ವಿಶ್ವಸಂಸ್ಥೆ : ಸೌದಿ ನೇತೃತ್ವದ ಎರಡು ಮಿತ್ರ ಪಡೆಗಳು ಯೆಮೆನ್‌ನಲ್ಲಿ ನಡೆಸಿರುವ ವಾಯು ದಾಳಿಗೆ ಕನಿಷ್ಠ 26 ಮಕ್ಕಳು ಬಲಿಯಾಗಿರುವುದಾಗಿ ವಿಶ್ವ ಸಂಸ್ಥೆ ತಿಳಿಸಿದೆ.
ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಕೊಲ್ಲಿ ಸಮರದಲ್ಲಿ ಅಮಾಯಕ ಪೌರರನ್ನು ಗುರಿ ಇರಿಸಿ ನಡೆಸಲಾಗುತ್ತಿರುವ ದಾಳಿಗಳ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕೆಂಬ ತನ್ನ ಕರೆಯನ್ನು ವಿಶ್ವಸಂಸ್ಥೆ ಪುನರುಚ್ಚರಿಸಿದೆ.
ಬಂಡುಕೋರರ ವಶದಲ್ಲಿರುವ ಅಲ್ ದುರಾಹಿಮಿ ಜಿಲ್ಲೆಯಲ್ಲಿ ನಡೆದಿರುವ ಸೌದಿ ಮಿತ್ರ ಪಡೆಗಳ ವಾಯು ದಾಳಿಯಲ್ಲಿ ನಾಲ್ವರು ಮಹಿಳೆಯರು ಮತ್ತು ಕನಿಷ್ಠ 22 ಮಕ್ಕಳು ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ನೆರವು ಮುಖ್ಯಸ್ಥ ಮಾರ್ಕ್ ಲೋಕಾಕ್ ಹೇಳಿದರು.
ಈ ದಾಳಿಯಲ್ಲದೆ ಪ್ರತ್ಯೇಕವಾಗಿ ನಡೆದಿರುವ ಇನ್ನೊಂದು ದಾಳಿಯಲ್ಲಿ ನಾಲ್ಕು ಮಕ್ಕಳ ಹತರಾಗಿದ್ದಾರೆ ಎಂದು ಮಾರ್ಕ್ ಲೋಕಾಕ್ ಹೇಳಿದರು.
ಕಳೆದ ಆಗಸ್ಟ್ 9ರಂದು ಉತ್ತರ ಯೆಮೆನ್‌ನ ಬಂಡುಕೋರರ ಪ್ರಾಬಲ್ಯದ ಸಾದಾ ಪಟ್ಟಣದಲ್ಲಿ ಮಿತ್ರ ಪಡೆಗಳು ಬಸ್ಸೊಂದರ ಮೇಲೆ ನಡೆಸಿದ್ದ ವಾಯು ದಾಳಿಯಲ್ಲಿ 40 ಮಕ್ಕಳ ಮೃತಪಟ್ಟಿದ್ದರು ಎಂದು ತಿಳಿಸಿರುವ ವಿಶ್ವ ಸಂಸ್ಥೆ ಮಹಾ ಕಾರ್ಯದರ್ಶಿ ಅಂಟೋನಿಯೋ ಗುಟೆರಿಸ್ ಅವರು, ಮಹಿಳೆಯರು, ಮಕ್ಕಳು ಮತ್ತು ಪೌರರನ್ನು ಗುರಿ ಇರಿಸಿ ನಡೆಸಲಾಗುತ್ತಿರುವ ದಾಳಿಯ ಬಗ್ಗೆ ಸ್ವತಂತ್ರ ತನಿಖೆ ನಡೆಯುವ ಅಗತ್ಯವಿದೆ ಎಂದು ಹೇಳಿದರು.