Advertisement

2023; ನಾಳೆಗಳಿಗೆ ಎದುರಾಗುವ ಮುನ್ನ ಕರಾವಳಿಯ ಇಂದಿನ ಹಾಳೆಗಳು!

12:15 AM Dec 31, 2023 | Team Udayavani |

ಮತ್ತೊಂದು ಹೊಸ ವರ್ಷ ಬರುವಾಗ ನಾಗಾಲೋಟಕ್ಕೆ ಒಂದು ಕ್ಷಣ ತಡೆ ನೀಡಿ, ಹಿಂದಿರುಗಿ ಅವಲೋಕಿಸುವುದು ಸಂಪ್ರದಾಯ. ಅದರಂತೆಯೆ 2023 ರ ಕೊನೆಯ ದಿನದ ಹೊತ್ತಿನಲ್ಲಿ ಹೀಗೆಯೇ ಕಣ್ಣು ಹರಿಸಿದಾಗ ಕಾಣುವುದು ಒಂದಿಷ್ಟು ಸ್ಫೂರ್ತಿ, ಮತ್ತೂಂದಿಷ್ಟು ಹರ್ಷ ಹಾಗೂ ಮಗದೊಂದಿಷ್ಟು ಬಿಕ್ಕುಗಳು. ಸ್ಫೂರ್ತಿ ಮತ್ತು ಹರ್ಷವನ್ನು ಬುತ್ತಿಯಾಗಿ ಸ್ವೀಕರಿಸಿ ಮುಂದಿನ ಪಯಣ ಆರಂಭಿಸೋಣ.

Advertisement

ಜ.01
ನಟ ರೂಪೇಶ್‌ ಶೆಟ್ಟಿ “ಬಿಗ್‌ಬಾಸ್‌’
ಬಿಗ್‌ಬಾಸ್‌ ರಿಯಾಲಿಟಿ ಶೋನ ಸೀಸನ್‌ 9 ರಲ್ಲಿ ತುಳು, ಕನ್ನಡ ನಟ ರೂಪೇಶ್‌ ಶೆಟ್ಟಿ ಅವರು ಪಟ್ಟ ಮುಡಿಲಿಗೇರಿಸಿಕೊಂಡಿದ್ದರು. ಜ.1ರಂದು ಫಲಿತಾಂಶ ಪ್ರಕಟವಾಗಿತ್ತು. ಅವರು 60 ಲಕ್ಷ ರೂ. ನಗದು
ಹಾಗೂ ಟ್ರೋಫಿ ಯನ್ನು ಗೆದ್ದುಕೊಂಡಿದ್ದರು.

ಜ.07
ಕ್ರಿಕೆಟಿಗ ಎಂ.ಎಸ್‌. ಧೋನಿ ಮೊದಲ ಭೇಟಿ
ಭಾರತ ಕ್ರಿಕೆಟ್‌ ತಂಡದ ಮಾಜಿ ಕಪ್ತಾನ ಮಹೇಂದ್ರ ಸಿಂಗ್‌ ಧೋನಿ ಕಾಸರಗೋಡಿನ ಬೇಕಲಕ್ಕೆ ತೆರಳುವ ಸಲುವಾಗಿ ಜ.7ರಂದು ಮುಂಬಯಿಯಿಂದ ವಿಮಾನ ದಲ್ಲಿ ಮಂಗಳೂರಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದರು.

ಜ.30
ತುಳುವಿಗೆ ಸ್ಥಾನ: ಸಮಿತಿ ರಚನೆ
ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವುದಕ್ಕೆ ಸಂಬಂಧಿಸಿ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲು ಜ. 30ರಂದು ಸಮಿತಿ ರಚನೆಯಾಗಿತ್ತು. ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಮೋಹನ್‌ ಆಳ್ವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು.

ಜ31
ಪ್ಯಾರಿಸ್‌ ಪೆರೇಡ್‌ನ‌ಲ್ಲಿ ಮಂಗಳೂರಿನ ದಿಶಾ
ಪ್ಯಾರಿಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ ಫ್ರಾನ್ಸ್‌ ರಾಷ್ಟ್ರೀಯ ದಿನಾಚರಣೆ ಕವಾಯತ್‌ ನಲ್ಲಿ ಭಾರತೀಯ ನೌಕಾಪಡೆ ತುಕಡಿಯ ಭಾಗವಾಗಿ ಲೆಫ್ಟಿನೆಂಟ್‌ ಕಮಾಂಡರ್‌ ಮಂಗಳೂರಿನ
ದಿಶಾ ಅಮೃತ್‌ ಭಾಗವಹಿಸಿದ್ದರು.

Advertisement

ಫೆ.12
ಗಡಾಯಿಕಲ್ಲು, ಬಹು ಮಹಡಿ ಕಟ್ಟಡ ಏರಿದ ಜ್ಯೋತಿರಾಜ್‌
ಚಿತ್ರದುರ್ಗದ ಜ್ಯೋತಿ ರಾಜ್‌ ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಗಡಾಯಿಕಲ್ಲು (ನರಸಿಂಹಘಡ) ಅನ್ನು ಫೆ.12 ರಂದು ಹಗ್ಗದ ಸಹಾಯವಿಲ್ಲದೆ ಏರಿ ಬೆರಗುಗೊಳಿಸಿದರು. ಮಾ.2ರಂದು ಬ್ರಹ್ಮಗಿರಿ ವುಡ್ಸ್‌ವಿಲೆ 26 ಅಂತಸ್ತಿನ ಬಹುಮಹಡಿ ಕಟ್ಟಡವನ್ನು ಏರಿ ಅಚ್ಚರಿ ಮೂಡಿಸಿದ್ದರು.

ಫೆ.20
ಕಾಡಾನೆ ದಾಳಿಗೆ ಇಬ್ಬರು ಬಲಿ
2023ರ ಫೆ.20ರ ಬೆಳಗ್ಗೆ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಮೀನಾಡಿ ಸಮೀಪದ ನೈಲ ಎಂಬಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿಯಾಗಿದ್ದರು. ರಂಜಿತಾ(24), ರಮೇಶ್‌ ರೈ (58) ಮೃತರಾದವರು. ಸ್ಥಳೀಯರ ಆಕ್ರೋಶದ ಹಿನ್ನೆಲೆಯಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ನಡೆಸಲಾಯಿತು.

ಫೆ.13
ಮಂಗಳೂರಿನಲ್ಲಿ ಸೂಪರ್‌ ಸ್ಟಾರ್‌
ಸೂಪರ್‌ಸ್ಟಾರ್‌ ರಜನಿಕಾಂತ್‌ ಫೆ. 13ರ ರಾತ್ರಿ ಮಂಗಳೂರಿಗೆ ಆಗಮಿಸಿದ್ದರು. “ಜೈಲರ್‌’ ಚಲನಚಿತ್ರ ಶೂಟಿಂಗ್‌ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಸ್ವಾಗತಿಸಲಾಗಿತ್ತು.
ಮರುದಿನ ಬೆಳಗ್ಗೆ ಪಿಲಿಕುಳದ ಗುತ್ತಿನ ಮನೆಯಲ್ಲಿ ಚಿತ್ರೀಕರಣ ನಡೆಸಲಾಗಿತ್ತು.

ಎ.04
ಕೆಂಪು ಬಟ್ಟೆ ಹಿಡಿದು ರೈಲು ಅವಘಡ ತಪ್ಪಿಸಿದ ಮಹಿಳೆ!
ರೈಲು ಹಳಿಗೆ ಮರ ಬಿದ್ದಿದ್ದನ್ನು ಕಂಡ ಕುಡುಪು ಆಯರಮನೆ ಚಂದ್ರಾವತಿ ಅವರು ತಮ್ಮ ಅಪಾಯವನ್ನು ಊಹಿಸಿ ಕೆಂಪುಬಟ್ಟೆ ಯನ್ನು ಕೈಯಲ್ಲಿ ಪ್ರದರ್ಶಿಸಿ ರೈಲು ನಿಲ್ಲಿಸಿ ಸಂಭಾವ್ಯ ರೈಲು ಅಪಘಾತವನ್ನು ತಪ್ಪಿಸಿದ್ದರು. ಇವರ ಸಮಯ ಪ್ರಜ್ಞೆಗೆ ಇಲಾಖೆಯಿಂದಲೂ, ಸಾರ್ವಜನಿಕರಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು.

ಎ.14
ಸಂಪಾಜೆ: ಭೀಕರ ಅಪಘಾತಕ್ಕೆ ಆರು ಬಲಿ
2023ರ ಎಪ್ರಿಲ್‌ 14ರ ಅಪರಾಹ್ನ ಮಾಣಿ-ಮೈಸೂರು ಹೆದ್ದಾರಿಯ ಕೊಡಗು ಸಂಪಾಜೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಕಾರು ನಡುವಿನ ಭೀಕರ ಅಪಘಾತದಲ್ಲಿ ಮೂವರು ಮಕ್ಕಳ ಸಹಿತ ಆರು ಮಂದಿ ಮೃತರಾಗಿದ್ದರು. ಮೃತರು ಮಂಡ್ಯದ ಮಳವಳ್ಳಿ ಮೂಲದವಾಗಿದ್ದರು.

ಜು.12
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್‌ಐಎ ದಾಳಿ
2022ರ ಜು. 12ರಂದು ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ನ್ಪೋಟದ ಸಂಚು ರೂಪಿಸಿದ್ದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸೇರಿದಂತೆ 16 ಕಡೆಗಳಲ್ಲಿ ಎನ್‌ಐಎ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಅದರೊಂದಿಗೆ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿತ್ತು.

ಆ.01
ಕರಾವಳಿಗೆ ಸಿಎಂ ಪ್ರಥಮ ಭೇಟಿ
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಸಿದ್ದರಾಮಯ್ಯ ಅವರು ಆ.1ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ ಪ್ರಗತಿ ಪರಿಶàಲನಾ ಸಭೆ ನಡೆಸಿದರು. ಸಾಲ ಆ್ಯಪ್‌, ಜೂಜು ನಿಷೇಧದ ಆದೇಶ ಹೊರಡಿಸಿದರು. ಅದೇ ದಿನ ಉಡುಪಿಗೂ ಭೇಟಿ ನೀಡಿ ಪ್ರಗತಿ ಪರಿಶೀಲನೆ ಸಭೆ ನಡೆಸಿ, ಜನತಾ ದರ್ಶನದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದರು.

ಆ.06
ಮಂಗಳೂರು ಜಂಕ್ಷನ್‌ ಪ್ರಗತಿಗೆ ಮೋದಿ ಚಾಲನೆ
ಕೇಂದ್ರ ಸರಕಾರದ ಅಮೃತ್‌ ಭಾರತ್‌ ರೈಲು ನಿಲ್ದಾಣ ಅಭಿವೃದ್ಧಿ ಯೋಜನೆಯಡಿ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣ ಅಭಿವೃದ್ಧಿಗೆ ಆ. 6ರಂದು ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದ್ದರು. ರೈಲು ನಿಲ್ದಾಣದಲ್ಲಿ ಶಿಲಾಫ‌ಲಕವನ್ನು ಸಂಸದ ನಳಿನ್‌ ಕುಮಾರ್‌ ಕಟೀಲು ಅನಾವರಣಗೊಳಿಸಿದ್ದರು.

ಡಿ.11
ಸರಕು ಹಡಗಿನ ಮೇಲೆ ಕ್ಷಿಪಣಿ ದಾಳಿ
ಮಂಗಳೂರಿನಿಂದ ಡಿ. 6 ರಂದು ಶೆಲ್‌ ಕಂಪೆನಿಯ ವೈಮಾನಿಕ ಇಂಧನವನ್ನು ಹೊತ್ತು ನೆದರ್ಲೆಂಡ್‌ಗೆ ತೆರಳುತ್ತಿದ್ದ ಸರಕು ಹಡಗಿನ ಮೇಲೆ ಯೆಮೆನ್‌ ಬಳಿ ಕಡಲ್ಗಳ್ಳರು ಕ್ಷಿಪಣಿ ದಾಳಿ ನಡೆಸಿದ್ದರು. ಅದೃಷ್ಟವಶಾತ್‌ ಕಡಲ್ಗಳ್ಳರ ಗುರಿ ತಪ್ಪಿದ ಪರಿಣಾಮ ಹಡಗಿಗೆ ಯಾವುದೇ ಅಪಾಯವಾಗಿರಲಿಲ್ಲ.

ನ.27
ಕಾರಿನ ಮೇಲೆರಗಿದ ಒಂಟಿ ಸಲಗ
ಬೆಳ್ತಂಗಡಿಯ ನೆರಿಯ-ಕಕ್ಕಿಂಜೆ ರಸ್ತೆಯ ಬಯಲು ಬಸ್ತಿ ಎಂಬಲ್ಲಿ ಒಂಟಿ ಸಲಗವೊಂದು ರಾತ್ರಿ ಕಾರಿಗೆ ಹಾನಿ ಮಾಡಿತ್ತು. ಪುತ್ತೂರು ತಾಲೂಕಿನ ಕಬಕದ ಒಂದು ವರ್ಷದ ಮಗು ಫಾತಿಮಾ ಅಲ್ಫಾ ಸಹಿತ ಅಬ್ದುಲ್‌ ರೆಹಮಾನ್‌(40) ಹಾಗೂ ನೆರಿಯದ ನಾಸಿಯಾ (30) ಗಾಯಗೊಂಡಿದ್ದರು. ಉಳಿದಂತೆ ಕಾರಿ ನಲ್ಲಿದ್ದ ಇಬ್ಬರು ಮಕ್ಕಳು ಸಹಿತ ಐವರು ಪವಾಡವೆಂಬಂತೆ ಪಾರಾಗಿದ್ದರು. ಇದು ತಾಲೂಕಿನಲ್ಲಿ ಮಾನವನ ಮೇಲೆ ಆನೆ ದಾಳಿ ಮಾಡಿದ ಮೊದಲ ಪ್ರಕರಣ.

ಡಿ.31
ಮಂಗಳೂರಿಗೂ ವಂದೇ ಭಾರತ್‌
ಮಂಗ ಳೂರಿನಿಂದ ಮಡ ಗಾಂವ್‌ಗೆ ವಂದೇ ಭಾರತ್‌ ಎಕ್ಸ್‌ಪ್ರಸ್‌ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ವಚ್ಯುìವಲ್‌ ರೀತಿಯಲ್ಲಿ ಹಸುರು ನಿಶಾನೆ ತೋರಿದರು. ಇದಕ್ಕೆ ಉಡುಪಿ ಮತ್ತು ಕಾರವಾರದಲ್ಲಿ ಮಾತ್ರ ನಿಲುಗಡೆ ಇದೆ. ಉಡುಪಿಯಲ್ಲೂ ರೈಲನ್ನು ಸಾರ್ವಜನಿಕರು ಸಂಭ್ರಮದಿಂದ ಸ್ವಾಗತಿಸಿದರು.

ಚುನಾವಣೆ: ಇಬ್ಬರದು ಬೆರಗಿನ ನಿರ್ಧಾರ
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಬ್ಬರದ್ದು ಬೆರಗಿನ ನಿರ್ಧಾರ.ಚುನಾವಣೆ ಘೋಷಣೆಯ ಮುನ್ನ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಚುನಾವಣ ರಾಜಕೀಯದಿಂದ ಹಿಂದೆ ಸರಿದರು. ಹಾಗೆಯೇ ಸುಳ್ಯದ ಎಸ್‌. ಅಂಗಾರ ರಾಜಕೀಯಕ್ಕೇ ನಿವೃತ್ತಿ ಘೋಷಿಸಿದರು. ಆದರೆ ಕೆಲವೇ ದಿನಗಳಲ್ಲಿ ನಿವೃತ್ತಿ ಚುನಾವಣ ರಾಜಕೀಯಕ್ಕಷ್ಟೇ ಎಂದು ಸ್ಪಷ್ಟಪಡಿಸಿದರು.

ಜ.12
ಸಂತೆಕಟ್ಟೆ ಓವರ್‌ಪಾಸ್‌ ಗೆ ಕೊನೆಗೂ ಚಾಲನೆ
ಹಲವು ವರ್ಷಗಳ ಬೇಡಿಕೆಯಾದ ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ ಜ.12ರಂದು ಉದ್ಘಾಟನೆಯಾಗಿತ್ತು. 21.4 ಕೋ. ರೂ. ವೆಚ್ಚದ ಕಾಮಗಾರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ಕಾಮಗಾರಿ ಮಾತ್ರ ಕುಂಟುತ್ತಾ ಸಾಗಿದೆ.

ಫೆ.11
ಮರವಂತೆಯಲ್ಲಿ ಆಭಾರಿ ಸೇವೆ
ಮರವಂತೆಯ ನದಿ – ಕಡಲಿನ ನಡುವಿನಲ್ಲಿರುವ ಶ್ರೀ ವರಾಹ ಮಹಾರಾಜ ಸ್ವಾಮಿ ದೇವಸ್ಥಾನದಲ್ಲಿ 3 ವರ್ಷಗಳಿಗೊಮ್ಮೆ ನಡೆಯುವ ಅಪರೂಪದ “ಅಭಾರಿ’ ಸೇವೆ ಈ ವರ್ಷ ನಡೆಯಿತು. ತಲೆಮಾರುಗಳ ವಿಶಿಷ್ಟ ಸಂಪ್ರದಾಯ ಇದು. ಒಂದು ಮುಡಿ ಅಕ್ಕಿ ನೈವೇದ್ಯವನ್ನು ದೇವರ ಎದುರು ಹರಿಯುವ ಸೌಪರ್ಣಿಕಾ ನದಿಯಲ್ಲಿ “ನೆಗಳನ (ಮೊಸಳೆ) ಗುಂಡಿಗೆ’ ಅರ್ಪಿಸಲಾಗುತ್ತದೆ.

ಫೆ.11
ರಾಜ್ಯಮಟ್ಟದಯಕ್ಷಗಾನ ಸಮ್ಮೇಳನ
ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಫೆ.11 ಮತ್ತು 12ರಂದು ಎಂಜಿಎಂ ಕಾಲೇಜು ಮೈದಾನದಲ್ಲಿ ಮೊದಲ ಯಕ್ಷಗಾನ ಸಮ್ಮೇಳನ ನಡೆಯಿತು. ಡಾ| ಪ್ರಭಾಕರ ಜೋಷಿ ಸಮ್ಮೇಳ ನಾಧ್ಯಕ್ಷರಾಗಿದ್ದರು. ಯಕ್ಷಗಾನ ಉಳಿವಿಗಾಗಿ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು.

ಎ.23
ದೋಣಿ ದುರಂತ ನಾಲ್ವರು ನೀರು ಪಾಲು
ಬ್ರಹ್ಮಾವರ ಹಾರಾಡಿ ಗ್ರಾಮದ ಕಿಣಿಯಾರ ಕುದ್ರುವಿನಲ್ಲಿ ಎ.23ರಂದು ಸಂಜೆ ಹೊಳೆಯಿಂದ ಮಳಿ ಹೆಕ್ಕಲು ಹೋಗಿ ದೋಣಿ ಮಗುಚಿ ಸಂಭವಿಸಿದ ದುರಂತದಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಮೃತರಾದ ಎಲ್ಲರನ್ನೂ ಶೃಂಗೇರಿಯವರೆಂದು ಗುರುತಿಸಲಾಗಿತ್ತು.

ಜು.08
“ಉದಯವಾಣಿ’ ಕಚೇರಿಗೆ ಸಚಿವೆ ಭೇಟಿ
ಮಣಿಪಾಲದ ಉದಯವಾಣಿ ಪ್ರಧಾನ ಕಚೇರಿಯಲ್ಲಿ “ಉದಯವಾಣಿ’ ವತಿಯಿಂದ ಜಿ. ಪಂ., ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ಜು.8 ರಂದು ನಡೆದ ವನಮಹೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಪಾಲ್ಗೊಂಡು ಗಿಡ ನೆಟ್ಟು, ಸಾರ್ವಜನಿಕರಿಗೆ ಸಸಿ ವಿತರಿಸಿದ್ದರು.

ಜು.14
ಉಡುಪಿಗೆ ನಿರ್ಮಲಾ ಸೀತಾರಾಮನ್‌ ಭೇಟಿ
ಜು.14ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಉಡುಪಿ ಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ದಕ್ಷಿಣ ಭಾರತದಲ್ಲಿ ಪ್ರಥಮ ವಾದ ಉಡುಪಿಯ ಇಂಡಿಯನ್‌ ಇನ್‌ ಸ್ಟಿಟ್ಯೂಟ್‌ ಆಫ್ ಜೆಮ್ಸ್‌ ಆ್ಯಂಡ್‌ ಜುವೆಲರಿ (ಐಐಜಿಜೆ)ಯನ್ನು ಮೇಲ್ದರ್ಜೆಗೆ ಏರಿಸುವುದಾಗಿ ಘೋಷಿಸಿದ್ದರು.

ಜು.17
ಉಡುಪಿಯಲ್ಲೂ ಅಗ್ನಿಪಥ್‌ ರ‍್ಯಾಲಿ
ಜು.17ರಿಂದ 25ರವರೆಗೆ ಅಜ್ಜರಕಾಡಿನಲ್ಲಿ ಮೊದಲ ಬಾರಿಗೆ ಅಗ್ನಿಪಥ್‌ ಸೇನಾ ರ‍್ಯಾಲಿ ನಡೆಯಿತು. ಬಾಗಲಕೋಟೆ, ವಿಜಯಪುರ, ಧಾರವಾಡ, ದಕ್ಷಿಣ ಕನ್ನಡ, ಉಡುಪಿ, ಗದಗ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳ 6,800ಕ್ಕೂ ಅಧಿಕ ಅಭ್ಯರ್ಥಿಗಳು ರ್ಯಾಲಿಗೆ ನೋಂದಾಯಿಸಿದ್ದರು.

ಜು.21
ತನುಶ್ರೀ ಪಿತ್ರೋಡಿ ಗಿನ್ನೆಸ್‌ ದಾಖಲೆ
ತನುಶ್ರೀ ಪಿತ್ರೋಡಿ ಜು.21ರಂದು ಎರಡನೇ ಗಿನ್ನೆಸ್‌ ದಾಖಲೆ ಮುಡಿಗೇರಿಸಿಕೊಂಡರು. ದೇಹದ ಹಿಂಭಾಗಕ್ಕೆ ಎರಡೂ ಕೈಗಳನ್ನು ಚಲಿಸಿ ಎರಡೂ ಕಾಲುಗಳನ್ನು ಸುತ್ತುವರಿದು ಮತ್ತೆ ಮುಂಭಾಗಕ್ಕೆ ಕೈ ಯ ಚಲನೆ ಮಾಡುವ ಭಂಗಿ “ಮೋಸ್ಟ್‌ ಬ್ಯಾಕ್ವರ್ಡ್‌ ಸ್ಟೆಪ್ಸ್‌ ಇನ್‌ ಒನ್‌ ಮಿನಿಟ್‌’ನಲ್ಲಿ ದಾಖಲಿಸಿದರು. ಹಿಂದಿನ ದಾಖಲೆ ಒಂದು ನಿಮಿಷದಲ್ಲಿ 48 ಬಾರಿ ಇದ್ದಿತ್ತು.

ಜು.23
ಅರಿಶಿನ ಗುಂಡಿ ಜಲಪಾತ ದಲ್ಲಿ ಯುವಕ ಸಾವು
ಕೊಲ್ಲೂರು ಬಳಿ ಅರಿಶಿನಗುಂಡಿ ಜಲಪಾತದಲ್ಲಿ ಜು. 23 ರಂದು ವಿಡಿ ಯೋ ಮಾಡುವ ವೇಳೆ ಕಾಲು ಜಾರಿ ಬಿದ್ದು ನೀರುಪಾಲಾಗಿದ್ದ ಭದ್ರಾವತಿ ಮೂಲದ ಶರತ್‌ ಮೃತದೇಹ ಕ್ಲಿಷ್ಟಕರ ಕಾರ್ಯಾಚರಣೆಯ ಬಳಿಕ, ಜು. 30 ರಂದು ಅಂದರೆ 7 ದಿನದ ಬಳಿಕ ಪತ್ತೆಯಾಗಿತ್ತು.

ಡಾ| ಟಿಎಂಎ ಪೈ 125ನೇ ಜನ್ಮ ವರ್ಷಾಚರಣೆ
ಆಧುನಿಕ ಮಣಿಪಾಲದ ನಿರ್ಮಾತೃ ಡಾ| ಟಿಎಂಎ ಪೈ ಅವರ 125ನೇ ಜನ್ಮ ವರ್ಷಾಚರಣೆಯನ್ನು ಮಾಹೆ ವಿ.ವಿ. ಹಾಗೂ ಅದರ ಅಂಗಸಂಸ್ಥೆಗಳು ವರ್ಷಪೂರ್ತಿ ಆಚರಿಸಿದವು. ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಅಧೀನದ‌ ಎಂಜಿಎಂ ಕಾಲೇಜು ಅಮೃತ ಮಹೋತ್ಸವವನ್ನು ಆಚರಿಸಿತು.

ನ.12
ನೇಜಾರು ನಾಲ್ವರ ಹತ್ಯೆ ಪ್ರಕರಣ
ನೇಜಾರಿನ ಮನೆಯಲ್ಲಿ ತಾಯಿ ಹಾಗೂ ಮೂವರು ಮಕ್ಕಳನ್ನು ಕೊಲೆ ನಡೆಸಿದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್‌ಇಂಡಿಯಾ ಕ್ಯಾಬಿನ್‌ ಕ್ರೂé ಪ್ರವೀಣ್‌ ಚೌಗುಲೆಯನ್ನು ಪೊಲೀಸರು ಕೆಲವು ದಿನಗಳಲ್ಲಿ ಬಂಧಿಸಿದ್ದರು. ಪ್ರಸ್ತುತ ಆರೋಪಿ ಪರಪ್ಪನ ಆಗ್ರಹಾರ ಜೈಲಿನಲ್ಲಿದ್ದಾನೆ.

ನ.13
ಗಂಗೊಳ್ಳಿಯಲ್ಲಿ ಭಾರೀ ಬೋಟ್‌ ದುರಂತ
ಗಂಗೊಳ್ಳಿ ಬಂದರಿನಲ್ಲಿ ಭಾರೀ ಅಗ್ನಿ ಅವಘಢ ಸಂಭವಿಸಿ, 9 ಬೋಟ್‌, 2 ಸಣ್ಣ ದೋಣಿ, 5 ಬೈಕ್‌ ಸಹಿತ ಅಂದಾಜು 10 ಕೋ.ರೂ. ವರೆಗಿನ ಮೌಲ್ಯದ ವಸ್ತುಗಳು ಸುಟ್ಟು ಕರಕಲಾದವು.

ಕಿಶನ್‌ ಗಂಗೊಳ್ಳಿಗೆ ಅವಳಿ ಪದಕ
ಚೀನದ ಹ್ಯಾಂಗ್‌ಝೂನಲ್ಲಿ ಅಕ್ಟೋಬರ್‌ನಲ್ಲಿ ನಡೆದ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಚೆಸ್‌ ಪಟು ಕಿಶನ್‌ ಗಂಗೊಳ್ಳಿ ಅವರು ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಹಾಗೂ ಗುಂಪು ವಿಭಾಗದಲ್ಲಿ ಇವರನ್ನೊಳಗೊಂಡ ತಂಡ ಕಂಚಿನ ಪದಕ ಪಡೆದರು.

ಕೃಷಿಕ ರಮೇಶ್‌ ನಾಯಕ್‌ಗೆ ಪ್ರಶಸ್ತಿ
ತೆಕ್ಕಟ್ಟೆಯ ಕೃಷಿಕ, ಅಕ್ಕಿ ಮಿಲ್‌ ಉದ್ಯಮಿ ರಮೇಶ್‌ ನಾಯಕ್‌ ಅವರಿಗೆ ಕೇಂದ್ರ ಸರಕಾರದ ಬಿಲಿಯನೇರ್‌ ಪ್ರಶಸ್ತಿ ದೊರೆತಿದೆ. ರೈಸ್‌ಮಿಲ್‌ ಉದ್ಯಮದ ಜತೆಗೆ ಕೃಷಿ ಮೌಲ್ಯವರ್ಧನೆ ಹಾಗೂ ಗ್ರಾಮೀಣ ರೈತರಿಗೆ ಬೆನ್ನೆಲುಬಾಗಿ ನಿಂತದ್ದಕ್ಕೆ ಈ ಗೌರವ ಸಂದಾಯವಾಗಿತ್ತು.

ನೇತ್ರಾವತಿ ಉಕ್ಕಿದಳು, ಇವರು ಅತ್ತರು
ಸತತ ಮಳೆ ಸುರಿದ ಪರಿಣಾಮ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿ ಜು. 23ರಂದು ಪಾಣೆ ಮಂಗಳೂರು ಆಲಡ್ಕ ಪ್ರದೇಶದಲ್ಲಿ 9 ಕ್ಕೂ ಹೆಚ್ಚು ಮನೆಗಳಿಗೆ ನೆರೆ ನೀರು ನುಗ್ಗಿದ್ದರಿಂದ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ತೆರವುಗೊಳಿಸಲಾಗಿತ್ತು.

ವಿದ್ಯಾರ್ಥಿ ಭಗೀರಥನಾದ
ಬಂಟ್ವಾಳದ ನರಿಕೊಂಬು ಗ್ರಾಮದ ಪಿಯುಸಿ ವಿದ್ಯಾರ್ಥಿ ಸೃಜನ್‌ ಅವರು ಪಂಚಾಯತ್‌ ನಳ್ಳಿಯಲ್ಲಿ ನೀರು ಸಿಗುತ್ತಿಲ್ಲ ಎಂದು ಏಕಾಂಗಿಯಾಗಿ ಬಾವಿಯೊಂದನ್ನು ಕೊರೆದು ನೀರು ಪಡೆದು ಸಾರ್ವಜನಿಕರ ಪ್ರಶಂಸೆಗೆ ಒಳಗಾಗಿದ್ದರು. ಸೃಜನ್‌ ಒಬ್ಬರೇ ಶ್ರಮಿಸಿ 30 ಅಡಿ ಆಳದಲ್ಲಿ ನೀರು ತೆಗೆದಿದ್ದರು.

ನಾಗರಿಕರ ಸಾಹಸ ಪ್ರದರ್ಶನ
ಕೆದಿಲ ಗ್ರಾಮದ ಕಾಂತುಕೋಡಿ ಮುಳುಗು ಸೇತುವೆಯಲ್ಲಿ ಚಾಲಕನೊಬ್ಬ ಜು. 23 ರಂದು ಪಿಕ್‌ಅಪ್‌ ವಾಹನವನ್ನು ಪ್ರವಾಹದ ನೀರಿನಲ್ಲೇ ಚಲಾಯಿಸಲು ಯತ್ನಿಸಿ ನೀರಿನಲ್ಲಿ ಸಿಲುಕಿದ. ಸ್ಥಳೀಯರು ಸತತ ಕಾರ್ಯಾಚರಣೆ ನಡೆಸಿ ಚಾಲಕ ಮತ್ತಿತರರನ್ನು ಅಪಾಯದಿಂದ ರಕ್ಷಿಸಿ ಸಾಹಸ ಮೆರೆದಿದ್ದರು.

ಅಕ್ಕಿಯಲ್ಲೂ ಹಗರಣ
ಬಂಟ್ವಾಳ ತಾಲೂಕಿನ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ(ಕೆಎಫ್‌ಸಿಎಸ್‌ಸಿ)ದ ಗೋದಾಮಿನಲ್ಲಿದ್ದ ಪಡಿತರ ವಿತರಣೆಯ ಅಕ್ಕಿ ದಾಸ್ತಾನಿನಲ್ಲಿ ನಡೆದ 1.32 ಕೋ.ರೂ.ಗಳಿಗೂ ಮಿಕ್ಕಿದ ಅವ್ಯವಹಾರ ಬೆಳಕಿಗೆ ಬಂದು ಆ. 18ರಂದು ಜಿಲ್ಲಾಧಿಕಾರಿಗಳು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ತನಿಖೆ ನಡೆಸಿದ್ದರು.

ಬೆಂಗಳೂರಿನಲ್ಲಿ ಕಂಬಳ
ರಾಜ್ಯದ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಕರಾವಳಿಯ ಕಂಬಳ ಕೋಣಗಳು ರಾಜಧಾನಿಯ “ಕರೆ’ಯಲ್ಲಿ ಓಡಿ ಇತಿಹಾಸ ಸೃಷ್ಟಿಸಿದವು. ಶಾಸಕ ಅಶೋಕ್‌ ಕುಮಾರ್‌ ರೈ ಸಾರಥ್ಯದಲ್ಲಿ ಐತಿಹಾಸಿಕ ಕಂಬಳ ನ.25 ಮತ್ತು 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಿತು.

ಕರ್ನಾಟಕ ಟು ಲಂಡನ್‌
ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲು ಯುಕೆಯಲ್ಲಿ ಉದ್ಯಮಿಯಾಗಿರುವ ಪುತ್ತೂರಿನ ದರ್ಬೆ ನಿವಾಸಿ ಸಿನಾನ್‌ “ಕರ್ನಾಟಕ ಟು ಲಂಡನ್‌’ ಎನ್ನುವ ಟ್ಯಾಗ್‌ಲೈನ್‌ನಡಿ ಪ್ರವಾಸ ನಿರತರಾಗಿದ್ದಾರೆ. ಇವರು ತಮ್ಮ ಕಾರಿನಲ್ಲೇ 75 ರಾಷ್ಟ್ರಗಳನ್ನು ಸುತ್ತುವುದು ಅವರ ಗುರಿಯಾಗಿತ್ತು.

ಹುತಾತ್ಮರಿಗೆ ಗೌರವ ಸ್ಮಾರಕ
ದೋಳ್ಪಾಡಿ ಗ್ರಾಮದ ಕಟ್ಟದ ಹುತಾತ್ಮ ಯೋಧ ಪರಮೇಶ್ವರ ಗೌಡ ಅವರ ದೇಶ ಸೇವೆಯನ್ನು ಗುರುತಿಸಿ ವಿಶೇಷ ಸ್ಮಾರಕ ನಿರ್ಮಿಸಲು ಕೇಂದ್ರ ಸರಕಾರ ನಿರ್ಧರಿಸಿತ್ತು. ಪರಮೇಶ್ವರ ಗೌಡ ಅವರು 2002 ದಲ್ಲಿ ಜಮ್ಮುಕಾಶ್ಮೀರದ ಉಧಂಪುರ ಬಳಿ ಕೆಹರಿಯಲ್ಲಿ ಕಾರ್ಗಿಲ್‌ ಕದನದಲ್ಲಿ ಪಾಕ್‌ ಶೆಲ್‌ ದಾಳಿಗೆ ಸಿಕ್ಕಿ ಪ್ರಾಣ ತ್ಯಾಗ ಮಾಡಿದ್ದರು.

ಪುತ್ತೂರಿನಲ್ಲಿ ಅಮಿತ್‌ ಶಾ
ಕೇಂದ್ರ ಗೃಹ ಸಚಿವರಾಗಿ ಮೊದಲ ಬಾರಿಗೆ ಪುತ್ತೂರಿಗೆ ಭೇಟಿ ನೀಡಿದ ಅಮಿತ್‌ ಶಾ ಕ್ಯಾಂಪ್ಕೋ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.ಇದೇ ಸಂದರ್ಭದಲ್ಲಿ ಸ್ಥಳೀಯ ಬಿಜೆಪಿ ಮುಖಂಡರಿಗೆ ಪಕ್ಷದೊಳಗಿನ ಗೊಂದಲವನ್ನು ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದರು. ಅರುಣ್‌ ಕುಮಾರ್‌ ಪುತ್ತಿಲ ಶಕ್ತಿ ಪ್ರದರ್ಶನವೂ ನಡೆದಿತ್ತು.

ಪರಶುರಾಮ ವಿವಾದ ಸದ್ದು
ಕಾರ್ಕಳ ತಾಲೂಕಿನ ಬೈಲೂರಿನ ಉಮಿಕ್ಕಲ ಬೆಟ್ಟದಲ್ಲಿ 14 ಕೋ. ರೂ. ವೆಚ್ಚದಲ್ಲಿ ನಿರ್ಮಿಸಿದ್ದª ಪರಶುರಾಮ ಥೀಂ ಪಾರ್ಕ್‌ ಜನವರಿಯಲ್ಲಿ ಉದ್ಘಾಟನೆಗೊಂಡಿತ್ತು. ಆದರೆ ವರ್ಷದೊಳಗೆ ಪ್ರತಿಮೆ ಸೇರಿದಂತೆ ಹಲವು ವಿಷಯಗಳು ವಿವಾ ದಕ್ಕೀಡಾದವರು. ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿ ರಾಜ್ಯ ಸರಕಾರ ತನಿಖೆಗೆ ಸೂಚಿಸಿತು.

ರೈಲು ದುರಂತದಿಂದ ಪಾರು
ಕಳಸದ ಬಲಿಗೆ ಮಹಿಮಾ ಸಾಗರ ಮುನಿ ಮಹಾ ರಾಜರು ಜೂ.1 ರಂದು ಸಂಕಲ್ಪಿಸಿದ್ದ ಯಾತ್ರೆ ಯಲ್ಲಿ ಪಾಲ್ಗೊಂಡಿದ್ದ 110 ಜನರಲ್ಲಿ ದ.ಕ. ಸೇರಿದಂತೆ ಕಾರ್ಕಳದ 10 ಮಂದಿ ಇದ್ದರು. ಬೆಂಗಳೂರು-ಹೌರಾ ರೈಲಿನಲ್ಲಿ ಹೋಗುತ್ತಿದ್ದಾಗ ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆ ದರೂ ಎಲ್ಲರೂ ಅಪಾಯದಿಂದ ಪಾರಾಗಿದ್ದರು.

ಡ್ರೋನ್‌ ಆಧರಿಸಿ ಔಷಧ ಸಿಂಪಡ‌ಣೆ
ಮಲೆನಾಡು, ಕರಾವಳಿ ಪ್ರದೇಶದಲ್ಲಿ 20534.50 ಹೆಕ್ಟೇರ್‌ ಅಡಿಕೆ ಬೆಳೆಗೆ ಹಬ್ಬಿದ್ದ ಎಲೆ ಚುಕ್ಕಿ ರೋಗದ ಹಿನ್ನೆಲೆ ಪ್ರಥಮವಾಗಿ ಬೆಳ್ತಂಗಡಿ ತಾಲೂಕಿನಲ್ಲಿ ರೋಗ ಹತೋಟಿಗೆ ತರಲು ಡ್ರೋನ್‌ ಆಧರಿಸಿ ಎಲ್ಲ ಕಡೆ ಔಷಧ ಸಿಂಪಡಣೆ ಪ್ರಕ್ರಿಯೆ ನಡೆಸಲಾಗಿತ್ತು.

ತಣಿಯದ ಕಾಳ್ಗಿಚ್ಚು
ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬೆಳ್ತಂಗಡಿ ವನ್ಯಜೀವಿ ವಿಭಾಗದ ವ್ಯಾಪ್ತಿಯ ಅಳದಂಗಡಿ, ಊರ್ಜಾಲುಬೆಟ್ಟ, ಹೂವಿನಕೊಪ್ಪಲು ಅರಣ್ಯದ ಹುಲ್ಲುಗಾವಲು ಪ್ರದೇಶದಲ್ಲಿ ಫೆ.22ಕ್ಕೆ ಸಾವಿರ ಹೆಕ್ಟೇರ್‌ ಅರಣ್ಯದಲ್ಲಿ ಬೆಂಕಿ ವ್ಯಾಪಿಸಿ ವಾರಗಳ ಕಾಲ ಉರಿದ ಅಪಾರ ಪ್ರಮಾಣದ ಕಾಡು ನಾಶವಾಗಿತ್ತು. ಇದಾದ ಬಳಿಕ 5 ಬಾರಿ ಮತ್ತೆ ಕಾಳಿYಚ್ಚು ಸಂಭವಿಸಿತ್ತು.

ಸೋಮಾವತಿ ಹೊಳೆಗೆ ವಿಷ‌
ಬೆಳ್ತಂಗಡಿ ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಆಶ್ರಯವಾದ ಸೋಮಾವತಿ ಹೊಳೆ ನೀರಿಗೆ ಕಿಡಿಗೇಡಿಗಳು ಎ.27ರಂದು ರಾಸಾಯನಿಕ ಪದಾರ್ಥ ಹಾಕಿದ್ದರು. ಇದರ ಪರಿಣಾಮ ಸಾವಿರಾರು ಮೀನುಗಳು ಸತ್ತು ಬಿದ್ದಿದ್ದವು. ಕೂಡಲೇ ಮುನ್ನೆಚ್ಚರಿಕೆಯ ಕಾರಣ ನದಿಯಿಂದ ನೀರು ಸರಬರಾಜನ್ನು ಸ್ಥಗಿತಗೊಳಿಸಲಾಗಿತ್ತು.

ಕೊನೆಗೂ ಸಿಕ್ಕಿ ಬಿದ್ದ ಆರೋಪಿ
ಬೆಳ್ತಂಗಡಿಯ ಶ್ರೀಗಂಧ ಕಳವು ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡು 27 ವರ್ಷಗಳಿಂದ ನಾಪತ್ತೆಯಾಗಿದ್ದ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ಕುಂಡಾಪು ಮನೆ, ಪಾವೂರು ನಿವಾಸಿ ಎಸ್‌.ಎ.ಅಶ್ರಫ್‌ ಅವನನ್ನು ಬೆಳ್ತಂಗಡಿ ಪೊಲೀಸರು ಆ.24 ರಂದು ಬಂಧಿಸಿದ್ದರು.

ಬಿ.ಕೆ.ದೇವರಾವ್‌ಗೆ ಪ್ರಶಸ್ತಿ
ಐಸಿಎಆರ್‌ ವತಿಯಿಂದ ಹೊಸದಿಲ್ಲಿಯಲ್ಲಿ ಸೆ.12 ರಂದು ನಡೆದ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಕಿಲ್ಲೂರಿನ ಅಮೈ ಬಿ.ಕೆ.ದೇವರಾವ್‌ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷೀrÅಯ ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ ನೀಡಿ ಗೌರವಿಸಿದರು.

ಕಾಡಾನೆಗಳಿಗೆ ಮೆಣಸಿನ ಹೊಗೆ
ಬೆಳ್ತಂಗಡಿ: ರಾಷ್ಟ್ರೀ ಯ ಉದ್ಯಾನ ಸಹಿತ ಅರಣ್ಯ ಭಾಗದ ಕೃಷಿಕರನ್ನು ಕಾಡುತ್ತಿರುವ ಕಾಡಾನೆಗಳನ್ನು ಮತ್ತೆ ಕಾಡಿಗೆ ಹಿಮ್ಮೆಟ್ಟಲು ಹಿರಿಯ ಆನೆ ತಜ್ಞ ಹಾಗೂ ನಿವೃತ್ತ ಪಶುವೈದ್ಯಾಧಿಕಾರಿ ಅಸ್ಸಾಂನ ಡಾ| ರುದ್ರಾದಿತ್ಯ ಅವರ ನೇತೃತ್ವದಲ್ಲಿ ಮೆಣಸಿನ ಹೊಗೆ ಪ್ರಯೋಗವು ಸೆ.25 ರಿಂದ ಕೆಲ ವಾರಗಳ ಕಾಲ ನಡೆಯಿತು. ಬಹುತೇಕ ಪರಿಣಾಮ ಕಂಡಿತು.

ಚಂದ್ರಯಾನ: ಕರಾವಳಿ ವಿಜ್ಞಾನಿಗರ ಕೊಡುಗೆ
ದೇಶದ ಕೀರ್ತಿಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಇಸ್ರೋದ ಚಂದ್ರಯಾನ-3ರ ಯಶಸ್ಸಿನಲ್ಲಿ ಕರಾವಳಿ ಜಿಲ್ಲೆಗಳ ಹಲವು ವಿಜ್ಞಾನಿಗಳು ಭಾಗಿಯಾಗಿದ್ದು ವಿಶೇಷ,. ಧರ್ಮಸ್ಥಳದ ಪಿ.ವಾಸುದೇವ ರಾವ್‌, ಸಾಲಿಗ್ರಾಮದ ಸೌಭಾಗ್ಯಾ ಐತಾಳ್‌, ಬಾರಕೂರಿನ ಸುಬ್ರಹ್ಮಣ್ಯ ಉಡುಪ, ಗುಜ್ಜಾಡಿ ಮಂಕಿಯ ಕೇಳಾಮನೆ ನಿವಾಸಿ ಆಕಾಶ್‌ ಶೆಟ್ಟಿ, ಕೆರಾಡಿ ಗ್ರಾಮದ ಬೆಳ್ಳಾಲ ಮೋರ್ಟು ನಿವಾಸಿ ರಮೇಶ್‌ ಆಚಾರ್ಯ, ಕಾಂಚನದ ಮಣಿಪುಳ ಶಿವಪ್ರಸಾದ ಕಾರಂತ, ಕಾಟುಕುಕ್ಕೆಯ ರಾಧಾಕೃಷ್ಣ ವಾಟೆಡ್ಕ, ನೆಲ್ಲೂರು ಕೆಮ್ರಾಜೆಯ ಶಂಭಯ್ಯ ಕೊಡಪಾಲ, ಉಬರಡ್ಕ ಮಿತ್ತೂರಿನ ವೇಣುಗೋಪಾಲ, ಸುಳ್ಯ ದುಗಲಡ್ಕದ ಮಾನಸ ಜಯಕುಮಾರ್‌, ಕಾಸರಗೋಡಿನ ಕೃಷ್ಣಮೋಹನ ಶ್ಯಾನುಭೋಗ್‌, ಕಾಪು ಎಲ್ಲೂರಿನ ಉಷಾ ದಿನೇಶ್‌ ಶಾಸ್ತ್ರೀ ಮತ್ತು ಉದ್ಯಾವರದ ವೆಂಕಟ ರಾಘವೇಂದ್ರ ಭಾಗಿಯಾಗಿದ್ದರು

ಚುನಾವಣ ವರ್ಷ
2023 ಚುನಾವಣೆ ವರ್ಷ. ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದು ಕಾಂಗ್ರೆಸ್‌ ಸರಕಾರ ಅಸ್ತಿತ್ವಕ್ಕೆ ಬಂದಿತು. ಕರಾವಳಿ ಜಿಲ್ಲೆಗಳಲ್ಲಿಯೂ ಚುನಾವಣ ಕಣ ರಂಗೇರಿತ್ತು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆದಿಯಾಗಿ ಬಿಜೆಪಿಯ ಉನ್ನತ ನಾಯಕರು ಕರಾವಳಿಯ ವಿವಿಧೆಡೆ ರೋಡ್‌ ಶೋ, ಸಮಾವೇಶಗಳಲ್ಲಿ ಪಾಲ್ಗೊಂಡು ಮತ ಯಾಚಿಸಿದರು. ಕಾಂಗ್ರೆಸ್‌ ಕಡೆಯಿಂದ ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಆದಿಯಾಗಿ ಪ್ರಮುಖರು ಅಬ್ಬರದ ಪ್ರಚಾರ ನಡೆಸಿದರು. ಅಂತಿಮವಾಗಿ ಫ‌ಲಿತಾಂಶದಲ್ಲಿ ಕರಾವಳಿಯ ಎರಡೂ ಜಿಲ್ಲೆಗಳ 13 ಕ್ಷೇತ್ರಗಳ ಪೈಕಿ ಬಿಜೆಪಿ 11 ಕ್ಷೇತ್ರಗಳಲ್ಲಿ ಗೆದ್ದರೆ, ಕಾಂಗ್ರೆಸ್‌ 2 ಸ್ಥಾನಕ್ಕಷ್ಟೇ ತೃಪ್ತಿಪಟ್ಟುಕೊಂಡಿತು. ಪಕ್ಷೇತರರಾಗಿ ಅರುಣ್‌ಕುಮಾರ್‌ ಪುತ್ತಿಲ ಸ್ಪರ್ಧೆಯಿಂದ ತೀವ್ರ ಕುತೂಹಲ ಕೆರಳಿಸಿದ್ದ ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಪುತ್ತಿಲ ನಡುವೆ ನೇರ ಹಣಾಹಣಿ ಏರ್ಪಟ್ಟು ಬಿಜೆಪಿ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು.

ಹೊಸ ಜನಪ್ರತಿನಿಧಿಗಳು
ಮಂಗಳೂರು ದಕ್ಷಿಣ-ವೇದವ್ಯಾಸ ಕಾಮತ್‌,
ಮಂಗಳೂರು ಉತ್ತರ- ಡಾ| ಭರತ್‌ ಶೆಟ್ಟಿ, ಮೂಡುಬಿದಿರೆ- ಉಮಾನಾಥ ಕೋಟ್ಯಾನ್‌, ಬಂಟ್ವಾಳ-ರಾಜೇಶ್‌ ನಾೖಕ್‌, ಬೆಳ್ತಂಗಡಿ-ಹರೀಶ್‌ ಪೂಂಜ, ಸುಳ್ಯ-ಭಾಗೀರಥಿ ಮುರುಳ್ಯ, ಮಂಗಳೂರು-ಯು.ಟಿ. ಖಾದರ್‌, ಪುತ್ತೂರು-ಅಶೋಕ್‌ ಕುಮಾರ್‌ ರೈ , ಉಡುಪಿ -ಯಶ್‌ಪಾಲ್‌ ಸುವರ್ಣ, ಕಾಪು-ಸುರೇಶ್‌ ಶೆಟ್ಟಿ ಗುರ್ಮೆ, ಕುಂದಾಪುರ-ಕಿರಣ್‌ಕುಮಾರ್‌ ಕೊಡ್ಗಿ, ಬೈಂದೂರು-ಗುರುರಾಜ ಗಂಟಿಹೊಳೆ , ಕಾರ್ಕಳ ಸುನಿಲ್‌ ಕುಮಾರ್‌.

ಕರಾವಳಿಯ ಸಾಧಕರಿಗೆ 2023ನೇ ಸಾಲಿನ ರಾಜ್ಯೋತ್ಸವ ಪುರಸ್ಕಾರ
ಲೀಲಾವತಿ ಬೈಪಾಡಿತ್ತಾಯ – ಯಕ್ಷಗಾನ
ಚಾರ್ಮಾಡಿ ಹಸನಬ್ಬ – ಸಮಾಜಸೇವೆ
ಆರ್ಗೋಡು ಮೋಹನದಾಸ ಶೆಣೈ – ಯಕ್ಷಗಾನ
ಹಾಜಿ ಅಬ್ದುಲ್ಲಾ ಪರ್ಕಳ – ಸಂಕೀರ್ಣ
ಕಬ್ಬಿನಾಲೆ ವಸಂತ ಭಾರಧ್ವಾಜ – ಸಂಕೀರ್ಣ
ದಿನೇಶ್‌ ಅಮೀನ್‌ ಮಟ್ಟು – ಮಾಧ್ಯಮ
ಲೆ|ಜ| ಕೆ.ಪಿ. ಕಾರ್ಯಪ್ಪ – ಸಂಕೀರ್ಣ
ಶಶಿಕಿರಣ್‌ ಶೆಟ್ಟಿ – ಹೊರನಾಡು
ದೀಪಕ್‌ ಶೆಟ್ಟಿ – ಹೊರನಾಡು
ಡಾ| ಪ್ರಶಾಂತ್‌ ಶೆಟ್ಟಿ – ವೈದ್ಯಕೀಯ

ಅಗಲಿದ ಗಣ್ಯರು
ಬಲಿಪ ನಾರಾಯಣ ಭಾಗವತರು
ತೆಂಕುತಿಟ್ಟು ಯಕ್ಷಗಾನ ರಂಗದ ಮೇರು ಭಾಗವತ ಹಾಗೂ “ಭಾಗವತಿಕೆ ಭೀಷ್ಮ’ ಎಂದೇ ಖ್ಯಾತರಾದ ಬಲಿಪ ನಾರಾಯಣ ಭಾಗವತರು(86) ಮಾರೂರು ಗ್ರಾಮದ ನೂಯಿಯಲ್ಲಿರುವ ಸ್ವಗೃಹದಲ್ಲಿ ಫೆ. 16ರಂದು ನಿಧನ ಹೊಂದಿದರು.
ಸಾಹಿತಿ ಡಾ| ಸಾರಾ ಅಬೂಬಕರ್‌
“ಚಂದ್ರಗಿರಿ ತೀರ ದಲ್ಲಿ’ ಕಾದಂಬರಿಯ ಮೂಲಕ ಖ್ಯಾತರಾಗಿದ್ದ ಹಿರಿಯ ಲೇಖಕಿ ನಾಡೋಜ ಡಾ| ಸಾರಾ ಅಬೂಬಕರ್‌(87) ಅವರು ಜ. 10ರಂದು ಮಂಗಳೂರಿನಲ್ಲಿ ನಿಧನ ಹೊಂದಿದರು. ಕಾಸರಗೋಡು ಮೂಲದ ಅವರು ಲಾಲ್‌ಬಾಗ್‌ ಸಮೀಪ ಹ್ಯಾಟ್‌ಹಿಲ್‌ ಬಳಿ ವಾಸವಾಗಿದ್ದರು. ಅಲ್ಲೇ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಕ್ಯಾ| ಪ್ರಾಂಜಲ್‌ ಹುತಾತ್ಮ
ಜಮ್ಮು – ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ನ. 22ರಂದು ಉಗ್ರರ ಜತೆಗಿನ ಗುಂಡಿನ ಚಕಮಕಿಯಲ್ಲಿ ಸುರತ್ಕಲ್‌ ಮೂಲದ 63 ರಾಷ್ಟ್ರೀಯ ರೈಫ‌ಲ್ಸ್‌ನ ಕ್ಯಾಪ್ಟನ್‌ ಎಂ.ವಿ. ಪ್ರಾಂಜಲ್‌ (28) ಹುತಾತ್ಮರಾಗಿದ್ದರು. ಇವರು ಎಂಆರ್‌ಪಿಎಲ್‌ನ ನಿವೃತ್ತ ಆಡಳಿತ ನಿರ್ದೇಶಕ ಎಂ. ವೆಂಕಟೇಶ್‌ ಮತ್ತು ಅನುರಾಧಾ ದಂಪತಿಯ ಪುತ್ರ. ಪ್ರಾಂಜಲ್‌ ಎಸೆಸೆಲ್ಸಿವರೆಗೆ ಎಂಆರ್‌ಪಿಎಲ್‌ ನ ಬಳಿಯ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ನಲ್ಲಿ ಕಲಿತಿದ್ದರು. ಸೇನೆಯ ಇಬ್ಬರು ಕ್ಯಾಪ್ಟನ್‌ಗಳು, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಮೇಜರ್‌ ಮತ್ತು ಯೋಧ ಗಾಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next