Advertisement

ವಾಡಿಕೆ ಮೀರುತ್ತಿದೆ ಹಿಂಗಾರು ಮಳೆ

01:14 AM Oct 27, 2019 | mahesh |

ಮಂಗಳೂರು: ಕರಾವಳಿಯಲ್ಲಿ ಮುಂದಿನ ಮೂರು ತಿಂಗಳಲ್ಲಿ ಸುರಿಯಬೇಕಾದ ಹಿಂಗಾರು ಮಳೆ ಕೇವಲ ಮೂರು ವಾರದಲ್ಲಿ ಸುರಿದು, ವಾಡಿಕೆಯ ಗುರಿ ತಲುಪಿದೆ. ಹಿಂಗಾರು ಮಾರುತ ಅಪ್ಪಳಿಸುವ ಮೊದಲು ಕರಾವಳಿ ಭಾಗದಲ್ಲಿ ಬಿಸಿಲು, ಮೋಡ ಮತ್ತು ಸೆಕೆಯಿಂದ ಕೂಡಿದ ವಾತಾವರಣವಿತ್ತು. ಮಳೆಯೂ ಕಡಿಮೆ ಇತ್ತು. ಇದರಿಂದ ಈ ಬಾರಿಯ ಹಿಂಗಾರು ಉತ್ತಮವಾಗಿರಲಾರದು ಎಂದು ಹವಾಮಾನ ಇಲಾಖೆ ಅಂದಾಜಿಸಿತ್ತು. ಆದರೆ ಇಲಾಖೆಯ ಲೆಕ್ಕಾಚಾರ ತಲೆಕೆಳಗಾಗಿದೆ.

Advertisement

ಹವಾಮಾನ ಇಲಾಖೆಯ ಪ್ರಕಾರ ಕರಾವಳಿಯಲ್ಲಿ ಹಿಂಗಾರು ಮಳೆ ಅಕ್ಟೋಬರ್‌ನಿಂದ ಡಿಸೆಂಬರ್‌ ಅಂತ್ಯದ ವರೆಗೆ ಇರುತ್ತದೆ. ಈ ಅವಧಿಯಲ್ಲಿ ವಾಡಿಕೆಯಂತೆ ಸರಾಸರಿ 261 ಮಿ.ಮೀ. ಮಳೆ ಸುರಿಯಬೇಕು. ಆದರೆ ಕೇವಲ ಮೂರು ವಾರದಲ್ಲಿ 414.30 ಮಿ.ಮೀ. ಮಳೆಯಾಗಿದೆ. ಅಂದರೆ ವಾಡಿಕೆಗಿಂತ ಒಂದೂವರೆ ಪಟ್ಟು ಹೆಚ್ಚಿದಂತಾಗಿದೆ.

ಕರಾವಳಿಯಲ್ಲಿ ಅ. 1ರಿಂದ 25ರ ವರೆಗೆ ವಾಡಿಕೆ ಯಂತೆ 158.30 ಮಿ.ಮೀ. ಮಳೆಯಾಗಬೇಕಿದ್ದು, ಈಗಾಗಲೇ 414.30 ಮಿ.ಮೀ. ಮಳೆ ಸುರಿದು ನಿರೀಕ್ಷೆಗಿಂತ ಶೇ.162ರಷ್ಟು ಹೆಚ್ಚಳವಾಗಿದೆ. ದ.ಕ.ದಲ್ಲಿ 217.70 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 397.45 ಮಿ.ಮೀ. ಮಳೆಯಾಗಿ ಶೇ.83 ರಷ್ಟು ಹೆಚ್ಚಳವಾಗಿದೆ. ಉಡುಪಿಯಲ್ಲಿ 177.60 ಮಿ.ಮೀ. ಮಳೆಯಾಗಬೇಕಿದ್ದರೂ 518.43 ಮಿ.ಮೀ. ಮಳೆಯಾಗಿ ಶೇ.192ರಷ್ಟು ಹೆಚ್ಚಳವಾಗಿದೆ. ಉತ್ತರ ಕನ್ನಡದಲ್ಲಿ 123.30 ಮಿ.ಮೀ. ವಾಡಿಕೆ ಮಳೆಯಾಗಬೇಕಿದ್ದರೆ ಈಗಾಗಲೇ 386.03 ಮಿ.ಮೀ.ನಷ್ಟು ಮಳೆ ಬಂದು ಶೇ.213ರಷ್ಟು ಹೆಚ್ಚಳವಾಗಿದೆ.

ಗುರಿ ತಲುಪಿದ ಹಿಂಗಾರು
ಕರಾವಳಿಯಲ್ಲಿ ಕಳೆದ 3 ವರ್ಷ ಹಿಂಗಾರು ಅಷ್ಟೇನೂ ಉತ್ತಮವಾಗಿರಲಿಲ್ಲ. ಕಳೆದ 2 ವರ್ಷ ವಾಡಿಕೆಗಿಂತ ಶೇ. 28ರಷ್ಟು ಮಳೆ ಕೊರತೆಯಾಗಿತ್ತು. ಆದರೆ ಈ ಬಾರಿ ಹಿಂಗಾರು ಮಳೆ ಗುರಿ ತಲುಪಿದೆ.

ಅಡಿಕೆ, ಭತ್ತ ಬೆಳೆಗಾರರು ಕಂಗಾಲು
ಕರಾವಳಿ ಭಾಗದಲ್ಲಿ ಅಡಿಕೆ ಮತ್ತು ಭತ್ತ ಪ್ರಮುಖ ಬೆಳೆ. ಭಾರೀ ಮಳೆಯಿಂದಾಗಿ ಬೆಳೆಗಾರರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಭತ್ತ ಪೈರು ಕಟಾವಿಗೆ ಬಂದಿದ್ದು, ಕೊಯ್ಯಲು ಕಷ್ಟವಾಗುತ್ತಿದೆ. ಈ ಬಾರಿ ಅಡಿಕೆ ತುಸು ಬೇಗ ಹಣ್ಣಾದ ಕಾರಣ ಮರದಿಂದ ಬೀಳಲು ಆರಂಭಿಸಿದೆ, ಒಣಗಿಸುವುದು ಕಷ್ಟವಾಗುತ್ತಿದೆ ಎಂದು ಕೃಷಿ ಆರ್ಥಿಕ ತಜ್ಞ ವಿಘ್ನೇಶ್ವರ ವರ್ಮುಡಿ ಅವರು “ಉದಯವಾಣಿ”ಗೆ ತಿಳಿಸಿದ್ದಾರೆ.

Advertisement

ನೀರಿನ ಮಟ್ಟ ಏರಿಕೆ
ಕರಾವಳಿಯಲ್ಲಿ ಈ ಬಾರಿ ಮುಂಗಾರು ಜತೆ ಹಿಂಗಾರು ಕೂಡ ಉತ್ತಮವಾಗಿರುವ ಪರಿಣಾಮ ಬೇಸಗೆಯಲ್ಲಿಯೂ ಅಂತರ್ಜಲ ಮಟ್ಟ ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ನದಿಗಳಲ್ಲಿ ನೀರಿನ ಮಟ್ಟ ಕೂಡ ಏರಿಕೆಯಾಗಿದೆ. ಹಿಂಗಾರು ಮಳೆ ಹೀಗೆಯೇ ಮುಂದುವರಿದರೆ ಬಹಳಷ್ಟು ಕಡೆ ಬೇಸಿಗೆಯಲ್ಲಿ ನೀರಿನ ಹಾಹಾಕಾರ ಕಡಿಮೆಯಾಗುವ ಸಾಧ್ಯತೆಯಿದೆ.

ಕರಾವಳಿಯಲ್ಲಿ ಕಳೆದ ಕೆಲವು ವರ್ಷಗಳಲ್ಲೇ ಈ ಬಾರಿ ಅಧಿಕ ಹಿಂಗಾರು ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಕಳೆದ 43 ವರ್ಷಗಳಲ್ಲೇ ಈ ಬಾರಿಯ ಹಿಂಗಾರು ಉತ್ತಮವಾದದ್ದು.
– ಶ್ರೀನಿವಾಸ ರೆಡ್ಡಿ , ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಅಧ್ಯಕ್ಷ

– ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next