Advertisement

ಜನಾತಂಕಕ್ಕೆ ಒಂದೇ ವರ್ಷದಲ್ಲಿ 3 ಚಿರತೆ ಬಲಿ

01:03 PM Oct 08, 2017 | Team Udayavani |

ಹರಪನಹಳ್ಳಿ: ಪ್ರಸಕ್ತ ಕಾಡು ಮಾಯವಾಗಿರುವುದರಿಂದ ಪ್ರಾಣಿಗಳು ನಾಡಿಗೆ ಬರುತ್ತಿದ್ದು, ಮನುಷ್ಯ ಹಾಗೂ ವನ್ಯಜೀವಿಗಳ ನಡುವೆ ಸಂಘರ್ಷ ಏರ್ಪಡುತ್ತಿದೆ.ಕಳೆದ 1 ವರ್ಷದಲ್ಲಿ ತಾಲೂಕಿನ ಮೂರು ಚಿರತೆಗಳು ಬಲಿಯಾಗಿವೆ.

Advertisement

2016 ಜುಲೈ 19ರಂದು ಮೈದೂರು ಗ್ರಾಮದಲ್ಲಿ ಸಂಜೆ ವೇಳೆ ರೈತರ ಕಣದಲ್ಲಿ ಕಾಣಿಸಿಕೊಂಡಿದ್ದ ಚಿರತೆ 6 ಜನರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಚಿರತೆಯನ್ನು ಹೊಡೆದು ಕೊಂದಿದ್ದರು. 2017 ಜುಲೈ 2 ರಂದು ನಂದಿಬೇವೂರು ಗ್ರಾಮದ ರೈತರ
ತೋಟದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ನಾಲ್ವರು ರೈತರ ಮೇಲೆ ದಾಳಿ ನಡೆಸಿತ್ತು. ಆಗ ರೈತರು ಚಿರತೆ ಹೊಡೆದು ಕೊಂದಿದ್ದರು. ಇದೀಗ ಅ.7ರಂದು ಅಳಿಗಂಚಿಕೇರಿ ಗ್ರಾಮದ ರೈತರ ಜಮೀನಿಲ್ಲಿ ಕಾಣಿಸಿಕೊಂಡಿದ್ದ ಚಿರತೆಯನ್ನು ಗ್ರಾಮಸ್ಥರು ಕೊಂದು ಹಾಕಿದ್ದಾರೆ.

ಮೇಲಿನ ಮೂರು ಘಟನೆಗಳು ರೈತರು ತಮ್ಮ ಪ್ರಾಣ ರಕ್ಷಣೆಗಾಗಿ ಚಿರತೆಯನ್ನು ಕೊಂದು ಹಾಕಿರುವುದಾಗಿ ಗೋಚರಿಸುತ್ತಿದ್ದರೂ ಇದಕ್ಕೆ ಜಾಗೃತಿ ಇಲ್ಲದಿರುವುದು ಮೂಲ ಕಾರಣ ಎನ್ನಲಾಗುತ್ತಿದೆ.

ತಾಲೂಕಿನಲ್ಲಿ ಒಟ್ಟು 21,847 ಹೆಕ್ಟೇರ್‌ ಮೀಸಲು ಕಾಯ್ದಿಟ್ಟ ಹಾಗೂ 5 ಹೆಕ್ಟೇರ್‌ ಇತರೆ ಅರಣ್ಯ ಪ್ರದೇಶವಿದೆ. 2013ನೇ ನಡೆಸಿದ ಹುಲಿ ಗಣತಿ ಪ್ರಕಾರ ತಾಲೂಕಿನಲ್ಲಿ ಒಟ್ಟು 22ಕ್ಕೂ ಹೆಚ್ಚು ಚಿರತೆಗಳಿವೆ ಎಂದು ತಿಳಿದು ಬಂದಿದೆ.

ಕಳೆದ ಮೂರು ವರ್ಷಗಳಲ್ಲಿ ಅದರ ಸಂತತಿ ಹೆಚ್ಚಾಗಿರುವ ಸಾಧ್ಯತೆಯೂ ಇದೆ. ಈಚೆಗೆ ಕಾಡಂಚಿನ ಪ್ರದೇಶದಲ್ಲಿ ಚಿರತೆಗಳು ಕುರಿ, ಮೇಕೆ, ಆಕಳು, ನಾಯಿ ಸೇರಿದಂತೆ ವಿವಿಧ ಜಾನುವಾರುಗಳನ್ನು ತಿಂದು ಹಾಕುತ್ತಿರುವ ಘಟನೆಗಳು ಸಾಮಾನ್ಯವಾಗಿವೆ. ಮನುಷ್ಯರ ಮೇಲೆಯೂ ಮಣಾಂತಿಕ ದಾಳಿ ನಡೆಸುತ್ತಿರುವುದರಿಂದ ಜನರು ಆತಂಕದಲ್ಲಿ ಜೀವನ ದೂಡುವಂತಾಗಿದೆ.

Advertisement

ಚಿರತೆಗಳು ಆಹಾರ ಹುಡುಕಿಕೊಂಡು ಗ್ರಾಮದೊಳಗೆ ನುಗ್ಗುತ್ತಿರುವುದು ಜನರನ್ನು ಚಿಂತೆಗೀಡು ಮಾಡಿದೆ. ತಾಲೂಕಿನ ಕಣವಿಹಳ್ಳಿ, ಚಿಗಟೇರಿ, ಮೈದೂರು, ನಂದಿಬೇವೂರು, ಉಚ್ಚಂಗಿದುರ್ಗ, ಕುರೇಮಾಗನಹಳ್ಳಿ, ಹುಲಿಕಟ್ಟಿ, ಕಣವಿತಾಂಡ, ಇ-ಬೇವಿನಹಳ್ಳಿ ಸೇರಿದಂತೆ ಬಹುತೇಕ ಕಾಡಂಚಿನ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಂಡಿವೆ. ಎಲ್ಲಿ, ಯಾವಾಗ ಚಿರತೆ ಬರುತ್ತದೆಯೋ ಎಂಬುವುದೇ ಜನರಿಗೆ ತಿಳಿಯದಾಗಿದ್ದು, ಜಾನುವಾರುಗಳನ್ನು ಮೇಯಿಸಲು ಹಾಗೂ ಹೊಲಗಳಿಗೆ ತೆರಳಲು ರೈತರು ಹಿಂದೇಟು ಹಾಕುತ್ತಿದ್ದಾರೆ.

ಅರಣ್ಯ ಇಲಾಖೆ ಪ್ರಕಾರ ಕಳೆದ ಒಂದು ವರ್ಷದಲ್ಲಿ ವಿವಿಧ ಪ್ರಕರಣಗಳಲ್ಲಿ ಚಿರತೆಗಳು 10 ಜಾನುವಾರುಗಳನ್ನು ತಿಂದು ಹಾಕಿವೆ. ಇಷ್ಟೆಲ್ಲಾ ಅವಘಡಗಳು ಸಂಭವಿಸಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ವಿಫಲವಾಗಿದ್ದಾರೆ.

ಚಿರತೆ ಕಾಣಿಸಿದೆ ಎಂಬ ದೂರ ಬಂದ ಗ್ರಾಮದ ಬಳಿ ಇಲಾಖೆಯವರು ಬೋನು ಇಡಲಾಗುತ್ತದೆಯೇ ಹೊರತು ಚಿರತೆ ಕಾಣಿಸಿಕೊಂಡಾಗ ಏನು ಮಾಡಬೇಕು, ಯಾರನ್ನು ಸಂಪರ್ಕಿಸಬೇಕು ಎಂಬ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂದು ಚಿಗಟೇರಿ ಗ್ರಾಮದ ಪರುಶುರಾಮ ತಿಳಿಸುತ್ತಾರೆ.

ಪ್ರಾಣಿಹಾವಳಿ ನಿಯಂತ್ರಣಗೊಳಿಸಲು ಯಾವುದೇ ತರಹದ ಸಿಬ್ಬಂದಿ ಇಲ್ಲ. ಕೇವಲ 2 ಭೋನುಗಳು ಮಾತ್ರ ಇವೆ. ಟಾಸ್ಕ್ಪೋರ್ಸ್‌ ಕಮಿಟಿ ತರಹ ತಂಡ ಇದ್ದರೆ ಅಗತ್ಯವಿದ್ದಲಿ ನಿಯಂತ್ರಣಕ್ಕೆ ಕ್ರಮಕಯಗೊಳ್ಳಲು ಸಹಾಯವಾಗುತ್ತದೆ.

ಜನರಲ್ಲಿ ಜಾಗತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲು ಜಿಲ್ಲಾ ಸಹಾಯಕ ಅರಣ್ಯ ಸಂಕ್ಷಣಾಧಿಕಾರಿ ಅವರ ಬಳಿ ಚರ್ಚಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಶಂಕರನಾಯ್ಕ ತಿಳಿಸಿದ್ದಾರೆ.

ಎಸ್‌.ಎನ್‌. ಕುಮಾರ್‌ ಪುಣಬಗಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next