ಮೆಲ್ಬರ್ನ್: ಒಂದೆಡೆ ಅದೃಷ್ಟ ಹಾಗೂ ಚರಿತ್ರೆಯನ್ನು ನಂಬಿ ಕೊಂಡಿರುವ ಪಾಕಿಸ್ಥಾನ, ಇನ್ನೊಂದೆಡೆ ಪ್ರಚಂಡ ಫಾರ್ಮ್ ನಲ್ಲಿರುವ ಇಂಗ್ಲೆಂಡ್- ಈ ಎರಡು ತಂಡಗಳ ಟಿ20 ವಿಶ್ವಕಪ್ ಫೈನಲ್ ಹಣಾಹಣಿಗೆ ರವಿವಾರ ಐತಿಹಾಸಿಕ “ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್’ ಸಾಕ್ಷಿಯಾಗಲಿದೆ. ಇವೆರಡೂ ಮಾಜಿ ಚಾಂಪಿಯನ್ಗಳಾಗಿದ್ದು, ಎರಡನೇ ಸಲ ಕಪ್ ಎತ್ತಲು ತುದಿಗಾಲಲ್ಲಿ ನಿಂತಿವೆ. “ಫೈನಲ್ ಲಕ್’ ಯಾರಿಗೆ ಎಂಬುದನ್ನು ಊಹಿಸಲಿಕ್ಕೂ ಆಗದ ಸ್ಥಿತಿ ಇದೆ.
ಮೇಲ್ನೋಟಕ್ಕೆ ಇದು 50-50 ಪಂದ್ಯ. ಇಲ್ಲಿ ಯಾರೂ ಗೆಲ್ಲಬಹುದು. ಎರಡೂ ತಂಡಗಳು ಫೇವರಿಟ್. ಯಾರೇ ಗೆದ್ದರೂ ಸೋತರೂ ಅಚ್ಚರಿಪಡುವಂಥದ್ದೇನಿಲ್ಲ. ಇಲ್ಲಿ ಸಾಧನೆಯ ಜತೆಗೆ ಅದೃಷ್ಟವೂ ಮೇಳೈಸಬೇಕಿದೆ. ಈ ವಿಚಾರದಲ್ಲಿ ಪಾಕಿಸ್ಥಾನ ಮುಂದಿದೆ. ಭಾರತ ಮತ್ತು ಜಿಂಬಾಬ್ವೆ ವಿರುದ್ಧದ ಮೊದಲೆರಡು ಪಂದ್ಯಗಳನ್ನು ಸೋತ ಬಾಬರ್ ಆಜಂ ಪಡೆಗೆ ಕೂಟದ ಮೊದಲ ವಾರದಲ್ಲೇ ಪಾಕಿಸ್ಥಾನಕ್ಕೆ ವಿಮಾನ ಏರಬೇಕಾದ ಸ್ಥಿತಿ ಎದುರಾಗಿತ್ತು. ಅದರ ಕೈ ಹಿಡಿದದ್ದೇ ಅದೃಷ್ಟ. ಇದು ಫೈನಲ್ಗೂ ವಿಸ್ತರಿಸೀತೇ ಎಂಬುದು ಬಹುಜನರ ನಿರೀಕ್ಷೆ.
ಇಂಗ್ಲೆಂಡ್ಗೂ ಲಕ್ ಇದೆ
ಇಂಗ್ಲೆಂಡ್ ಸ್ಥಿರ ಪ್ರದರ್ಶನ ನೀಡುತ್ತ ಬಂದ ತಂಡ. ಐರ್ಲೆಂಡ್ ವಿರುದ್ಧ ಎಡವಿತಾದರೂ ಇದರಲ್ಲಿ ಮಳೆಯ ಕೈವಾಡ ಇತ್ತೆಂಬುದನ್ನು ಮರೆಯು ವಂತಿಲ್ಲ. ಹಾಗೆಯೇ ಆಸ್ಟ್ರೇಲಿಯ ಎದುರಿನ ಪಂದ್ಯ ಮಳೆಯಿಂದ ರದ್ದಾದುದನ್ನೂ ಉಲ್ಲೇಖೀಸಬೇಕಿದೆ. ಈ ಪಂದ್ಯ ನಡೆದು ಆಸ್ಟ್ರೇಲಿಯ ಜಯಿಸಿದ್ದೇ ಆದರೆ ಆಗ ಇಂಗ್ಲೆಂಡ್ ಹೊರಬೀಳುವ ಅಪಾಯವಿತ್ತು. ಅದು ಮೇಲೇರಿದ್ದೇ ಆಸ್ಟ್ರೇಲಿಯದೊಂದಿಗಿನ ರನ್ರೇಟ್ ಪೈಪೋಟಿಯಲ್ಲಿ. ಹೀಗಾಗಿ ಇಲ್ಲಿ ಜಾಸ್ ಬಟ್ಲರ್ ಬಳಗಕ್ಕೂ ಅದೃಷ್ಟ ಕೈಹಿಡಿದಿದೆ ಎಂಬುದನ್ನು ಮರೆಯಬಾರದು.
ಇಂಗ್ಲೆಂಡ್ ಪಾಲಿನ ದೊಡ್ಡ ಸ್ಫೂರ್ತಿ, ತುಂಬು ಆತ್ಮವಿಶ್ವಾಸವೆಂದರೆ ಸೆಮಿಫೈನಲ್ನಲ್ಲಿ ಭಾರತವನ್ನು 10 ವಿಕೆಟ್ಗಳಿಂದ ಹೊಡೆದುರುಳಿಸಿದ್ದು. ಇಂಥದೊಂದು ಫಲಿತಾಂಶವನ್ನು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ ಫೈನಲ್ನಲ್ಲೂ ಇಂಗ್ಲೆಂಡ್ ಇಂಥದೇ ಬ್ಯಾಟಿಂಗ್ ಆರ್ಭಟ ಪ್ರದರ್ಶಿಸ ಬೇಕೆಂದೇನೂ ಇಲ್ಲ. ಟಿ20 ಕ್ರಿಕೆಟ್ನಲ್ಲಿ ಏನೂ ಸಂಭವಿಸಬಹುದು. ಅಲ್ಲಿ ನೋಲಾಸ್ನಲ್ಲಿ ಗೆದ್ದವರು ಇಲ್ಲಿ ಸಣ್ಣ ಮೊತ್ತಕ್ಕೆ ಉರುಳಲೂಬಹುದು. ಹಾಗೆಯೇ ಲಕ್ಕಿ ಪಾಕಿಸ್ಥಾನಕ್ಕೆ ಅದೃಷ್ಟ ಕೈಕೊಡಲೂಬಹುದು.
Related Articles
ಸಾಮಾನ್ಯವಾಗಿ ಐಸಿಸಿ ಫೈನಲ್ಗಳೆಲ್ಲ ಏಕಪಕ್ಷೀವಾಗಿ ಸಾಗುವುದು ಸಂಪ್ರದಾಯವೇ ಆಗಿದೆ. ಆದರೆ ಇಲ್ಲಿ ಈ ರೀತಿಯಾಗದೆ, ಮುಖಾಮುಖೀ ಕೌತುಕದ ಪರಾಕಾಷ್ಠೆ ತಲುಪಬೇಕಿದೆ. ಚುಟುಕು ಕ್ರಿಕೆಟಿನ ನೈಜ ರೋಮಾಂಚನ ಗರಿಗೆದರಬೇಕಿದೆ.
ಇತಿಹಾಸ ಮರುಕಳಿಸೀತೇ?
1992ರ ಏಕದಿನ ವಿಶ್ವಕಪ್ ಇತಿ ಹಾಸ ಮರುಕಳಿಸುವುದೇ ಆದಲ್ಲಿ ಇಲ್ಲಿ ಪಾಕಿಸ್ಥಾನ ಕಪ್ ಎತ್ತುವ ಸಾಧ್ಯತೆ ಹೆಚ್ಚು. ವಿಶ್ವ ದರ್ಜೆಯ ಆರಂಭಿಕರಾದ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಆಜಂ ಸರಿಯಾದ ಹೊತ್ತಿಗೆ ಫಾರ್ಮ್ ಕಂಡುಕೊಂಡಿದ್ದಾರೆ. ನ್ಯೂಜಿಲ್ಯಾಂಡ್ ಎದುರಿನ ಸೆಮಿ ಸೆಣಸಾಟದಲ್ಲಿ ಇವರದು ಶತಕದ ಜತೆಯಾಟದ ಸಾಹಸ. ಮಧ್ಯಮ ಕ್ರಮಾಂಕ ಹ್ಯಾರಿಸ್, ಇಫ್ತಿಖಾರ್, ಮಸೂದ್, ಶಾದಾಬ್ ಅವರಿಂದ ಶಕ್ತಿಶಾಲಿಯಾಗಿದೆ.
ಪಾಕ್ ಬೌಲಿಂಗ್ ಹೆಚ್ಚು ಘಾತಕ. ಅಫ್ರಿದಿ, ನಸೀಮ್ ಶಾ, ರವೂಫ್, ವಾಸಿಮ್ ಖಾನ್ ಜೂ. ಅವರೆಲ್ಲ ಭಾರೀ ಜೋಶ್ನಲ್ಲಿದ್ದಾರೆ. ಶಾದಾಬ್, ನವಾಜ್ ಆಲ್ರೌಂಡ್ ಶೋ ಮೂಲಕ ಪರಿಣಾಮ ಬೀರಬಲ್ಲರು. ಎಚ್ಚರಿಕೆಯ ಗಂಟೆ
ಹೇಲ್ಸ್-ಬಟ್ಲರ್ ಸೇರಿಕೊಂಡು ಭಾರತವನ್ನು ಬಡಿದಟ್ಟಿದ ರೀತಿ ಪಾಕಿಸ್ಥಾನಕ್ಕೆ ಖಂಡಿತವಾಗಿಯೂ ಎಚ್ಚರಿಕೆಯ ಗಂಟೆ. ನೆಚ್ಚಿನ ತಂಡವೊಂದರ ವಿರುದ್ಧ 16 ಓವರ್ಗಳಲ್ಲಿ ನೋಲಾಸ್ 170 ರನ್ ರಾಶಿ ಹಾಕಿದ್ದು ಸಾಮಾನ್ಯ ಸಾಹಸವಲ್ಲ. ಸಾಲ್ಟ್, ಸ್ಟೋಕ್ಸ್, ಬ್ರೂಕ್, ಲಿವಿಂಗ್ಸ್ಟೋನ್, ಅಲಿ, ಕರನ್ ತನಕ ಬ್ಯಾಟಿಂಗ್ ಲೈನ್ಅಪ್ ಇದೆ. ಇವರಲ್ಲಿ ಮೂವರು ಆಲ್ರೌಂಡರ್ ಎಂಬುದು ವಿಶೇಷ.
ಆದರೆ ಬೌಲಿಂಗ್ ಪಾಕಿಸ್ಥಾನದಷ್ಟು ಅಪಾಯಕಾರಿಯಲ್ಲ. ಜೋರ್ಡನ್, ವೋಕ್ಸ್, ಕರನ್, ರಶೀದ್ ಅವರೆಲ್ಲ ಸಾಮರ್ಥ್ಯಕ್ಕೂ ಮೀರಿದ ಪ್ರದರ್ಶನ ನೀಡಬೇಕಿದೆ. ಮಾರ್ಕ್ ವುಡ್ ಗುಣಮುಖರಾಗಿ ಆಡಲಿಳಿದರೆ ಆದು ಖಂಡಿತವಾಗಿಯೂ ಆಂಗ್ಲರಿಗೆ ಬಂಪರ್!
ಫೈನಲ್ನಲ್ಲಿ ಪಾಕಿಸ್ಥಾನ, ಇಂಗ್ಲೆಂಡ್
ಪಾಕಿಸ್ಥಾನ ಮತ್ತು ಇಂಗ್ಲೆಂಡ್-ಎರಡೂ ತಂಡಗಳಿಗೆ ಇದು 3ನೇ ಟಿ20 ವಿಶ್ವಕಪ್ ಫೈನಲ್. ಎರಡೂ ತಂಡಗಳು ಒಮ್ಮೆ ಕಪ್ ಎತ್ತಿವೆ, ಒಂದು ಫೈನಲ್ನಲ್ಲಿ ಸೋತಿವೆ. ಹೀಗಾಗಿ ರವಿವಾರ ಯಾರೇ ಗೆದ್ದರೂ 2ನೇ ಸಲ ವಿಶ್ವಕಪ್ ಗೆದ್ದ ಕೇವಲ 2ನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿವೆ. ಎರಡು ಸಲ ಚಾಂಪಿಯನ್ ಎನಿಸಿಕೊಂಡ ಏಕೈಕ ತಂಡ ವೆಸ್ಟ್ ಇಂಡೀಸ್ (2012 ಮತ್ತು 2016).
ಪಾಕ್ ಸೋಲಿನ ಆರಂಭ
ಪಾಕಿಸ್ಥಾನದ್ದು ಸೋಲಿನ ಆರಂಭ. 2007ರ ಚೊಚ್ಚಲ ಟಿ20 ವಿಶ್ವಕಪ್ನಲ್ಲೇ ಶೋಯಿಬ್ ಮಲಿಕ್ ಪಡೆ ಪ್ರಶಸ್ತಿ ಸುತ್ತು ಪ್ರವೇಶಿಸಿತಾದರೂ ಅಲ್ಲಿ ಭಾರತಕ್ಕೆ 5 ರನ್ನುಗಳಿಂದ ಶರಣಾಯಿತು. ಜೊಹಾನ್ಸ್ಬರ್ಗ್ ಪಂದ್ಯದಲ್ಲಿ ಧೋನಿ ಟೀಮ್ 5ಕ್ಕೆ 157 ರನ್ ಬಾರಿಸಿದರೆ, ಪಾಕಿಸ್ಥಾನ 19.3 ಓವರ್ಗಳಲ್ಲಿ 152ಕ್ಕೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.
ಆದರೆ 2009ರ ಮುಂದಿನ ಋತುವಿನಲ್ಲೇ ಪಾಕ್ ವಿಶ್ವಕಪ್ ಎತ್ತಿ ಹಿಡಿದು ಮೆರೆದಾಡಿತು. ಅಂದಿನ ಲಾರ್ಡ್ಸ್ ಹಣಾಹಣಿಯಲ್ಲಿ ಶ್ರೀಲಂಕಾವನ್ನು 8 ವಿಕೆಟ್ಗಳಿಂದ ಬಗ್ಗುಬಡಿಯಿತು. ಲಂಕಾ 6ಕ್ಕೆ 138 ರನ್ನುಗಳ ಸಾಮಾನ್ಯ ಮೊತ್ತ ದಾಖಲಿಸಿದರೆ, ಯೂನಿಸ್ ಖಾನ್ ಪಡೆ 18.4 ಓವರ್ಗಳಲ್ಲಿ 2 ವಿಕೆಟಿಗೆ 139 ರನ್ ಬಾರಿಸಿತು.
ಇಂಗ್ಲೆಂಡ್ ಗೆಲುವಿನ ಖುಷಿ
ಇಂಗ್ಲೆಂಡ್ ತನ್ನ ಮೊದಲ ಫೈನಲ್ ಅವಕಾಶದಲ್ಲೇ ಟ್ರೋಫಿ ಎತ್ತಿದ ತಂಡ. ಅದು 2010ರ ಪಂದ್ಯಾವಳಿ. ಬ್ರಿಜ್ಟೌನ್ ಕಾಳಗದಲ್ಲಿ ಬದ್ಧ ಎದುರಾಳಿ ಆಸ್ಟ್ರೇಲಿಯವನ್ನು 7 ವಿಕೆಟ್ಗಳಿಂದ ಉರುಳಿಸಿತು. ಆಸೀಸ್ 7ಕ್ಕೆ 146 ರನ್ ಮಾಡಿದರೆ, ಪಾಲ್ ಕಾಲಿಂಗ್ವುಡ್ ಬಳಗ 17 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು.
2016ರ “ಈಡನ್ ಗಾರ್ಡನ್ಸ್’ ಮೇಲಾಟದಲ್ಲೂ ಇಂಗ್ಲೆಂಡ್ಗೆ ಕಪ್ ಎತ್ತುವ ಸುವರ್ಣಾವಕಾಶ ಎದುರಾಗಿತ್ತು. ಅಂದು ವೆಸ್ಟ್ ಇಂಡೀಸ್ಗೆ ಅಂತಿಮ ಓವರ್ನಲ್ಲಿ 19 ರನ್ ಟಾರ್ಗೆಟ್ ಲಭಿಸಿತ್ತು. ಆದರೆ ಕಾರ್ಲೋಸ್ ಬ್ರಾತ್ವೇಟ್ ಸುಂಟರಗಾಳಿಯಾದರು. ಬೆನ್ ಸ್ಟೋಕ್ಸ್ ಅವರ ಅಂತಿಮ ಓವರ್ನ ಮೊದಲ 4 ಎಸೆತಗಳನ್ನು ಬಡಬಡನೆ ಸಿಕ್ಸರ್ಗೆ ಬಡಿದಟ್ಟಿ ವಿಂಡೀಸನ್ನು 2ನೇ ಸಲ ಚಾಂಪಿಯನ್ ಪಟ್ಟಕ್ಕೆ ಏರಿಸಿದರು!
ಸ್ಕೋರ್: ಇಂಗ್ಲೆಂಡ್-9ಕ್ಕೆ 155. ವೆಸ್ಟ್ ಇಂಡೀಸ್-19.4 ಓವರ್ಗಳಲ್ಲಿ 6ಕ್ಕೆ 161.
ಮಳೆ ಭೀತಿ
ಜಿದ್ದಾಜಿದ್ದಿ ನಿರೀಕ್ಷೆಯ ಫೈನಲ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಮೀಸಲು ದಿನವಾದ ಸೋಮವಾರವೂ ಮಳೆಯ ಸೂಚನೆ ಇರುವುದು ಆತಂಕಕ್ಕೆ ಕಾರಣ.
ಸಾಮಾನ್ಯವಾಗಿ ಟಿ20 ಪಂದ್ಯವೊಂದು ಸ್ಪಷ್ಟ ಫಲಿತಾಂಶ ಕಾಣಲು 5 ಓವರ್ಗಳ ಆಟ ಅನಿವಾರ್ಯ. ಆದರೆ ಟಿ20 ವಿಶ್ವಕಪ್ ಸೆಮಿಫೈನಲ್ಸ್ ಮತ್ತು ಫೈನಲ್ ಪಂದ್ಯಕ್ಕೆ ಕನಿಷ್ಠ ಓವರ್ಗಳ ಸಂಖ್ಯೆಯನ್ನು 10ಕ್ಕೆ ಏರಿಸಲಾಗಿದೆ.
ರವಿವಾರ ಪಂದ್ಯ ಆರಂಭಗೊಂಡು ಮಳೆಯಿಂದಾಗಿ ಅರ್ಧಕ್ಕೆ ನಿಂತರೆ ಸೋಮವಾರ ಉಳಿದ ಆಟವನ್ನು ಮುಂದುವರಿಸಲಾಗುವುದು. ಅಕಸ್ಮಾತ್ ರವಿವಾರ ಪಂದ್ಯ ನಡೆಯದೇ ಹೋದರೆ ಸೋಮವಾರ ಯಥಾಪ್ರಕಾರ ಮರಳಿ ಆರಂಭಿಸಲಾಗುವುದು. ಒಮ್ಮೆ ಟಾಸ್ ಹಾರಿಸಿದ ಬಳಿಕ ಪಂದ್ಯ “ಲೈವ್’ ಆಗಿ ದಾಖಲಾಗಲಿದೆ.
4 ಗಂಟೆ ಬೇಗ
ರವಿವಾರದ ಪಂದ್ಯಕ್ಕೆ ಕೇವಲ ಅರ್ಧ ಗಂಟೆಯಷ್ಟು ಮಾತ್ರ ಹೆಚ್ಚುವರಿ ಅವಧಿ ನೀಡಲಾಗಿದೆ. ಆದರೆ ಮೀಸಲು ದಿನದಂದು ಹೆಚ್ಚುವರಿ ಅವಧಿಯನ್ನು 4 ಗಂಟೆಗಳಿಗೆ ವಿಸ್ತರಿಸಲಾಗಿದೆ. ಆಗ ಭಾರತೀಯ ಕಾಲಮಾನ ಪ್ರಕಾರ ಪಂದ್ಯ ಬೆಳಗ್ಗೆ 9.30ಕ್ಕೇ ಆರಂಭವಾಗುತ್ತದೆ.
2019ರ ಏಕದಿನ ವಿಶ್ವಕಪ್ ಕೂಟದ ಭಾರತ-ನ್ಯೂಜಿಲ್ಯಾಂಡ್ ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ 2 ದಿನ ನಡೆದಿತ್ತು. ಅಂದಿನ ನಿಯಮದಂತೆ ಮೀಸಲು ದಿನದಂದು ಹೊಸತಾಗಿ ಪಂದ್ಯವನ್ನು ಆರಂಭಿಸಲಾಗಿತ್ತು. ಈಗ ಐಸಿಸಿ ನಿಯಮದಲ್ಲಿ ಬದಲಾವಣೆಯಾಗಿದೆ.
“ನಮ್ಮ ಯಶಸ್ಸಿನಲ್ಲಿ ಪಾಕಿಸ್ಥಾನದ ಜನತೆ ಸದಾ ಬೆನ್ನೆಲುಬಾಗಿ ನಿಂತಿದೆ. ನಮ್ಮನ್ನು ಬೆಂಬಲಿಸಿ, ನಮ್ಮ ಯಶಸ್ಸಿಗಾಗಿ ಪ್ರಾರ್ಥಿಸಿ’.
– ಬಾಬರ್ ಆಜಂ
“ನಾವು ಟಿ20 ವಿಶ್ವ ಕಪ್ ಗೆದ್ದು ಮುಂದಿನ ವಿಶ್ವಕಪ್ ಫುಟ್ಬಾಲ್ ಪಂದ್ಯಾ ವಳಿಯಲ್ಲಿ ಇಂಗ್ಲೆಂಡ್ ತಂಡಕ್ಕೆ ಸ್ಫೂರ್ತಿ ಆಗಬೇಕಿದೆ’.
– ಜಾಸ್ ಬಟ್ಲರ್
ಪಾಕಿಸ್ಥಾನ-ಇಂಗ್ಲೆಂಡ್
ಇದು ಕೇವಲ 3ನೇ ಮುಖಾಮುಖಿ
ಮೆಲ್ಬರ್ನ್: ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ 8ನೇ ಆವೃತ್ತಿ ಕಾಣುತ್ತಿದ್ದರೂ ಈವರೆಗೆ ಪಾಕಿಸ್ಥಾನ ಮತ್ತು ಇಂಗ್ಲೆಂಡ್ ಮುಖಾಮುಖಿ ಯಾದದ್ದು 2 ಸಲ ಮಾತ್ರ. ಅದೂ 2009, 2010ರಷ್ಟು ಹಿಂದೆ. ಈ ಎರಡೂ ಪಂದ್ಯಗಳಲ್ಲಿ ಇಂಗ್ಲೆಂಡ್ ಜಯಿಸಿತ್ತು. ಪಾಕಿಸ್ಥಾನವಿನ್ನೂ ಆಂಗ್ಲರ ಎದುರು ಗೆಲುವಿನ ಖಾತೆ ತೆರೆದಿಲ್ಲ.
ಇತ್ತಂಡಗಳ ಮೊದಲ ಮುಖಾಮುಖಿ ಸಾಗಿದ್ದು 2009ರಲ್ಲಿ. ಅದು “ಕೆನ್ನಿಂಗ್ಟನ್ ಓವಲ್’ನಲ್ಲಿ ನಡೆದ ಗ್ರೂಪ್ ಪಂದ್ಯ. ಪಾಲ್ ಕಾಲಿಂಗ್ವುಡ್ ನೇತೃತ್ವದ ಆತಿಥೇಯ ಇಂಗ್ಲೆಂಡ್ ಇದನ್ನು 48 ರನ್ನುಗಳಿಂದ ಜಯಿಸಿತ್ತು. ಇಂಗ್ಲೆಂಡ್ 5 ವಿಕೆಟಿಗೆ 185 ರನ್ ಬಾರಿಸಿದರೆ, ಪಾಕಿಸ್ಥಾನ 7ಕ್ಕೆ 137 ರನ್ ಮಾಡಿ ಶರಣಾಯಿತು. ಕೆವಿನ್ ಪೀಟರ್ಸನ್ ಈ ಪಂದ್ಯದ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು (58). ಕೇವಲ 16 ಎಸೆತಗಳಿಂದ 34 ರನ್ ಬಾರಿಸಿ, 2 ಕ್ಯಾಚ್ ಹಾಗೂ ಒಂದು ವಿಕೆಟ್ ಸಂಪಾದಿಸಿದ ಲ್ಯೂಕ್ ರೈಟ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಇತ್ತಂಡಗಳು ಕೊನೆಯ ಸಲ ಎದುರಾದದ್ದು 2010ರ ಬ್ರಿಜ್ಟೌನ್ ಪಂದ್ಯದಲ್ಲಿ. ಅದು ಕೂಡ ಗ್ರೂಪ್ ಮುಖಾಮುಖಿ ಆಗಿತ್ತು. ಇಲ್ಲಿ ಇಂಗ್ಲೆಂಡ್ 6 ವಿಕೆಟ್ ಜಯ ಸಾಧಿಸಿತು. ಪಾಕಿಸ್ಥಾನ 9ಕ್ಕೆ 147 ರನ್ ಮಾಡಿದರೆ, ಇಂಗ್ಲೆಂಡ್ 19.3 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 151 ರನ್ ಬಾರಿಸಿತು. ಈ ಮೇಲಾಟದಲ್ಲೂ ಕೆವಿನ್ ಪೀಟರ್ಸನ್ ಅವರಿಂದ ಮಾತ್ರ ಅರ್ಧ ಶತಕ ದಾಖಲಾದದ್ದು ವಿಶೇಷ (ಅಜೇಯ 73 ರನ್).