Advertisement

32 ದೇವದಾಸಿ ಮಕ್ಕಳ ಸಾಮೂಹಿಕ ವಿವಾಹ

01:12 PM Jun 10, 2018 | |

ಕೊಪ್ಪಳ: ನಗರ, ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಬೇರೂರಿದ ಅನಿಷ್ಟ ದೇವದಾಸಿ ಪದ್ಧತಿ ದೂರ ಮಾಡಲು, ಅವರ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ವಿಮುಕ್ತ ದೇವದಾಸಿ ಮಹಿಳಾ ವೇದಿಕೆ 32 ದೇವದಾಸಿ ಮಕ್ಕಳಿಗೆ ಸರಳ ವಿವಾಹ ಮಾಡುವ ಮೂಲಕ ರಾಜ್ಯದ ಗಮನ ಸೆಳೆದಿದೆ.

Advertisement

ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಶನಿವಾರ ವಿಮುಕ್ತ ದೇವದಾಸಿ ಮಹಿಳಾ ವೇದಿಕೆ, ಮಾದಿಗ-ಛಲವಾದಿ ಮಹಾ ಸಭಾದ ಸಹಯೋಗದಲ್ಲಿ 32 ನವ ಜೋಡಿಗಳಿಗೆ ಮದುವೆ ಮಾಡುವ ಮೂಲಕ ಇತರೆ ದೇವದಾಸಿ ಮಹಿಳೆಯರಲ್ಲೂ ಹಾಗೂ ಅನಿಷ್ಟ ಪದ್ಧತಿಯಿಂದ ದೂರ ಉಳಿಯಲು ಜಾಗೃತಿಯ ಸಂದೇಶ ನೀಡಿದೆ. 

ಹೈದ್ರಾಬಾದ್‌ ಕರ್ನಾಟಕ ಭಾಗದಲ್ಲಿ ಈ ಹಿಂದೆ ದೇವದಾಸಿ ಪದ್ಧತಿ ಹೆಚ್ಚಾಗಿತ್ತು. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ದಲಿತ ಮಹಿಳೆಯರನ್ನೇ ಹೆಚ್ಚಾಗಿ ಮುತ್ತು ಕಟ್ಟುವುದು, ಬಸವಿ ಬಿಡುವುದು, ದೇವರ ಮಕ್ಕಳು ಎಂದೆಲ್ಲ ಕರೆದು ಅವರನ್ನು ಪುರುಷರ ದೇಹ ಸುಖಕ್ಕಾಗಿ ಮೀಸಲಿಡುವಂತಹ ಕಾಲವಿತ್ತು. ದಲಿತ ಬಾಲಕಿ ವಯಸ್ಕಳಾದ ತಕ್ಷಣ ಗುಡಿ, ಗುಂಡಾದರಲ್ಲಿ ಮುತ್ತು ಕಟ್ಟುವ ಕೆಲಸ ಮಾಡಲಾಗುತ್ತಿತ್ತು. ಅದೇ ಪದ್ಧತಿ ಬೆಳೆದು ಅವರ ಮಕ್ಕಳ ಭವಿಷ್ಯವೇ ಹಾಳಾಗುತ್ತಿತ್ತು. ಈ ಅನಿಷ್ಟ ಪದ್ಧತಿ ದೂರ ಮಾಡಿ ದೇವದಾಸಿ ಮಕ್ಕಳಿಗೂ ಜೀವನ ಕಟ್ಟಿ ಕೊಡುವ ಉದ್ದೇಶದಿಂದ ವೇದಿಕೆಯು ಅವರ ಜೀವನಕ್ಕೆ ಬೆಳಕಾಗುವಂತೆ ಮಾಡಿದೆ. 

ರಾಜ್ಯದಲ್ಲಿ ಮೊದಲ ಪ್ರಯತ್ನ: ಸರ್ಕಾರದ ಸಹಾಯಧನದ ಸಹಯೋಗದಲ್ಲಿ ವಿಮುಕ್ತ ದೇವದಾಸಿ ಮಹಿಳಾ ವೇದಿಕೆಯು ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ದೇವದಾಸಿ ಕುಷ್ಟಗಿಯಲ್ಲಿ ಶನಿವಾರ 32 ನವ ಜೋಡಿಗೆ ಮದುವೆ ಮಾಡಿಸಿದೆ. ಚಿತ್ರದುರ್ಗ ಆದಿಜಾಂಬವ ಮಠದ ಶ್ರೀ ಷಡಕ್ಷರಿಮುನಿ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಅಕ್ಷತಾರೋಪಣ ಕಾರ್ಯಕ್ರಮ ಜರುಗಿತು. ಸ್ವಾಮೀಜಿಗಳೇ ನವ ಜೋಡಿಗಳಿಗೆ ಜೀವನದ ಬಂಡಿ ಸಾಗಲು ಪ್ರತಿಜ್ಞಾ ವಿಧಿ ಬೋಧಿಸಿದರು. ಸಾಮೂಹಿಕ ವಿವಾಹ ಸಾಂಪ್ರದಾಯಕವಾಗಿಯೇ ನಡೆದರೂ ಅಕ್ಷತೆಯು ವೇದಿಕೆಯಯಲ್ಲಿಯೇ ಜರುಗಿತು. ಸ್ವಾಮೀಜಿಗಳ ಸಾನಿಧ್ಯದಲ್ಲೇ ವರರು ವಧುಗಳಿಗೆ ತಾಳಿ ಕಟ್ಟುವ ಮೂಲಕ ನವ ಜೀವನಕ್ಕೆ ಕಾಲಿರಿಸಿದರು. ಈ ಸಾಮೂಹಿಕ ವಿವಾಹದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್‌.ಆಂಜನೇಯ, ಶಾಸಕ ಅಮರೇಗೌಡ ಬಯ್ನಾಪುರ ಸೇರಿದಂತೆ ವಿವಿಧ ಮುಖಂಡರು ಪಾಲ್ಗೊಂಡಿದ್ದರು.

ದೇವದಾಸಿ ಪದ್ಧತಿ ದೂರ ಮಾಡಲು ಈ ಹಿಂದಿನ ಕಾಂಗ್ರೆಸ್‌ ಸರ್ಕಾರ ಹಲವು ಸೌಲಭ್ಯ ಕಲ್ಪಿಸಿದೆ. ದೇವದಾಸಿ ಮಕ್ಕಳ ಮದುವೆಯಾದರೆ 5 ಲಕ್ಷ ಪ್ರೋತ್ಸಾಹ ಧನ ನೀಡಲು ಯೋಜನೆ ಜಾರಿ ಮಾಡಿದೆ. ಜಮೀನು, ಸಾಲ ನೀಡುವಿಕೆ, ಆರ್ಥಿಕ ನೆರವೂ ನೀಡಲಾಗುತ್ತಿದೆ.
 ಎಚ್‌.ಆಂಜನೇಯ, ಮಾಜಿ ಸಚಿವ

Advertisement

ಕುಷ್ಟಗಿಯಲ್ಲಿ ಈ ಹಿಂದೆ ಓರ್ವ ದೇವದಾಸಿ ಮಹಿಳೆ ತನ್ನ ಎರಡು ಹೆಣ್ಣು ಮಕ್ಕಳಿಗೆ ಮದುವೆ ಮಾಡಲಾಗದೇ
ಹುಚ್ಚಿಯಾದಳು. ಈಗ ಅಂತಹ ಮಕ್ಕಳಿಗೆ ಮದುವೆ ಮಾಡಿಸಿ ಅನಿಷ್ಟ ಪದ್ಧತಿ ದೂರ ಮಾಡುವ ಪ್ರಯತ್ನ ಮಾಡಿದ್ದೇವೆ.
 ಚಂದಾಲಿಂಗ ಕಲಾಲಬಂಡಿ, ಕಾರ್ಯಕ್ರಮ ಆಯೋಜಕ

Advertisement

Udayavani is now on Telegram. Click here to join our channel and stay updated with the latest news.

Next