ನವದೆಹಲಿ: ಕಾಂಗ್ರೆಸ್ ನಲ್ಲಿ ಇದೀಗ ನಾಯಕತ್ವ ಬದಲಾವಣೆ ಕೂಗು ಜೋರಾಗಿ ಕೇಳಿಬರುತ್ತಿದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸೇರಿದಂತೆ ಪಕ್ಷದ 23 ಉನ್ನತ ನಾಯಕರು ಪಕ್ಷದ ಸ್ಥಿತಿಗತಿಗಳ ಬಗ್ಗೆ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ.
ಸಿಡಬ್ಲ್ಯೂಸಿ ಸೋಮವಾರ (24-8-2020) ಸಭೆ ಕರೆದಿದ್ದು, ಪಕ್ಷದ ಪ್ರತಿ ಹಂತದಲ್ಲೂ ಬದಲಾವಣೆ ತರುವ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ವರದಿ ತಿಳಿಸಿದೆ. ಈಗಾಗಲೇ ಪಕ್ಷವನ್ನು ನಡೆಸುತ್ತಿರುವ ವಿಧಾನದ ಬಗ್ಗೆ ಉನ್ನತ ನಾಯಕರು ಕಿಡಿಕಾರಿದ್ದಾರೆ.
ಸದ್ಯ ಪರಿಣಾಮಕಾರಿ ನಾಯಕತ್ವದ ಅಗತ್ಯತೆ ಇದೆ. ಅದರ ಜೊತೆಗೆ ಸ್ಪಷ್ಟವಾದ ಕಾರ್ಯವಿಧಾನ ರೂಪಿಸಬೇಕಾದ ಅನಿವಾರ್ಯತೆಯಿದೆ. ಸಿಡಬ್ಲ್ಯುಸಿಯನ್ನು ಮರು ಆಯ್ಕೆ ಮಾಡುವುದು ಮತ್ತು ಜವಾಬ್ದಾರಿಯುತ ಹಾಗೂ ಪರಿಣಾಮಕಾರಿ ಸಾಮೂಹಿಕ ವ್ಯವಸ್ಥೆಯನ್ನು ತರಬೇಕೆಂದು ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
ರಾಹುಲ್ ಗಾಂಧಿಯವರಿಗೆ ಮತ್ತೊಮ್ಮೆ ಅಧ್ಯಕ್ಷ ಸ್ಥಾನ ನೀಡುವುದು ಪಕ್ಷದ ಒಂದು ಬಣಕ್ಕೆ ವಿರೋಧವಿದೆ ಎನ್ನಲಾಗಿದೆ. ಸಭೆಯಲ್ಲಿ ಸೋನಿಯಾ ಗಾಂಧಿಯನ್ನು ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಲು ಮನವೊಲಿಸುವ ಸಾಧ್ಯತೆಯೂ ಇದೆ. ಅದಾಗ್ಯೂ ವಿಧಾನಸಭಾ ಚುನಾವಣೆಗಳು ಸೇರಿದಂತೆ ಮುಂದಿನ ದಿನಗಳಲ್ಲಿ ಹೆಚ್ಚಿನ ರಾಜಕೀಯ ಚಟುವಟಿಕೆಗಳು ಬರಲಿರುವುದರಿಂದ ಪಕ್ಷದ ಎಲ್ಲಾ ನಿರ್ಧಾರಗಳು ಭವಿಷ್ಯದ ದೃಷ್ಟಿಯಿಂದ ಮಹತ್ವದೆನಿಸುತ್ತದೆ.
ಆದರೇ ಪಕ್ಷದ ಮೂಲಗಳ ಪ್ರಕಾರ ಡಾ. ಮನಮೋಹನ್ ಸಿಂಗ್ ಅಥವಾ ಎಕೆ ಆ್ಯಂಟನಿ ರಂತಹ ಹಿರಿಯ ನಾಯಕರನ್ನು ಪಕ್ಷವನ್ನು ಮುನ್ನಡೆಸುವಂತೆ ಒತ್ತಾಯಿಸುವ ಸಾಧ್ಯತೆಯೂ ಇದೆ ಎಮದು ವರದಿ ತಿಳಿಸಿದೆ.