ಹೊಸದಿಲ್ಲಿ : ಮಾಲ್ದೀವ್ಸ್ ನಲ್ಲಿ ಕಳೆದ ಮೂರು ತಿಂಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಭಾರತೀಯರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ ಅಥವಾ ಅವರಿಗೆ ಉದ್ಯೋಗ ವೀಸಾ ನಿರಾಕರಿಸಲಾಗಿದೆ.
ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಫಲಶ್ರುತಿ ಇದಾಗಿದ್ದು ಭಾರತದ ವಿದೇಶ ವ್ಯವಹಾರಗಳ ಸಚಿವಾಲಯ ಈ ವಿದ್ಯಮಾನವನ್ನು ನಿಕಟವಾಗಿ ಗಮನಿಸುತ್ತಿದೆ.
ಮಾಲ್ದೀವ್ಸ್ ದ್ವೀಪ ರಾಷ್ಟ್ರದಲ್ಲಿ ಕಾರ್ಯವೆಸಗುತ್ತಿರುವ ಸಿಂಗಾಪುರ ಮೂಲದ ಕಂಪೆನಿ ಉದ್ಯೋಗಕ್ಕೆಂದು ಗೊತ್ತು ಪಡಿಸಿಕೊಂಡಿದ್ದ ಸುಮಾರು 300 ಭಾರತೀಯರಿಗೆ ಮಾಲ್ದೀವ್ಸ್‌ನ ವಲಸೆ ವಿಭಾಗ ವೀಸಾ ನಿರಾಕರಿಸಿದೆ. ಮಾಲೆಯಲ್ಲಿನ ವಿಮಾನ ನಿಲ್ದಾಣದ ಆಧುನೀಕರಣದಲ್ಲಿ ಈ ಕಂಪೆನಿಯು ತೊಡಗಿಕೊಂಡಿದೆ.
ಸಿಂಗಾಪುರದ ಈ ಕಂಪೆನಿಯು ಈ ಮೊದಲು ತಾನಿಲ್ಲಿ ಕಾರ್ಯಗತಗೊಳಿಸುತ್ತಿರುವ ಯೋಜನೆಗೆ ಅಗತ್ಯವಿರುವ ಯಂತ್ರೋಪಕರಣಗಳನ್ನು ಭಾರತದಿಂದ ತರಿಸಿಕೊಳ್ಳಲು ಅನುಮತಿ ಕೇಳಿತ್ತು. ಆದರೆ ಕಂಪೆನಿಯ ಕೋರಿಕೆಯನ್ನು ವಿಮಾನ ನಿಲ್ದಾಣದಲ್ಲಿನ ಕಸ್ಟಮ್ಸ್ ಅಧಿಕಾರಿಗಳು ತಿರಸ್ಕರಿಸಿ ಚೀನ ಬೆಂಬಲಿತ ಸ್ಥಳೀಯ ಕಂಪೆನಿಗಳಿಂದ ಅವುಗಳನ್ನು ಬಾಡಿಗೆಗೆ ಪಡೆದುಕೊಳ್ಳುವಂತೆ ಬಲವಂತ ಮಾಡಿತ್ತು.
ಮಾಲ್ದೀವ್ಸ್‌ನಲ್ಲಿನ ಅಹಿತರ ಬೆಳವಣಿಗೆಗಳ ಮೇಲೆ ಭಾರತ ಸರಕಾರ ಅತ್ಯಂತ ನಿಕಟವಾಗಿ ಕಣ್ಣಿಟ್ಟಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕುವಂತೆ ಅದು ವಿದೇಶ ವ್ಯವಹಾರಗಳ ಸಚಿವಾಲಯ ಮತ್ತು ಇತರ ಇಲಾಖೆಗಳನ್ನು ಕೇಳಿಕೊಂಡಿದೆ.