ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮಂಗಳವಾರ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 20 ಸಾವಿರಕ್ಕೂ ಅಧಿಕ ಚುನಾವಣಾ ಗುರುತಿನ ಚೀಟಿ ಪತ್ತೆಯಾಗಿದ್ದು, ಮೂವರನ್ನು ವಶಕ್ಕೆ ಪಡೆಯಲಾಗಿದೆ. ಜತೆಗೆ ಸ್ಥಳದಲ್ಲಿ ಸ್ಥಳೀಯ ಅಭ್ಯರ್ಥಿ ಮುನಿರತ್ನ ಅವರ ಭಾವಚಿತ್ರವೂ ಪತ್ತೆಯಾಗಿದೆ ಎಂದು ಚುನಾವಣಾ ಅಧಿಕಾರಿ ಸಂಜೀವ್‌ಕುಮಾರ್ ಹೇಳಿದ್ದಾರೆ.
ಸ್ಥಳೀಯರು ನೀಡಿದ ಖಚಿತ ಮಾಹಿತಿ ಮೇರೆಗೆ ಜಾಲಹಳ್ಳಿಯ ಎಸ್‌ಎಲ್‌ವಿ ಪಾರ್ಕ್‌ವ್ಯೂ ಅಪಾರ್ಟ್ ಮೆಂಟ್ಸ್ ಮೇಲೆ ಚುನಾವಣಾ ವಿಚಕ್ಷಣಾ ದಳ ಹಾಗೂ ಸ್ಥಳೀಯ ಪೊಲೀಸರು ದಾಳಿ ನಡೆಸಿದ್ದಾರೆ. ಅಪಾರ್ಟ್ ಮೆಂಟ್‌ನ ಕೆಳ ಭಾಗದಲ್ಲಿರುವ ಭದ್ರತಾ ಸಿಬ್ಬಂದಿ ಕೊಠಡಿಯಲ್ಲಿ ಇನ್ನಷ್ಟು ಗುರುತಿನ ಚೀಟಿ ಜತೆಗೆ ಐದು ಲ್ಯಾಪ್ ಟಾಪ್, ಉಪಕರಣಗಳು ಹಾಗೂ ಮತದಾರರ ಸ್ವೀಕೃತಿ ಪತ್ರಗಳನ್ನು ಜಪ್ತಿ ಮಾಡಿದ್ದಾರೆ. ವಿಚಿತ್ರವೆಂದರೆ ಪತ್ತೆಯಾಗಿರುವ ಗುರುತಿನ ಚೀಟಿಗಳಲ್ಲಿ ಅಸಲಿ ಮತದಾರರ ಚೀಟಿಗಳೂ ಇದ್ದವು. ರಾಜಕೀಯ ನಾಯಕರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅರ್ಜಿ ಪಡೆದು ಪಾಲಿಕೆಯ ಕೆಲವು ಅಧಿಕಾರಿಗಳೊಂದಿಗೆ ಶಾಮೀಲಾಗಿ ಗುರುತಿನ ಚೀಟಿ ಸಿದ್ಧಪಡಿಸಿರಬಹುದು ಎಂದು ಹೇಳಲಾಗಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ನಮೂನೆಯ ಸ್ವೀಕೃತಿ ರಸೀದಿಗಳೂ ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ದೊರೆತಿವೆ. ಅಪಾರ್ಟ್‌ಮೆಂಟ್‌ನಲ್ಲಿ 2ದೊಡ್ಡ ಟ್ರಂಕ್ ಸಿಕ್ಕಿದ್ದು, ಇದರಲ್ಲಿ ಮತದಾರರ ಸೇರ್ಪಡೆ ಫಾರಂಗಳು ಲಭ್ಯವಾಗಿದ್ದು, ಇವುಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ.
ಈ ಮಧ್ಯೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಭೇಟಿ ನೀಡಿ, ಸಾವಿರಾರು ಗುರುತಿನ ಚೀಟಿಗಳು ಪತ್ತೆಯಾಗಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕೃತ್ಯದ ಹಿಂದೆ ಆರ್.ಆರ್.ನಗರ ಶಾಸಕ ಮುನಿರತ್ನ ನಾಯ್ಡು ಕೈವಾಡವಿದೆ ಎಂದು ವಾಗ್ಧಾಳಿ ನಡೆಸಿದರು. ಇಂತಹ ಮೆಗಾ ಹಗರಣವನ್ನು ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ. ನಕಲಿ ಗುರುತಿನ ಚೀಟಿಗಳ ಸಿದ್ಧಪಡಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು, ನಕಲಿ ಗುರುತಿನ ಚೀಟಿಗಳನ್ನು ಸಿದ್ಧಪಡಿಸಿ ಚುನಾವಣೆ ಯಲ್ಲಿ ಗೆಲ್ಲಲು ಪ್ರಯತ್ನಿಸುತ್ತಿವೆ ಎಂದು ಪರಸ್ಪರ ಆರೋಪ- ಪ್ರತ್ಯಾರೋಪಗಳಲ್ಲಿ ತೊಡಗಿ ತಳ್ಳಾಟ -ನೂಕಾಟ ಸಹ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಗುಂಪು ಚದುರಿಸಿ ವಾತಾವರಣ ತಿಳಿಗೊಳಿಸಿದ್ದಾರೆ. ಇನ್ನು ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವೆಬ್‌ಸೈಟ್ ಹ್ಯಾಕ್?: ಚುನಾವಣಾ ಆಯೋಗದ ಇಆರ್‌ಎಂಎಸ್ ವೈಬ್ ಸೈಟ್‌ನ ಯೂಸರ್ ಐಡಿ, ಪಾಸ್‌ವರ್ಡ್ ಮತ್ತು ಡಿಜಿಟಲ್ ಕೀಗಳನ್ನು ಪಡೆದುಕೊಂಡಿರುವ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ನಕಲಿ ಮಾತದಾರರಿಗೆ ಹೊಸ ಗುರುತಿನ ಚೀಟಿಗಳನ್ನು ಸಿದಟಛಿಪಡಿಸಿಕೊಡುತ್ತಿದ್ದರು. ಅಲ್ಲದೇ, ಕ್ಷೇತ್ರದ ಕೆಲ ಮತದಾರರಿಗೆ ಹಣ ಹಾಗೂ ಕೆಲ ವಸ್ತುಗಳ ಆಮಿಷವೊಡ್ಡಿ ಗುರುತಿನ ಚೀಟಿ ಪಡೆದುಕೊಳ್ಳುತ್ತಿದ್ದರು. ಅವುಗಳನ್ನು ಅಪಾರ್ಟ್‌ಮೆಂಟ್‌ನಲ್ಲಿ ಮತದಾರರ ಪಟ್ಟಿಯಲ್ಲಿ ಗುರುತಿಸಿ ಚುನಾವಣೆ ಹಿಂದಿನ ದಿನ ನಿರ್ದಿಷ್ಟ ಮತದಾರಿರಗೆ ಮುಚ್ಚಿದ ಕವರ್‌ಲ್ಲಿ ಕೂಪನ್ ಹಾಗೂ ಹಣವಿಟ್ಟು ನಿರ್ದಿಷ್ಟ ಪಕ್ಷಕ್ಕೆ ಮತಹಾಕಬೇಕು. ಮತದಾನದ ಬಳಿಕ ಹಣ ಹಾಗೂ ವಸ್ತು ಸ್ವೀಕರಿಸಲು ಸ್ಥಳ ನಿಗದಿ ಮಾಡಿದ್ದಾರೆ. ಆದರೆ, ಈ ದಂಧೆಯ ಹಿಂದೆ ಯಾವ ಪಕ್ಷದ ಅಭ್ಯರ್ಥಿ ಇದ್ದಾರೆ ಎಂಬುದು ಗೊತ್ತಾಗಿಲ್ಲ ಎಂದು ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಪೀಣ್ಯ ಪೊಲೀಸರು ನಕಲಿ ಗುರುತಿನ ಚುನಾವಣಾ ಆಯೋಗ ವೆಬ್‌ಸೈಟ್ ಹ್ಯಾಕ್ ಮಾಡಿ ಮತದಾರರ ಗುರುತಿನ ಚೀಟಿ ಸಿದಟಛಿಪಡಿಸುತ್ತಿದ್ದ ಐವರನ್ನು ಬಂಧಿಸಿದ್ದರು.
ಅಕ್ರಮವಾಗಿ ಸೇರ್ಪಡೆ
ಗುರುತಿನ ಚೀಟಿ ಪತ್ತೆಯಾದ ಅಪಾರ್ಟ್ ಮೆಂಟ್‌ಗೆ ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್ ಮತ್ತು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಸಂಜೀವ್ ಕುಮಾರ್, ಈ ಅಪಾರ್ಟ್‌ಮೆಂಟ್‌ನಲ್ಲಿ ಸದ್ಯ 9,745 ಗುರುತಿನ ಚೀಟಿಗಳು ಪತ್ತೆಯಾಗಿವೆ. ಜತೆಗೆ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ನಾಯ್ಡು ಭಾವಚಿತ್ರ ಕೂಡ ಪತ್ತೆಯಾಗಿವೆ. ಈ ಕ್ಷೇತ್ರದಲ್ಲಿ ಒಟ್ಟು 4,71,459 ಮತದಾರರಿದ್ದು, 25,825 ಮಂದಿಯ ಹೆಸರನ್ನು ಮತದಾರರ ಪಟ್ಟಿಗೆ ಇದುವರೆಗೆ ಕ್ರಮವಾಗಿ ಸೇರಿಸಲಾಗಿದೆ. ಆದರೆ, ಮತ್ತೆ 19,012 ಮತದಾರರನ್ನು ಹೊಸದಾಗಿ ಸೇರಿಸಲಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ ಎಲ್ಲ ಗುರುತಿನ ಚೀಟಿಗಳು ಅಸಲಿ ಎಂಬುದು ಗೊತ್ತಾಗಿದೆ ಎಂದು ಹೇಳಿದ್ದಾರೆ.