Advertisement

26ಕ್ಕೆ ಆಲೌಟ್‌! ಕಿವೀಸ್‌ಗೆ ಅಂಟಿದ ಕಳಂಕ : ಪೌಲ್‌ ಫೋರ್ಡ್‌

01:17 AM Nov 24, 2020 | sudhir |

ಮಣಿಪಾಲ: “ನ್ಯೂಜಿಲ್ಯಾಂಡ್‌ ಕ್ರಿಕೆಟಿನ ಅಭಿಮಾನಿಯಾಗಿ ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ, ಯಾರಾದರೂ ಈ ದಾಖಲೆಯನ್ನು ನಮ್ಮಿಂದ ಕಿತ್ತುಕೊಳ್ಳಲಿ…’-ಇದು ಕಿವೀಸ್‌ ಕ್ರಿಕೆಟ್‌ ಸಪೋರ್ಟರ್ ಗ್ರೂಪಿನ ಸಹ ನಿರ್ಮಾತ ಪೌಲ್‌ ಫೋರ್ಡ್‌ ಅವರ ನೋವಿನ ನುಡಿ.

Advertisement

ಫೋರ್ಡ್‌ ಇನ್ನೂ ಮುಂದುವರಿದು ಹೇಳುತ್ತಾರೆ, “ನಿಜಕ್ಕೂ ಇದು ನಾಚಿಕೆಗೇಡು. ದಯವಿಟ್ಟು ಯಾವುದಾದರೂ ಒಂದು ತಂಡ 25 ರನ್ನಿಗೆ ಆಲೌಟ್‌ ಆಗಲಿ…’

ಬಹುಶಃ ಪೌಲ್‌ ಫೋರ್ಡ್‌ ಯಾವ ಘಟನೆಯ ಬಗ್ಗೆ ಹೇಳುತ್ತಿದ್ದಾರೆ ಎಂದು ಕ್ರಿಕೆಟ್‌ ಅಭಿಮಾನಿಗಳಿಗೆ ಈಗ ಅರ್ಥವಾಗಿರಬಹುದು. ಹೌದು, ಟೆಸ್ಟ್‌ ಇತಿಹಾಸದಲ್ಲಿ ಕನಿಷ್ಠ 26 ರನ್ನಿಗೆ ಆಲೌಟಾದ ಕಳಂಕವನ್ನು ಕಳೆದ 65 ವರ್ಷಗಳಿಂದಲೂ ಮೆತ್ತಿಕೊಂಡಿರುವ ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ಬಗ್ಗೆ ಅವರು ತೀವ್ರ ನೊಂದು ನುಡಿದಿದ್ದಾರೆ.

ಆಕ್ಲೆಂಡ್‌ನ‌ಲ್ಲಿ ಶೋಚನೀಯ ಆಟ
ನ್ಯೂಜಿಲ್ಯಾಂಡಿನ ಈ ಶೋಚನೀಯ ಬ್ಯಾಟಿಂಗಿನತ್ತ ಹಿನ್ನೋಟ ಹರಿಸುವುದಾದರೆ… ಅದು 1955ರ ಪ್ರವಾಸಿ ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಸರಣಿ. ನ್ಯೂಜಿಲ್ಯಾಂಡಿಗೆ ಜೆಫ್‌ ರೆಬೋನ್‌, ಇಂಗ್ಲೆಂಡಿಗೆ ಲೆನ್‌ ಹಟನ್‌ ನಾಯಕರಾಗಿದ್ದರು. ಆಕ್ಲೆಂಡ್‌ನ‌ಲ್ಲಿ ಇತ್ತಂಡಗಳು ದ್ವಿತೀಯ ಟೆಸ್ಟ್‌ ಪಂದ್ಯವನ್ನು ಆಡಲಿಳಿದಿದ್ದವು.

ಆಕ್ಲೆಂಡ್‌ ಪಿಚ್‌ “ಲೈವ್ಲಿ’ ಆಗಿ ಕಾಣುತ್ತಿದ್ದರೂ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಲಾರಂಭಿಸಿದ್ದು ಮೊದಲ ದಿನವೇ ಸ್ಪಷ್ಟವಾಗಿತ್ತು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಕಿವೀಸ್‌ ಸರಿಯಾಗಿ 200 ರನ್ನಿಗೆ ಆಲೌಟ್‌ ಆಯಿತು. ಜವಾಬಿತ್ತ ಇಂಗ್ಲೆಂಡ್‌ 246 ರನ್‌ ಗಳಿಸಿತು.

Advertisement

ಮುಂದಿನದು ನ್ಯೂಜಿಲ್ಯಾಂಡ್‌ ಕ್ರಿಕೆಟಿನ ಅತ್ಯಂತ ಸಂಕಷ್ಟದ ಸಮಯ. ಅದು ಆಂಗ್ಲರ ಘಾತಕ ಬೌಲಿಂಗ್‌ ದಾಳಿಯೋ, ನ್ಯೂಜಿಲ್ಯಾಂಡ್‌ ಬ್ಯಾಟ್ಸ್‌ಮನ್‌ಗಳ ಬೇಜ ವಾಬ್ದಾರಿ ಆಟವೋ ಗೊತ್ತಿಲ್ಲ. ಕಿವೀಸ್‌ ವಿಕೆಟ್‌ಗಳು ತರಗೆಲೆಯಂತೆ ಹಾರಿಹೋಗಲಾರಂಭಿಸಿದ್ದು ಮಾತ್ರ ಸತ್ಯ. ಕ್ಲಬ್‌ ತಂಡಕ್ಕಿಂತಲೂ ಕಳಪೆಯಾಗಿತ್ತು ಆತಿಥೇಯರ ಬ್ಯಾಟಿಂಗ್‌. ಸರಿಯಾಗಿ 27 ಓವರ್‌ಗಳಲ್ಲಿ ನ್ಯೂಜಿಲ್ಯಾಂಡ್‌ ಜುಜುಬಿ 26 ರನ್ನಿಗೆ ಆಲೌಟ್‌ ಆಗಿತ್ತು! ಫಲಿತಾಂಶ-ಇಂಗ್ಲೆಂಡಿಗೆ ಇನ್ನಿಂಗ್ಸ್‌ ಹಾಗೂ 20 ರನ್‌ ಗೆಲುವು!

ಬಾಬ್‌ ಆ್ಯಪಲ್‌ಯಾರ್ಡ್‌ 4 ಹಾಗೂ ಬ್ರಿಯಾನ್‌ ಸ್ಟೆಥಂ 3 ವಿಕೆಟ್‌ ಕಿತ್ತು ಕಿವೀಸ್‌ ಕತೆ ಮುಗಿಸಿದ್ದರು. ಪಂದ್ಯದಲ್ಲಿ ಇವರಿಬ್ಬರದು ತಲಾ 7 ವಿಕೆಟ್‌ ಬೇಟೆ. 11 ರನ್‌ ಮಾಡಿದ ಆರಂಭಕಾರ ಬರ್ಟ್‌ ಸಟ್‌ಕ್ಲಿಫ್‌ ಅವರದೇ ಹೆಚ್ಚಿನ ಗಳಿಕೆ. ಉಳಿದವರ್ಯಾರೂ ಎರಡಂಕೆಯ ಗಡಿ ದಾಟಿರಲಿಲ್ಲ. ಇಂದಿಗೂ ಇದು ನ್ಯೂಜಿಲ್ಯಾಂಡ್‌ ಕ್ರಿಕೆಟಿನ ಕರಾಳ ದಿನವಾಗಿ ದಾಖಲಾಗಿದೆ.

ಕಳಂಕದಿಂದ ಪಾರಾದ ಇಂಗ್ಲೆಂಡ್‌ ತಂಡ
2018ರಲ್ಲಿ ಇದೇ ಆಕ್ಲೆಂಡ್‌ ಅಂಗಳದಲ್ಲಿ ನ್ಯೂಜಿಲ್ಯಾಂಡ್‌ ಪ್ರವಾಸಿ ಇಂಗ್ಲೆಂಡಿಗೆ ತಿರುಗೇಟು ನೀಡುವ ಸಾಧ್ಯತೆ ಕಂಡುಬಂದಿತ್ತು. ಈ ಡೇ-ನೈಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಒಂದು ಹಂತದಲ್ಲಿ 23 ರನ್ನಿಗೆ 8 ವಿಕೆಟ್‌ ಉದುರಿಸಿಕೊಂಡಿತ್ತು. ನ್ಯೂಜಿಲ್ಯಾಂಡ್‌ ತನ್ನ ಕಳಪೆ ದಾಖಲೆಯ ಕಳಂಕದಿಂದ ಮುಕ್ತಗೊಳ್ಳುವ ಕ್ಷಣಕ್ಕಾಗಿ ಎಲ್ಲರೂ ತುದಿಗಾಲಲ್ಲಿ ನಿಂತಿದ್ದರು. ಆದರೆ 58ರ ತನಕ ಸಾಗಿದ ಇಂಗ್ಲೆಂಡ್‌ ಈ ಕಂಟಕದಿಂದ ಪಾರಾಯಿತು. ನ್ಯೂಜಿಲ್ಯಾಂಡ್‌ ಮಾತ್ರ ಇನ್ನೂ ಇಪ್ಪತ್ತಾರರ ಕನವರಿಕೆಯಲ್ಲೇ ಇದೆ!

Advertisement

Udayavani is now on Telegram. Click here to join our channel and stay updated with the latest news.

Next