Advertisement

3 match T20 series; ಯಂಗ್‌ ಇಂಡಿಯಾಕ್ಕೆ ದಕ್ಷಿಣ ಆಫ್ರಿಕಾ ಟೆಸ್ಟ್‌

10:48 PM Dec 09, 2023 | Team Udayavani |

ಡರ್ಬನ್‌ (ದಕ್ಷಿಣ ಆಫ್ರಿಕಾ): ವಿಶ್ವಕಪ್‌ ಫೈನಲ್‌ ಸೋಲಿನ ಬಳಿಕ ಆಸ್ಟ್ರೇಲಿಯದೆದುರಿನ ಟಿ20 ಸರಣಿ ಯನ್ನು 4-1 ಅಂತರದಿಂದ ಗೆದ್ದ “ಯಂಗ್‌ ಇಂಡಿಯಾ’ ಈಗ ದಕ್ಷಿಣ ಆಫ್ರಿಕಾಕ್ಕೆ ಬಂದಿಳಿದಿದೆ.

Advertisement

ಇಲ್ಲಿ ಪೂರ್ಣ ಪ್ರಮಾಣದ ಸರಣಿಯನ್ನು ಆಡಲಿದ್ದು, ಶನಿವಾರದಿಂದ 3 ಪಂದ್ಯಗಳ ಟಿ20 ಮುಖಾಮುಖಿಗೆ ಚಾಲನೆ ಲಭಿಸಲಿದೆ. ವಿದೇಶದಲ್ಲಿ ನಮ್ಮವರ ಸಾಧನೆ ಹೇಗಿದ್ದೀತು, ಮುಂದಿನ ವರ್ಷದ ಟಿ20 ವಿಶ್ವಕಪ್‌ ಹಿನ್ನೆಲೆಯಲ್ಲಿ ಈ ಸರಣಿ ಎಷ್ಟರ ಮಟ್ಟಿಗೆ ಲಾಭ ತಂದೀತು, ನಮ್ಮ ತಯಾರಿ ಹೇಗೆ ಸಾಗೀತು ಎಂಬುದೆಲ್ಲ ಇಲ್ಲಿನ ಪ್ರಶ್ನೆ ಹಾಗೂ ನಿರೀಕ್ಷೆ.

ವಿಶ್ವಕಪ್‌ ಫೈನಲ್‌ನಲ್ಲಿ ‘ವಿಲನ್‌’ ಎಂಬ ಅಪವಾದ ಹೊತ್ತಿದ್ದ ಸೂರ್ಯಕುಮಾರ್‌ ಯಾದವ್‌ಗೆ ಟಿ20 ನೇತೃತ್ವ ವಹಿಸಿ ದಾಗ ಎಲ್ಲ ದಿಕ್ಕುಗಳಿಂದಲೂ ಟೀಕೆ, ಅಸಮಾಧಾನ ವ್ಯಕ್ತವಾಗಿತ್ತು. ಆದರೆ ಚುಟುಕು ಮಾದರಿ ಕ್ರಿಕೆಟ್‌ನಲ್ಲಿ ತನ್ನನ್ನು ಕಡೆಗಣಿಸುವಂತಿಲ್ಲ ಎಂಬ ಬಲವಾದ ಎಚ್ಚರಿಕೆ ನೀಡುವಲ್ಲಿ ಸೂರ್ಯ ಯಶಸ್ವಿಯಾಗಿದ್ದಾರೆ. ಈಗ ದಕ್ಷಿಣ ಆಫ್ರಿಕಾ ಸರಣಿಯಲ್ಲೂ ತಂಡದ ನೇತೃತ್ವ ವಹಿಸಿದ್ದಾರೆ. ಇಲ್ಲಿ ಎಷ್ಟರ ಮಟ್ಟಿಗೆ ಯಶಸ್ಸು ಕಂಡಾರೆಂಬುದು ಮತ್ತೂಂದು ಪ್ರಶ್ನೆ. ಅಂದಹಾಗೆ ಸೂರ್ಯಕುಮಾರ್‌ಗಿಂತ ಹೆಚ್ಚಿನ ಅನುಭವಿಯಾಗಿರುವ ರವೀಂದ್ರ ಜಡೇಜ ಉಪನಾಯಕನೆಂಬುದು ಈ ತಂಡದ ವೈಶಿಷ್ಟ್ಯ!

ಅನುಭವಿಗಳೂ ಇದ್ದಾರೆ
ಇದು ಕೂಡ ಎಳೆಯರ ಬಳಗ. ಆದರೆ ಆಸ್ಟ್ರೇಲಿಯ ವಿರುದ್ಧ ಕಣಕ್ಕಿಳಿದ ತಂಡಕ್ಕಿಂತ ಹೆಚ್ಚು ಬಲಿಷ್ಠವಾಗಿದೆ. ಅಲ್ಲಿ ವಿಶ್ರಾಂತಿಯಲ್ಲಿದ್ದ ಶುಭಮನ್‌ ಗಿಲ್‌, ರವೀಂದ್ರ ಜಡೇಜ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌ ಇಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಕೂಡ ಟಿ20 ಸ್ಪೆಷಲಿಸ್ಟ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಜತೆಗೆ ಅನುಭವಿಗಳ ಸಂಖ್ಯೆಯೂ ಸಾಕಷ್ಟಿದೆ. ನಾಯಕ ಮಾರ್ಕ್‌ರಮ್‌, ಕ್ಲಾಸೆನ್‌, ಮಹಾರಾಜ್‌, ಮಿಲ್ಲರ್‌, ಶಮ್ಶಿ , ಹೆಂಡ್ರಿಕ್ಸ್‌, ಜಾನ್ಸೆನ್‌ ಅವರೆಲ್ಲ ಪ್ರಮುಖರು. ಆದರೆ ರಬಾಡ, ನೋರ್ಜೆ, ಎನ್‌ಗಿಡಿ ಮೊದಲಾದವರು ಈ ಸರಣಿಯಲ್ಲಿ ಆಡುತ್ತಿಲ್ಲ.

Advertisement

ವಿಭಿನ್ನ ಟ್ರ್ಯಾಕ್‌
ಭಾರತ-ಆಸ್ಟ್ರೇಲಿಯ ಸರಣಿಯ ವೇಳೆ ಬ್ಯಾಟರ್ ಮತ್ತು ಸ್ಪಿನ್ನರ್‌ಗಳು ಭರಪೂರ ಯಶಸ್ಸು ಸಾಧಿಸಿದ್ದರು. ನಮ್ಮ ಪಿಚ್‌ ಬ್ಯಾಟಿಂಗ್‌ಗೆ ಹೆಚ್ಚಿನ ಸಹಕಾರ ನೀಡುವುದರ ಜತೆಗೆ ಸ್ಪಿನ್ನರ್‌ಗಳಿಗೂ ಲಾಭ ತಂದಿತ್ತಿತು. ರವಿ ಬಿಷ್ಣೋಯಿ, ಅಕ್ಷರ್‌ ಪಟೇಲ್‌ ಕ್ಲಿಕ್‌ ಆದರು. ಬಿಷ್ಣೋಯಿ ಅವರಂತೂ ಅಲ್ಪಾವಧಿಯಲ್ಲಿ ನಂ.1 ಟಿ20 ಬೌಲರ್‌ ಎಂಬ ಹಿರಿಮೆಗೂ ಪಾತ್ರರಾದರು. ಆದರೆ ದಕ್ಷಿಣ ಆಫ್ರಿಕಾ ಟ್ರ್ಯಾಕ್‌ಗಳು ವಿಭಿನ್ನ ಅನುಭವ ನೀಡಲಿವೆ. ಇಲ್ಲಿ ವೇಗಿಗಳು ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚು. ಹೀಗಾಗಿ ಭಾರತ ಸಿರಾಜ್‌, ಅರ್ಷದೀಪ್‌, ಮುಕೇಶ್‌, ಚಹರ್‌ ಅವರನ್ನು ಹೆಚ್ಚು ನೆಚ್ಚಿಕೊಳ್ಳಬೇಕಾದೀತು.

ವೇಗಿಗಳ ದರ್ಬಾರು
ಡರ್ಬನ್‌ನಲ್ಲಿ ಆಡಲಾದ 18 ಟಿ20 ಪಂದ್ಯ ಗಳಲ್ಲಿ ವೇಗಿಗಳು 162 ವಿಕೆಟ್‌ ಉರುಳಿಸಿದ್ದಾರೆ. ಸ್ಪಿನ್ನರ್‌ಗಳಿಗೆ ಲಭಿಸಿದ್ದು 42 ವಿಕೆಟ್‌ ಮಾತ್ರ. ತ್ರಿವಳಿ ವೇಗಿಗಳ ದಾಳಿ ಇಲ್ಲಿ ಹೆಚ್ಚು ಲಾಭದಾಯಕ. ಸ್ಪಿನ್‌ ವಿಭಾಗದಲ್ಲಿ ಆಲ್‌ರೌಂಡರ್‌ ಜಡೇಜ ಸ್ಥಾನಕ್ಕೇನೂ ಧಕ್ಕೆ ಇಲ್ಲ. ಉಳಿದೊಂದು ಸ್ಥಾನಕ್ಕೆ ಕುಲದೀಪ್‌, ಬಿಷ್ಣೋಯಿ ನಡುವೆ ಸ್ಪರ್ಧೆ ಇದೆ.

ಸ್ವಿಂಗ್‌, ಬೌನ್ಸಿ ಹಾಗೂ ಫಾಸ್ಟ್‌ ಟ್ರ್ಯಾಕ್‌ಗಳಿಗೆ ಹೊಂದಿಕೊಳ್ಳುವ ಬ್ಯಾಟ್ಸ್‌ಮನ್‌ಗಳು ಖಂಡಿತ ಯಶಸ್ಸು ಕಾಣಲಿದ್ದಾರೆ. ಆಸೀಸ್‌ ವಿರುದ್ಧ ಮೆರೆದಾಡಿದ ಜೈಸ್ವಾಲ್‌, ಗಾಯಕ್ವಾಡ್‌, ಸೂರ್ಯಕುಮಾರ್‌, ರಿಂಕು ಸಿಂಗ್‌, ಇಶಾನ್‌ ಹರಿಣಗಳ ನಾಡಿನಲ್ಲೂ ಹೀರೋಗಳಾಗಬೇಕಿದೆ. ಗಿಲ್‌, ಜಡೇಜ, ಸಿರಾಜ್‌ ಆಗಮನದಿಂದ ಆಡುವ ಬಳಗದ ಆಯ್ಕೆ ತುಸು ಜಟಿಲವಾದೀತು. ಆದರೆ ಪ್ರಬಲ ದಂಡೊಂದನ್ನು ಕಟ್ಟಲು ವಿಪುಲ ಅವಕಾಶವಂತೂ ಇದೆ.

ತಂಡಗಳು
ಭಾರತ: ಸೂರ್ಯಕುಮಾರ್‌ ಯಾದವ್‌ (ನಾಯಕ), ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ಋತುರಾಜ್‌ ಗಾಯಕ್ವಾಡ್‌, ತಿಲಕ್‌ ವರ್ಮ, ರಿಂಕು ಸಿಂಗ್‌, ಶ್ರೇಯಸ್‌ ಅಯ್ಯರ್‌, ಇಶಾನ್‌ ಕಿಶನ್‌, ಜಿತೇಶ್‌ ಶರ್ಮ, ರವೀಂದ್ರ ಜಡೇಜ, ವಾಷಿಂಗ್ಟನ್‌ ಸುಂದರ್‌, ರವಿ ಬಿಷ್ಣೋಯಿ, ಕುಲದೀಪ್‌ ಯಾದವ್‌, ಅರ್ಷದೀಪ್‌ ಸಿಂಗ್‌, ಮೊಹಮ್ಮದ್‌ ಸಿರಾಜ್‌, ಮುಕೇಶ್‌ ಕುಮಾರ್‌, ದೀಪಕ್‌ ಚಹರ್‌.

ದಕ್ಷಿಣ ಆಫ್ರಿಕಾ: ಐಡನ್‌ ಮಾರ್ಕ್‌ರಮ್‌ (ನಾಯಕ), ಓಟ್‌ನೀಲ್‌ ಬಾರ್ಟ್‌ಮ್ಯಾನ್‌, ಮ್ಯಾಥ್ಯೂ ಬ್ರಿàಝೆR, ನಾಂಡ್ರೆ ಫೆರೀರ, ರೀಝ ಹೆಂಡ್ರಿಕ್ಸ್‌, ಮಾರ್ಕೊ ಜಾನ್ಸೆನ್‌, ಹೆನ್ರಿಕ್‌ ಕ್ಲಾಸೆನ್‌, ಕೇಶವ್‌ ಮಹಾರಾಜ್‌, ಡೇವಿಡ್‌ ಮಿಲ್ಲರ್‌, ಆ್ಯಂಡಿಲ್‌ ಫೆಲುಕ್ವಾಯೊ, ತಬ್ರೇಜ್‌ ಶಮಿÕ, ಟ್ರಿಸ್ಟನ್‌ ಸ್ಟಬ್ಸ್, ಲಿಝಾಡ್‌ ವಿಲಿಯಮ್ಸ್‌.

ಟಿ20 ಸರಣಿ ವೇಳಾಪಟ್ಟಿ
ದಿನಾಂಕ ಪಂದ್ಯ ಸ್ಥಳ ಆರಂಭ
ಡಿ. 10 1ನೇ ಟಿ20 ಡರ್ಬನ್‌ ರಾ. 7.30
ಡಿ. 12 2ನೇ ಟಿ20 ಜೆಬೆರಾ ರಾ. 8.30
ಡಿ. 14 3ನೇ ಟಿ20 ಜೊಹಾನ್ಸ್‌
ಬರ್ಗ್‌ ರಾ. 8.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್
ಸಮಯ: ಭಾರತೀಯ ಕಾಲಮಾನ

Advertisement

Udayavani is now on Telegram. Click here to join our channel and stay updated with the latest news.

Next