Advertisement

2,571 ಕೋಟಿ ರೂ. ಕೃಷಿ ಸಾಲ ಮನ್ನಾಗೂ ಒಲವು?

09:29 AM Aug 30, 2017 | Team Udayavani |

ಹುಬ್ಬಳ್ಳಿ: ಸರಕಾರಿ ಸಂಘಗಳಲ್ಲಿ ಬಾಕಿ ಉಳಿದಿರುವ ರೈತರ ಸುಮಾರು 2,571 ಕೋಟಿ ರೂ.ಸಾಲವನ್ನೂ ಮನ್ನಾ ಮಾಡಲು ಕಾಂಗ್ರೆಸ್‌ ಗಂಭೀರ ಚಿಂತನೆ ನಡೆಸಿದೆ. ಅದೇ ರೀತಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ವಿರುದ್ಧ ಇದನ್ನೇ ಪ್ರಮುಖ ಅಸ್ತ್ರವಾಗಿ ಬಳಸಲು ಉದ್ದೇಶಿಸಿದೆ. 

Advertisement

ರಾಜ್ಯದ ಸಹಕಾರಿ ಸಂಘಗಳಲ್ಲಿ ಒಟ್ಟು 10,736 ಕೋಟಿ ರೂ.ರೈತರ ಬೆಳೆ ಸಾಲವಿದೆ. ಈ ಪೈಕಿ ತಲಾ 50 ಸಾವಿರ ರೂ.ನಂತೆ ಸುಮಾರು 22ಲಕ್ಷದಷ್ಟು ರೈತರ ಒಟ್ಟು 8,165 ಕೋಟಿ ರೂ.ಗಳನ್ನು ರಾಜ್ಯ ಸರಕಾರ ಮನ್ನಾ ಮಾಡಿದೆ. ಆದಾಗ್ಯೂ 2,571 ಕೋಟಿ ರೂ.ನಷ್ಟು ಕೃಷಿ ಸಾಲ ಬಾಕಿ ಇದ್ದು, ಅದನ್ನೂ ಮನ್ನಾ ಮಾಡುವಂತೆ ಪಕ್ಷ ರಾಜ್ಯ ಸರಕಾರದ ಮೇಲೆ ಒತ್ತಡ ತರಲು ಮುಂದಾಗಿದೆ ಎನ್ನಲಾಗಿದೆ. ಆ ಮೂಲಕ ರೈತ ಪರ ಹೋರಾಟದ ಬಗ್ಗೆಯೇ ಬಿಂಬಿಸಿಕೊಳ್ಳುವ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ ರೈತರ ಸಾಲ ಮನ್ನಾದ ವಿಚಾರದಲ್ಲಿ ಮುಜುಗರಕ್ಕೀಡು ಮಾಡಲು ಕಾಂಗ್ರೆಸ್‌ ಮುಂದಾಗಿದೆ. ಅಲ್ಲದೇ ಈ ಸಾಲ ಮನ್ನಾ ವಿಚಾರದಲ್ಲಿ ಬಿಜೆಪಿ ನಾಯಕರು ನೀಡಿದ್ದ ಹೇಳಿಕೆಗಳನ್ನೇ ತಿರುಗುಬಾಣವಾಗಿ ಪ್ರಯೋಗಿಸಲು ಯೋಜಿಸಿದೆ ಎನ್ನಲಾಗಿದೆ.

ಬರಗಾಲದ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಲ್ಲಿನ ಬೆಳೆ ಸಾಲ ಮನ್ನಾಕ್ಕೆ ರೈತರು ಹಾಗೂ ರೈತ ಪರ ಸಂಘಟನೆಗಳು ಒತ್ತಾಯಿಸಿದ್ದವು. ಬಿಜೆಪಿ ನಾಯಕರಾದ ಬಿ.ಎಸ್‌. ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ ಸೇರಿದಂತೆ ಬಹು ತೇಕ ನಾಯಕರು “ಮೊದಲು
ಸಿಎಂ ಸಿದ್ದರಾಮಯ್ಯ ಸಹಕಾರಿ ಸಂಘಗಳಲ್ಲಿನ ಸಾಲ ಮನ್ನಾ ಮಾಡಲಿ, ಬಳಿಕ ನಾವು ಕೇಂದ್ರ ಸರಕಾರದಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಿಸಿಕೊಂಡು ಬರುತ್ತೇವೆ’ ಎಂದು ಸವಾಲು ಹಾಕಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿದ್ದ ಕಾಂಗ್ರೆಸ್‌ ಸರಕಾರ ಸಹಕಾರಿ ಸಂಘಗಳಲ್ಲಿನ ರೈತರ ಸುಮಾರು 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡುವ ಮೂಲಕ ತಕ್ಕ ಜವಾಬು ನೀಡಿತ್ತು. ಈಗ ಸಹಕಾರಿ ಸಂಘಗಳಲ್ಲಿ ಬಾಕಿ ಉಳಿದಿರುವ ಸಾಲವನ್ನೂ ಮನ್ನಾ ಮಾಡುವ ಮೂಲಕ ಬಿಜೆಪಿಗೆ ತಿರುಗೇಟು ನೀಡಲು ತಂತ್ರ ರೂಪಿಸಿದೆ. ಜತೆಗೆ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ ನಡೆಸಲೂ ನಿರ್ಧರಿಸಿದೆ.

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next