Advertisement

3 ಲಕ್ಷ ವಿದ್ಯಾರ್ಥಿಗಳು ಕಾಲೇಜಿನಿಂದ ದೂರ

02:58 PM Sep 03, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಪದವಿ ಕಾಲೇಜು ಬಾಗಿಲು ತೆರೆದು ಒಂದು ತಿಂಗಳು ಪೂರ್ಣಗೊಂಡಿದೆ. ಆದರೂ, ಹೆಚ್ಚು ಕಡಿಮೆ ಮೂರು ಲಕ್ಷ ವಿದ್ಯಾರ್ಥಿಗಳು ಈಗಲೂ ಕಾಲೇಜಿನಿಂದ ದೂರ ಉಳಿದಿದ್ದಾರೆ. ಏಕೆಂದರೆ, ಇಂದಿಗೂ ಇವರು ಗಳಿಗೆ ಕೋವಿಡ್‌ ಲಸಿಕೆ ಒಂದು ಡೋಸ್‌ ಕೂಡಾ ಸಿಕ್ಕಿಲ್ಲ.

Advertisement

ಕೋವಿಡ್‌ ಸೋಂಕು ಹಿನ್ನೆಲೆ ಬಂದ್‌ ಆಗಿದ್ದ ಕಾಲೇಜುಗಳು ಜು.26ರಂದು ಪುನಾರಂಭಿಸಲಾಯಿತು. ಆದರೆ,ಕಾಲೇಜಿಗೆ ಹಾಜರಾಗಲು ಕನಿಷ್ಠ ಕೋವಿಡ್‌ ಲಸಿಕೆ ಒಂದು ಡೋಸ್‌ ಪಡೆದಿರಬೇಕು ಎಂಬ ನಿಯಮವನ್ನು ವಿಧಿಸಲಾಗಿತ್ತು. ಜತೆಗೆ ಪದವಿ ಕಾಲೇಜು ವಿದ್ಯಾರ್ಥಿಗಳನ್ನು ಆದ್ಯತೆ ಮೇರೆಗೆ ಲಸಿಕೆ ನೀಡಲು ರಾಜ್ಯ ಸರ್ಕಾರ ಕ್ರಮವಹಿಸಿತ್ತು. ಆದರೂ, ರಾಜ್ಯದಲ್ಲಿರು ಒಟ್ಟಾರೆ 24.37 ಲಕ್ಷ ಪದವಿ ವಿದ್ಯಾರ್ಥಿಗಳ ಪೈಕಿ ಈ ವರೆಗೂ 21.4 ಲಕ್ಷ ವಿದ್ಯಾರ್ಥಿಗಳು ಮಾತ್ರ ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ. 2.9 ಲಕ್ಷ ಮಂದಿ ಲಸಿಕೆಯಿಂದ ದೂರ ಉಳಿದಿದ್ದಾರೆ.

ಜಿಲ್ಲಾವಾರು ಪದವಿ ವಿದ್ಯಾರ್ಥಿಗಳ ದತ್ತಾಂಶ ಸಂಗ್ರಹಿಸಿ ಲಸಿಕೆ ನೀಡಲು, ಕಾಲೇಜುಗಳಲ್ಲಿ ಲಸಿಕಾ ಶಿಬಿರಗಳನ್ನು ಹಮ್ಮಿಕೊಂಡು ಶೀಘ್ರದಲ್ಲಿ ಯೇ ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ ನೀಡಬೇಕು ಎಂದು ಸೂಚಿಸಲಾಗಿತ್ತು. ಕಾಲೇಜು ಆರಂಭವಾಗಿ ಐದು ವಾರ (35 ದಿನ ಗಳು) ಪೂರ್ಣ ಗೊಂಡಿದರೂ, ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಸಾಧ್ಯವಾಗಿಲ್ಲ. ಆರೋಗ್ಯ ಇಲಾಖೆ ಮಾಹಿತಿಯಂತೆ,25 ಜಿಲ್ಲೆಗಳಲ್ಲಿ ಮಾತ್ರ ಪದವಿ ವಿದ್ಯಾರ್ಥಿಗಳ ಲಸಿಕಾ ಅಭಿಯಾನ ಶೇ.100 ಗುರಿಸಾಧನೆಯಾಗಿದೆ. ಐದು ಜಿಲ್ಲೆಗಳಲ್ಲಿ ಸಾಕಷ್ಟು ಹಿಂದುಳಿದಿದೆ.ಸದ್ಯ ಹಲವು ಕಾಲೇಜು ಗಳಲ್ಲಿ ಭೌತಿಕ ತರಗತಿ ಆರಂಭವಾಗಿರುವ ಹಿನ್ನೆಲೆ ಆನ್‌ ಲೈನ್‌ ತರಗತಿ ನಿಲ್ಲಿಸಲಾಗಿದೆ. ಹೆಚ್ಚಿನ ಮಕ್ಕಳು ತರಗತಿಯಲ್ಲಿರುವ ಕಾರಣ ಆನ್‌ಲೈನ್‌ ತರಗತಿಗೆ ಆದ್ಯತೆ ನೀಡುತ್ತಿಲ್ಲ. ಇದರ ನೇರ ಪರಿಣಾಮ ವಿದ್ಯಾರ್ಥಿಗಳ ಭವಿಷ್ಯದ ಮೇಲಾಗುತ್ತಿದೆ.

ಇದನ್ನೂ ಓದಿ:ಕೇಂದ್ರ ಹಣಕಾಸು ಸಚಿವರ ಜತೆ “ತೈಲ ಬೆಲೆ ಹೆಚ್ಚಳ’ ಬಗ್ಗೆ ಚರ್ಚೆ: ಸಿಎಂ

ಪತ್ತೆ ಮಾಡಿ ಲಸಿಕೆನೀಡಲು ಆರೋಗ್ಯ ಇಲಾಖೆ ಸೂಚನೆ
ಲಸಿಕೆಯಿಂದ ದೂರ ಉಳಿದಿರುವ ವಿದ್ಯಾರ್ಥಿಗಳನ್ನು ಶೀಘ್ರ ಪತ್ತೆ ಮಾಡಿ ಲಸಿಕೆ ನೀಡುವಂತೆ ರಾಜ್ಯ ಆರೋಗ್ಯ ಇಲಾಖೆಯು ಕಾಲೇಜು ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ. ವಿದ್ಯಾರ್ಥಿಗಳು ಅಥವಾ ಪೋಷಕರಿಗೆ ಕರೆ ಮಾಡಿ ಯಾಕೆ ಈವರೆಗೂ ಲಸಿಕೆ ಪಡೆದಿಲ್ಲ ಎಂಬ ಮಾಹಿತಿ ಪಡೆದುಕೊಳ್ಳಬೇಕು. ದಾಸ್ತಾನು ಕೊರತೆಯಿಂದ ಲಸಿಕೆ ಸಿಕ್ಕರದಿದ್ದರೆ, ಅಂತಹ ಮತ್ತಷ್ಟು ವಿದ್ಯಾರ್ಥಿಗಳನ್ನು ಪತ್ತೆ ಮಾಡಿ ಕಾಲೇಜಿನಲ್ಲಿ ಲಸಿಕಾ ಶಿಬಿರ ಆಯೋಜಿಸಿ ಲಸಿಕೆ ನೀಡಬೇಕು. ಇತರೆ ತಪ್ಪು ಕಲ್ಪನೆ ಇದ್ದರೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಡಳಿತದ ಮೂಲಕ ಕಾಲೇಜುಗಳಿಗೆ ಮಾಹಿತಿ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದರು.

Advertisement

ಲಸಿಕೆಯಿಂದ ದೂರ
ಉಳಿಯಲು ಕಾರಣಗಳಿವು
– ದಾಸ್ತಾನು ಕೊರತೆ, ಲಸಿಕೆ ಸಿಗದಿರುವುದು.
– ಇತ್ತೀಚೆಗೆ ಸೋಂಕು ತಗುಲಿದ್ದು, ಮೂರು ತಿಂಗಳವರೆಗೂ ಲಸಿಕೆ ಸಾಧ್ಯವಾಗದಿರುವುದು.
– ಭೌತಿಕ ತರಗತಿಗಳಿಗೆ ಹಾಜರಾಗಲು ಇಷ್ಟವಿಲ್ಲದೆ ಲಸಿಕೆಯಿಂದ ದೂರ ಸಾಧ್ಯತೆ.
– ಲಸಿಕೆ ಕುರಿತು ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿರುವ ತಪ್ಪುಕಲ್ಪನೆಗಳು.
– ಕಾಲೇಜುಗಳಲ್ಲಿ ಪ್ರತ್ಯೇಕ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳದಿರುವುದು.
– ಲಸಿಕೆ ಪಡೆಯಲು ಕಾಲೇಜು ಪ್ರಾಂಶುಪಾಲರಿಂದ ಕಡ್ಡಾಯ ಆದ್ಯತಾ ಪತ್ರ ತರಬೇಕೆಂಬ ನಿಯಮ

ಲಸಿಕೆ ಪಡೆಯದ ಪದವಿ ಕಾಲೇಜು ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಕ್ಕೆ ಕಾಲೇಜುಗಳಿಗೆ ಸೂಚಿಸಲಾಗಿದೆ. ಶೀಘ್ರದಲ್ಲಿಯೇ ಎಲ್ಲಾ ವಿದ್ಯಾರ್ಥಿ ಗಳಿಗೂ ಲಸಿಕೆ ನೀಡಲಾಗುವುದು. ಎಲ್ಲೆಡೆ ಲಸಿಕೆ ಶಿಬಿರಗಳು ನಡೆಯುತ್ತಿದ್ದು, ಕಾಲೇಜು ಲಸಿಕಾ ಶಿಬಿರಕ್ಕೆ ಕಾಯದೇ ವಿದ್ಯಾರ್ಥಿಗಳು ನೇರವಾಗಿ ತೆರಳಿ ಲಸಿಕೆ ಪಡೆಯಬೇಕು.
– ಡಾ.ತ್ರಿಲೋಕ್‌ಚಂದ್ರ, ಆಯುಕ್ತರು, ಆರೋಗ್ಯ ಇಲಾಖೆ

-ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next