ಶ್ರೀನಗರ : ವರ್ಷದ ಮೊದಲ ಐದು ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ಸಂಘಟನೆಗಳಿಗೆ ಸೇರಿದ 26 ವಿದೇಶಿ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಕುಪ್ವಾರ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆಗಳು ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿ ಮೂವರು ಲಷ್ಕರ್ ಭಯೋತ್ಪಾದಕರು ಹತರಾದ ನಂತರ “ಇದುವರೆಗೆ, ಈ ವರ್ಷ 26 ವಿದೇಶಿ ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ” ಎಂದು ಕಾಶ್ಮೀರ ವಲಯದ ಇನ್ಸ್‌ಪೆಕ್ಟರ್ ಜನರಲ್ ವಿಜಯ್ ಕುಮಾರ್ ಹೇಳಿದ್ದಾರೆ.
ಬಾರಾಮುಲ್ಲಾ ಜಿಲ್ಲೆಯ ಕ್ರೀರಿಯಲ್ಲಿ ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು.
ಮೇ 13 ರಂದು ಬಂಡಿಪೋರಾ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕಾಶ್ಮೀರಿ ಪಂಡಿತ ಸಮುದಾಯದ ಉದ್ಯೋಗಿ ರಾಹುಲ್ ಭಟ್ ಹತ್ಯೆಯಲ್ಲಿ ಭಾಗಿಯಾಗಿದ್ದರು ಎನ್ನಲಾದ ಇಬ್ಬರು ಲಷ್ಕರ್ ಉಗ್ರರನ್ನು ಹತ್ಯೆ ಮಾಡಲಾಗಿತ್ತು.
ಹತ್ಯೆಯಾದವರಲ್ಲಿ 14 ಮಂದಿ ಭಯೋತ್ಪಾದಕರು ಮಸೂದ್ ಅಜರ್ ಸ್ಥಾಪಿಸಿದ ಜೈಶ್‌ಗೆ ಸೇರಿದವರಾಗಿದ್ದರೆ, 12 ಮಂದಿ ಹಫೀಜ್ ಮೊಹಮ್ಮದ್ ಸಯೀದ್ ಸ್ಥಾಪಿಸಿದ ಎಲ್‌ಇಟಿಗೆ ಸಂಬಂಧ ಹೊಂದಿದ್ದಾರೆ ಎಂದು ಕುಮಾರ್ ಹೇಳಿದರು.