ದೇವದುರ್ಗ: ರಾಜ್ಯಾದ್ಯಂತ ಮಾಸಾಶನ ಕಾರ್ಯಕ್ರಮದ ಜತೆಗೆ 11 ಸಾವಿರಕ್ಕೂ ಹೆಚ್ಚು ನಿರ್ಗತಿಕ ಕುಟುಂಬಗಳಿಗೆ ವಾತ್ಸಲ್ಯ ಕಿಟ್ ವಿತರಿಸುವ ಮೂಲಕ ಗ್ರಾಮಾಭಿವೃದ್ಧಿ ಯೋಜನೆ ಮಾದರಿಯಾಗಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ರಾಯಚೂರು ಜಿಲ್ಲೆಯ ನಿರ್ದೇಶಕ ಸಂತೋಷ ಕುಮಾರ ಹೇಳಿದರು.
ತಾಲೂಕಿನ ಗಬ್ಬೂರು ಗ್ರಾಮ ವೃದ್ಧೆ ಕಸ್ತೂರಮ್ಮ ಸೇರಿ 22 ನಿರ್ಗತಿಕ ಕುಟುಂಬದ ಫಲಾನುಭವಿಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಕಿಟ್ ವಿತರಿಸಿ ಅವರು ಮಾತನಾಡಿದರು.
ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಾಲ ಸೌಲಭ್ಯಗಳನ್ನು ನೀಡಿ ಅವರನ್ನು ಅರ್ಥಿಕವಾಗಿ ಸಬಲೀಕರಣ ಮಾಡುವ ಮೂಲಕ ಸಂಸ್ಥೆ ಹಲವು ಬಗೆಯ ಸೌಲಭ್ಯಗಳು ನೀಡಿದೇ ಎಂದರು.
ಇತ್ತೀಚೆಗೆ ರಾಜ್ಯಾದ್ಯಂತ ನಿರ್ಗತಿಕರನ್ನು ಗುರುತಿಸಿ ಅವರ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು ತಲಾ 750ರಿಂದ 1000ರೂ. ವರೆಗೆ ಮಾಸಾಶನ ನೀಡಲಾಗುತ್ತದೆ. ಮಾಸಾಶನದೊಂದಿಗೆ ಈ ಬಾರಿ ಪಾತ್ರೆ, ತಲೆ ದಿಂಬು, ಹೊಂದಿಕೆ ಸೇರಿದಂತೆ ಮೂಲಭೂತ ಅವಶ್ಯಕ ವಸ್ತುಗಳನ್ನು ಒಳಗೊಂಡಿರುವ ವಾತ್ಸಲ್ಯ ಕಿಟ್ ವಿತರಿಸುವ ಮಹತ್ವದ ಕಾರ್ಯಕ್ರಮವನ್ನು ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಉತ್ತಮ ಸೇವೆ ನೀಡುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾದ್ಯಂತ 255 ಕುಟುಂಬಗಳಿಗೆ, ಕಲ್ಯಾಣ ಕರ್ನಾಟಕ ಭಾಗದ ಪ್ರಾದೇಶಿಕ ವಿಭಾಗದಲ್ಲಿ 1336, ರಾಜ್ಯಾದ್ಯಂತ 11287 ವಾತ್ಸಲ್ಯ ಸದಸ್ಯರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕಿಟ್‌ಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜೇಶ ಎಂ, ಚನ್ನು ಚಿಕ್ಕಮಠ, ನಾಗರಾಜ, ವೀರೇಶ, ಗ್ರಾಪಂ ಸದಸ್ಯ ಮಹಿಬೂಬು ಅಲಿ, ಅಮರಗುಂಡಪ್ಪ, ರಾಮು ಸೇರಿದಂತೆ ಇತರರು ಇದ್ದರು.