Advertisement

Exit polls ರಾಜ್ಯದಲ್ಲಿ ಬಿಜೆಪಿಗೆ 25 ಸ್ಥಾನ: ಸಮೀಕ್ಷೆ ಭವಿಷ್ಯ

11:18 PM Jun 01, 2024 | Team Udayavani |

ಬೆಂಗಳೂರು: ಕೇಂದ್ರದಲ್ಲಿ ಎನ್‌ಡಿಎ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂಬ ಸುಳಿವನ್ನು ಬಹುತೇಕ ಮತದಾನೋತ್ತರ ಸಮೀಕ್ಷೆಗಳು ನೀಡಿದ್ದು, ಕರ್ನಾಟಕದಲ್ಲಿ ಬಿಜೆಪಿ 20ರ ಗಟಿ ದಾಟುವ ಸೂಚನೆ ಸಿಕ್ಕಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 10 ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಿದ್ದ ಬಿಜೆಪಿ, ರಾಜ್ಯ ಸರಕಾರದ ವಿರುದ್ಧವೂ ಪ್ರಚಾರ ನಡೆಸಿತ್ತು. 20ಕ್ಕೂ ಹೆಚ್ಚು ಸ್ಥಾನ ಗಳಿಸುತ್ತೇವೆ ಎನ್ನುವ ವಿಶ್ವಾಸವನ್ನೂ ವ್ಯಕ್ತಪಡಿಸಿತ್ತು. ನಿರೀಕ್ಷೆಯಂತೆಯೇ ಚುನಾವಣೋತ್ತರ ಸಮೀಕ್ಷೆಗಳು ಕರ್ನಾಟಕ ಬಿಜೆಪಿಗೆ 20-25 ಸ್ಥಾನಗಳನ್ನು ಗೆಲ್ಲುವ ಸುಳಿವು ನೀಡಿವೆ.

ಅದೇ ರೀತಿ ಒಂದು ವರ್ಷದ ಹಿಂದೆಯಷ್ಟೇ ರಾಜ್ಯದಲ್ಲಿ ಅಧಿಕಾರಕ್ಕೇರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರಕಾರ, ಪಂಚಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಿತ್ತಲ್ಲದೆ, ರಾಷ್ಟ್ರ ಮಟ್ಟದಲ್ಲಿಯೂ ಲೋಕಸಭೆ ಚುನಾವಣ ಪ್ರಣಾಳಿಕೆಗೆ ಕರ್ನಾಟಕ ಮಾದರಿಯ ಗ್ಯಾರಂಟಿ ಯೋಜನೆಗಳನ್ನೇ ಸೇರಿಸಲಾಗಿತ್ತು. 15-20 ಸ್ಥಾನಗಳನ್ನು ಗೆಲ್ಲುವುದಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಸಮೀಕ್ಷೆಗಳು ಕಾಂಗ್ರೆಸ್‌ ಅನ್ನು ಒಂದಂಕಿಯಲ್ಲೇ ಕಾಂಗ್ರೆಸ್‌ನ್ನು ನಿಲ್ಲಿಸಿವೆ. ಆದರೆ ಇದನ್ನು ಕಾಂಗ್ರೆಸ್‌ ತಳ್ಳಿಹಾಕಿದೆ.

ಇನ್ನು ಬಿಜೆಪಿ ಜತೆಗೆ ಕೈಜೋಡಿಸಿ ಹಾಸನ, ಮಂಡ್ಯ ಮತ್ತು ಕೋಲಾರದಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಜೆಡಿಎಸ್‌, ಮೂರೂ ಸ್ಥಾನವನ್ನು ಗೆಲ್ಲುವ ನಿರೀಕ್ಷೆಯಲ್ಲಿತ್ತು. ಸಮೀಕ್ಷೆ ಪ್ರಕಾರ 2 ಸ್ಥಾನದಲ್ಲಿ ಜೆಡಿಎಸ್‌ ಗೆಲುವು ಖಚಿತ ಎನ್ನುವಂತಾಗಿದೆ. ಇದಕ್ಕೆ ಜೆಡಿಎಸ್‌ ಕೂಡ ಸಹಮತ ವ್ಯಕ್ತಪಡಿಸಿದೆ.

ಕಾಂಗ್ರೆಸ್‌ ಎರಡಂಕಿ ಸ್ಥಾನ ಗೆಲ್ಲಲಿದೆ: ಡಿಸಿಎಂ
ನನಗೆ ಚುನಾವಣೋತ್ತರ ಸಮೀಕ್ಷೆ ಮೇಲೆ ವಿಶ್ವಾಸವಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್‌ ಎರಡಂಕಿ ಸ್ಥಾನಗಳನ್ನು ಗೆಲ್ಲಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು. ಸದಾಶಿವ ನಗರದಲ್ಲಿರುವ ತಮ್ಮ ನಿವಾಸದ ಬಳಿ ಶನಿವಾರ ರಾತ್ರಿ ಮಾಧ್ಯಮಗಳು, ಎಕ್ಸಿಟ್‌ ಪೋಲ್‌ ಸಮೀಕ್ಷೆಗಳ ಬಗ್ಗೆ ಕೇಳಿದಾಗ ಶಿವಕುಮಾರ್‌ ಅವರು ಪ್ರತಿಕ್ರಿಯಿಸಿ, ಚುನಾವಣೋತ್ತರ ಸಮೀಕ್ಷೆ ನಡೆಸುವವರು ಅಲ್ಪಪ್ರಮಾಣದ ಮಾದರಿಗಳನ್ನು ಸಂಗ್ರಹಿಸಿರುತ್ತಾರೆ. ಆಳವಾದ ಸಮೀಕ್ಷೆ ನಡೆಯುವುದಿಲ್ಲ. ಹೀಗಾಗಿ ಈ ಸಮೀಕ್ಷೆಗಳಿಂದ ನಿಖರ ಮಾಹಿತಿ ಬರುವುದಿಲ್ಲ. ಹೀಗಾಗಿ ನನಗೆ ಎಕ್ಸಿಟ್‌ ಪೋಲ್‌ ಮೇಲೆ ವಿಶ್ವಾಸವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ 3-4 ಸ್ಥಾನ ಪಡೆಯಲಿದೆ ಎಂದು ಎಕ್ಸಿಟ್‌ ಪೋಲ್‌ ತಿಳಿಸುತ್ತಿದೆ. ಆದರೆ ನಾವು ಎರಡಂಕಿ ಸ್ಥಾನಗಳನ್ನು ಗೆಲ್ಲಲಿದ್ದೇವೆ. ದೇಶದ ಅಧಿಕಾರವನ್ನು ಇಂಡಿಯಾ ಮೈತ್ರಿಕೂಟ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಎನ್‌ಡಿಎ ಜತೆಗೆ ನಾವು ಮೈತ್ರಿ ಮಾಡಿಕೊಂಡಿರುವುದರಿಂದ ದೇಶಾದ್ಯಂತ ಜೆಡಿಎಸ್‌ 6ರಿಂದ 8 ಸ್ಥಾನ ಗೆಲ್ಲುವ ವಿಶ್ವಾಸವಿದೆ. ನಮ್ಮ ನಿರೀಕ್ಷೆಯಂತೆಯೇ ಚುನಾವಣೋತ್ತರ ಸಮೀಕ್ಷೆಗಳು ಸ್ಪಷ್ಟವಾಗಿದ್ದು, ರಾಜ್ಯದಲ್ಲಿ ಬಿಜೆಪಿ – ಜೆಡಿಎಸ್‌ 20ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲಲಿವೆ.
– ತಿಪ್ಪೇಸ್ವಾಮಿ, ಮೇಲ್ಮನೆ ಜೆಡಿಎಸ್‌ ಸದಸ್ಯ

ವಿಕಸಿತ ಭಾರತದತ್ತ ಮತ್ತೊಮ್ಮೆ ಭಾರತೀಯರು. ಕೋಟ್ಯಂತರ ಭಾರತೀಯರು ಹಾಗೂ ಬಿಜೆಪಿ ಕಾರ್ಯಕರ್ತರ ಆಶಯವನ್ನು ಎಕ್ಸಿಟ್‌ ಪೋಲ್‌ ಹೇಳುತ್ತಿದೆ.
-ವಿ.ಸುನಿಲ್‌ ಕುಮಾರ್‌, ರಾಜ್ಯ ಬಿಜೆಪಿ ಚುನಾವಣ ಸಂಚಾಲಕ

Advertisement

Udayavani is now on Telegram. Click here to join our channel and stay updated with the latest news.

Next