Advertisement

2500 ಕೋಟಿ ದಾಟದ ತೆರಿಗೆ ಸಂಗ್ರಹ

11:58 AM Feb 06, 2017 | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ವಸತಿ ಹಾಗೂ ವಾಣಿಜ್ಯ ಕಟ್ಟಡಗಳ ಸಂಖ್ಯೆಗನುಗುಣವಾಗಿ  ವಾರ್ಷಿಕ  ಕನಿಷ್ಠ 4,359.5 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಲು ಅವಕಾಶ ಇದೆ. ಇನ್ನೂ ಪ್ರಯತ್ನ ಪಟ್ಟರೆ ಇದರ ದುಪ್ಪಟ್ಟು ಅಂದರೆ 8,693 ಕೋಟಿ ರೂ. ಸಂಗ್ರಹಿಸುವುದು ಅಸಾಧ್ಯವೇನಲ್ಲ. ಆದರೆ, ಬಿಬಿಎಂಪಿ ಹೊಂದಿರುವ ಒಟ್ಟಾರೆ ತೆರಿಗೆ ಸಂಗ್ರಹ ಗುರಿಯೇ 2,900 ಕೋಟಿ ರೂ.

Advertisement

ಹೌದು, ವಸತಿ-ವಾಣಿಜ್ಯ ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕಟ್ಟಡಗ ಳಿಂದ ಗರಿಷ್ಠ 8,693 ಕೋಟಿ ರೂ. ತೆರಿಗೆ ರೂಪದಲ್ಲಿ ಸಂಗ್ರಹಿಸಲು ಸಾಧ್ಯವಿದೆ ಎಂದು ಕೇಂದ್ರ ಸರ್ಕಾರ ಮಂಡಿಸಿರುವ ಆರ್ಥಿಕ ಸಮೀಕ್ಷಾ ವರದಿ ತಿಳಿಸಿದೆ. ಅಷ್ಟೇ ಅಲ್ಲ, ಕನಿಷ್ಠ ಮತ್ತು ಗರಿಷ್ಠ ತೆರಿಗೆ ಸಂಗ್ರಹ ಸಾಮರ್ಥ್ಯ ಗಣನೆಗೆ ತೆಗೆದುಕೊಂಡು, ಸರಾಸರಿ ತೆರಿಗೆ ಸಂಗ್ರಹದ ಪ್ರಮಾಣ ಲೆಕ್ಕಹಾಕಿದರೂ 6,526.7 ಕೋಟಿ ರೂ. ಸಂಗ್ರಹಿಸಬಹುದಾಗಿದೆ. ಆದರೆ, ಬಿಬಿಎಂಪಿ ಸಂಗ್ರಹಿಸುತ್ತಿರುವ ಆಸ್ತಿ ತೆರಿಗೆ 2500 ಕೋಟಿ ರೂ. ದಾಟುತ್ತಿಲ್ಲ.  
 
ಬೆಂಗಳೂರು ಒಟ್ಟಾರೆ 784 ಚದರ ಕಿ.ಮೀ. ವ್ಯಾಪಿಸಿದ್ದು, ಈ ಪೈಕಿ ಉಪಗ್ರಹದ ಚಿತ್ರಗಳ ಪ್ರಕಾರ ಶೇ.50ರಷ್ಟು ಬಿಲ್ಟ್ಅಪ್‌ ಏರಿಯಾ (ನಿರ್ಮಿತ ಪ್ರದೇಶ) ಆಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 198 ವಾರ್ಡ್‌ಗಳಿದ್ದು, ಇದರಲ್ಲಿ ಆಸ್ತಿಗಳನ್ನು 6 ವಲಯಗಳನ್ನಾಗಿ ವಿಂಗಡಿಸಲಾಗಿದೆ. ಇದರಲ್ಲಿ ನಗರದ ಪ್ರತಿ ಮನೆ, ಕಟ್ಟಡ, ಅಪಾರ್ಟ್‌ಮೆಂಟ್‌, ಕೊಳೆಗೇರಿ ಗುಡಿಸಲು ಸೇರಿದಂತೆ ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ.

ಕಟ್ಟಡ ಸಾಂಧ್ರತೆ ಪ್ರದೇಶದ ನಿಖರ ಲೆಕ್ಕ ಪಡೆದು, ಆಯಾ ವಲಯ ವರ್ಗೀಕರಣ ದರದಂತೆ ತೆರಿಗೆ ಸಂಗ್ರಹ ಸಾಮರ್ಥ್ಯ ನಿರ್ಧರಿಸಿದ್ದು ಅದರ ಪ್ರಕಾರ 4359 ಕೋಟಿ ರೂ. ಸಂಗ್ರಹಿಸಬಹುದು ಎಂದು ತಿಳಿಸಿದೆ. ಆದರೆ, ಪಾಲಿಕೆಯ ಆಸ್ತಿ ತೆರಿಗೆ ಸಂಗ್ರಹದ ಗುರಿಯೇ 2,900 ಕೋಟಿ ರೂ. 2016-17 ನೇ ಸಾಲಿನಲ್ಲಿ ಈಗಾಗಲೇ 1,915 ಕೋಟಿ ರೂ. ಸಂಗ್ರಹಿಸಿದ್ದು, ಮಾರ್ಚ್‌ ಅಂತ್ಯಕ್ಕೆ ಇನ್ನೂ 500 ಕೋಟಿ ರೂ. ತೆರಿಗೆ ಹರಿದುಬರಲಿದೆ ಎಂಬುದು ಬಿಬಿಎಂಪಿ ಅಧಿಕಾರಿಗಳ ವಾದ. ಇಷ್ಟಾದರೂ ತೆರಿಗೆ ಪ್ರಮಾಣ 2500 ಕೋಟಿ ರೂ. ದಾಟುವುದಿಲ್ಲ.

ಮಾಹಿತಿ ಕೊರತೆ: ಪಾಲಿಕೆ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಪ್ರಕಾರ, “ಕೇಂದ್ರ ಸರ್ಕಾರ ಮಂಡಿಸಿರುವ 2016-17ನೇ ಸಾಲಿನ ಆರ್ಥಿಕ ಸಮೀಕ್ಷಾ ವರದಿಯಲ್ಲಿರುವ ಬಿಬಿಎಂಪಿ ತೆರಿಗೆ ಸಂಗ್ರ ಹಕ್ಕೆ ಸಂಬಂಧಿಸಿದ ಅಂಕಿ-ಅಂಶಗಳೇ ಅವಾಸ್ತವ. ಅಲ್ಲಿರುವ ಅಂಕಿ-ಅಂಶಗಳು 2015ನೇ ಸಾಲಿಗೆ ಸೇರಿ ದ್ದಾಗಿವೆ. ವರದಿ ಮಾಹಿತಿ ಕೊರತೆಯಿಂದ ಕೂಡಿದೆ’ ಎಂದು ಹೇಳುತ್ತಾರೆ.  

ವಾಸ್ತವಕ್ಕೆ ದೂರ: “ಆರ್ಥಿಕ ಸಮೀಕ್ಷಾ ವರದಿ ಸಿದ್ಧತೆಗೂ ಮುನ್ನ ತೆರಿಗೆ ಸಂಗ್ರಹ ಕುರಿತು ಪಾಲಿಕೆಯಿಂದ ಯಾವುದೇ ಮಾಹಿತಿಯನ್ನೂ ಕೇಳಿಲ್ಲ; ಪಾಲಿಕೆಯೂ ಕೊಟ್ಟಿಲ್ಲ. ಸರ್ಕಾರ ತನ್ನದೇ ಆದ ಸಮೀಕ್ಷೆಯ ದತ್ತಾಂಶಗಳನ್ನು ಆಧರಿಸಿ ವರದಿ ಸಲ್ಲಿಸಿದೆ. ಆದರೆ, ಅದರಲ್ಲಿರುವ ಮಾಹಿತಿಗಳು ವಾಸ್ತವಕ್ಕೆ ದೂರವಾಗಿದೆ ಎಂದು ತಿಳಿಸುತ್ತಾರೆ. ಬಿಬಿಎಂಪಿಗೆ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ನೀಡಿದ ತೆರಿಗೆ ಸಂಗ್ರಹದ ಗುರಿ ಸುಮಾರು 2,900 ಕೋಟಿ. ಇದರಲ್ಲಿ ಈಗಾಗಲೇ 1,915 ಕೋಟಿ ರೂ. ಸಂಗ್ರಹವಾಗಿದೆ. ಮುಂದೆರಡು ತಿಂಗಳಲ್ಲಿ ಇನ್ನೂ ಕನಿಷ್ಠ 500 ಕೋಟಿ ರೂ. ಬರಲಿದೆ.

Advertisement

ನಮ್ಮ ಗುರಿಯ ಪೈಕಿ ಶೇ.80ರಿಂದ 85ರಷ್ಟು ಸಾಧನೆಯಾಗಲಿದೆ. 2016ರಲ್ಲಿ ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಪಾಲಿಕೆ ಅನೇಕ ಬದಲಾವಣೆಗಳನ್ನು ಮಾಡಿಕೊಂಡಿದ್ದು, ಇದರ ಪರಿಣಾಮ ಶೇ.80ರಷ್ಟು ತೆರಿಗೆ ಬಂದಿದೆ. ಇನ್ನು 2016ರಲ್ಲಿ ಜಿಐಎಸ್‌ ಆಧಾರಿತ ತೆರಿಗೆ ಸಂಗ್ರಹ ವ್ಯವಸ್ಥೆ, ಉಪಗ್ರಹ ಇಮೇಜ್‌ಗಳನ್ನು ಒಳಗೊಂಡ ತೆರಿಗೆ ಮಾಹಿತಿ ಸೇವೆ ಅಳವಡಿಸಲಾಗಿದೆ. ವಲಯವಾರು ತೆರಿಗೆ ಸಂಗ್ರಹಕ್ಕೆ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ದೇಶದಲ್ಲೇ ಮಾದರಿ ವ್ಯವಸ್ಥೆ ಇದಾಗಿದೆ ಎಂದು ಸಮರ್ಥಿಸಿಕೊಳ್ಳುತ್ತಾರೆ.

11 ಲಕ್ಷ ಆಸ್ತಿ ತೆರಿಗೆ ಸಂಗ್ರಹ
“ಬಿಬಿಎಂಪಿ ವ್ಯಾಪ್ತಿಯಲ್ಲಿ 17.65 ಲಕ್ಷ ಆಸ್ತಿಗಳಿದ್ದು, ಇದುವರೆಗೆ 11 ಲಕ್ಷ ಆಸ್ತಿಗಳ ತೆರಿಗೆ ಸಂಗ್ರಹವಾಗಿದೆ. ಅಂದಾಜು 6.75 ಲಕ್ಷ ಆಸ್ತಿಗಳ ತೆರಿಗೆ ಬರಬೇಕಿದೆ. ಆದರೆ, ಯಾವ ಮೂಲದಿಂದ ಆರ್ಥಿಕ ಸಮೀಕ್ಷಾ ವರದಿಯು ಶೇ.80ರಷ್ಟು ತೆರಿಗೆ ಸಂಗ್ರಹ ಆಗಿಲ್ಲ ಎಂದು ಹೇಳಿದೆಯೋ ಗೊತ್ತಾಗುತ್ತಿಲ್ಲ.

ಹಾಗೆ ನೋಡಿದರೆ, ಪಾಲಿಕೆ ಅಳವಡಿಸಿಕೊಂಡ “ಪ್ರಾಪರ್ಟಿ ಜಿಐಎಸ್‌’ ವ್ಯವಸ್ಥೆ ಬಗ್ಗೆ ದೇಶದ ವಿವಿಧ ಮಹಾನಗರಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ತಮ್ಮಲ್ಲಿ ಅಳವಡಿಸಿಕೊಳ್ಳಲು ಆಸಕ್ತಿ ತೋರಿಸಿವೆ’ ಎಂದು ಕಂದಾಯ ವಿಭಾಗದ ಜಂಟಿ ಆಯುಕ್ತ ವೆಂಕಟಾಚಲಪತಿ ತಿಳಿಸುತ್ತಾರೆ.

ಜಿಐಎಸ್‌ ವ್ಯವಸ್ಥೆಯಲ್ಲಿ ಪ್ರತಿದಿನ ಆಸ್ತಿಗಳ ಅಪ್‌ಡೇಟ್‌ ಮಾಡಲಾಗಿದೆ. ಹೀಗಾಗಿ, ಆಸ್ತಿ ತೆರಿಗೆ ವ್ಯಾಪ್ತಿಯಿಂದ ಆಸ್ತಿಗಳು ತಪ್ಪಿಸಿಕೊಳ್ಳುವುದು ಕಷ್ಟ ಎಂದು ಬಿಬಿಎಂಪಿ ಇ-ಆಡಳಿತದ ಸಲಹೆಗಾರ ಶೇಷಾದ್ರಿ ಅಭಿಪ್ರಾಯಪಡುತ್ತಾರೆ. 

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next