Advertisement

21 ಸಾ. ಮರ ನೆಟ್ಟು ಬನ್ನಿ

03:45 AM Jan 21, 2017 | |

ಹೊಸದಿಲ್ಲಿ: ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ, ರಾಜ್ಯ ಸರಕಾರ, ನೀರಾವರಿ ನಿಗಮದ ನಡವಳಿಕೆ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ, ಸರಕಾರಗಳ ನಡೆಯನ್ನು ಕಟು ಶಬ್ದಗಳಲ್ಲಿ ತರಾಟೆಗೆ ತೆಗೆದುಕೊಂಡಿದೆ.

Advertisement

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಮುಖ್ಯಸ್ಥ ನ್ಯಾಯಮೂರ್ತಿ ಸ್ವತಂತ್ರ ಕುಮಾರ್‌, ನ್ಯಾ| ರಾಘವೇಂದ್ರ ರಾಥೋಡ್‌ ಮತ್ತು ತಜ್ಞ ಸದಸ್ಯ ಅಜಯ್‌ ದೇಶಪಾಂಡೆ ಅವರಿದ್ದ ಪೀಠ ಎತ್ತಿದ ಪ್ರಶ್ನೆಗಳಿಗೆ ಸರಕಾರಗಳ ಪರ ವಕೀಲರು ತಡಬಡಾಯಿಸಿದರು. ಮಾತ್ರವಲ್ಲ, ಅರಣ್ಯ ಮತ್ತು ಪರಿಸರ ಸಚಿವಾಲಯದ ವಕೀಲರು ಕ್ಷಮೆ ಕೋರಿದರು. ಬಳಿಕ, ಪ್ರಕರಣದ ವಿಚಾರಣೆಯನ್ನು ಫೆ. 6ಕ್ಕೆ ಮುಂದೂಡಿತು.
ವಿಚಾರಣೆ ವೇಳೆ, ಕಡಿದ ಮರಗಳಿಗೆ ಪರ್ಯಾಯವಾಗಿ ಗಿಡ ನೆಡದಿರುವುದು, ಕುಡಿಯುವ ನೀರಿನ ಯೋಜನೆಗೆ ಪರಿಸರ ಪರಿಣಾಮ ಅಗತ್ಯವಿಲ್ಲ ಎಂಬ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ರಾಜ್ಯ ವಿಫ‌ಲವಾಯಿತು. ಅಲ್ಲದೆ, ಯೋಜನಾ ಪ್ರದೇಶಗಳಲ್ಲಿ ಮರ ಕಡಿಯುವುದರಿಂದ ಪರಿಸರದ ಮೇಲೆ ಯಾವ ರೀತಿಯ ಪರಿಣಾಮ ಆಗಲಿದೆ ಎಂಬ ತಜ್ಞರ ವರದಿಯನ್ನು ಉಲ್ಲೇಖೀಸಲಿಲ್ಲ. ಇದು ನ್ಯಾಯ ಮಂಡಳಿಯ ಕೆಂಗಣ್ಣಿಗೆ ಕಾರಣವಾಯಿತು.

ಶುಕ್ರವಾರ ವಿಚಾರಣೆಯ ಆರಂಭ ದಲ್ಲಿ ರಾಜ್ಯ ನೀರಾವರಿ ನಿಗಮದ ಪರ ವಕೀಲ ನವೀನ್‌ ಆರ್‌. ನಾಥ್‌, ಎತ್ತಿನಹೊಳೆ ಯೋಜನೆ ಕುಡಿಯುವ ನೀರಿನ ಯೋಜನೆ. ನೇತ್ರಾವತಿ ನದಿಯ ಮೂಲಕ ಸಮುದ್ರಕ್ಕೆ ಸೇರುವ 400 ಟಿಎಂಸಿ ನೀರಿನಲ್ಲಿ ಕೇವಲ 24 ಟಿಎಂಸಿ ನೀರನ್ನು ಮಾನ್ಸೂನ್‌ ಅವಧಿಯಲ್ಲಿ ರಾಜ್ಯದ ಬಯಲು ಸೀಮೆಗಳಿಗೆ ಹರಿಸುವ ಯೋಜನೆ. ಈ ಯೋಜನೆಗೆ ಮೊದಲ ಹಂತದ ಪರಿಸರ ಅನುಮತಿ ಕೂಡ ಲಭಿಸಿದೆ ಎಂದರು.

ನ್ಯಾ| ಸ್ವತಂತ್ರ ಕುಮಾರ್‌, ಕುಡಿಯುವ ನೀರಿನ ಯೋಜನೆಗೆ ನೀವ್ಯಾಕೆ ಅಡ್ಡಿಪಡಿಸುತ್ತೀರಿ ಎಂದು ಅರ್ಜಿದಾರರ ಪರ ವಕೀಲರನ್ನು ಕೇಳಿದರು. ಅರ್ಜಿದಾರ ಕೆ. ಎನ್‌. ಸೋಮಶೇಖರ್‌ ಪರ ವಕೀಲ ಋತ್ವಿಕ್‌ ದತ್ತಾ, ಎತ್ತಿನಹೊಳೆ ಯೋಜನೆಗೆ ಅನೇಕ ಪರಿಸರ ಸಂಬಂಧಿ ಕಾಯ್ದೆ, ನಿಯಮಗಳನ್ನು ಉಲ್ಲಂ ಸುತ್ತಿದೆ ಎಂದು ನ್ಯಾಯ ಮಂಡಳಿ ಗಮನಕ್ಕೆ ತಂದರು.

ನೀರಾವರಿ ನಿಗಮದ ವಕೀಲರು, “ನಮಗೆ 12,000 ಮರಗಳನ್ನು ಕಡಿಯಲು ಅನುಮತಿ ಇದ್ದರೂ ನಾವು ಕೇವಲ 7,000 ಮರಗಳನ್ನು ಕಡಿದಿದ್ದೇವೆ, ನಮ್ಮಿಂದ ಪರಿಸರ ಕಾಯ್ದೆಗಳ ಉಲ್ಲಂಘನೆ ಆಗುತ್ತಿಲ್ಲ’ ಎಂದು ಸಮರ್ಥಿಸಿಕೊಳ್ಳಲು ಮುಂದಾದರು. ಮಧ್ಯ ಪ್ರವೇಶಿಸಿದ ನ್ಯಾ| ಕುಮಾರ್‌, “ಹಾಗಿದ್ದರೆ ನೀವು 21,000 ಮರಗಳನ್ನು ನೆಟ್ಟಿದ್ದೀರಾ’ ಎಂದು ಕೇಳಿದರು. ಇದಕ್ಕೆ ಸರಕಾರದ ಪರ ವಕೀಲರಿಂದ ನಕಾರಾತ್ಮಕ ಉತ್ತರ ಬರುತ್ತಿದ್ದಂತೆ,  ಮೊದಲು 21,000 ಮರಗಳನ್ನು ನೆಟ್ಟು ಬಳಿಕ ಇಲ್ಲಿಗೆ ಬನ್ನಿ ಎಂದು ರಾಜ್ಯ ಸರಕಾರಕ್ಕೆ ಬಿಸಿ ಮುಟ್ಟಿಸಿದರು. ನೀರಾವರಿ ನಿಗಮದ ವಕೀಲರು, ಮುಂಗಾರು ಮಳೆ ಸಂದರ್ಭದಲ್ಲಿ ಮಾತ್ರ ಗಿಡ ನೆಡಲು ಸಾಧ್ಯ ಎಂದು ನ್ಯಾಯ ಮಂಡಳಿಗೆ ಅರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದರು. ಹಾಗಿದ್ದರೆ, ಕಳೆದ ವರ್ಷ ಮುಂಗಾರು ಮಳೆ ಇರಲಿಲ್ಲವೇ ಎಂದು ನ್ಯಾಯಮೂರ್ತಿಗಳು ಕೇಳಿದ ಪ್ರಶ್ನೆಗೆ ರಾಜ್ಯ ಸರಕಾರ ಪರ ವಕೀಲರಲ್ಲಿ ಉತ್ತರ ಇರಲಿಲ್ಲ.

Advertisement

ಕ್ಷಮೆ ಕೇಳಿದ ವಕೀಲರು
ನ್ಯಾಯಾಧಿಕರಣದ ನಿರ್ದೇಶನದ ಮೇರೆಗೆ ಜನವರಿ ಮೊದಲ ವಾರದಲ್ಲಿ ಎತ್ತಿನಹೊಳೆ ಯೋಜನೆ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಸಮೀಕ್ಷೆ ನಡೆಸಿದ್ದ ವರದಿಯಲ್ಲಿನ ಮಾಹಿತಿ ಜಾಳು, ಜಾಳಾಗಿದ್ದುದು ನ್ಯಾಯ ಮಂಡಳಿ ಕಣ್ಣು ಕೆಂಪಾಗುವಂತೆ ಮಾಡಿತು. ವರದಿಯಲ್ಲಿದ್ದ ಅಂಶಗಳ ಬಗ್ಗೆ ವಕೀಲರಿಗೂ ನಿಖರ ಮಾಹಿತಿ ಇರಲಿಲ್ಲ. ಇದಕ್ಕಾಗಿ ಪರಿಸರ ಮತ್ತು ಅರಣ್ಯ ಸಚಿವಾಲಯದ ವಕೀಲ ಶಂಕರ್‌ ರಸ್ತೋಗಿ ಕ್ಷಮೆಯನ್ನೂ ಕೇಳಿದರು.

ಕಡತಗಳನ್ನು ಹೊರಗೆ ಬಿಸಾಕುತ್ತೇನೆ
ಯೋಜನೆಗೆ ಸಂಬಂಧಿಸಿದಂತೆ ಬಿರುಸಿನ ವಾದ ಪ್ರತಿವಾದ ನಡೆಯು ತ್ತಿತ್ತು. ನ್ಯಾಯ ಮಂಡಳಿ ಮುಂದೆ ತಮ್ಮ ಅಂಶಗಳನ್ನು ಮಂಡಿಸಲು ವಕೀಲರು  ತೀವ್ರ ಪೈಪೋಟಿ ನಡೆಸುತ್ತಿದ್ದರು. ಒಂದೇ ಬಾರಿ ಇಬ್ಬರು- ಮೂವರು ವಕೀಲರು ಮಾತನಾಡುತ್ತಿದ್ದರು. ಇದರಿಂದ ರೋಸಿಹೋದ ನ್ಯಾ| ಕುಮಾರ್‌, ನೀವು ಹೀಗೆ ವಾದಿಸಿದರೆ ನಿಮ್ಮ ಪ್ರಕರಣದ ಕಡತಗಳನ್ನು ಹೊರಗೆ ಬಿಸಾಕುತ್ತೇನೆ, ನಿಮ್ಮನ್ನು ಕೂಡ ಎಂದು ಗುಡುಗಿದರು. ಆ ಬಳಿಕ ವಕೀಲರು ಶಿಸ್ತುಬದ್ಧವಾಗಿ ವಾದಿಸಿದರು.

ರಾಕೇಶ್‌ ಎನ್‌. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next