರ ವಿಷಯಗಳನ್ನು ದೃಷ್ಠಿಕೋನದಲ್ಲಿಟ್ಟುಕೊಂಡ ಶಿಕ್ಷಣ ಇಲಾಖೆ ಇತ್ತೀಚೆಗೆ ಸಮೀಕ್ಷೆ ನಡೆಸಿದೆ. ತಾಲೂಕಿನಲ್ಲಿ 343 ಮಕ್ಕಳು ಅಕ್ಷರ ಕಲಿಕೆಯಿಂದ ದೂರುಳಿದಿರುವುದು ಪತ್ತೆಯಾಗಿದೆ.
ತಾಲೂಕಿನಲ್ಲಿ 230 ಸರ್ಕಾರಿ ಪ್ರಾಥಮಿಕ, 35 ಪ್ರೌಢಶಾಲೆ, 9 ಸರ್ಕಾರಿ ಪದವಿ ಪೂರ್ವ ಕಾಲೇಜಗಳಿವೆ. ಅನುದಾನಿತ 9 ಪ್ರಾಥಮಿಕ, 9 ಪ್ರೌಢಶಾಲೆ ಸೇರಿ ತಾಲೂಕಿನಲ್ಲಿ 75,123 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಲ್ಲಿ 39,343 ಗಂಡು, 35, 780 ಹೆಣ್ಣು ಮಕ್ಕಳು ಅಕ್ಷರ ಕಲಿಕೆಯಲ್ಲಿ ತೊಡಗಿದ್ದಾರೆ.
ತಾಲೂಕಿನ ಶಾಲೆಗಳಲ್ಲಿ ದಾಖಲಾತಿಗಳಿಗೂ ಮಕ್ಕಳ ಹಾಜರಾತಿಗೂ ವ್ಯತ್ಯಾಸಗಳು ಕಂಡುಬಂದಿದೆ. ಹಾಗಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಕಾರ್ಯ ನಡೆಸಿದ್ದರಿಂದ ತಾಲೂಕಿನಲ್ಲಿ 343 ವಿದ್ಯಾರ್ಥಿಗಳಲ್ಲಿ 175 ಗಂಡು, 167 ಹೆಣ್ಣು ಮಕ್ಕಳು ಶಿಕ್ಷಣದಿಂದ ದೂರುಳಿದಿದ್ದಾರೆ. ಪರಿಶಿಷ್ಟ ಜಾತಿ 99 ಮಕ್ಕಳು, ಪರಿಶಿಷ್ಟ ಪಂಗಡದ 92 ಮಕ್ಕಳು, ಪ್ರವರ್ಗ-1 49 ಮಕ್ಕಳು, ಇತರೆ ಹಿಂದುಳಿದ ವರ್ಗಗಳ 70 ಮಕ್ಕಳು, ಮುಸ್ಲಿಂ 32 ಮಕ್ಕಳು ತಮ್ಮ ಶಾಲೆಯಿಂದ ಹೊರಗುಳಿದಿದ್ದಾರೆ. ತಾಲೂಕಿನ ಸರ್ಜಾಪುರದಲ್ಲಿ 48, ಕಾಚಾಪುರ 11, ಮಾವಿನಭಾವಿ 6, ನೀರಲಕೇರಾ 8, ಕುಮಾರಖೇಡ್ 12, ತೊಡಕಿ ತಾಂಡಾ 9, ನಾಗಲಾಪುರ, ಲಿಂಗಸುಗೂರು ಪಟ್ಟಣ, ಕಸಬಾಲಿಂಗಸುಗೂರು, ಛತ್ತರ ತಾಂಡಾ, ಹಡಗಲಿ, ದೇವರಭೂಪುರ, ಹಟ್ಟಿ, ತಿಮ್ಮಾಪುರ ಸೇರಿ ಇನ್ನಿತರ ಗ್ರಾಮಗಳಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಪಟ್ಟಣ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದ ಮಕ್ಕಳೇ ಶಾಲೆಯಿಂದ ಹೊರಗುಳಿದಿದ್ದಾರೆ.
6-14 ವರ್ಷ ವಯೋಮಾನದ ಎಲ್ಲ ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣ ಒದಗಿಸುವುದು ಶಿಕ್ಷಣ ಹಕ್ಕು ಕಾಯ್ದೆ ಮುಖ್ಯ ಉದ್ದೇಶ. ಸರ್ಕಾರ ಪ್ರತಿಯೊಂದು ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂದು ಕೋಟ್ಯಂತರ ರೂ.ಗಳನ್ನು ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿದೆ. ಆದರೂ ಶಿಕ್ಷಣಕ್ಕೆ ಒತ್ತು ಇಲ್ಲದಾಗಿದೆ. ಮಕ್ಕಳನ್ನು ಶಾಲೆಯಿಂದ ಹೊರಗುಳಿಯಲು ಪೋಷಕರ ನಿರಾಸಕ್ತಿ ಕಾರಣವೇ ಹೆಚ್ಚು ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಇದಲ್ಲದೆ ಇತರೆ ದುಡಿಮೆಯಲ್ಲಿ, ಬಾಲಕಾರ್ಮಿಕ, ಚಿಂದಿ ಆಯುವುದು. ವಲಸೆ ಜೀವನ, ತೀವೃ ಅಂಗವಿಕಲತೆ, ಮಕ್ಕಳ ನಿರಾಸಕ್ತಿ, ಕುಟಂಬದ ಸಮಸ್ಯೆ ಸೇರಿದಂತೆ ಇನ್ನಿತರ ಕಾರಣಗಳಿಂದ ಮಕ್ಕಳು ಶಾಲೆಯಿಂದ ಹೊರಗುಳಿಯಬೇಕಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಗು ಪ್ರೌಢಾವಸ್ಥೆ ತಲುಪಿದ್ದರಿಂದ ಶಾಲೆಗೆ ಕಳುಹಿಸಲು ಪಾಲಕರ ಹಿಂದೇಟು ಒಂದು ಕಾರಣವಾಗಿದೆ.
2018-19ನೇ ಸಾಲಿನ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ಶಿಕ್ಷಣದ ಮುಖ್ಯವಾಹಿನಿಗೆ ತರಲು ವಿಶೇಷ ದಾಖಲಾತಿ ಆಂದೋಲನ ನಡೆಸಬೇಕಿದೆ.