Advertisement

24 ತಾಸು ನೀರಿಗೆ ಬೇಕು ಇನ್ನೂ 3 ವರ್ಷ

02:41 PM Jun 05, 2018 | Team Udayavani |

ದಾವಣಗೆರೆ: ನೀರಿನ ಸಮಸ್ಯೆ ದಾವಣಗೆರೆಯಲ್ಲಿ ಇಂದು, ನಿನ್ನೆಯದಲ್ಲ, ಈ ಹಿಂದೆ ನಗರದ ಜನತೆಗೆ ಬಾತಿ ಕೆರೆಯಿಂದ ನೀರು ಪೂರೈಸಲಾಗುತ್ತಿತ್ತು. ಕಾಲ ಕ್ರಮೇಣ ದೂರದರ್ಶನ ಕೆರೆ, ಕುಂದುವಾಡ ಕೆರೆ ಅಭಿವೃದ್ಧಿಯಾದವು. ಇದರ ಜೊತೆ ಜೊತೆಗೆ ರಾಜನಹಳ್ಳಿ ಬಳಿ ಜಾಕ್‌ವೆಲ್‌ ನಿರ್ಮಿಸಿ, ಬಾತಿ ಗುಡ್ಡದ ಬಳಿ ನೀರಿನ ಟ್ಯಾಂಕ್‌ ಕಟ್ಟಿ ಪ್ರತಿನಿತ್ಯ ನಗರಕ್ಕೆ ಸಾಕಾಗುವಷ್ಟು ನೀರು ಪೂರೈಸಲಾಗುತ್ತಿತ್ತು. ನಂತರ ನೀರಿನ ಸಮಸ್ಯೆ ನಮ್ಮನ್ನು ಅಷ್ಟಾಗಿ ಕಾಡಿಲ್ಲ. ಆದರೆ, ನೀರುಗಂಟಿ, ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ, ನೀರು ನಿರ್ವಹಣೆಯಲ್ಲಿ ವ್ಯತ್ಯಯದಿಂದಾಗಿ ನೀರಿದ್ದರೂ ಸಕಾಲಕ್ಕೆ ಬಿಡದೇ ಸಮಸ್ಯೆ ಸೃಷ್ಟಿಗೆ ಕಾರಣವಾಗಿದೆ.

Advertisement

ಇದೀಗ ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತ ಪರಿಹಾರಕ್ಕೆ ಜಲಸಿರಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ರಾಜ್ಯ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದಿಂದ ನಗರದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಿದ್ಧವಾಗಿದೆ. ಈ ಯೋಜನೆ ಅನುಷ್ಠಾನವಾದ ನಂತರ ದಿನದ 24 ತಾಸು ನಗರದ ಜನರಿಗೆ ನೀರು ಸಿಗಲಿದೆ. ನೀರಿಗಾಗಿ ಕೊಡಪಾನ ಹಿಡಿದು, ಬೀದಿ ಬೀದಿ ಅಲೆಯಬೇಕಿಲ್ಲ. ಅಂತಹದ್ದೊಂದು ಮಹತ್ವದ ಯೋಜನೆ ಇದೀಗ ಸಮೀಕ್ಷೆ ಹಂತದಲ್ಲಿದೆ. ಒಟ್ಟು 452.32 ಕೋಟಿ ರೂ.ನ ಈ ಯೋಜನೆಯನ್ನು ಸುಯೇಜ್‌ ಪ್ರೊಜೆಕ್ಟ್ ಪ್ರೈವೇಟ್‌ ಲಿಮಿಟೆಡ್‌ ಅನುಷ್ಠಾನಗೊಳಿಸುವ ಜವಾಬ್ದಾರಿ ಹೊತ್ತಿದೆ.

ಇನ್ನೂ 3 ವರ್ಷ: ದಿನದ 24 ತಾಸೂ ನೀರು ಲಭ್ಯವಾಗಲು ಇನ್ನೂ 3 ವರ್ಷ ಬೇಕು. ಸರ್ಕಾರ ವಿಧಿಸಿರುವ ಷರತ್ತುಗಳ ಅನ್ವಯ ಯೋಜನೆ ಕಳೆದ ಮೇ 18ರಿಂದ ಆರಂಭ ಆಗಿದೆ. 5 ತಿಂಗಳ ಕಾಲ ಸಮೀಕ್ಷೆ ನಡೆಯಲಿದೆ. ಅದಾದ ನಂತರ 3 ವರ್ಷದ ಒಳಗೆ ಬ್ಯಾರೇಜ್‌ ನಿರ್ಮಾಣ, ಪೈಪ್‌ ಲೈನ್‌ ಅಳವಡಿಕೆ, ಓವರ್‌ಹೆಡ್‌ ಟ್ಯಾಂಕ್‌ಗಳ ನಿರ್ಮಾಣ ನಡೆಯಲಿದೆ. ಇಷ್ಟೆಲ್ಲಾ ಮುಗಿದ ಮೇಲೆ ಮನೆಗಳಿಗೆ ನೀರು ಹರಿಯಲಿದೆ. ಎಲ್ಲಾ ನಳಗಳಿಗೆ ಮೀಟರ್‌ ಅಳವಡಿಕೆ ಕಡ್ಡಾಯವಾಗಿ ಇರಲಿದೆ. 

ಹರಿಹರ ಬಳಿ ಬ್ಯಾರೇಜ್‌: ಹರಿಹರ- ರಾಜನಹಳ್ಳಿ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ಬಳಿ ಬ್ಯಾರೇಜ್‌ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ವರ್ಷಪೂರ್ತಿ ಪ್ರತಿದಿನ 120 ಎಂಎಲ್‌ಡಿ (ಪ್ರತಿದಿನ 10 ಲಕ್ಷ ಲೀಟರ್‌) ನೀರು ಸಂಗ್ರಹಣೆಗೆ ಇಲ್ಲಿ ಬ್ಯಾರೇಜ್‌ ನಿರ್ಮಾಣ ಮಾಡಲಾಗುತ್ತದೆ. ಅಲ್ಲಿ ಎತ್ತಿದ ನೀರನ್ನು ಬಾತಿಕೆರೆ ಬಳಿಯ ಶುದ್ಧೀಕರಣ ಘಟಕಕ್ಕೆ ಹರಿಸಲಾಗುವುದು. ಅಲ್ಲಿಂದ ನೀರನ್ನು ನಗರದ ಓವರ್‌ ಹೆಡ್‌ ಟ್ಯಾಂಕ್‌ ಗಳಿಗೆ ತುಂಬಿಸಿ, ಮನೆ ಮನೆಗೆ ಸರಬರಾಜು ಮಾಡಲಾಗುವುದು. ಇದರ ಜೊತೆಗೆ ನಾಲ್ಕು ಕೆರೆಗಳನ್ನೂ ಸಹ ನೀರಿನ ಅಭಾವ ನೀಗಿಸಲು
ತುಂಬಿಸಿಕೊಳ್ಳಲಾಗುತ್ತದೆ. 

19 ಓವರ್‌ ಹೆಡ್‌ ಟ್ಯಾಂಕ್‌: ಪಾಲಿಕೆ ವ್ಯಾಪ್ತಿಯಲ್ಲೀಗ 5 ಲಕ್ಷ ಲೀಟರ್‌ನಿಂದ 15 ಲಕ್ಷ ಲೀಟರ್‌ ಶೇಖರಣೆ ಸಾಮರ್ಥ್ಯ ಹೊಂದಿರುವ 31 ಓವರ್‌ ಹೆಡ್‌ ಟ್ಯಾಂಕ್‌ ಇವೆ. ಇವುಗಳ ಜೊತೆಗೆ ಇನ್ನೂ 19 ಟ್ಯಾಂಕ್‌ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಟ್ಯಾಂಕ್‌ಗಳು ಸಹ 3.5 ಲಕ್ಷ ಲೀಟರ್‌ನಿಂದ 15 ಲಕ್ಷ ಲೀಟರ್‌ ವರೆಗೆ ಶೇಖರಣೆ ಸಾಮರ್ಥ್ಯದ್ದಾಗಿರಲಿವೆ. ಒಟ್ಟಾರೆ ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡ್‌ಗೆ ಒಂದೊಂದು ಓವರ್‌ಹೆಡ್‌ ಟ್ಯಾಂಕ್‌ ನಿರ್ಮಾಣ ಮಾಡಲಾಗುತ್ತದೆ.

Advertisement

70 ಅಡಿ ಎತ್ತರದವರೆಗೆ ಜಲಸಿರಿ ಅಡಿ ಕೇವಲ ನೆಲಮಹಡಿ ಮನೆಗೆ ಮಾತ್ರವಲ್ಲ, ಅಂತಸ್ತಿನಲ್ಲಿರುವ ಮನೆಗಳಿಗೂ ಸಹ ನೀರು ಹರಿಸುವ ಉದ್ದೇಶ ಇದೆ. ಹಾಲಿ ಯೋಜನೆಯಲ್ಲಿ ಕನಿಷ್ಠ 20 ಅಡಿ (7 ಮೀಟರ್‌) ಗರಿಷ್ಠ 70 ಅಡಿ (22 ಮೀಟರ್‌) ಎತ್ತರದಲ್ಲಿರುವ ಮನೆಗೂ ಸಹ ನೀರು ಕೊಡುವ ಉದ್ದೇಶ ಇದೆ. ಯೋಜನೆ ಅನ್ವಯ ಪ್ರತೀ ಮನೆಗೆ ಒಂದು ನಳ ಹಾಕಿಸಿಕೊಳ್ಳಲೇಬೇಕು. ನಳಗಳಿಗೆ ಕಡ್ಡಾಯವಾಗಿ ಮೀಟರ್‌ ಇರಲಿದೆ. 

1.34 ಲಕ್ಷ ನಳ: ಈಗ ರೂಪಿಸಲಾಗಿರುವ ಯೋಜನೆ ದೂರದೃಷ್ಟಿ ಯೋಜನೆ ಆಗಿದೆ. 2046ರಲ್ಲಿ ಇರಬಹುದಾದ ಜನಸಂಖ್ಯೆ ಆಧರಿಸಿ, ಯೋಜನೆ ರೂಪಿಸಲಾಗಿದೆ. ಯೋಜನೆ ಅನ್ವಯ ಒಟ್ಟು 1,34,618 ನಳ ಅಳವಡಿಸಲು ಅವಕಾಶ ಮಾಡಿಕೊಳ್ಳಲಾಗಿದೆ. ಹಾಲಿ 2011ರ ಗಣತಿ ಪ್ರಕಾರ ಮಹಾನಗರ ಪಾಲಿಕೆಯಲ್ಲಿ 80,316 ಗೃಹಬಳಕೆ, 12,805 ವಾಣಿಜ್ಯ ಬಳಕೆ ನಳ ಇವೆ. ಇದರ ಜೊತೆಗೆ 41,618 ನಿವೇಶಗಳು ಡೋರ್‌ ನಂಬರ್‌ ಹೊಂದಿದ್ದು, ಇವುಗಳಿಗೂ ಸಹ ನಳ ಅಳವಡಿಸುವ ಗುರಿಯೊಂದಿಗೆ ಯೋಜನೆ ರೂಪಿಸಲಾಗಿದೆ.

ಇತರೆ ಅಂಶಗಳು
1. ಯೋಜನೆಗೆ ಮೂರು 1000 ಎಚ್‌ಪಿ ಸಾಮರ್ಥ್ಯದ ಪಂಪ್‌ ಒದಗಿಸಲಾಗುವುದು. ಇದರಲ್ಲಿ 2 ಮೋಟಾರ್‌ ಕಾರ್ಯನಿರ್ವಹಿಸಿದರೆ, ಇವುಗಳಲ್ಲಿ ಏನಾದರೂ ಸಮಸ್ಯೆ ಉಂಟಾದಲ್ಲಿ ಇನ್ನೊಂದು ಮೋಟಾರ್‌ ಬಳಕೆ.

2. ನದಿಯಿಂದ ಎತ್ತಿದ ನೀರನ್ನು ಶುದ್ಧೀಕರಣ ಘಟಕಕ್ಕೆ ಸಾಗಿಸಲು 10.34 ಕಿಮೀ ಉದ್ದದ 1100 ಎಂಎಂ
ವ್ಯಾಸದ ಪೈಪ್‌ಲೈನ್‌ ಅಳವಡಿಕೆ.  

3. ಶುದ್ಧೀಕರಿಸಲ್ಪಟ್ಟ ನೀರನ್ನು ಓವರ್‌ ಹೆಡ್‌ ಟ್ಯಾಂಕ್‌ಗೆ ಸಾಗಿಸಲು 59.65ಕಿಮೀ ಉದ್ದದ ಪೈಪ್‌ಲೈನ್‌
ಅಳವಡಿಕೆ. 

4. ಮನೆ ಮನೆಗೆ ನೀರು ಹರಿಸಲು 1162.51ಕಿಮೀ ಪೈಪ್‌ಲೈನ್‌ ಅಳವಡಿಕೆ.

ಪಾಟೀಲ ವೀರನಗೌಡ

Advertisement

Udayavani is now on Telegram. Click here to join our channel and stay updated with the latest news.

Next