Advertisement

ಘೋಷಣೆಯಲ್ಲೇ ಉಳಿದ ಹಳದಿ ಎಲೆರೋಗ ಅಧ್ಯಯನ; ಬಜೆಟ್‌ನಲ್ಲಿ 25 ಕೋಟಿ ರೂ. ಘೋಷಿಸಿದ್ದ ಯಡಿಯೂರಪ್ಪ

12:38 AM Mar 22, 2022 | Team Udayavani |

ಸುಳ್ಯ: ಅಡಿಕೆ ಹಳದಿ ಎಲೆರೋಗ ಅಧ್ಯಯನಕ್ಕೆ ಹಾಗೂ ಪರ್ಯಾಯ ಬೆಳೆಗಳಿಗೆ ಸಹಾಯಧನ ನೀಡಲು ರಾಜ್ಯ ಸರಕಾರ ವರ್ಷದ ಹಿಂದೆ ಬಜೆಟ್‌ನಲ್ಲಿ 25 ಕೋಟಿ ರೂ. ಮೀಸಲಿಡುವ ಘೋಷಣೆ ಮಾಡಿತ್ತು. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

Advertisement

ದಕ್ಷಿಣ ಕನ್ನಡ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆ ಅಡಿಕೆ ಬೆಳೆಯುವ ಕೃಷಿಕರಿಗೆ ಹಳದಿ ಎಲೆ ರೋಗ ಭಾರೀ ಸಂಕಷ್ಟವನ್ನು ತಂದೊಡ್ಡಿದೆ. ಸುಳ್ಯ, ಪುತ್ತೂರು, ಕಡಬ ತಾಲೂಕಿನ ಕೃಷಿಕರು ಬಹಳಷ್ಟು ನಷ್ಟ ಅನುಭವಿಸಿದ್ದಾರೆ. ರೋಗ ನಿಯಂತ್ರಣಕ್ಕೆ ಹಲವಾರು ರೀತಿಯಲ್ಲಿ ಪ್ರಯತ್ನಗಳಾಗುತ್ತಿದ್ದರೂ ಪರಿಪೂರ್ಣ ಫ‌ಲಿತಾಂಶ ಲಭ್ಯವಾಗಿಲ್ಲ.

ಹಳದಿಎಲೆ ರೋಗಕ್ಕೆ ಫೈಟೋಪ್ಲಾಸ್ಮಾ ಕಾರಣ ಎನ್ನಲಾಗಿದೆ. ರೋಗ ಪ್ರತಿರೋಧಕ ತಳಿ ಅಭಿವೃದ್ಧಿಯಿಂದ, ಪ್ಲಾಸ್ಟಿಕ್‌ ಮಲಿcಂಗ್‌ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ರೋಗ ನಿಯಂತ್ರಿಸಲು ಪ್ರಯತ್ನಗಳೂ ನಡೆಯುತ್ತಿದೆ ಎನ್ನಲಾಗಿದೆ.

ಬಜೆಟ್‌ನಲ್ಲಿ ಘೋಷಣೆ
ಯಡಿಯೂರಪ್ಪ ಅವರು 2021ರಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಅಡಿಕೆ ಹಳದಿ ಎಲೆರೋಗ ಅಧ್ಯಯನಕ್ಕೆ, ಪರ್ಯಾಯ ಬೆಳೆಗಳಿಗೆ ಅನುದಾನ ಘೋಷಿಸಿದ್ದರು. ಶಿವಮೊಗ್ಗದ ಕೃಷಿ ವಿಶ್ವವಿದ್ಯಾನಿಲಯದ ಶೃಂಗೇರಿಯ ಸಂಶೋಧನ ಕೇಂದ್ರದಲ್ಲಿ ಹಳದಿ ಎಲೆರೋಗ ಬಗ್ಗೆ ಅಧ್ಯಯನ ನಡೆಸಲು ಹಾಗೂ ವಿಟ್ಲದಲ್ಲಿ ಅಧ್ಯಯನಕ್ಕೆ ಲ್ಯಾಬ್‌ ನಿರ್ಮಾಣ ಹಾಗೂ ಸಂಶೋಧನೆಗೆ, ಪರ್ಯಾಯ ಬೆಳೆಗಳಿಗೆ ಅನುದಾನ ಮೀಸಲಿಡಲು ತೋಟಗಾರಿಕಾ ಇಲಾಖೆ ವತಿಯಿಂದ ಯೋಜನೆ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.

ಎಪ್ರಿಲ್‌ನಿಂದ ಅಧ್ಯಯನ ನಿರೀಕ್ಷೆ
ಬಜೆಟ್‌ನಲ್ಲಿ ಘೋಷಿಸಿದರೂ ಕೊರೊನಾ ಕಾರಣವನ್ನಿಟ್ಟುಕೊಂಡು ಈ ಬಗ್ಗೆ ಅಧ್ಯಯನ ಇನ್ನೂ ಆರಂಭಗೊಂಡಿಲ್ಲ. ನವೆಂಬರ್‌ ವರೆಗೆ ಕೊರೊನಾ ಅಲೆ ಇದ್ದು, ಬಳಿಕ ಅನುದಾನ ಪಕ್ರಿಯೆ ನಡೆದಿದೆ. ಮುಂದಿನ ಎಪ್ರಿಲ್‌ನಿಂದ ಅಧ್ಯಯನ ಆರಂಭವಾಗುವ ನಿರೀಕ್ಷೆ ವ್ಯಕ್ತವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ. ಇತ್ತ ಕೃಷಿಕರಿಗೆ ಸಂಭವಿಸಿದ ನಷ್ಟಕ್ಕೆ ಪರಿಹಾರವೂ ಇಲ್ಲ, ಅಧ್ಯಯನವೂ ನಡೆದಿಲ್ಲ ಎಂಬ ಆಕ್ರೋಶವೂ ವ್ಯಕ್ತವಾಗತೊಡಗಿದೆ.

Advertisement

ಹಳದಿ ಎಲೆರೋಗಕ್ಕೆ ಸಾವಿರಾರು ಎಕರೆ ಅಡಿಕೆ ಬೆಳೆ ತುತ್ತಾಗಿದ್ದು, ಉತ್ತಮ ಫ‌ಸಲಿನ ನಿರೀಕ್ಷೆಯಲ್ಲಿದ್ದವರಿಗೆ ಭಾರೀ ಹೊಡೆತ ಬಿದ್ದಿದೆ. ನಷ್ಟ ಅನುಭವಿಸಿದವರು ಸರಕಾರದ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಆದರೆ ಸರಕಾರ ಪರಿಹಾರ ಕೊಡುವ ಬದಲು ಹಲವು ವರ್ಷಗಳಿಂದ ಅಧ್ಯಯನದ ಹೆಸರಲ್ಲಿ ಹಣ ಖರ್ಚು ಮಾಡುತ್ತಿದೆ; ಯಾವುದೇ ಫ‌ಲಿತಾಂಶ ಮಾತ್ರ ಇಲ್ಲ ಎಂದು ಕೃಷಿಕರು ದೂರಿದ್ದಾರೆ. ಎಕರೆಗೆ ಇಂತಿಷ್ಟು ಪರಿಹಾರ ನೀಡಬೇಕೆಂಬ ಒತ್ತಾಯವೂ ಇದೆ.

ಇದನ್ನೂ ಓದಿ:ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಅಲ್ಲ: ಸಚಿವ ಆರಗ ಜ್ಞಾನೇಂದ್ರ

ಪರ್ಯಾಯ ಬೆಳೆಗೆ ಸಹಾಯಧನ
ಮೀಸಲಿಟ್ಟ ಅನುದಾನದಲ್ಲಿ ಅಡಿಕೆಗೆ ಪರ್ಯಾಯವಾಗಿ ಬೆಳೆಯಬಹುದಾದ ಬೆಳೆ ಗಳಿಗೂ ಸಹಾಯಧನ ನೀಡಲು ಯೋಜನೆ ರೂಪಿಸಲಾಗಿದೆ. ಬಾಳೆ, ಕಾಳುಮೆಣಸು, ಜಾಯಿಕಾಯಿ, ರಾಂಬೂಟಾನ್‌, ತೆಂಗು ಮುಂತಾದ 8-10 ಬೆಳೆಗಳಿಗೆ ಸಹಾಯ ಧನ ನೀಡಲಾಗುತ್ತದೆ. ಇಲಾಖೆ, ಉದ್ಯೋಗ ಖಾತರಿಯಡಿ ಸಹಾಯಧನ ಲಭ್ಯವಾಗದರೈತರಿಗೆ ಈ ಯೋಜನೆ ಮುಖಾಂತರ ಸಹಾಯಧನ ಸಿಗಲಿದೆ.

ಬಜೆಟ್‌ನಲ್ಲಿ 25 ಕೋಟಿ ರೂ. ಘೋಷಿಸಲಾಗಿದ್ದು, ಅದನ್ನು ಅಡಿಕೆ ಹಳದಿ ಎಲೆರೋಗ ಅಧ್ಯಯನ ಹಾಗೂ ಪರ್ಯಾಯ ಬೆಳೆಗಳಿಗೆ ಸಹಾಯಧನಕ್ಕೆ ಯೋಜನೆ ರೂಪಿಸಲಾಗಿದೆ. ಈವರೆಗೆ ಕೊರೊನಾ ಹಿನ್ನೆಲೆಯಿಂದ ಯೋಜನೆ ಕಾರ್ಯರಂಭಗೊಂಡಿಲ್ಲ. ಮುಂದಿನ ಎಪ್ರಿಲ್‌ನಿಂದ ಅಧ್ಯಯನ ನಡೆಯಲಿದೆ.
– ನಿರ್ದೇಶಕರು, ತೋಟಗಾರಿಕೆ ಇಲಾಖೆ

ಬಜೆಟ್‌ನಲ್ಲಿ ಪ್ರಸ್ತಾವದ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆಯಿಂದ ಯಾವ ರೀತಿ ಯೋಜನೆ ರೂಪಿಸಬಹುದೆಂದು ಮಾಹಿತಿ ಕೇಳಲಾಗಿತ್ತು. ಅದರಂತೆ ನಾವು ಯೋಜನೆ ರೂಪಿಸಬಹುದಾದ ಬಗ್ಗೆ ಪ್ರಸ್ತಾವನ್ನು ಸರಕಾರಕ್ಕೆ ಸಲ್ಲಿಸಿದ್ದೆವು. ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ಬಂದಿಲ್ಲ.
– ಡಾ| ಭವಿಷ್ಯ, ವಿಜ್ಞಾನಿ, ಸಿಪಿಸಿಆರ್‌ಐ, ವಿಟ್ಲ

-ದಯಾನಂದ ಕಲ್ನಾರು

Advertisement

Udayavani is now on Telegram. Click here to join our channel and stay updated with the latest news.

Next