ಬೆಂಗಳೂರು: ಬಿಎಂಟಿಸಿಗೆ 1,500 ಹೊಸ ಬಸ್‌ಗಳ ಖರೀದಿಗೆ ನಿರ್ಧರಿಸಿದ್ದು, ಇದರೊಂದಿಗೆ 1,500 ಖಾಸಗಿ ಬಸ್‌ಗಳನ್ನು ಬಾಡಿಗೆಗೆ ಪಡೆಯುವುದಾಗಿ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಗರದಲ್ಲಿ ಸಂಚಾರ ಸೇವೆ ಉತ್ತಮಗೊಳಿಸುವ ನಿಟ್ಟಿನಲ್ಲಿ ಅಗತ್ಯವಾದಷ್ಟು ಬಸ್ಸುಗಳ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಹೊಸ ಬಸ್‌ಗಳ ಜತೆಗೆ ಖಾಸಗಿಯವರಿಂದಲೂ ಬಸ್ ಪಡೆದು ಪ್ರಯಾಣಿಕರಿಗೆ ಅಗತ್ಯ ಇರುವ ಕಡೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ನಗರ ಸಾರಿಗೆ ಸೇರಿ ಕರ್ನಾಟಕದ ಸಾರಿಗೆ ವ್ಯವಸ್ಥೆಗೆ 200ಕ್ಕೂ ಹೆಚ್ಚು ಪ್ರಶಸ್ತಿಗಳು ಬಂದಿರುವುದಕ್ಕೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸೇವೆಯನ್ನು ಮತ್ತಷ್ಟು ಉತ್ತಮಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಶೀಘ್ರದಲ್ಲೇ ಚಿತ್ರದುರ್ಗ ಹಾಗೂ ಶಿವಮೊಗ್ಗದಲ್ಲಿ ಸಾರಿಗೆ ಪ್ರಾದೇಶಿಕ ಕಚೇರಿಗಳನ್ನು ಆರಂಭಿಸಲಾಗುವುದು. ಡಿಪೋಗಳಲ್ಲಿ ದಾಸ್ತಾನು ಇರುವ ಅನುಪಯುಕ್ತ (ಸಾðéಪ್) ಹರಾಜಿಗೆ ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಹೇಳಿದರು.
ಮಾಲಿನ್ಯ ತಪಾಸಣೆಯಲ್ಲಿ ಮೋಸ ನಡೆಯುತ್ತಿರುವ ವಿಚಾರ ನನ್ನ ಗಮನಕ್ಕೆ ಈಗಷ್ಟೇ ಬಂದಿದೆ. ಖಾಸಗಿ ಸಹಭಾಗಿತ್ವ ಮಾಲಿನ್ಯ ತಪಾಸಣೆ ಕೇಂದ್ರಗಳ ಪರಿಶೀಲನೆ ನಡೆಸಲಾಗುವುದು. ಸೂಕ್ತ ದಾಖಲೆಗಳು ಇಲ್ಲದಿದ್ದರೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.