Advertisement

Sakleshpura ಇಂದಿನಿಂದ ನೀರೆತ್ತಿನ ಹೊಳೆ; ಸಿದ್ದು 2.0 ಸರಕಾರದ ಅತೀ ದೊಡ್ಡ ಭರವಸೆ ಜಾರಿ

01:16 AM Sep 06, 2024 | Team Udayavani |

ದೊಡ್ಡನಗರ (ಸಕಲೇಶಪುರ): ಒಂದೆಡೆ ವರ್ಷ ಕಳೆದರೂ ಕಲ್ಯಾಣ ಕಾರ್ಯಕ್ರಮಗಳಿಗೇ ಸೀಮಿತ ಎಂಬ ಅಪವಾದ. ಮತ್ತೊಂದೆಡೆ ಮುಖ್ಯ ಮಂತ್ರಿ ಸೇರಿ ಸರಕಾರದ ಮೇಲೆ ಸರಣಿ ಹಗರಣಗಳ ಆರೋಪ. ಈ ಕರಿಮೋಡದ ಅಂಚಿನಲ್ಲಿ ಈಗ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆ ಮೂಲಕ ಅಭಿವೃದ್ಧಿಯ “ಬೆಳ್ಳಿಗೆರೆ’ ಮೂಡುತ್ತಿದೆ. ಇದು ಬರದ ನಾಡಿಗೆ ನೀರನ್ನು ಹರಿಸುವುದರ ಜತೆಗೆ ಸರಕಾರಕ್ಕೆ ಅಭಿವೃದ್ಧಿಯ ಗರಿಯನ್ನು ಮುಡಿಸಲಿದೆ.

Advertisement

ಎತ್ತಿನಹೊಳೆಯಿಂದ ಹರಿಯುವ ನೀರನ್ನು ಎತ್ತುವ ಪ್ರಮುಖ ಘಟ್ಟಕ್ಕೆ ಸರ ಕಾರ ಗೌರಿ ಹಬ್ಬದಂದು ಚಾಲನೆ ನೀಡಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಯ 1ನೇ ಹಂತವನ್ನು ಶುಕ್ರ ವಾರ ಮಧ್ಯಾಹ್ನ 1 ಗಂಟೆಗೆ ಸಕಲೇಶ ಪುರ ತಾಲೂಕಿನ ಹೆಬ್ಬನಹಳ್ಳಿ ಬಳಿ ನಡೆ ಯುವ ಬೃಹತ್‌ ಸಮಾರಂಭದಲ್ಲಿ ಲೋಕಾರ್ಪಣೆ ಮಾಡುವರು. ಬಳಿಕ ಹೆಬ್ಬನಹಳ್ಳಿ ವಿತರಣ ತೊಟ್ಟಿ 4ರಲ್ಲಿ ಗಂಗೆಗೆ ಬಾಗಿನ ಅರ್ಪಿಸುವ ಮೂಲಕ ಅಪರಾಹ್ನ 2 ಗಂಟೆಗೆ ಎತ್ತಿನಹೊಳೆ ಸಮಗ್ರ ಕುಡಿಯವ ನೀರಿನ ಯೋಜನೆಗೆ ಅಧಿ ಕೃತ ಚಾಲನೆ ದೊರೆ ಯ ಲಿದೆ. ಈ ಮೂಲಕ ಕುಡಿಯುವ ನೀರಿನ ತತ್ವಾರ ಇರುವ ಬೆಂಗಳೂರು ಗ್ರಾಮಾಂತರ ಸಹಿತ ಏಳು ಜಿಲ್ಲೆಗಳಿಗೆ ನೀರು ಪೂರೈಕೆ ಆಗಲಿದೆ.

ಇದರಿಂದ ಹಲವು ದಶಕಗಳ ಕನಸು ಸಾಕಾರಗೊಳ್ಳುವ ಕಾಲ ಸನ್ನಿಹಿತವಾಗಿದೆ. ಅಧಿಕಾರಕ್ಕೆ ಬಂದು ಒಂದೇ ವರ್ಷದಲ್ಲಿ ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿರುವುದಾಗಿ ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದರು. ಇದಕ್ಕಾಗಿ ವಾರ್ಷಿಕ 57 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ. ಆದರೂ ಇದುವರೆಗೆ ಎದ್ದುಕಾಣುವ ಯಾವುದೇ ಅಭಿವೃದ್ಧಿ ಯೋಜನೆ ಈ ಅವಧಿಯಲ್ಲಿ ಆಗಿಲ್ಲ ಎಂಬ ಕೊರಗು ಸ್ವತಃ ಸರಕಾರವನ್ನು ಕಾಡುತ್ತಿತ್ತು. ಇದು ವಿಪಕ್ಷಗಳಿಗೆ ಅಸ್ತ್ರವೂ ಆಗಿತ್ತು.

ಈ ಮಧ್ಯೆಯೇ ಮುಖ್ಯಮಂತ್ರಿ ವಿರುದ್ಧ ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಅಭಿಯೋಜನೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಇದು ನ್ಯಾಯಾಲಯದ ಮೆಟ್ಟಿಲು ಏರಿದೆ. ಇದಕ್ಕೂ ಮುನ್ನ ವಾಲ್ಮೀಕಿ ಹಗರಣದಲ್ಲಿ ಒಬ್ಬ ಸಚಿವರ ತಲೆದಂಡವೂ ಆಗಿದೆ. ಎಂ.ಬಿ. ಪಾಟೀಲ್‌, ಪ್ರಿಯಾಂಕ್‌ ಖರ್ಗೆ ಮತ್ತಿತರ ಸಚಿವರ ಮೇಲೆಯೂ ಸಿಎ ನಿವೇಶನ ಮಂಜೂರು ಮತ್ತಿತರ ಆರೋಪಗಳು ಕೇಳಿಬರುತ್ತಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸರಕಾರ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದೆ. ಇದು ಕಾಂಗ್ರೆಸ್‌ ನಡೆಸುತ್ತಿರುವ ತನ್ನ ರಾಜಕೀಯ ಹೋರಾಟಕ್ಕೆ ಸಾಕಷ್ಟು ಬಲ ತುಂಬಿದೆ. ಅದಕ್ಕೆ ಗೌರಿ ಹಬ್ಬ ಶುಭ ಘಳಿಗೆ ಆಗಲಿದೆ.

ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೂ ಎತ್ತಿನಹೊಳೆ ಯೋಜನೆ ರಾಜಕೀಯವಾಗಿ ಬಲ ತುಂಬಲಿದೆ. ತಮ್ಮ ಎದುರಾಳಿಗೆ ತಿರುಗೇಟು ಕೊಡಲು ಇದು ಮತ್ತೂಂದು ಅಸ್ತ್ರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮುಖ್ಯವಾಗಿ ಎತ್ತಿನಹೊಳೆ ಯೋಜನೆಯಡಿ ನೀರು 7 ಜಿಲ್ಲೆಗಳಿಗೆ ಪೂರೈಕೆಯಾಗಲಿದೆ. ಆ ಪ್ರದೇಶಗಳಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಜತೆಗೆ ತಮ್ಮ ನೇತೃತ್ವದಲ್ಲೇ ಮೊದಲ ಮತ್ತು ಮಹತ್ತರ ಅಭಿವೃದ್ಧಿ ಯೋಜನೆಯೊಂದಕ್ಕೆ ಚಾಲನೆ ನೀಡಲಾಯಿತು ಎಂಬ ಗರಿಮೆ ಕೂಡ ಡಿಸಿಎಂಗೆ ಸಿಗಲಿದೆ. ಬರುವ ಚನ್ನಪಟ್ಟಣ ಉಪಚುನಾವಣೆಯಲ್ಲಿ ಇದು ಪ್ರಭಾವ ಬೀರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇನ್ನು ಶಿವಕುಮಾರ್‌ ಸ್ವತಃ ಹೇಳಿರುವಂತೆ ಈ ಯೋಜನೆಗೆ ಹಲವು ನಾಯಕರು ಮತ್ತು ಪಕ್ಷಗಳು ಶ್ರಮಿಸಿವೆ. ಪಕ್ಷಬೇಧ ಮರೆತು ಅವರೆಲ್ಲರಿಗೂ ಆಹ್ವಾನ ನೀಡುವ ಮೂಲಕ ವಿಶ್ವಾಸ ಗಳಿಸಿಕೊಳ್ಳುವ ಪ್ರಯತ್ನ ಕೂಡ ನಡೆಸಿದ್ದಾರೆ. ಇದೆಲ್ಲದರ ಆಚೆಗೆ ರಾಜಕೀಯವಾಗಿ ಇದರ ಲಾಭವನ್ನು ಅವರು ಪಡೆಯಲಿದ್ದಾರೆ.

Advertisement

ದಶಕಗಳ ಹಿಂದೆ ಕರಾವಳಿ ಮೂಲದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಲಿ ಈ ಯೋಜನೆಗೆ ಬುನಾದಿ ಹಾಕಿದ್ದರು. ಆಗ ಚಿಕ್ಕಬಳ್ಳಾಪುರ ಸಂಸದರಾಗಿದ್ದ ಅವರು ಆ ಕ್ಷೇತ್ರದ ಜನರಿಗೆ ಎತ್ತಿನಹೊಳೆ ನೀರು ಹರಿಸುವುದಾಗಿ ವಾಗ್ಧಾನ ನೀಡಿದ್ದರು. ಈಗ ಅದೇ ಕಾಂಗ್ರೆಸ್‌ ಅವಧಿಯಲ್ಲಿ ಯೋಜನೆಯ ಪ್ರಮುಖ ಘಟ್ಟಕ್ಕೆ ಚಾಲನೆ ದೊರೆಯುತ್ತಿದೆ.

ಯೋಜನೆ ಮುಖ್ಯಾಂಶಗಳು
-2010ರಲ್ಲಿ ಎತ್ತಿನಹೊಳೆ ಯೋಜನೆ ಪ್ರಸ್ತಾವನೆ
– 2014ರ ಮಾರ್ಚ್‌ನಲ್ಲಿ ಶಂಕುಸ್ಥಾಪನೆ
– 2012ರಲ್ಲಿ 8,323 ಕೋಟಿ ರೂ. ಅನುಮೋದನೆ
– 2022ರಲ್ಲಿ ವೆಚ್ಚ 23,252 ಕೋ.ರೂ.ಗೆ ಪರಿಷ್ಕರಣೆ
– 2027ರ ಮಾರ್ಚ್‌ಗೆ ಯೋಜನೆ ಮುಕ್ತಾಯ ನಿರೀಕ್ಷೆ

-ವಿಜಯ ಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next