Advertisement

208 ಕೋಟಿ ರೂಪಾಯಿ ದಂಡ ಸಂಗ್ರಹ!

06:05 AM Aug 13, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಅಕ್ರಮ ಕಲ್ಲು ಹಾಗೂ ಗ್ರಾನೈಟ್‌ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಳೆದ ನಾಲ್ಕು ತಿಂಗಳಲ್ಲಿ ನಾಲ್ಕು ಕಡೆ ಕಾರ್ಯಾಚರಣೆ ನಡೆಸಿ ಬರೋಬ್ಬರಿ 208 ಕೋಟಿ ರೂ. ದಂಡ ವಿಧಿಸಿದೆ.

Advertisement

ಕ್ವಾರಿ ಯೋಜನೆ ಉಲ್ಲಂಘನೆ ಹಾಗೂ ಅನುಮತಿ ಪಡೆದ ಪ್ರಮಾಣಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಖನಿಜ ಹೊರತೆಗೆದಿರುವುದು, ಪರಿಸರ ನಿರಾಕ್ಷೇಪಣಾ ಯೋಜನೆ ಉಲ್ಲಂಘನೆ ಸೇರಿ ಇತರೆ ಅಕ್ರಮಗಳಿಗೆ ಈ ಮೂಲಕ ಶಿಸ್ತು ಕ್ರಮ ಕೈಗೊಂಡಿದೆ. ಬಹುಪಾಲು ದಂಡ ಮೊತ್ತವನ್ನು ಈಗಾಗಲೇ ಸಂಗ್ರಹಿಸಿದೆ.

ರಾಜ್ಯದಲ್ಲಿ ಆಯ್ದ ಕಡೆ ನಿಯಮಾನುಸಾರ ಮರಳು, ಕಲ್ಲು ಗಣಿಗಾರಿಕೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಗುತ್ತಿಗೆ ನೀಡಿದೆ. ಅನುಮತಿ ವೇಳೆ ವಿಧಿಸಿರುವ ಷರತ್ತುಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ತಪಾಸಣೆ ನಡೆಸುತ್ತಿರುತ್ತದೆ. ಹಾಗಿದ್ದೂ ಅಕ್ರಮ ಮರಳು, ಕಲ್ಲು, ಗ್ರಾನೈಟ್‌ ಗಣಿಗಾರಿಕೆ ನಿಂತಿಲ್ಲ.

208 ಕೋಟಿ ರೂ. ದಂಡ:
ಏಪ್ರಿಲ್‌ ಬಳಿಕ ಈ ತನಕ ನಾಲ್ಕು ಅಕ್ರಮ ಗಣಿಗಾರಿಕೆ ಚಟುವಟಿಕೆಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಿದೆ. ಕೋಲಾರದ ಟೇಕಲ್‌ ಹೋಬಳಿಯಲ್ಲಿ ಕಟ್ಟಡ ಕಲ್ಲು ಗಣಿ ಅಕ್ರಮಕ್ಕೆ ಸಂಬಂಧಿಸಿ 98 ಕೋಟಿ ರೂ. ದಂಡ ವಿಧಿಸಿದೆ. ತುಮಕೂರು ವ್ಯಾಪ್ತಿಯಲ್ಲಿ ಕಟ್ಟಡ ಕಲ್ಲು ಅಕ್ರಮ ಗಣಿಗಾರಿಕೆ ಸಂಬಂಧ 28 ಕೋಟಿ ರೂ., ಆನೇಕಲ್‌ ಬಳಿಯ ಕಮ್ಮನಾಯಕನಹಳ್ಳಿಯಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆಗೆ 80 ಕೋಟಿ ರೂ. ದಂಡ ವಿಧಿಸಿದೆ. ಬಾಗೇಪಲ್ಲಿಯಲ್ಲಿ ಅಕ್ರಮ ಗ್ರಾನೈಟ್‌ ಗಣಿಗಾರಿಕೆ ಹಿನ್ನೆಲೆಯಲ್ಲಿ 2.30 ಕೋಟಿ ರೂ. ದಂಡ ವಿಧಿಸಿದೆ.

ಈ ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಸಾಕಷ್ಟು ನಿಯಮ ಉಲ್ಲಂಘನೆಯಾಗಿರುವುದು ಕಾರ್ಯಾಚರಣೆ ವೇಳೆ ಕಂಡುಬಂದಿದೆ. ಅನುಮತಿ ಪಡೆದಿರುವುದಕ್ಕಿಂತ 10ರಿಂದ 20 ಪಟ್ಟು ಹೆಚ್ಚು ಪ್ರಮಾಣದಲ್ಲಿ ಖನಿಜ ನಿಕ್ಷೇಪ ಹೊರತೆಗೆದಿದ್ದಾಗಿ ಹೇಳಲಾಗಿದೆ. ಉಳಿದಂತೆ ಇತರೆ ನಿಯಮ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿ ಇಲಾಖೆ ಈ ಕ್ರಮ ಕೈಗೊಂಡಿದೆ.

Advertisement

ಹಿಂದಿನ ವರ್ಷವೂ ದಂಡ:
2017-18ನೇ ಸಾಲಿನಲ್ಲಿ ಕ್ರಮವಾಗಿ 3,277 ಹಾಗೂ 1986 ಪ್ರಕರಣಗಳು ದಾಖಲಾಗಿತ್ತು. ಜತೆಗೆ ಅಕ್ರಮ ಮರಳು ಹಾಗೂ ಕಲ್ಲುಗಣಿಗಾರಿಕೆ ಸಂಬಂಧ ಕ್ರಮವಾಗಿ 20.55 ಕೋಟಿ ರೂ. ಹಾಗೂ 30.05 ಕೋಟಿ ರೂ. ದಂಡ ಸಂಗ್ರಹಿಸಿತ್ತು. ಒಟ್ಟಾರೆ ದಂಡ ಮೊತ್ತ 50 ಕೋಟಿ ರೂ.ನಷ್ಟಿತ್ತು. 2016-17ನೇ ಸಾಲಿಗೆ ಹೋಲಿಸಿದರೆ 2017-18ನೇ ಸಾಲಿನಲ್ಲಿ ಪ್ರಕರಣಗಳ ಸಂಖ್ಯೆ ಅರ್ಧದಷ್ಟು ಇಳಿಕೆಯಾಗಿದ್ದು, ದಂಡ ಮೊತ್ತ ದುಪ್ಪಟ್ಟಾಗಿದೆ.

ಅಕ್ರಮ ಗಣಿಗಾರಿಕೆ ಸೇರಿ ಇತರೆ ನಿಯಮ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ದೊಡ್ಡ ಮೊತ್ತದ ದಂಡ ವಿಧಿಸಲಾಗುತ್ತಿದೆ. ಮುಂದೆಯೂ ಅಕ್ರಮ ಗಣಿಗಾರಿಕೆ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಲಾಗುವುದು.
– ಎನ್‌.ಎಸ್‌.ಪ್ರಸನ್ನ ಕುಮಾರ್‌, ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ

– ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next