Advertisement

ಆರೋಗ್ಯಕರ ಧ್ವನಿಗಾಗಿ 20 ಸಲಹೆಗಳು

10:41 AM Apr 14, 2021 | Team Udayavani |

ದೇಹದಲ್ಲಿ ಸಾಕಷ್ಟು ನೀರಿನಂಶ ಇರಲಿ :

Advertisement

ಧ್ವನಿ ತಂತುಗಳು ಸರಿಯಾಗಿ ಕೆಲಸ ಮಾಡುವಂಥ ವಾತಾವರಣ ನಿರ್ಮಾಣವಾಗಲು ದಿನವೂ 6ರಿಂದ 8 ಲೋಟಗಳಷ್ಟು ನೀರನ್ನು ಸೇವಿಸಿ.

ನಿಮ್ಮ ಭಂಗಿಯ ಮೇಲೆ ನಿಗಾ ಇರಲಿ  :

ಹಾಡುವಾಗ ಅಥವಾ ಮಾತನಾಡುವಾಗ ದೇಹವು ನೆಟ್ಟಗೆ ಮತ್ತು ನೇರವಾದ ಭಂಗಿಯಲ್ಲಿರಲಿ.

ಆಳವಾಗಿ ಉಸಿರೆಳೆದುಕೊಳ್ಳಿ  :

Advertisement

ಹೊಟ್ಟೆಯನ್ನು ವಿಸ್ತರಿಸಿಕೊಂಡು ಆಳವಾಗಿ ಉಸಿರು ಎಳೆದುಕೊಳ್ಳಿರಿ ಮತ್ತು ಹೊಟ್ಟೆಯನ್ನು ಸಂಕುಚಿಸಿಕೊಂಡು ಆಳವಾಗಿ ಉಸಿರನ್ನು ಹೊರಬಿಡಿ (ಡಯಾಫ್ರಾಮ್‌/ಅಬೊxಮಿನಲ್‌ ಬ್ರಿàದಿಂಗ್‌). ಇದನ್ನು ಅಭ್ಯಾಸ ಮಾಡುವಾಗ ಕೆಳಹೊಟ್ಟೆಯ ಮೇಲೆ ಕೈಗಳನ್ನು ಇರಿಸಿಕೊಳ್ಳುವುದರಿಂದ ಉಸಿರಾಟ ಸರಿಯಾಗಿದೆಯೇ ಎಂಬುದು ಅನುಭವಕ್ಕೆ ಬರುತ್ತದೆ.

ಧ್ವನಿಯನ್ನು ವಾರ್ಮ್ಅಪ್‌ ಮತ್ತು ವಾರ್ಮ್ ಡೌನ್‌ ಮಾಡಿಕೊಳ್ಳಿ :

ಪ್ರತೀ ವ್ಯಾಯಾಮವನ್ನು 2 ಬಾರಿ ಪುನರಾವರ್ತಿಸಿಕೊಳ್ಳಿ ಧ್ವನಿಯನ್ನು ವಾರ್ಮ್ಅಪ್‌ ಮಾಡಲು:

ಅನುಕೂಲಕರ ಸ್ಥಾಯಿಯಲ್ಲಿ ಮೃದುವಾದ ಹಮ್ಮಿಂಗ್‌ ಧ್ವನಿ ಹೊರಡಿಸಿ :

ಸ್ತ್ರೀಯರು F4 (349.23  ಹರ್ಟ್ಸ್) ಮಧ್ಯಮ C4ರಿಂದ ಮೇಲೆ (261.63 ಹರ್ಟ್ಸ್) ಹಮ್ಮಿಂಗ್‌ ಮಾಡಿ.  ಪುರುಷರು F3 (174.61 ಹರ್ಟ್ಸ್) ಮಧ್ಯಮ ಇಯಿಂದ ಕೆಳಗೆ ಹಮ್ಮಿಂಗ್‌ ಮಾಡಿ.

ಆರೋಹಣ ಮತ್ತು ಅವರೋಹಣ (ಕೆಳಸ್ಥಾಯಿಯಿಂದ ಮೇಲಕ್ಕೆ ಮತ್ತು ಮೇಲು ಸ್ಥಾಯಿಯಿಂದ ಕೆಳಕ್ಕೆ) ಹಮ್ಮಿಂಗ್‌ ಮಾಡಿ :

ನಾಲಗೆ/ ತುಟಿ ಸುರುಳಿ ಮಾಡಿಕೊಳ್ಳುವುದು (ಟ್ರಿಲ್ಲಿಂಗ್‌)ಧ್ವನಿಯನ್ನು ವಾರ್ಮ್ ಡೌನ್‌ ಮಾಡಲು:

ಮೃದುವಾಗಿ ಮತ್ತು ವಿಶ್ರಾಮವಾಗಿ ಹಮ್ಮಿಂಗ್‌ ಮಾಡಿ.

ನಿಮ್ಮ ಧ್ವನಿ ಸ್ಥಾಯಿ (ವೋಕಲ್‌ ರಿಜಿಸ್ಟರ್‌) ತಿಳಿದುಕೊಳ್ಳಿ :

ಹಾಡುವಾಗ ಅಥವಾ ಮಾತನಾಡುವಾಗ ಹಾನಿ ಉಂಟಾಗುವುದನ್ನು ತಡೆಯಲು ನಿಮ್ಮ ಸಹಜ ಧ್ವನಿಸ್ಥಾಯಿಯನ್ನು ತಿಳಿದುಕೊಳ್ಳಿರಿ. ಹಾಗೆಯೇ ಉತ್ತಮ ಧ್ವನಿ ಅಭ್ಯಾಸವನ್ನು ಬೆಳೆಸಿಕೊಳ್ಳಿರಿ.

ಧ್ವನಿವರ್ಧಕ ಬಳಸಿ :

ಧ್ವನಿಗೆ ಹಾನಿ ಉಂಟಾಗುವುದನ್ನು ತಡೆಯಲು ಅಗತ್ಯವಿದ್ದಲ್ಲಿ ಧ್ವನಿವರ್ಧಕಗಳನ್ನು ಉಪಯೋಗಿಸಿ.

 ಧ್ವನಿ ಕೆಲಸ ಮಾಡಿದ ಬಳಿಕ ಸಾಕಷ್ಟು ವಿಶ್ರಾಂತಿ ಪಡೆಯಿರಿ :

ದೀರ್ಘ‌ಕಾಲಿಕ ಧ್ವನಿ ಬಳಕೆಯ ಬಳಿಕ ಕಿರು ಅವಧಿಯ ವಿಶ್ರಾಂತಿ ಅಥವಾ “ಧ್ವನಿ ಕಿರುನಿದ್ದೆ’ ಮಾಡಿ. ಉದಾಹರಣೆಗೆ, 45 ನಿಮಿಷ ಧ್ವನಿ ಬಳಕೆ ಮತ್ತು 15 ನಿಮಿಷ ವಿಶ್ರಾಂತಿ.

 ಗಂಟಲು ನೋವಿದ್ದಾಗ ಹಬೆ ಸೇವಿಸಿ ಅಥವಾ ಗಾರ್ಗಲ್‌ ಮಾಡಿ :

ತೇವಾಂಶ ಕಾಪಾಡಲು ಮತ್ತು ನೋವು ಕಡಿಮೆ ಮಾಡಲು ಹೀಗೆ ಮಾಡಿ.

  • ಧ್ವನಿ ಬಳಕೆಯ ಬಳಿಕ ಪಾನೀಯಗಳನ್ನು ಸೇವಿಸಿ
  • ದೀರ್ಘ‌ಕಾಲಿಕ ಧ್ವನಿ ಬಳಕೆಯ ಬಳಿಕ ಕೆಫೀನ್‌ಮುಕ್ತ ಪಾನೀಯಗಳನ್ನು ಸೇವಿಸಿ, ಇವು ಧ್ವನಿಗೆ ಉತ್ತಮ ವಿಶ್ರಾಂತಿ ನೀಡುತ್ತವೆ.

ಇವುಗಳಿಂದ ಧ್ವನಿಪೆಟ್ಟಿಗೆ ಒಣಗುತ್ತದೆ :  

ಏರ್‌ ಕಂಡಿಶನರ್‌ ಮತ್ತು ಏರ್‌ಕೂಲರ್‌ ಬಳಕೆಯನ್ನು ಕಡಿಮೆ ಮಾಡಿ. ಇವು ನಾವು ಉಸಿರಾಟದ ಮೂಲಕ ಒಳಕ್ಕೆ ಎಳೆದುಕೊಳ್ಳುವ ಗಾಳಿಯನ್ನು ಒಣಗಿಸುತ್ತದೆ, ಇದರಿಂದಾಗಿ ಧ್ವನಿತಂತುಗಳು ಕೂಡ ಒಣಗುತ್ತವೆ. ಎಸಿಯಿಂದ ದೂರ ಇರಲು ಸಾಧ್ಯವಾಗದೆ ಇದ್ದರೆ ಆಗಾಗ ನೀರು ಕುಡಿಯುವ ಮೂಲಕ ಗಂಟಲಿನಲ್ಲಿ ತೇವಾಂಶ ಕಾಪಾಡಿಕೊಳ್ಳಿ.

  • ಔಷಧಗಳಿಂದಲೂ ಅಡ್ಡ ಪರಿಣಾಮಗಳು ಉಂಟಾಗುತ್ತವೆ
  • ಆ್ಯಂಟಿ ಹಿಸ್ಟಾಮಿನ್‌ಗಳು, ಡಿಕಂಜಸ್ಟಂಟ್‌ಗಳು ಮತ್ತು ಆ್ಯಂಟಿ ಡಿಪ್ರಸೆಂಟ್‌ಗಳು ಧ್ವನಿ ಒಣಗುವುದಕ್ಕೆ ಕಾರಣವಾಗುತ್ತವೆ.
  • ಗಂಟಲು ನೋವಿಗಾಗಿ ತೆಗೆದುಕೊಂಡ ಸ್ಥಳೀಯ ಅರಿವಳಿಕೆಯ ಪರಿಣಾಮ ಕಡಿಮೆಯಾದಾಗ ಗಂಟಲು ಮತ್ತಷ್ಟು ಹಾನಿಗೀಡಾಗುತ್ತದೆ.
  • ಧೂಮಪಾನ ನಿಲ್ಲಿಸಿ ಇಲ್ಲವಾದರೆ ಧ್ವನಿ ಕಳೆದುಕೊಳ್ಳುವಿರಿ
  • ಧೂಮಪಾನ ಶ್ವಾಸಕೋಶ ಮತ್ತು ಗಂಟಲಿನ ಕ್ಯಾನ್ಸರ್‌ ಉಂಟುಮಾಡುತ್ತದೆ.

ತಂಬಾಕು ಬಳಕೆ ಸ್ಥಗಿತಗೊಳಿಸಿ :

ತಂಬಾಕು ಅಥವಾ ಇನ್ಯಾವುದೇ ಮನೋಸ್ಥಿತ್ಯಂತರಕಾರಿ ಔಷಧಗಳ ಬಳಕೆಯನ್ನು ನಿಲ್ಲಿಸಿ. ಅವು ಧ್ವನಿತಂತುಗಳಿಗೆ ಕಿರಿಕಿರಿ ಉಂಟುಮಾಡುತ್ತವೆ. ಅಲ್ಲದೆ ಬಾಯಿಯ ಕ್ಯಾನ್ಸರ್‌ಗೂ ಕಾರಣವಾಗಬಲ್ಲುದು.

  • ಮಾತನಾಡಿ, ಕಿರುಚಾಡಬೇಡಿ
  • ಕಿರುಚಾಟ, ಗದ್ದಲ ನಡೆಸಿ ನಿಮ್ಮ ಧ್ವನಿತಂತುಗಳಿಗೆ ಹಾನಿ ಉಂಟುಮಾಡಿಕೊಳ್ಳಬೇಡಿ.
  • ದೂರದಲ್ಲಿರುವ ಯಾರದ್ದಾದರೂ ಗಮನ ಸೆಳೆಯಬೇಕು ಎಂದಾದರೆ ಸನ್ನೆ ಸಂಕೇತ (ಚಪ್ಪಾಳೆ ತಟ್ಟುವುದು, ಗಂಟೆ ಬಾರಿಸುವುದು ಅಥವಾ ಸಿಳ್ಳೆ ಹೊಡೆಯುವುದು) ಉಪಯೋಗಿಸಿ.
  • ನೀವು ಯಾರ ಬಳಿ ಮಾತನಾಡುತ್ತಿದ್ದೀರೋ ಅವರ ಸನಿಹಕ್ಕೆ ಹೋಗಿ ಮಾತನಾಡಿ.
  • ಸದ್ದುಗದ್ದಲದಿಂದ ಕೂಡಿದ ಸ್ಥಳದಲ್ಲಿ ಮಾತನಾಡುವುದು, ಹಾಡುವುದು ಮಾಡಬೇಡಿ.
  • ಶೀತ, ಕೆಮ್ಮು ಇದ್ದಾಗ ಶಾಂತವಾಗಿರಿ.

ಪಿಸುಮಾತನಾಡುವುದು ಕೂಡ ಒಳ್ಳೆಯದಲ್ಲ! :

ನಿಮ್ಮ ಧ್ವನಿಯನ್ನು ಉಳಿಸಿಕೊಳ್ಳಲು ಪಿಸುಗುಡುವುದು ಕೂಡ ಬೇಡ. ಇದಕ್ಕಾಗಿ ವಾಕ್‌ ತಜ್ಞ (ಸ್ಪೀಚ್‌ ಪೆಥಾಲಜಿಸ್ಟ್‌)ರ ಸಲಹೆ ಪಡೆಯಿರಿ.

ಕರ್ಕಶ ಗಂಟಲಿಗೆ ವಿದಾಯ ಹೇಳಿ! :

ಧ್ವನಿಯನ್ನು ಸರಿಪಡಿಸಿಕೊಳ್ಳುವ ಉದ್ದೇಶದಿಂದ ಆಗಾಗ ಗಂಟಲು ಕೆರೆದುಕೊಳ್ಳುವುದು ಅಥವಾ ಕ್ಯಾಕರಿಸಿ ಕೆಮ್ಮುವುದು ಬೇಡ.

ಪರಿಸರದ ಬಗ್ಗೆ ನಿಗಾ ಇರಿಸಿ :

  • ಹೊಗೆ, ಧೂಳಿನಿಂದ ಕೂಡಿದ ಪರಿಸರದಿಂದ ದೂರ ಇರಿ. ಇವು ಗಂಟಲು, ಧ್ವನಿಗೆ ಕಿರಿಕಿರಿ ಉಂಟು ಮಾಡುತ್ತವೆ.
  • ಪರಿಸರದ ಧ್ವನಿಯನ್ನು ಬದಲಾಯಿಸಿಕೊಳ್ಳಲು ಸರಿಯಾದ ಸಲಕರಣೆ (ಸೌಂಡ್‌ ಅಬ್ಸಾರ್ಬೆಂಟ್ಸ್‌) ಗಳನ್ನು ಉಪಯೋಗಿಸಿ.
  • ಸರಿಯಾದ ಸಮಯದಲ್ಲಿ ಆರೋಗ್ಯಯುತ ಮತ್ತು ನಿಯಮಿತವಾದ ಆಹಾರಾಭ್ಯಾಸವನ್ನು ಪಾಲಿಸಿ
  • ಹಾಲಿನ ಉತ್ಪನ್ನಗಳನ್ನು ಸೇವಿಸುವುದು ಮತ್ತು ತಡರಾತ್ರಿ ಆಹಾರ ಸೇವಿಸುವುದರಿಂದ ಗಂಟಲಿನಲ್ಲಿ ದಪ್ಪನೆಯ ಲೋಳೆರಸ ಉತ್ಪತ್ತಿಯಾಗುತ್ತದೆ ಅಥವಾ ಇದರಿಂದ ಧ್ವನಿತಂತುಗಳಿಗೆ ಕಿರಿಕಿರಿ ಉಂಟಾಗುತ್ತದೆ.
  • ತುಂಬಾ ತಣ್ಣನೆಯ ಪಾನೀಯ ಅಥವಾ ಆಹಾರ ಸೇವಿಸಿದರೆ ಧ್ವನಿತಂತುಗಳು ಬಿಗಿದುಕೊಳ್ಳುತ್ತವೆ. ಹಾಗೆಯೇ ತುಂಬಾ ಬಿಸಿಯಾದುದನ್ನು ಸೇವಿಸುವುದರಿಂದ ಅನ್ನನಾಳದ ಕ್ಯಾನ್ಸರ್‌ ಉಂಟಾಗುವ ಸಾಧ್ಯತೆಯಿದೆ.
  • ರಾತ್ರಿ ಮಲಗುವುದಕ್ಕೆ ಮುನ್ನ ತುಂಬಾ ಮಸಾಲೆಯುಕ್ತ ಅಥವಾ ಖಾರವಾದ ಆಹಾರ ಸೇವನೆ ಬೇಡ. ಇದರಿಂದ ಅನ್ನನಾಳದಲ್ಲಿ ಆಮ್ಲೀಯ ಆಹಾರ ಹಿಮ್ಮರಳುವಿಕೆ ಉಂಟಾಗಿ ಧ್ವನಿ ತಂತುಗಳಿಗೆ ಹಾನಿ, ಕಿರಿಕಿರಿ ಉಂಟಾಗುತ್ತದೆ.

ಗಾಢವಾದ, ಅಡೆತಡೆಯಿಲ್ಲದ ನಿದ್ದೆಯನ್ನು ಅಭ್ಯಾಸ ಮಾಡಿಕೊಳ್ಳಿ :

ರಾತ್ರಿ ಅಡೆತಡೆ ಇಲ್ಲದ, ಗಾಢವಾದ ಕನಿಷ್ಠ 7ರಿಂದ 9 ತಾಸು ನಿದ್ದೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸಾಕಷ್ಟು ಅವಧಿಯ ಮತ್ತು ಗುಣಮಟ್ಟದ ನಿದ್ದೆ ಸಿಗದೆ ಹೋದರೆ ನಿಮ್ಮ ಧ್ವನಿಗೆ ಹಾನಿಯಾಗುವ ಸಾಧ್ಯತೆ ಇದೆ.

ಒತ್ತಡದಿಂದ ಮುಕ್ತರಾಗಿರಿ :

ಭಾವನಾತ್ಮಕ ಮತ್ತು ದೈಹಿಕ ಒತ್ತಡಗಳಿಂದ ದೂರ ಇರಿ. ಇವೆರಡೂ ಧ್ವನಿ ತೊಂದರೆಗೀಡಾಗುವುದಕ್ಕೆ ಕಾರಣವಾಗುತ್ತವೆ.ಘಿ

 

ಡಾ| ಶೀಲಾ ಎಸ್‌.

ಅಸಿಸ್ಟೆಂಟ್‌ ಪ್ರೊಫೆಸರ್‌- ಸೀನಿಯರ್‌

ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next