ಸಂಡೂರು: ನಿರಂತರ ಬೆಲೆ ಏರಿಕೆ ಮತ್ತು ಕಾರ್ಮಿಕರ ಶೋಷಣೆ ನೀತಿಯಿಂದ ಕಾರ್ಮಿಕರ ಸಂಘಟನೆಗಳನ್ನು ಮೂಲೆಗುಂಪು ಮಾಡುತ್ತಿರುವ ಮತ್ತು ಬಂಡವಾಳಶಾಹಿಗಳಿಗೆ ರತ್ನಗಂಬಳಿ ಹಾಸುತ್ತಿರುವ ಸರ್ಕಾರದ ವಿರೋಧಿ ನೀತಿ ಖಂಡಿಸಿ ಮತ್ತು ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಮುಷ್ಕರ ನಡೆಸಲು ಪೂರ್ವಭಾವಿ ಸಭೆಯ ಮೂಲಕ ಎಲ್ಲರೂ ಭಾಗಿಗಳಾಗುವಂತೆ ಮಾಡಲಾಗುವುದು ಎಂದು ಜಿಲ್ಲಾ ಕಟ್ಟಡ ಕಾರ್ಮಿಕರ ಮುಖಂಡ ವಿ.ದೇವಣ್ಣ ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಕಾರ್ಮಿಕರ, ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್, ಸಿಐಟಿಯು, ಸಂಡೂರು ತಾಲೂಕು ಸಮಿತಿ ಸಭೆಯಲ್ಲಿ ಮಾತನಾಡಿದರು.
ಸಂವಿಧಾನ, ಪ್ರಜಾಪ್ರಭುತ್ವ ಮೌಲ್ಯಗಳ ಉಳಿವಿಗಾಗಿ ಜನರ ಹಕ್ಕುಗಳ ಸಂರಕ್ಷಣೆಗಾಗಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾನೂನುಗಳ ರದ್ದತಿಗಾಗಿ, ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಕೋವಿಡ್ ಲಾಕ್ಡ್ ಡೌನ್ ಸಂಕಷ್ಟಕ್ಕೆ ಒಳಗಾದ ಅಸಂಘಟಿತ ಕಾರ್ಮಿಕರಿಗೆ ಪರಿಹಾರಕ್ಕೆ ಒತ್ತಾಯಿಸಿ ಮಾ.28, 29 ರಂದು ನಡೆಯುವ ಅಖೀಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಸಂಡೂರು ತಾಲೂಕಿನ ಎಲ್ಲ ಕಟ್ಟಡ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಲು ತೀರ್ಮಾನಿಸಲಾಗಿದೆ ಎಂದರು.
ತಾಲೂಕು ಸಂಚಾಲಕ ಕೆ. ದೇವಣ್ಣ, ಸಂಚಾಲಕರಾದ ವಿ. ಬಾಬಯ್ಯ ಅಯ್ಯಪ್ಪ, ಪರಮೇಶ್ವರಪ್ಪ, ಮುಖಂಡರಾದ ವಿ. ಕುಮಾರಸ್ವಾಮಿ ಬಿಎಸ್, ಮಲ್ಲಿಕಾರ್ಜುನ ವಿ, ರಮೇಶ ಜಿ, ಓಬಯ್ಯ ಕೆ, ರಮೇಶ್ ಬಿ, ಖಾಜಾ ವೀರೇಶ, ರಾಜಭಕ್ತಿ, ಕಾಸಿಂಪೀರ, ಮೋಹದಿಂ ಭಾಷಾ ಇತರರು ಭಾಗವಹಿಸಿದ್ದರು.