Advertisement

ಗಡ್ಚಿರೋಲಿಯಲ್ಲಿ ಭಾರೀ ಕಾಳಗ : ಒಂದೇ ದಿನ 26 ನಕ್ಸಲರ ಹತ್ಯೆ!

08:13 PM Nov 13, 2021 | Team Udayavani |

ಮುಂಬಯಿ : ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಶನಿವಾರ ನಡೆದ ಭಾರಿ ಎನ್‌ಕೌಂಟರ್‌ನಲ್ಲಿ 26 ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ

Advertisement

ಮುಂಬೈನಿಂದ 900 ಕಿಮೀ ದೂರದಲ್ಲಿರುವ ಪೂರ್ವ ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 26 ನಕ್ಸಲರು ಹತರಾಗಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಛತ್ತೀಸ್‌ಗಢದ ಗಡಿಯಲ್ಲಿ ಈ ಭಾರಿ ಕಾರ್ಯಾಚರಣೆ ನಡೆದಿದ್ದು, ಸಿ-60 ಪೊಲೀಸ್ ಕಮಾಂಡೋ ತಂಡದ ಯೋಧರು ಗುಂಡಿನ ಕಾಳಗದಲ್ಲಿ ಒಂದೇ ದಿನ 26 ನಕ್ಸಲರನ್ನು ಹತ್ಯೆಗೈಯುವಲ್ಲಿ ಯಶಸ್ವಿಯಾಗಿದ್ದಾರೆ.

‘ನಾವು ಈವರೆಗೆ 26 ನಕ್ಸಲರ ಮೃತದೇಹಗಳನ್ನು ಅರಣ್ಯದಿಂದ ವಶಪಡಿಸಿಕೊಂಡಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಕಿತ್ ಗೋಯಲ್ ತಿಳಿಸಿದ್ದಾರೆ.

‘ಹೆಚ್ಚುವರಿ ಎಸ್ಪಿ ಸೌಮ್ಯಾ ಮುಂಡೆ ನೇತೃತ್ವದಲ್ಲಿ ಸಿ-60 ಪೊಲೀಸ್ ಕಮಾಂಡೋ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಮರ್ಡಿಂತೋಲಾ ಅರಣ್ಯ ಪ್ರದೇಶದ ಕೊರ್ಚಿಯಲ್ಲಿ ಬೆಳಗ್ಗೆ ಗುಂಡಿನ ಚಕಮಕಿ ನಡೆದಿದೆ’ ಎಂದು ಗೋಯಲ್ ತಿಳಿಸಿದ್ದಾರೆ.

Advertisement

ಹತ್ಯೆಗೀಡಾದ ನಕ್ಸಲರ ಗುರುತು ಇನ್ನೂ ಪತ್ತೆಯಾಗಿಲ್ಲ, ಮೂಲಗಳ ಪ್ರಕಾರ ಅವರಲ್ಲಿ ಉನ್ನತ ಬಂಡಾಯ ನಾಯಕನೂ ಸೇರಿದ್ದಾನೆ ಎಂದು ಶಂಕಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ನಾಗ್ಪುರಕ್ಕೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next