ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಎಲ್)ದಲ್ಲಿ ಕಳೆದ ಒಂದು ವರ್ಷದಲ್ಲಿ ಎರಡೂವರೆ ಕೋಟಿ ಜನ ಪ್ರಯಾಣ ಮಾಡಿದ್ದು, ಡಿ. 23ರಂದು ಅತಿ ಹೆಚ್ಚು 87,815 ಮಂದಿ ಸಂಚರಿಸಿದ್ದಾರೆ. ಇದು ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಮಂಗಳವಾರ ತನ್ನ ಪ್ರಸಕ್ತ ಸಾಲಿನ (2017ರ ಜನವರಿಯಿಂದ ಡಿಸೆಂಬರ್) ಫಲಿತಾಂಶ ಪ್ರಕಟಿಸಿದ್ದು, ಈ ಅವಧಿಯಲ್ಲಿ ವಿಮಾನಗಳ ದಟ್ಟಣೆ, ಪ್ರಯಾಣಿಕರ ಸಂಚಾರ ಸೇರಿದಂತೆ ಒಟ್ಟಾರೆ ವಾರ್ಷಿಕ ಶೇ. 12.9ರಷ್ಟು ಪ್ರಗತಿ ಸಾಧಿಸಿದೆ.
ದಕ್ಷಿಣ ಭಾರತದ ಅತಿ ಹೆಚ್ಚು ವಿಮಾನಗಳ ದಟ್ಟಣೆ ಇರುವ ನಿಲ್ದಾಣಗಳಲ್ಲಿ ಒಂದಾದ ಕೆಐಎಎಲ್‌ನ ವಿಮಾನಗಳ ಸಂಚಾರ (ಎಟಿಎಂ) ದಲ್ಲಿ ಕೂಡ ಕಳೆದ ವರ್ಷಕ್ಕಿಂತ ಶೇ. 4.3ರಷ್ಟು ವೃದ್ಧಿಯಾಗಿದೆ. 43 ವಿಮಾನ ಅನುಸೂಚಿಗಳು ದೇಶೀಯ ಮತ್ತು ವಿದೇಶಿ ಸೇರಿ 62 ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಿವೆ.
2017ರಲ್ಲಿ ಕೆಐಎಎಲ್‌ನಲ್ಲಿ ವಿಮಾನಗಳ ಸಂಚಾರ (ಏರ್ ಟ್ರಾಫಿಕ್ ಮೂವ್‌ಮೆಂಟ್) ಪ್ರತಿ ದಿನ ಸರಾಸರಿ 505 ಇದ್ದು, ಇಡೀ ವರ್ಷ ಈ ನಿಲ್ದಾಣದ ಮೂಲಕ 1,84,348 ಬಾರಿ ವಿಮಾನಗಳು ಹಾರಾಟ ನಡೆಸಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ವಿಮಾನಗಳು 1,76,797 ಸಂಚರಿಸಿದ್ದವು.
ಒಂದೇ ದಿನ (ಡಿ. 23)ದಲ್ಲಿ ಈ ನಿಲ್ದಾಣದಿಂದ 87,815 ಜನ ಪ್ರಯಾಣಿಸಿದ್ದಾರೆ. ಇದು ಈ ನಿಲ್ದಾಣದಲ್ಲಿನ ಸಾರ್ವಕಾಲಿಕ ದಾಖಲೆಯಾಗಿದ್ದು, ಇದೇ ದಿನ ವಿಮಾನಗಳು 603 ಬಾರಿ ಕಾರ್ಯಾ ಚರಣೆ ಮಾಡಿವೆ. ದೇಶೀಯ ವಿಮಾನಯಾನ ಪ್ರಮಾ ಣ ಶೇ. 14.5ರಷ್ಟು ಮತ್ತು ವಿದೇಶಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 4.7ರಷ್ಟು ಹೆಚ್ಚಳ ಕಂಡುಬಂದಿದೆ. ಕಳೆದ ವರ್ಷ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೇಶೀ ವಿಭಾಗದಲ್ಲಿ ನಾಲ್ಕು ಹೊಸ ಮಾರ್ಗಗಳು ಕೂಡ ಸೇರ್ಪಡೆಗೊಂಡಿವೆ.
ಏರ್ ಕಾರ್ಗೊ; ಶೇ. 8ರಷ್ಟು ವೃದ್ಧಿ: ಅಲ್ಲದೆ, ಜನವರಿ-ಡಿಸೆಂಬರ್ ಅವಧಿಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಏರ್‌ಕಾರ್ಗೊ ಮೂಲಕ 3,39,461 ಮೆಟ್ರಿಕ್ ಟನ್ ಸರಕು-ಸಾಗಣೆ ಮಾಡಲಾಗಿದೆ. ಪ್ರಸ್ತುತ ಏರ್ ಕಾರ್ಗೊ ಸಾಮರ್ಥ್ಯ ವಾರ್ಷಿಕ 3.5 ಲಕ್ಷ ಮೆಟ್ರಿಕ್ ಟನ್ ಇದ್ದು, ಕಳೆದ ವರ್ಷ 3.2 ಲಕ್ಷ ಮೆಟ್ರಿಕ್ ಟನ್ ಇತ್ತು. ಕಾರ್ಗೊ ವಾರ್ಷಿಕ ಪ್ರಗತಿ ದರ ಶೇ. 8.1ರಷ್ಟಿದೆ. ಮುಂದಿನ ಐದು ವರ್ಷಗಳಲ್ಲಿ ಸರಕು-ಸಾಗಣೆ ಸಾಮರ್ಥ್ಯ 5.7 ಲಕ್ಷ ಮೆಟ್ರಿಕ್ ಟನ್ ತಲುಪಲಿದೆ ಎಂದು ಅಂದಾಜಿಸಲಾಗಿದೆ.