Advertisement

ಸರ್ಕಾರದ ವಿರುದ್ಧ 29 ಅಂಶಗಳ ಆರೋಪಪಟ್ಟಿ

10:11 AM May 12, 2017 | |

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ತನ್ನ 4 ವರ್ಷದ ಸಾಧನೆಗಳನ್ನು ಹೇಳಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಪ್ರತಿಪಕ್ಷ ಬಿಜೆಪಿ ಕಾಂಗ್ರೆಸ್‌ ಸರ್ಕಾರದ 4 ವರ್ಷಗಳ ವೈಫ‌ಲ್ಯ ಕುರಿತು “ತೋರಿಸಿದ್ದು ಭರವಸೆಯ ಬೆಟ್ಟ- ಜನರಿಗೆದಕ್ಕಿದ್ದು ಬರೀ ಕಷ್ಟ’ ಕೈಪಿಡಿ ಪ್ರಕಟಿಸಿದೆ. ಆ ಮೂಲಕ ಸರ್ಕಾರದ ವಿರುದ್ಧ 29 ಅಂಶಗಳ ಆರೋಪಪಟ್ಟಿ ಬಿಡುಗಡೆ ಮಾಡಿದೆ.

Advertisement

ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಹೊರತಂದಿರುವ ಸರ್ಕಾರದ ವಿರುದ್ಧದ ಆರೋಪಪಟ್ಟಿಯನ್ನೊಳಗೊಂಡ ಈ ಕೈಪಿಡಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಬಿಡುಗಡೆ ಮಾಡಿದರು.

ವಿವಿಧ ಇಲಾಖೆಗಳ ವೈಫ‌ಲ್ಯ, ಹೆಚ್ಚಿದ ಸರ್ಕಾರದ ಸಾಲ ಮೊತ್ತ, ಸರ್ಕಾರದ ಪೊಳ್ಳು ಭರವಸೆಗಳು, ಕುಡಿಯುವ ನೀರಿನ ಸಮಸ್ಯೆ, ವಿವಿಧ ಸಮುದಾಯಗಳ ನಿರ್ಲಕ್ಷ್ಯ ಹೀಗೆ 29 ಅಂಶಗಳ ಮೂಲಕ ಸರ್ಕಾರದ ವೈಫ‌ಲ್ಯವನ್ನು ಕೈಪಿಡಿಯಲ್ಲಿ ಹೇಳಲಾಗಿದೆ.

ಕೈಪಿಡಿ ಕುರಿತು ವಿವರಣೆ ನೀಡಿದ ಮಾಜಿ ಜಗದೀಶ್‌ ಶೆಟ್ಟರ್‌, ಸಿದ್ದರಾಮಯ್ಯ ಅವರ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಇದುವರೆಗೆ
91,269.78 ಕೋಟಿ ರೂ. ಸಾಲ ಮಾಡುವ ಮೂಲಕ ರಾಜ್ಯದ ಜನರಿಗೆ ಸಾಲಭಾಗ್ಯದ ಹೊರೆ ಹೊರಿಸಿದೆ ಎಂದು ಆರೋಪಿಸಿದರು.

ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ಒಳ್ಳೆಯ ಆಡಳಿತನ ನಡೆಸಲು ವಿಫ‌ಲವಾಗಿರುವ ಸರ್ಕಾರ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನೂ ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶೋಭಾ ಕರಂದ್ಲಾಜೆ, ಎನ್‌.ರವಿಕುಮಾರ್‌, ಸಂಸದ ಪಿ.ಸಿ.ಮೋಹನ್‌, ಶಾಸಕರಾದ ಆರ್‌. ಅಶೋಕ್‌. ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು.

Advertisement

ಈಶ್ವರಪ್ಪ ಗೈರು
ಬಿಜೆಪಿ ಆರೋಪಪಟ್ಟಿ ಬಿಡುಗಡೆ ಕಾರ್ಯಕ್ರಮದಲ್ಲಿ ಕೆ.ಎಸ್‌.ಈಶ್ವರಪ್ಪ ಗೈರು ಹಾಜರಾಗಿದ್ದುದು ಎದ್ದುಕಂಡಿತು. ಈ ಮೂಲಕ
ಬಿಜೆಪಿಯಲ್ಲಿ ಇನ್ನೂ ಎಲ್ಲವೂ ಸರಿಹೋಗಿಲ್ಲ ಎಂಬ ಅಂಶ ಸಾಬೀತಾಯಿತು. ಈ ಕುರಿತ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ
ನೀಡಿದ ಜಗದೀಶ್‌ ಶೆಟ್ಟರ್‌, ಹಿಂದಿನ 3 ವರ್ಷವೂ ನಾನು ಇದೇ ರೀತಿ ಸರ್ಕಾರದ ವಿರುದ್ಧ ಆರೋಪಪಟ್ಟಿ ಬಿಡುಗಡೆ ಮಾಡಿದ್ದು, ಈಶ್ವರಪ್ಪ ಅವರನ್ನು ಕರೆದಿರಲಿಲ್ಲ ಮತ್ತು ಬಂದಿರಲಿಲ್ಲ. ಆಗ ಅದನ್ನು ಯಾರೂ ಪ್ರಶ್ನಿಸಿಲ್ಲ. ಹೀಗಿರುವಾಗ ಈಗೇಕೆ ಪ್ರಶ್ನಿಸುತ್ತೀರಿ ಎಂದು ಹೇಳಿದರು. 

ಬಿ.ಎಸ್‌.ಯಡಿಯೂರಪ್ಪ ಪ್ರತಿಕ್ರಿಯಿಸಿ, ಈಶ್ವರಪ್ಪ ಅವರು ಬಾರದಿರುವುದರಲ್ಲಿ ವಿಶೇಷವೇನೂ ಇಲ್ಲ. ಆದರೂ ಅವರು ಬಂದಿದ್ದರೆ ಒಂದು ಒಳ್ಳೆಯ ಸಂದೇಶ ಹೋಗುತ್ತಿತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next