ವರದಿ: ಹೇಮರಡ್ಡಿ ಸೈದಾಪುರ
ಹುಬ್ಬಳ್ಳಿ: ನೌಕರರ ಮುಷ್ಕರ, ಕೋವಿಡ್ ಲಾಕ್‌ಡೌನ್‌ನಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಬರೋಬ್ಬರಿ 221.75 ಕೋಟಿ ರೂ. ಸಾರಿಗೆ ಆದಾಯ ಖೋತಾ ಆಗಿದ್ದು, 55 ದಿನಗಳ ಲಾಕ್‌ಡೌನ್ ಪರಿಣಾಮ ಸುಮಾರು 8.38 ಕೋಟಿ ಕಿಲೋಮೀಟರ್ ಬಸ್ ಸಂಚಾರ ರದ್ದಾಗಿದೆ.
ಕೋವಿಡ್ ಮೊದಲ ಅಲೆಯ ಲಾಕ್‌ಡೌನ್ ನಿಂದ ಆರ್ಥಿಕ ಸಂಕಷ್ಟ ಕ್ಕೊಳಗಾಗಿದ್ದ ಸಂಸ್ಥೆಗೆ ನೌಕರರ ಮುಷ್ಕರ, ನಂತರ ಎರಡನೇ ಅಲೆಯ ಲಾಕ್‌ಡೌನ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ನೂಕಿದೆ. ಮೊದಲ ಲಾಕ್‌ಡೌನ್ ವೇಳೆ 56 ದಿನಗಳಲ್ಲಿ 9.31 ಕೋಟಿ ಕಿಲೋಮೀಟರ್ ರದ್ದಾಗಿ 336.19 ಕೋಟಿ ರೂ. ಖೋತಾ ಆಗಿತ್ತು. ಎರಡನೇ ಬಾರಿ 55 ದಿನಗಳ ಲಾಕ್‌ಡೌನ್ ನಿಂದ 8.38 ಕೋಟಿ ಕಿಲೋಮೀಟರ್ ರದ್ದಾಗಿ 221.75 ಕೋಟಿ ರೂ. ಹಾಗೂ 14 ದಿನಗಳ ನೌಕರರ ಮುಷ್ಕರದಿಂದ 66.03 ಕೋಟಿ ರೂ. ಸೇರಿದಂತೆ ಒಟ್ಟು 287.78 ಕೋಟಿ ರೂ. ಸಾರಿಗೆ ಆದಾಯ ಖೋತಾ ಆಗಿದೆ.
ಏಪ್ರಿಲ್ ತಿಂಗಳಲ್ಲಿ 12.09 ಕೋಟಿ, ಮೇ 124.98 ಕೋಟಿ ಹಾಗೂ ಜೂನ್ ತಿಂಗಳಲ್ಲಿ 84.66 ಕೋಟಿ ರೂ. ಸಾರಿಗೆ ಆದಾಯ ಖೋತಾ ಆಗಿದೆ. ಸಂಸ್ಥೆ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಸಾರಿಗೆ ಆದಾಯ ಹೊಂದಿದ್ದ ಬಾಗಲಕೋಟೆ ವಿಭಾಗಕ್ಕೆ 33.35 ಕೋಟಿ, ಬೆಳಗಾವಿ 31.56 ಕೋಟಿ, ಚಿಕ್ಕೋಡಿ 28.17 ಕೋಟಿ, ಹುಬ್ಬಳ್ಳಿ ಗ್ರಾಮೀಣ 23.03 ಕೋಟಿ, ಬಿಆರ್‌ಟಿಎಸ್ ವಿಭಾಗಕ್ಕೆ 11.47 ಕೋಟಿ ರೂ. ಸಾರಿಗೆ ಆದಾಯ ಖೋತಾ ಆಗಿದೆ. ಸಂಸ್ಥೆ ವ್ಯಾಪ್ತಿಯಲ್ಲಿ ಅಂತಾರಾಜ್ಯ ಸಾರಿಗೆ ಸೇವೆಯೇ ಲಾಭದಾಯಕವಾಗಿದ್ದು, ಅಕ್ಕಪಕ್ಕದ ರಾಜ್ಯಗಳು ಹೊರ ರಾಜ್ಯ ಸಾರಿಗೆ ಸೇವೆಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಅಂತಾರಾಜ್ಯ ಸಾರಿಗೆ ಸೇವೆಗೆ ಅವಕಾಶ ನೀಡಲಿಲ್ಲ. ಹೀಗಾಗಿ ಸಂಸ್ಥೆಯಿಂದ ಮಹಾರಾಷ್ಟ್ರ-503, ಗೋವಾ-84, ತೆಲಂಗಾಣ-50, ಆಂಧ್ರಪ್ರದೇಶ-37, ತಮಿಳುನಾಡು-6 ಅನುಸೂಚಿಗಳು ಸದ್ಯಕ್ಕೆ ಆರಂಭವಾಗುವ ಲಕ್ಷಣಗಳಿಲ್ಲ. ಈ ಸಾರಿಗೆ ಸೇವೆ ಆರಂಭವಾದರೆ ಸಂಸ್ಥೆಗೆ ಒಂದಿಷ್ಟು ಆದಾಯ ಹೆಚ್ಚಾಗಲಿದೆ.
ಮುಷ್ಕರದ ಸಂಕಷ್ಟ: ಸಾರಿಗೆ ನೌಕರರು 14 ದಿನಗಳ ಕಾಲ ನಡೆಸಿದ ಮುಷ್ಕರದ ಪರಿಣಾಮ ಬರೋಬ್ಬರಿ 66.03 ಕೋಟಿ ರೂ. ಸಾರಿಗೆ ಆದಾಯ ಬರಲಿಲ್ಲ. ಕಾರ್ಮಿಕರ ಮುಷ್ಕರದ ನಡುವೆಯೂ ಒಂದಿಷ್ಟು ಬಸ್‌ಗಳನ್ನು ಸಂಚಾರ ಮಾಡಿದ ಪರಿಣಾಮ 15.40 ಕೋಟಿ ರೂ. ನಷ್ಟವಾಗಿದೆ. 14 ದಿನಗಳಲ್ಲಿ 8458 ಬಸ್‌ಗಳ ಸಂಚಾರದಿಂದ ಕೇವಲ 46.06 ಲಕ್ಷ ರೂ. ಸಾರಿಗೆ ಆದಾಯ ಬಂದಿದೆ. ಸಾಮಾನ್ಯ ದಿನಗಳಲ್ಲಿ ಒಂದು ಕಿಮೀ ಬಸ್ ಸಂಚಾರಕ್ಕೆ ಸುಮಾರು 41-42 ರೂ. ವೆಚ್ಚ ತಗಲುತ್ತದೆ. ಆದರೆ ಈ ಸಂದರ್ಭದಲ್ಲಿ ಪ್ರತಿ ಕಿಮೀಗೆ 115 ರೂ. ಖರ್ಚು ತಗುಲಿದೆ.
ಸಾಮಾನ್ಯ ದಿನಗಳಲ್ಲಿಯೇ ಸಂಸ್ಥೆ ಲಾಭದ ಮುಖ ನೋಡಲು ಸಾಧ್ಯವಾಗಿಲ್ಲ. ಇದೀಗ ಕೊರೊನಾ ಸೋಂಕಿನ ಸರಪಳಿ ತುಂಡರಿಸಲು ಶೇ.50 ಪ್ರಯಾಣಿಕರ ಸಂಚಾರಕ್ಕೆ ರಾಜ್ಯ ಸರಕಾರ ಅನುಮತಿ ನೀಡಿದೆ. ಪ್ರಯಾಣಿಕರ ಅಗತ್ಯತೆ ಮೇರೆಗೆ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಿದರೂ ಸಿಬ್ಬಂದಿ ವೇತನ, ಇಂಧನ, ಇನ್ನಿತರೆ ವೆಚ್ಚ ಅನಿವಾರ್ಯವಾಗಿವೆ. ಹೀಗಾಗಿ ಬಸ್‌ಗಳು ಸಂಚಾರ ಮಾಡಿದರೂ ಆರ್ಥಿಕ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ.