ಲಾಹೋರ್: 2008ರಲ್ಲಿ ಮುಂಬೈ ಮೇಲೆ ನಡೆದ ದಾಳಿಯ ರೂವಾರಿ, ಜಮಾತ್- ಉದ್-ದಾವಾ ಉಗ್ರ ಸಂಘಟನೆ ನಾಯಕ ಹಫೀಜ್ ಸಯೀದ್‌ಗೆ ಪಾಕಿಸ್ತಾನದ ಉಗ್ರ ನಿಗ್ರಹ ಕೋರ್ಟ್ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ನೀಡಿದ ತೀರ್ಪು ಇದಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ಉಗ್ರ ಚಟುವಟಿಕೆಗಳಿಗೆ ವಿತ್ತೀಯ ನೆರವು ನೀಡಿದ 2 ಆರೋಪಗಳಿಗಾಗಿ 11 ವರ್ಷ ಸೆರೆವಾಸವನ್ನು ಉಗ್ರ ನಿಗ್ರಹ ಕೋರ್ಟ್ ನೀಡಿತ್ತು.
ಉಗ್ರ ಚಟುವಟಿಕೆಗಳಿಗೆ ವಿತ್ತೀಯ ನೆರವು ನೀಡಿದ ಆರೋಪಗಳಿಗೆ ಸಂಬಂಧಿಸಿದಂತೆ ಆತನನ್ನು 2019ರ ಜು.17ರಂದು ಆತನನ್ನು ಬಂಧಿಸಲಾಗಿತ್ತು. ಆತನನ್ನು ಲಾಹೋರ್‌ನ ಕೋಟ್ ಲಾಖ್‌ಪತ್ ಕಾರಾಗೃಹದಲ್ಲಿ ಇರಿಸಲಾಗಿದೆ.
ಸಯೀದ್‌ನ ಜತೆಗೆ ಆತನ ಇಬ್ಬರು ನಿಕಟವರ್ತಿಗಳಾಗಿರುವ ಝಫರ್ ಇಕ್ಬಾಲ್ ಮತ್ತು ಯಾಹ್ಯಾ ಮುಜಾಹಿದ್ ಎಂಬ ಇಬ್ಬರಿಗೂ ಹತ್ತೂವರೆ ವರ್ಷಗಳ ಸೆರೆ ವಾಸ ವಿಧಿಸಲಾಗಿದೆ. ಸಯೀದ್‌ನ ಭಾವ ಅಬ್ದುಲ್ ರೆಹಮಾನ್‌ಗೂ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಗುರುವಾರ ತೀರ್ಪು ನೀಡಿದೆ. ಮುಂದಿನ ಫೆಬ್ರವರಿಯಲ್ಲಿ ಎಫ್ಎಟಿಎಫ್ ಸಭೆ ಇರುವುದರಿಂದ ಕೋರ್ಟ್ ತೀರ್ಪು ಪಾಕ್‌ನ ಕಣ್ಣೊರೆಸುವ ತಂತ್ರದ ಭಾಗವೇ ಆಗಿದೆ. ಏಕೆಂದರೆ 26/11 ದಾಳಿಯಲ್ಲಿ ಸಯೀದ್ ಪ್ರಧಾನ ಸೂತ್ರಧಾರ ಎಂಬುದರ ಬಗ್ಗೆ ಹಲವಾರು ಬಾರಿ ಸಾಕ್ಷ್ಯ ಸಲ್ಲಿಕೆ ಮಾಡಿದ್ದರೂ, ಪಾಕಿಸ್ತಾನ ಅದನ್ನು ಮಾನ್ಯ ಮಾಡಿಲ್ಲ.
ಇದನ್ನೂ ಓದಿ:ಕೋವಿಡ್ ನಿಯಂತ್ರಣಕ್ಕೆ ದೆಹಲಿ ಸರಕಾರದ ಹೊಸ ತಂತ್ರ! ಮಾಸ್ಕ್ ಧರಿಸದಿದ್ದರೆ 2000ರೂ ದಂಡ
ಉಗ್ರ ನಿಗ್ರಹ ಕೋರ್ಟ್‌ನಲ್ಲಿ ಜಮಾತ್- ಉದ್-ದಾವಾ ಸಂಘಟನೆಯ ವಿರುದ್ಧ 41 ಕೇಸುಗಳು ದಾಖಲಾಗಿವೆ. ಈ ಪೈಕಿ 24 ಪ್ರಕರಣಗಳನ್ನು ಈಗಾಗಲೇ ಇತ್ಯರ್ಥಪಡಿಸಲಾಗಿದೆ. ಉಳಿದವು ಉಗ್ರ ನಿಗ್ರಹ ಕೋರ್ಟ್‌ನಲ್ಲಿ ಬಾಕಿ ಇವೆ. ಅಮೆರಿಕ ಸರ್ಕಾರ ಆತನ ಸುಳಿವಿತ್ತವರಿಗೆ 10 ಮಿಲಿಯ ಅಮೆರಿಕನ್ ಡಾಲರ್ ಮೊತ್ತದ ಬಹುಮಾನ ನೀಡುವುದಾಗಿ ಘೋಷಿಸಿತ್ತು. ಸಯೀದ್ ವಿರುದ್ಧ ಈಗಾಗಲೇ ನಾಲ್ಕು ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ.