Advertisement
ಆಪರೇಷನ್ ಕಮಲದ ಬಗ್ಗೆ ಸಾಕಷ್ಟು ವಿರೋಧಗಳು ಕೇಳಿ ಬರುತ್ತಿದ್ದರೂ, ಸೋಮವಾರದಿಂದ ನಡೆಯುವ ಬೆಳವಣಿಗೆಗೂ ತಮಗೂ ಏನೂ ಸಂಬಂಧ ಇಲ್ಲದಂತೆ ತಟಸ್ಥವಾಗಿ ಉಳಿಯುವ ಮೂಲಕ ಸರ್ಕಾರವನ್ನು ಉರುಳಿಸುವ ಲೆಕ್ಕಾಚಾರ ಬಿಜೆಪಿ ನಾಯಕರದ್ದು ಎನ್ನಲಾಗುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, 20ಕ್ಕೂ ಹೆಚ್ಚು ಶಾಸಕರು ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಗಂಭೀರವಾಗಿ ಚರ್ಚಿತವಾಗುತ್ತಿದೆ.
Related Articles
Advertisement
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಎಲ್ಲ ಶಾಸಕರೂ ಅಂದೇ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯ ತೂಗುಕತ್ತಿಯಿಂದಲೂ ಪಾರಾಗಲೂ ಕಾನೂನು ಸಲಹೆಯನ್ನೂ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆರ್ಥಿಕ ಕಾರಣ? : ಸಮ್ಮಿಶ್ರ ಸರ್ಕಾರದಲ್ಲಿ ಬಹುತೇಕ ಶಾಸಕರಿಗೆ ತಮ್ಮ ಕ್ಷೇತ್ರದ ಕೆಲಸಗಳು ಆಗುತ್ತಿಲ್ಲ ಎನ್ನುವುದು ಒಂದು ಕಾರಣವಾದರೆ, ಬಹುತೇಕ ಶಾಸಕರ ಆರ್ಥಿಕ ವ್ಯವಹಾರಗಳೂ ಈ ಬೆಳವಣಿಗೆಗೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ವೈಯುಕ್ತಿಕವಾಗಿ ಅನೇಕ ಶಾಸಕರಿಗಿರುವ ಆರ್ಥಿಕ ಜವಾಬ್ದಾರಿ ನಿಭಾಯಿಸಿಕೊಳ್ಳಲು ಈ ಬೆಳವಣಿಗೆಗೆ ಮುಂದಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಶಾಸಕರಿಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧಿಕಾರ ನೀಡುವ ಭರವಸೆ ನೀಡಿದ್ದರೂ, ಮುಂಬರುವ ಉಪ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿಕೊಂಡು ಬರುವ ಬಗ್ಗೆ ಖಚಿತ ಭರವಸೆ ದೊರೆತಿಲ್ಲ ಎಂದು ಹೇಳಲಾಗುತ್ತಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಶಾಸಕರು ಸೆ. 18 ರಂದು ನಡೆಯುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ. ಈ ಶಾಸಕರೊಂದಿಗೆ ಮುಳಬಾಗಿಲು ಶಾಸಕ ನಾಗೇಶ್ ಹಾಗೂ ರಾಣೆಬೆನ್ನೂರು ಶಾಸಕ ಹಾಗೂ ಅರಣ್ಯ ಸಚಿವ ಆರ್. ಶಂಕರ್ ಕೂಡ ಬಿಜೆಪಿ ಜೊತೆ ಕೈ ಜೋಡಿಸಲಿದ್ದಾರೆ ಎಂಬುದು ಬಿಜೆಪಿ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಪ್ರಯತ್ನಆಪರೇಷನ್ ಕಮಲಕ್ಕೆ ತುತ್ತಾಗಲು ಮುಂದಾಗಿರುವ ಶಾಸಕರನ್ನು ಪಕ್ಷದಲ್ಲಿಯೇ ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ನಾಯಕರು ನಿರಂತರ ಪ್ರಯತ್ನ ನಡೆಸುತ್ತಿದ್ದು, ಭಾನುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಗಳೂರಿಗೆ ಆಗಮಿಸಲಿದ್ದು, ಅವರ ಮೂಲಕ ಶಾಸಕರ ವಲಸೆಯನ್ನು ತಡೆಯಲು ಕೈ ನಾಯಕರು ಮುಂದಾಗಿದ್ದಾರೆ. ಬಿಜೆಪಿ ಲೆಕ್ಕಾಚಾರ ಪಟ್ಟಿಯಲ್ಲಿರುವ ಶಾಸಕರು
ಎಂಟಿಬಿ ನಾಗರಾಜ್-ಹೊಸಕೋಟೆ (ಕಾಂ)
ಕೃಷ್ಣಾ ರೆಡ್ಡಿ-ಚಿಂತಾಮಣಿ (ಜೆಡಿಎಸ್)
ರಮೇಶ್ ಜಾರಕಿಹೊಳಿ-ಗೋಕಾಕ್ (ಕಾಂ)
ಮಹೇಶ್ ಕಮಟೊಳ್ಳಿ-ಅಥಣಿ (ಕಾಂ)
ಬಸನಗೌಡ ದದ್ದಲ್-ರಾಯಚೂರು ಗ್ರಾಮಾಂತರ (ಕಾಂ)
ಪ್ರತಾಪ್‌ಗೌಡ ಪಾಟೀಲ್-ಮಸ್ಕಿ (ಕಾಂ)
ಆನಂದ್ ಸಿಂಗ್-ಹೊಸಪೇಟೆ (ಕಾಂ)
ಜೆ.ಎನ್. ಗಣೇಶ್- ಕಂಪ್ಲಿ. (ಕಾಂ)
ನಾಗೇಂದ್ರ-ಬಳ್ಳಾರಿ ಗ್ರಾಂ. (ಕಾಂ)
ಎಂ.ವೈ ಪಾಟೀಲ್- ಅಫಜಲ್‌ಪುರ (ಕಾಂ)
ಬಿ.ಸಿ. ಪಾಟೀಲ್-ಹಿರೆಕೇರೂರು(ಕಾಂ)
ದೇವಾನಂದ ಚೌಹಾನ್-ನಾಗಠಾಣ (ಜೆಡಿಎಸ್)
ಸುಬ್ಟಾರೆಡ್ಡಿ-ಬಾಗೇಪಲ್ಲಿ (ಕಾಂ)
ವಿ.ಮುನಿಯಪ್ಪ-ಶಿಡ್ಲಘಟ್ಟ (ಕಾಂ)
ನಂಜೇಗೌಡ-ಮಾಲೂರು (ಕಾಂ)
ಅನಿಲ್ ಕುಮಾರ್-ಹೆಚ್.ಡಿ. ಕೋಟೆ (ಕಾಂ)
ನಾರಾಯಣರಾವ್-ಬಸವಕಲ್ಯಾಣ (ಕಾಂ)
ಡಿ.ಎಸ್. ಹೂಲಗೇರಿ-ಲಿಂಗಸಗೂರು (ಕಾಂ)
ಶ್ರೀಮಂತ ಪಾಟೀಲ್-ಕಾಗವಾಡ (ಜೆಡಿಎಸ್)
ಆರ್.ಶಂಕರ್-ರಾಣೆಬೆನ್ನೂರು (ಪಕ್ಷೇತರ)
ನಾಗೇಶ್-ಮುಳಬಾಗಿಲು (ಪಕ್ಷೇತರ) ಕಾಂಗ್ರೆಸ್-ಜೆಡಿಎಸ್‌ನಿಂದಲೇ ಆಪರೇಷನ್
ಬೆಂಗಳೂರು: ಮೈತ್ರಿ ಸರ್ಕಾರ ಕೆಡವಲು ಹಣ ಸಂಗ್ರಹಕ್ಕೆ ಬಿಜೆಪಿ ಕಿಂಗ್‌ಪಿನ್‌ಗಳನ್ನು ಬಳಸಿಕೊಳ್ಳುತ್ತಿದೆ ಎಂಬ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಆಂತರಿಕ ಕಚ್ಚಾಟದಿಂದಾಗಿ ಆತಂಕಗೊಂಡು ಸರ್ಕಾರ ಉಳಿಸಿಕೊಳ್ಳಲು ಆಪರೇಷನ್ ನಡೆಸುತ್ತಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್. ಆದರೆ, ಅನುಕಂಪ ಗಿಟ್ಟಿಸಲು ಮಾಫಿಯಾಗಳ ಹೆಗಲ ಮೇಲೆ ಬಂದೂಕು ಇಟ್ಟು ಬಿಜೆಪಿಗೆ ಗುಂಡು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದೆ.