Advertisement
ತೃತೀಯ ಹಂತದ ಮೀನುಗಾರಿಕೆ ಜೆಟ್ಟಿಯನ್ನು ವ್ಯವಸ್ಥಿತವಾಗಿ ಪೂರ್ಣ ಪ್ರಮಾಣದಲ್ಲಿ ಮೀನು ಗಾರಿಕೆ ಚಟುವಟಿಕೆಗಳಿಗೆ ಬಳಕೆ ಮಾಡಲು ಇಲ್ಲಿ ಕೆಲವು ಮೂಲಸೌಕರ್ಯ ಕಾಮಗಾರಿಗಳು ತುರ್ತಾಗಿ ನಡೆಯಬೇಕಾಗಿದೆ. ಇದರಲ್ಲಿ ಮುಖ್ಯ ವಾಗಿ ಜೆಟ್ಟಿಯ ಆವರಣ ಕಾಂಕ್ರೀಟ್ ಕಾಮಗಾರಿ, ಸುಸಜ್ಜಿತ ರಸ್ತೆ, ನೀರು, ವಿದ್ಯುತ್ ಸಂಪರ್ಕ, ಆವರಣಗೋಡೆ, ಡ್ರೆಜ್ಜಿಂಗ್, ಶೌಚಾಲಯ ಸೌಲಭ್ಯಗಳು ಒಳಗೊಂಡಿದೆ. ಇದರ ಜತೆಗೆ ಮೀನುಗಾರರಿಗೆ ವಿಶ್ರಾಂತಿ ಕೊಠಡಿ, ಬಲೆ ದುರಸ್ತಿ ಶೆಡ್‌ಗಳ ನಿರ್ಮಾಣವೂ ಮೂಲ ಯೋಜನೆಯಲ್ಲಿ ಒಳಗೊಂಡಿವೆ. ಇದಕ್ಕಾಗಿ 22 ಕೋ.ರೂ. ವೆಚ್ಚದ ಯೋಜನೆ ಸಿದ್ಧಪಡಿಸಿ ಮೀನುಗಾರಿಕೆ ಇಲಾಖೆಯಿಂದ ಸರಕಾರಕ್ಕೆ ಸಲ್ಲಿಸಲಾಗಿತ್ತು. ಅಲ್ಲಿಂದ ಹಣಕಾಸು ಇಲಾಖೆಗೆ ಹೋಗಿದ್ದು, ಕೆಲವು ಪೂರಕ ಮಾಹಿತಿಗಳನ್ನು ಮೀನುಗಾರಿಕೆ ಇಲಾಖೆ ಕೇಳಿತ್ತು. ಈ ಮಾಹಿತಿಗಳನ್ನು ಮೀನುಗಾರಿಕೆ ಇಲಾಖೆ ಈಗಾಗಲೇ ಹಣಕಾಸು ಇಲಾಖೆಗೆ ರವಾನಿಸಿದ್ದು, ಇಲ್ಲಿಂದ ಆರ್ಥಿಕ ಅನುಮೋದನೆಯ ಬಳಿಕ ಸಚಿವ ಸಂಪುಟ ಸಭೆಗೆ ಸಲ್ಲಿಕೆಯಾಗಬೇಕಾಗಿದೆ.
ತೃತೀಯ ಹಂತದ ಜೆಟ್ಟಿಯಲ್ಲಿ ಪ್ರಸ್ತುತ ಮೀನುಗಾರಿಕೆ ದೋಣಿಗಳನ್ನು ನಿಲ್ಲಿಸಲಾಗುತ್ತಿದೆ. ಜತೆಗೆ ಮೀನಿನ ಎಣ್ಣೆ ಹಾಗೂ ಗೊಬ್ಬರಕ್ಕೆ ಹೋಗುವ ಮೀನುಗಳನ್ನು ಅಲ್ಲಿ ಇಳಿಸಲಾಗುತ್ತಿದೆ. ದ್ವಿತೀಯ ಹಂತದ ಜೆಟ್ಟಿಯಿಂದ ತೃತೀಯ ಹಂತ ಜೆಟ್ಟಿಗೆ ಹೋಗಲು ನಡುವೆ ಇರುವ ಕ್ರೀಕ್‌ಗೆ ಸುಸಜ್ಜಿತವಾದ ಸಂಪರ್ಕ ರಸ್ತೆ ಅಗತ್ಯವಿದ್ದು, ಪ್ರಸ್ತುತ ತಾತ್ಕಾಲಿಕವಾಗಿ ರಸ್ತೆ ನಿರ್ಮಾಣ ಮಾಡಿ ಅದರ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. ಇದಲ್ಲದೆ ಹೊಗೆಬಜಾರ್‌ನಲ್ಲಿ ಇರುವ ಸಂಪರ್ಕ ರಸ್ತೆಯನ್ನು ತೃತೀಯ ಹಂತದ ಜೆಟ್ಟಿಗೆ ಸಾಗಲು ಬಳಸಲಾಗುತ್ತಿದೆ. ಸ್ಥಳಾವಕಾಶದ ಸಮಸ್ಯೆ
ಮಂಗಳೂರು ಮೀನುಗಾರಿಕೆ ದಕ್ಕೆಯಲ್ಲಿ ಪರ್ಸಿನ್ ಹಾಗೂ ಟ್ರಾಲ್ ಸೇರಿ ಒಟ್ಟು 1,200 ಬೋಟುಗಳು ಮೀನುಗಾರಿಕೆ ಚಟುವಟಿಕೆಗಳನ್ನು ನಡೆಸುತ್ತಿವೆ. ಪ್ರಸ್ತುತ ಈ ದಕ್ಕೆಯಲ್ಲಿ ಕೇವಲ 300 ದೋಣಿಗಳಿಗೆ ಮಾತ್ರ ನಿಲ್ಲಲು ಅವಕಾಶವಿದ್ದು, ಸ್ಥಳಾವಕಾಶದ ಸಮಸ್ಯೆ ತೀವ್ರವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಇಲ್ಲಿ ಒಂದರ ಹಿಂದೆ ಮತ್ತೂಂದು ದೋಣಿಗಳು ಸರದಿ ಸಾಲಿನಲ್ಲಿ ನಿಲ್ಲಬೇಕಾಗುತ್ತವೆ. ಒಂದು ದೋಣಿ ಇನ್ನೊಂದಕ್ಕೆ ತಾಗಿ ಹಾನಿಗೊಳ್ಳುವ ಸಮಸ್ಯೆ ಇಲ್ಲಿ ಸರ್ವೆಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ದಕ್ಕೆಯ ದಕ್ಷಿಣ ಭಾಗದಲ್ಲಿ 750 ಮೀ. ಹಾಗೂ ಬೆಂಗ್ರೆಯಲ್ಲಿ 450 ಮೀ.ಉದ್ದದ ಜೆಟ್ಟಿಯ 3ನೇ ಹಂತದ ವಿಸ್ತರಣೆ ಕಾಮಗಾರಿಗೆ 2010ರಲ್ಲಿ ಚಾಲನೆ ನೀಡಲಾಗಿತ್ತು. ಯೋಜನೆಯ ವೇಳಾಪಟ್ಟಿಯಂತೆ 2015ಕ್ಕೆ ಪೂರ್ಣಗೊಂಡು ಉಪಯೋಗಕ್ಕೆ ಬಿಟ್ಟುಕೊಡಬೇಕಾಗಿತ್ತು. ಆದರೆ ಕೆಲವು ತಾಂತ್ರಿಕ ಸಮಸ್ಯೆ ಹಾಗೂ ಕಾನೂನು ಸಮಸ್ಯೆಗಳಿಂದಾಗಿ ಕಾಮಗಾರಿ ಕುಂಟುತ್ತಾ ಸಾಗಿತ್ತು.
Related Articles
ತೃತೀಯ ಹಂತದ ಮೀನುಗಾರಿಕೆ ಜೆಟ್ಟಿಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಕುರಿತಂತೆ ಮೀನುಗಾರಿಕೆ ಇಲಾಖೆ ರೂಪಿಸಿರುವ 22 ಕೋ.ರೂ. ಯೋಜನೆ ಅನುಮೋದನೆಯ ಹಂತದಲ್ಲಿದೆ. ಪ್ರಸ್ತುತ ಯೋಜನೆ ಕಡತ ರಾಜ್ಯ ಸರಕಾರದ ಆರ್ಥಿಕ ಇಲಾಖೆಯಲ್ಲಿದ್ದು ,ಇಲ್ಲಿ ಆರ್ಥಿಕ ಮಂಜೂರಾತಿಗೆ ಸಂಬಂಧಪಟ್ಟ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಅನುಮೋದನೆಗಾಗಿ ಸಚಿವ ಸಂಪುಟಕ್ಕೆ ರವಾನೆಯಾಗಲಿದ್ದು ಶೀಘ್ರ ಅನುಷ್ಠಾನಕ್ಕೆ ಬರುವ ನಿರೀಕ್ಷೆ ಇದೆ.
-ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ಮತ್ತು ಬಂದರು ಸಚಿವರು
Advertisement