Advertisement

ಮೂವರು ಲಷ್ಕರ್‌ ಉಗ್ರರ ಹತ್ಯೆ

06:00 AM May 06, 2018 | Team Udayavani |

ಶ್ರೀನಗರ: ಕಣಿವೆ ರಾಜ್ಯದಲ್ಲಿ ಭಾರೀ ವಿಧ್ವಂಸಕ ಕೃತ್ಯ ನಡೆಸಲು ಸಂಚು ಹೂಡಿದ್ದ ಲಷ್ಕರ್‌-ಎ- ತೊಯ್ಬಾ ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ಭದ್ರತಾ ಪಡೆಗಳು ಶನಿವಾರ ಹೊಡೆದುರುಳಿಸಿವೆ.

Advertisement

ಶ್ರೀನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಉಗ್ರರು ಅಡಗಿಕೊಂಡಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ರಾಜ್ಯದ ಚಳಿಗಾಲದ ರಾಜಧಾನಿಯಾದ ಶ್ರೀನಗರಕ್ಕೆ, ಬೇಸಿಗೆ ರಾಜಧಾನಿಯಾದ ಜಮ್ಮುವಿನಿಂದ ಸರ್ಕಾರಿ ಕಚೇರಿಗಳು ಸ್ಥಳಾಂತರಗೊಂಡಿದ್ದು ಮೇ 7ರಂದು ಅವು ಕಾರ್ಯಾರಂಭ ಮಾಡಲಿವೆ. ಈ ಹಿನ್ನೆಲೆಯಲ್ಲಿ ಮೇ 7ರಂದು ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆಸಲು ಈ ಉಗ್ರರು ಸಂಚು ರೂಪಿಸಿದ್ದಾರೆಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತೆಂದು ಜಮ್ಮು ಕಾಶ್ಮೀರ ಪೊಲೀಸ್‌ ಮಹಾ ನಿರ್ದೇಶಕ ಸ್ವಯಂ ಪ್ರಕಾಶ್‌ ಪಾಣಿ ತಿಳಿಸಿದ್ದಾರೆ. 

ಮಾಹಿತಿಯನ್ನಾಧರಿಸಿ, ಜಮ್ಮು ಕಾಶ್ಮೀರ ಪೊಲೀಸ್‌ ಪಡೆ ಹಾಗೂ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಕಟ್ಟಡವನ್ನು ಸುತ್ತುವರಿದರು. ಸುಮಾರು 4 ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾದರು ಎಂದು ಅವರು ತಿಳಿಸಿದ್ದಾರೆ. 

ಉಗ್ರರ ಅಡಗುದಾಣದಲ್ಲಿ ಮೂರು ಎ.ಕೆ. 47 ರೈಫ‌ಲ್‌ಗ‌ಳು, ದೊಡ್ಡ ಪ್ರಮಾಣದ ಮದ್ದು ಗುಂಡು ಸಂಗ್ರಹ, ಐದು ಮ್ಯಾಗಜಿನ್‌ಗಳು, ಒಂದು ಮೆಡಿಕಲ್‌ ಕಿಟ್‌ ಸಿಕ್ಕಿವೆ. ಇವರೆಲ್ಲರೂ ಲಷ್ಕರ್‌ ಉಗ್ರರೇ ಎಂಬುದಕ್ಕೆ ಪ್ರಬಲ ಸಾಕ್ಷ್ಯಾಧಾರಗಳೂ ಸಿಕ್ಕಿವೆ. ಮೃತ ಉಗ್ರರ ಗುರುತು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಪಾಣಿ ವಿವರಿಸಿದ್ದಾರೆ. 

ಅಪಘಾತವೋ, ಹತ್ಯೆಯೋ?
ಈ ಘಟನೆ ನಡೆದ ಪ್ರದೇಶದಿಂದ ಐದು ಕಿಮೀ ಆಚೆಗೆ ಆದಿಲ್‌ ಅಹ್ಮದ್‌ ಯಾದೂ ಎಂಬ ಯುವಕನೊಬ್ಬ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ವೈದ್ಯಕೀಯ ವರದಿಯಲ್ಲಿ ಆತ ರಸ್ತೆ ಅಪಘಾತದಲ್ಲಿ ಮೃತನಾಗಿದ್ದಾನೆಂದು ಹೇಳಲಾಗಿದೆ. ಆದರೆ, ನಾಗರಿಕರು ಆತನನ್ನು ಪೊಲೀಸರೇ ಉಗ್ರನೆಂದು ಅನುಮಾನಿಸಿ ಕೊಂದು, ಇದೀಗ ಪ್ರಕರಣ ತಿರುಚಿದ್ದಾರೆಂದು ಆರೋಪಿಸಿದ್ದಾರೆ. ಇದು ಶ್ರೀಗರದಲ್ಲಿ ಬಿಗುವಿನ ವಾತಾವರಣ ನಿರ್ಮಿಸಿದೆ. 

Advertisement

ನಾಗರಿಕರ ಹತ್ಯೆ
ಏತನ್ಮಧ್ಯೆ, ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಶಾಹ್‌ಗುಡ್‌ ಹಾಜಿನ್‌ ಪ್ರಾಂತ್ಯದ ಇಬ್ಬರು ನಾಗರಿಕರನ್ನು ಲಷ್ಕರ್‌ ಉಗ್ರರು ಹತ್ಯೆಗೈದಿದ್ದಾರೆ. ಗುಲಾಮ್‌ ಹಸನ್‌ ದಾರ್‌ ಅಲಿಯಾಸ್‌ ಹಸನ್‌ ರಸ್ಸಾ ಮತ್ತು ಬಶೀರ್‌ ಅಹ್ಮದ್‌ ದಾರ್‌ ಎಂಬುವರು ಹತರಾದವರು. ಶನಿವಾರ ಬೆಳಗಿನ ಜಾವ 3:30ರ ಸುಮಾರಿಗೆ ನುಗ್ಗಿದ ಉಗ್ರರು, ಅವರಿಬ್ಬರನ್ನೂ ಅಪಹರಿಸಿಕೊಂಡು ಹೋಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next