Advertisement

ಪ್ರವಾಸೋದ್ಯಮಕ್ಕೆ 3 ಸಾವಿರ ಕೋಟಿ ಕ್ರಿಯಾಯೋಜನೆ

12:27 PM Jun 20, 2018 | Team Udayavani |

ಮೈಸೂರು: ಅರಮನೆಗಳ ನಗರಿ ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ 20 ಪ್ರವಾಸಿ ತಾಣಗಳ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ.ಗಳ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ತಿಳಿಸಿದರು. ಮೈಸೂರು ಜಿಪಂ ಸಭಾಂಗಣದಲ್ಲಿ ಮಂಗಳವಾರ, ಪ್ರವಾಸಿ ತಾಣಗಳ ಅಭಿವೃದ್ಧಿ ಕುರಿತು ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

Advertisement

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ಈ ಸಂಬಂಧ ಜೂ.25ರಂದು ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದರು. ಮೈಸೂರು ನಗರಕ್ಕೆ ವಾರ್ಷಿಕ 35 ರಿಂದ 40 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಇವರಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕಿದೆ.

ವರ್ಷದ 365 ದಿನವು ವಸ್ತುಪ್ರದರ್ಶನ ನಡೆಯುವಂತಾಗಬೇಕು. ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅರಮನೆ, ಮೃಗಾಲಯ ಸೇರಿದಂತೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಿಕೊಡಬೇಕು. ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ ಜೊತೆಗೆ ಅಗಲೀಕರಣವಾಗಬೇಕು.

ಹೊರಗಿನಿಂದ ಬರುವ ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ನೀಡಲು ಪ್ರವಾಸಿ ಸ್ನೇಹಿ ಪೊಲೀಸಿಂಗ್‌ ವ್ಯವಸ್ಥೆ ಜಾರಿಗೆ ತರಬೇಕು, ಅರಮನೆ, ಕೃಷ್ಣರಾಜ ಸಾಗರ ಬೃಂದಾವನದ ದೀಪಾಲಂಕಾರ ಸಮಯವನ್ನು ವಿಸ್ತರಣೆ ಮಾಡಬೇಕು. ಪ್ರಮುಖವಾಗಿ ಮೈಸೂರಿನಲ್ಲಿ ಪ್ರವಾಸಿಗರ ನೈಟ್‌ ಲೈಫ್ಗೆ ಅವಕಾಶ ಸಿಗುವಂತಾಗಬೇಕು. ಮೈಸೂರಿನ ಎಲ್ಲಾ ಪ್ರವಾಸಿ ತಾಣಗಳಿಗೆ ಏಕ ರೂಪದ ಟಿಕೆಟ್‌ ವ್ಯವಸ್ಥೆ,

ಟೂರಿಸಂ ಟಾಸ್ಕ್ ಫೋರ್ಸ್‌ ಮಾಡಿ, ಹೊರ ವರ್ತುಲ ರಸ್ತೆಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಒತ್ತು ನೀಡಿ, ಮೈಸೂರಿನಲ್ಲಿ ಯೋಗ ವಿವಿ ಮಾನ್ಯತೆ ದೊರೆತರೆ ಉದ್ಯೋಗ ಸೃಷ್ಟಿಗೆ ಅವಕಾಶವಾಗುತ್ತದೆ. ಅಂತಾರಾಜ್ಯ ಪ್ರವಾಸಿ ವಾಹನಗಳ ಪ್ರವೇಶ ತೆರಿಗೆ ಕಡಿಮೆ ಮಾಡುವುದು ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಹತ್ತಾರು ಸಲಹೆ ನೀಡಿದರು.

Advertisement

ರೋಪ್‌ ವೇ ಬೇಕು: ಚಾಮುಂಡಿ ಬೆಟ್ಟಕ್ಕೆ ರೋಪ್‌ ವೇ ಹಾಕುವ ಬಗ್ಗೆ ಬಹಳ ಹಿಂದೆಯೇ ಕ್ರಿಯಾಯೋಜನೆ ಸಿದ್ಧಗೊಂಡರು, ಪರಿಸರವಾದಿಗಳ ವಿರೋಧದಿಂದಾಗಿ ಯೋಜನೆ ನೆನೆಗುದಿಗೆ ಬಿದ್ದಿದೆ. ಮರ-ಗಿಡಗಳನ್ನು ಕಡಿಯಲಾಗುತ್ತದೆ ಎಂಬುದು ಪರಿಸರವಾದಿಗಳ ವಾದ. ಆದರೆ, ರೋಪ್‌ವೇಗೆ ಹೆಚ್ಚಿನ ಮರಗಳನ್ನು ಕಡಿಯಬೇಕಾದ ಅವಶ್ಯಕತೆ ಇಲ್ಲ, ಜೊತೆಗೆ ಕಡಿದಿದ್ದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಗಿಡಗಳನ್ನು ಕೆಲಸವಾಗಬೇಕು.

ಪರಿಸರವಾದಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚಾಮುಂಡಿಬೆಟ್ಟಕ್ಕೆ ರೋಪ್‌ ವೇ ಹಾಕುವ, ಝಿಪ್‌ ಲೇನ ಮಾಡುವ ಯೋಜನೆ ಜಾರಿ ಮಾಡಿ, ಇದರಿಂದ ಸಾಹಸ ಪ್ರವಾಸೋದ್ಯಮಕ್ಕೆ ಒತ್ತು ಸಿಗಲಿದ್ದು, ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಬಹುದು ಎಂದು ಮೈಸೂರು ಟ್ರಾವೆಲ್ಸ್‌ ಅಸೋಸಿಯೇಷನ್‌ನ ಪ್ರಶಾಂತ್‌ ಸೇರಿದಂತೆ ಹಲವರು ಸಲಹೆ ನೀಡಿದರು.

ಹೋಟೆಲ್‌ ಮಾಲಿಕರ ಸಂಘದ ಮಹೇಶ್‌ ಕಾಮತ್‌, ಮೈಸೂರು ನಗರಕ್ಕೆ ಬ್ಯಾಟರಿ ಕಾರು ಪರಿಚಯಿಸಿದರೆ ಮಾಲಿನ್ಯ ನಿಯಂತ್ರಣ ತಪ್ಪಿಸಬಹುದು. ಜೊತೆಗೆ ಎಲ್ಲ ಪ್ರವಾಸಿ ತಾಣಗಳಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸಿದರೆ ಪ್ಲಾಸ್ಟಿಕ್‌ ಬಾಟಲಿಗಳ ಹಾವಳಿ ತಪ್ಪಿಸಬಹುದು. ಪ್ರಮುಖವಾಗಿ ಪೊಲೀಸರಿಗೆ ಪ್ರವಾಸಿಗರ ಜೊತೆ ಹೇಗೆ ವರ್ತಿಸಬೇಕು ಎಂಬುದನ್ನು ಹೇಳಿಕೊಡಿ ಎಂದು ಸಲಹೆ ನೀಡಿದರು.

ಹೋಟೆಲ್‌ ಮಾಲಿಕರ ಸಂಘದ ಅಧ್ಯಕ್ಷ ನಾರಾಯಣ ಗೌಡ, ಮೈಸೂರಿನಿಂದ ದೇಶದ ಇತರೆ ಪ್ರಮುಖ ನಗರಗಳಿಗೆ ವಿಮಾನಯಾನ ಸೌಲಭ್ಯ ಕಲ್ಪಿಸಿ, ಚಾಮುಂಡಿಬೆಟ್ಟಕ್ಕೆ ರೋಪ್‌ ವೇ ಮಾಡಿಸಿ ಎಂದು ಸಲಹೆ ನೀಡಿದರು. ಮೈಸೂರು ಟ್ರಾವೆಲ್ಸ್‌ ಅಸೋಸಿಯೇಷನ್‌ನ ಪ್ರಶಾಂತ್‌, ಮೈಸೂರು ದಸರೆ ಬಗ್ಗೆ ಸರಿಯಾದ ಮಾರ್ಕೆಟಿಂಗ್‌ ಮಾಡುತ್ತಿಲ್ಲ. ದಸರಾ ಗೋಲ್ಡ್‌ ಕಾರ್ಡ್‌ ಹೊಂದಿರುವ ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆ ಮಾಡಬೇಕು.

ಪ್ರವಾಸೋದ್ಯಮ ಉತ್ತೇಜನಕ್ಕೆ ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳುವಲ್ಲಿ ಇಲಾಖೆ ಹಿಂದೆ ಬಿದ್ದಿದೆ, ಈ ಬಗ್ಗೆ ಗಮನಹರಿಸಿ ಎಂದು ಸಲಹೆ ನೀಡಿದರು. ರೇಸ್‌ಕೋರ್ಸ್‌ ಆವರಣದಲ್ಲಿ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ಕುದುರೆ ಲಾಯ, ಕಾರ್ಮಿಕ ಶೆಡ್‌ಗಳನ್ನು ನಿರ್ಮಿಸಿರುವ ಬಗ್ಗೆ ರೇಸ್‌ಕೋರ್ಸ್‌ ಅಧ್ಯಕ್ಷ ಮತ್ತು ಮೈಸೂರು ಗಾಲ್ಫ್ ಅಧ್ಯಕ್ಷರನ್ನು ಸಚಿವರು ತರಾಟೆಗೆ ತೆಗೆದುಕೊಂಡರು. 

ಸಭೆಯಲ್ಲಿ ಶಾಸಕರಾದ ಸಂದೇಶ್‌ ನಾಗರಾಜ್‌, ಎಲ್‌.ನಾಗೇಂದ್ರ, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಟಿ.ಕೆ.ಅನಿಲ್‌ ಕುಮಾರ್‌, ನಿರ್ದೇಶಕ ರಾಮು, ಜಂಗಲ್‌ಲಾಡ್ಜಸ್‌ ವ್ಯವಸ್ಥಾಪಕ ನಿರ್ದೇಶಕ ಕುಮಾರಪುಷ್ಪರ್‌, ಮೈಸೂರು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next