ನವದೆಹಲಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆದೇಶದ ಹಿನ್ನೆಲೆಯಲ್ಲಿ ದೆಹಲಿ ಮಹಿಳಾ ಆಯೋಗದಲ್ಲಿನ 223 ಉದ್ಯೋಗಿಗಳನ್ನು ತಕ್ಷಣವೇ ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Vijayapura; ಯತ್ನಾಳಗೆ ರಾಜಕೀಯ ಅಧಿಕಾರ ತಪ್ಪಿಸುವಲ್ಲಿ ಜಿಗಜಿಣಗಿ ಕೈವಾಡ: ಬಳ್ಳೊಳ್ಳಿ ಆರೋಪ
2017ರಲ್ಲಿ ವಿಚಾರಣೆ ನಡೆಸಿ ಲೆಫ್ಟಿನೆಂಟ್ ಗವರ್ನರ್ ಗೆ ವರದಿ ಒಪ್ಪಿಸಲಾಗಿತ್ತು. ಇದೀಗ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಉದ್ಯೋಗಿಗಳನ್ನು ವಜಾಗೊಳಿಸುವುದಕ್ಕೆ ಅಂಕಿತ ಹಾಕಿದ ನಂತರ ಆದೇಶವನ್ನು ಜಾರಿಗೊಳಿಸಲಾಗಿದೆ ಎಂದು ವರದಿ ವಿವರಿಸಿದೆ.
ವರದಿಯ ಪ್ರಕಾರ, ಅಂದಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್, ಹಣಕಾಸು ಇಲಾಖೆ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರ ಅನುಮತಿ ಇಲ್ಲದೇ ಈ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಂಡಿದ್ದರು ಎಂದು ತಿಳಿಸಿದೆ.
ಡಿಸಿಡಬ್ಲ್ಯು ಕಾಯ್ದೆ ಪ್ರಕಾರ ಕೇವಲ 40 ಹುದ್ದೆಗಳನ್ನು ಮಾತ್ರ ಮಂಜೂರು ಮಾಡಲಾಗಿತ್ತು. ಆದರೆ ಹೆಚ್ಚುವರಿ ಉದ್ಯೋಗಿಗಳ ನೇಮಕಾತಿಗೆ ಯಾವುದೇ ಅನುಮತಿ ಪಡೆದುಕೊಂಡಿರಲಿಲ್ಲ ಎಂದು ಆದೇಶದಲ್ಲಿ ನಮೂದಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಆಯೋಗಕ್ಕೆ ಗುತ್ತಿಗೆ ಆಧಾರದ ಮೇಲೆ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುವ ಅಧಿಕಾರ ಇಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಆಮ್ ಆದ್ಮಿ ಪಕ್ಷದ ಸಂಸದೆಯಾಗಿ ರಾಜ್ಯಸಭೆ ಪ್ರವೇಶಿಸುವ ಮೊದಲ ಮಾಲಿವಾಲ್ ಸುಮಾರು 9 ವರ್ಷಗಳ ಕಾಲ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದರು. ಪ್ರಸ್ತುತ ಆಯೋಗದ ಅಧ್ಯಕ್ಷೆ ಹುದ್ದೆ ಖಾಲಿ ಇದ್ದಿರುವುದಾಗಿ ವರದಿ ತಿಳಿಸಿದೆ. ಉದ್ಯೋಗದ ನೇಮಕಾತಿ ಬಗ್ಗೆ ಹಣಕಾಸು ಇಲಾಖೆಯ ಅನುಮತಿ ಅಗತ್ಯ ಎಂದು ಸಲಹೆ ನೀಡಲಾಗಿತ್ತು ಎಂದು ವರದಿ ತಿಳಿಸಿದೆ.