ನವದೆಹಲಿ:ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ಬೆನ್ನಲ್ಲೇ ಹಲವು ಕಾಂಗ್ರೆಸ್ ಮುಖಂಡರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಕಾಂಗ್ರೆಸ್ ನಲ್ಲಿ ಬಿಕ್ಕಟ್ಟು ಕಾಣಿಸಿಕೊಂಡಿದೆ.
ಇದನ್ನೂ ಓದಿ:ಸೆಮಿ ಫೈನಲ್ ಗೂ ಮೊದಲೇ ಆಘಾತ: ನೆಟ್ಸ್ ನಲ್ಲಿ ಗಾಯಗೊಂಡ ಕ್ಯಾಪ್ಟನ್ ರೋಹಿತ್
26 ಕಾಂಗ್ರೆಸ್ ಮುಖಂಡರು ಪಕ್ಷವನ್ನು ತೊರೆದು ಆಡಳಿತಾರೂಢ ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕು ದಿನಗಳಷ್ಟೇ ಬಾಕಿ ಉಳಿದಿದೆ. ಚುನಾವಣೆಗೂ ಮುನ್ನವೇ ಕಳೆದ ಒಂದು ವಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹೊಡೆತ ಬಿದ್ದಂತಾಗಿದೆ ಎಂದು ವರದಿ ತಿಳಿಸಿದೆ.
ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಮತ್ತು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಸುಧಾನ್ ಸಿಂಗ್ ಸಮ್ಮುಖದಲ್ಲಿ ಕಾಂಗ್ರೆಸ್ ಮುಖಂಡರು ಕಮಲ ಪಾಳಯಕ್ಕೆ ಜಿಗಿದಿದ್ದಾರೆ. ಈ ಸಂದರ್ಭದಲ್ಲಿ ಶಿಮ್ಲಾದ ಬಿಜೆಪಿ ಅಭ್ಯರ್ಥಿ ಸಂಜಯ್ ಸೂದ್ ಕೂಡಾ ಹಾಜರಿದ್ದರು.
ಕಾಂಗ್ರೆಸ್ ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಧರ್ಮಪಾಲ್ ಠಾಕೂರ್, ಮಾಜಿ ಕಾರ್ಯದರ್ಶಿ ಆಕಾಶ್ ಸೈನಿ, ಮಾಜಿ ಕೌನ್ಸಿಲರ್ ರಾಜನ್ ಠಾಕೂರ್, ಜಿಲ್ಲಾ ಮಾಜಿ ಉಪಾಧ್ಯಕ್ಷ ಅಮಿತ್ ಮೆಹ್ತಾ, ಮೆಹ್ರ ಸಿಂಗ್ ಕನ್ವರ್, ಯುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ನೇಗಿ, ಜೈ ಮಾ ಶಕ್ತಿ ಸೋಶಿಯಲ್ ಸಂಸ್ಥಾನದ ಅಧ್ಯಕ್ಷ ಜೋಗಿಂದರ್ ಠಾಕೂರ್, ನರೇಶ್ ವರ್ಮಾ, ಗ್ರಾ.ಪಂ ಸದಸ್ಯ ಯೋಗೇಂದ್ರ ಸಿಂಗ, ಟ್ಯಾಕ್ಸಿ ಯೂನಿಯನ್ ಸದಸ್ಯ ರಾಕೇಶ್ ಚೌಹಾಣ್, ಇಂಡಿಯನ್ ನ್ಯಾಷನಲ್ ಟ್ರಸ್ಟ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ ಅಧ್ಯಕ್ಷ ಧರ್ಮೇಂದ್ರ ಕುಮಾರ್, ರಾಹುಲ್ ರಾವತ್, ವೀರೇಂದ್ರ ಶರ್ಮಾ, ಸೋನು ಶರ್ಮಾ, ಅರುಣ್ ಕುಮಾರ್, ಶಿವಂ ಕುಮಾರ್ ಮತ್ತು ಗೋಪಾಲ ಠಾಕೂರ್ ಬಿಜೆಪಿಗೆ ಸೇರ್ಪಡೆಗೊಂಡಿರುವುದಾಗಿ ಎಎನ್ ಐ ವರದಿ ಮಾಡಿದೆ.