Advertisement

24 ಶುದ್ಧ ನೀರಿನ ಘಟಕ ಸ್ಥಗಿತ: ಗ್ರಾಮಸ್ಥರ ಪರದಾಟ

07:42 PM Dec 09, 2019 | Lakshmi GovindaRaj |

ಚನ್ನರಾಯಪಟ್ಟಣ: ಸಾರ್ವಜನಿಕರು ಶುದ್ಧ ನೀರು ಕುಡಿದು ಆರೋಗ್ಯ ಉತ್ತಮವಾಗಿ ಇಟ್ಟುಕೊಳ್ಳಲೆಂದು ಕೋಟ್ಯಂತರ ರೂ. ವೆಚ್ಚ ಮಾಡಿ 91 ಶುದ್ಧ ಕುಡಿಯುವ ನೀರ ಘಟಕವನ್ನು ತಾಲೂಕಿನಲ್ಲಿ ತೆರೆದಿದ್ದಾರೆ. ಇವುಗಳಲ್ಲಿ 24 ಶುದ್ಧ ನೀರಿನ ಘಟಕಗಳು ಸ್ಥಗಿತವಾಗಿ ತಿಂಗಳುಗಳು ಕಳೆದರೂ ದುರಸ್ತಿ ಮಾಡಿಸಲು ತಾಲೂಕು ಆಡಳಿತ ಮುಂದಾಗುತ್ತಿಲ್ಲ.

Advertisement

ವಿಪರ್ಯಾಸವೆಂದರೆ ಹಾಳಾಗಿರ‌್ಲ 24 ಶುದ್ಧ ಕುಡಿಯುವ ನೀರಿನ ಘಟಕವನ್ನು ಸರ್ಕಾರದ ಅಧಿಕೃತ ಸಂಸ್ಥೆಯಾದ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌)ವು ನಿರ್ವಹಣೆ ಮಾಡುತ್ತಿದೆ. ತಾಲೂಕಿನಲ್ಲಿ ವಿವಿಧ ಗ್ರಾಮಗಳಿಂದ 36 ಶುದ್ಧ ಕುಡಿಯುವ ನೀರಿನ ಘಟಕ ಈ ವರೆಗೆ ಸ್ಥಾಪಿಸಿದೆ. ಕೆಆರ್‌ಐಡಿಎಲ್‌ ಅಧಿಕಾರಿಗಳು ಮುಂದೆ ನಿಂತು ಕಟ್ಟಡ ನಿರ್ಮಾಣ, ಘಟಕಕ್ಕೆ ನೀರು ಶುದ್ಧೀಕರಣ ಯಂತ್ರ ಅಳವಡಿಕೆ ಸೇರಿದಂತೆ ಎಲ್ಲಾ ಕಾಮಗಾರಿಯನ್ನು ಜವಾಬ್ದಾರಿಯಿಂದ ಮಾಡಿದ್ದಾರೆ ಆದರೂ ಏಕೆ 24 ಶುದ್ಧ ನೀರಿನ ಘಟಕಗಳು ಹಾಳಾಗಿವೆ ಎನ್ನುವುದು ಜನರ ಪ್ರಶ್ನೆಯಾಗಿದೆ.

ಯಾರು ಎಷ್ಟು ನಿರ್ವಹಣೆ: ತಾಲೂಕಿನಲ್ಲಿ ಇರುವ ಒಟ್ಟು 91 ಶುದ್ಧ ಕುಡಿಯುವ ನೀರಿನ ಘಟಕದಲ್ಲಿ 12 ಘಟಕವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ವಹಣೆ ಮಾಡಿದರೆ, ಕೃಷಿ ಪತ್ತಿನ ಸಹಕಾರ ಸಂಘವು 14 ಘಟಕವನ್ನು ನಿರ್ವಹಣೆ ಮಾಡುತ್ತಿದೆ. ಉಳಿದಂತೆ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯು 29 ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ವಹಣೆ ಮಾಡುತ್ತಿದ್ದು ಎಲ್ಲವೂ ಉತ್ತಮವಾಗಿ ನಡೆಯುತ್ತಿದೆ.

ಎಲ್ಲೆಲ್ಲಿ ಕ್ಲೋಸ್‌..?: ಕೆ.ಬೈರಾಪುರ, ಎ.ಕಾಳೇನಹಳ್ಳಿ, ಅಣ್ಣೇನಹಳ್ಳಿ, ದಿಂಡಗೂರು, ಕೋಡಿಹಳ್ಳಿ, ಡಿಂಕ, ಹಳೆಬೆಳಗೊಳ, ಬೆಲಸಿಂದ, ಕಲಸಿಂದ, ಚಲ್ಯ, ದಡಿಘಟ್ಟ, ದೊಡ್ಡಘನ್ನಿ, ಕುಂಬೇನಹಳ್ಳಿ, ಓಬಳಾಪುರ, ಉಳ್ಳಾವಳ್ಳಿ, ಅಡಗೂರು, ಕಬ್ಬಳಿ, ಶ್ರೀನಿವಾಸಪುರ, ಕಗ್ಗಲಿಕಾವಲು, ನಾಗಸಮುದ್ರ, ಹಾರೋಸೋಮನಹಳ್ಳಿ ಗ್ರಾಮದಲ್ಲಿ ಈಗಾಗಲೇ ಸ್ಥಗಿತವಾಗಿವೆ. ಹಿರೀಸಾವೆ ಹಾಗೂ ಬ್ಯಾಡರಹಳ್ಳಿಯಲ್ಲಿ ಘಟಕ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದ್ದರೂ ಈ Êರೆ‌ಗೆ ಪ್ರಾರಂಭಿಸಲು ಕೆಆರ್‌ಐಡಿಎಲ್‌ ಮುಂದಾಗದೇ ಇರುವುದನ್ನು ನೋಡಿದರೆ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಗೊತ್ತಾಗುತ್ತಿದೆ.

ಪ್ರತಿ ಕ್ಯಾನ್‌ಗೆ 20-40ರೂ.: ಈಗಾಗಲೆ ಶುದ್ಧ ಕುಡಿಯುವ ನೀರು ಸೇವನೆ ಮಾಡಿರುವವರು ವಿಧಿಯಿಲ್ಲದೇ ಶುದ್ಧ ಕುಡಿಯುವ ನೀರಿನ ಕ್ಯಾನ್‌ಗಳನ್ನು ಅಧಿಕ ಹಣ ಕೊಟ್ಟು ಕೊಂಡುಕೊಳ್ಳುತ್ತಿದ್ದಾರೆ. ನೀರು ಸರಬರಾಜು ಮಾಡುವ ಖಾಸಗಿಯವರು ಇದರ ಲಾಭ ಪಡೆಯಲು ಪ್ರತಿ ಕ್ಯಾನಿಗೆ 20-40 ರೂ. ವರೆಗೆ ವಸೂಲಿ ಮಾಡುತ್ತಿದ್ದಾರೆ. ಐದು ರೂ.ಗೆ 20 ಲೀಟರ್‌ ನೀರು ಪಡೆಯುವ ಸಾರ್ವಜನಿಕರು ಹೆಚ್ಚವರಿ ಹಣ ನೀಡುವ ಮೂಲಕ ಖಾಸಗಿಯವರ ಜೇಬು ತುಂಬಿಸುತ್ತಿದ್ದಾರೆ.

Advertisement

ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿ: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನಿರ್ಮಾಣವಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಲವೇ ದಿವಸಗಳಲ್ಲಿ ಹಾಳಾಗುತ್ತಿರುವ ಬಗ್ಗೆ ಬಗ್ಗೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಗಮನಕ್ಕೆ ತರುತ್ತಿದ್ದಾರೆ. ಶುದ್ಧ ನೀರಿನ ಘಟಕದಿಂದ ಜನತೆಗೆ ಉಪಯೋಗಾಗುತ್ತಿಲ್ಲ. ಸರ್ಕಾರದ ಅನುದಾನ ಸಮರ್ಪಕವಾಗಿ ಅನುಷ್ಠಾನವಾಗಬೇಕಿದೆ. ಇವುಗಳ ಉಸ್ತುವಾರಿ ನೋಡಿಕೊಳ್ಳುವ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಅಧಿಕಾರಿಗಳು ಎಚ್ಚೆತ್ತುಕೊಂಡು ನಿರ್ವಹಣೆ ಮಾಡುವ ಏಜೆನ್ಸಿಗೆ ಸೂಕ್ತ ನಿರ್ದೇಶಕ ನೀಡಿ ತ್ವರಿತವಾಗಿ ಕಾರ್ಯಾರಂಭ ಮಡಬೇಕೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು ಪ್ರಯೋಜನವಾಗಿಲ್ಲ.

ಅಶುದ್ಧ, ಫ್ಲೋರೈಡ್‌ ನೀರೇಗತಿ: 24 ಶುದ್ಧ ನೀರಿನ ಘಟಕ ಸ್ಥಗಿತವಾಗಿರುವುದರಿಂದ ಸಾವಿರಾರು ಮಂದಿ ನಿತ್ಯವೂ ಅಶುದ್ಧ ಹಾಗೂ ಫ್ಲೋರೈಡ್‌ ನೀರು ಕುಡಿಯುತ್ತಿದ್ದಾರೆ. 24 ಘಟಕ ಕೇವಲ 24 ಗ್ರಾಮಕ್ಕೆ ಸೀಮಿತವಾಗಿರುವುದಿಲ್ಲ. ಎರಡರಿಂದ ಮೂರು ಗ್ರಾಮಸ್ಥರು ಘಟಕದಲ್ಲಿ ನೀರು ಪಡೆಯುತ್ತಾರೆ. ಇದರ ಅನುಸಾರ ನೂರಕ್ಕೂ ಹೆಚ್ಚು ಗ್ರಾಮದಿಂದ ಸಾವಿರಾರು ಮಂದಿ ಸಾರ್ವಜನಿಕರು ನಿತ್ಯವೂ ಅಶುದ್ಧ ಕುಡಿಯುವ ನೀರು ಸೇವೆನ ಮಾಡುತ್ತಿರುವುದರಿಂದ ಸಾಂಕ್ರಾಮಿಕ ರೋಗದ ಭೀತಿ ಅವರಲ್ಲಿ ಮನೆ ಮಾಡಿದೆ.

ತಾಲೂಕಿನಲ್ಲಿ ಮೂವರು ಶಾಸಕರಿದ್ದಾರೆ: ತಾಲೂಕಿನ ದಂಡಿಗನಹಳ್ಳಿ ಹೋಬಳಿ ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರದಲ್ಲಿ ಇರುವುದರಿಂದ ಅಲ್ಲಿನ ಶಾಸಕ ಎಚ್‌.ಡಿ.ರೇವಣ್ಣ, ಶ್ರವಣಬೆಳಗೊಳ ವಿಧಾನ ಸಭಾ ಕ್ಷೇತ್ರದ ಸಿ.ಎನ್‌.ಬಾಲಕೃಷ್ಣ ಹಾಗೂ ತಾಲೂಕಿನ ಮಗನಾಗಿರುವ ಜಿಲ್ಲೆಯ ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹೀಗೆ ತಾಲೂಕಿಗೆ ಒಟ್ಟು ಮೂರು ಮಂದಿ ಶಾಸಕರಿದ್ದರೂ ಗ್ರಾಮೀಣ ಭಾಗದ ಜನತೆ ಫ್ಲೋರೈಡ್‌ ನೀರು ಕುಡಿಯುವುದ ತಪ್ಪಿಸಲಾಗುತ್ತಿಲ್ಲ.

ಕೆಆರ್‌ಐಡಿಎಲ್‌ ವತಿಯಿಂದ ನಿರ್ಮಾಣ ಮಾಡಿರುವ ನೀರಿನ ಘಟಕ ನಿರ್ವಹಣೆ ಇಲ್ಲದೇ ಸ್ಥಗಿತವಾಗಿದೆ. ಅಧಿಕಾರಿಗೆ ಈಗಾಗಲೆ ಪತ್ರ ಬರೆಯಲಾಗಿದೆ. ನಿರ್ವಹಣೆ ಮಾಡಲು ಸಾಧ್ಯವಾಗದಿದ್ದರೆ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಗೆ ಹಸ್ತಾಂತರ ಮಾಡುವಂತೆ ಪತ್ರ ಬರೆದರೂ ಯಾವುದೇ ಪ್ರಯೋಜವಾಗಿಲ್ಲ.
-ನಳಿನಿ, ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

ಕುಡಿಯುವ ನೀರಿನ ಘಟಕ ಕೆಟ್ಟು ತಿಂಗಳು ಸಮೀಪಿಸುತ್ತಿದ್ದರೂ ಇದರ ದುರಸ್ತಿ ಮಾಡಲು ಮುಂದಾಗುತ್ತಿಲ್ಲ. ಈಗಾಗಲೇ ಎರಡು ಬಾರಿ ಗ್ರಾಮ ಪಂಚಾಯಿತಿ ಗಮನಕ್ಕೆ ತರಲಾಗಿದೆ. ಆದರೂ ಯಾವುದೇ ಪ್ರಯೋಜನವಿಲ್ಲ, ಶುದ್ಧ ಕುಡಿಯುವ ನೀರು ಇಲ್ಲದೇ ಇರುವುದರಿಂದ ನಿತ್ಯವೂ ಮನೆಯಲ್ಲಿ ಕೊಳವೆ ಬಾವಿ ನೀರು ಕುಡಿಯುತ್ತಿದ್ದೇವೆ.
-ಸುರೇಶ, ಬಳದರೆ ಗ್ರಾಮ

* ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next