ಬೆಂಗಳೂರು: ಸವಿತಾ ಸಮಾಜ ಅಭಿವೃದ್ಧಿ ನಿಗಮದ ಕಾರ್ಯಚಟುವಟಿಕೆಗೆ 20 ಕೋಟಿ ರೂ. ಅನುದಾನ ಒದಗಿಸಲಾಗುವುದು. ಮುಂದಿನ ವರ್ಷ 200 ಕೋಟಿ ಅನುದಾನ ನೀಡಲಿದ್ದೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯು ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಉದ್ಘಾಟಿಸಿ ಮಾತನಾಡಿ. ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಸವಿತಾ ಸಮುದಾಯದ ಅಭಿವೃದ್ಧಿ ಹೊಸದಾಗಿ ನಿಗಮ ಆರಂಭಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದೇವೆ. ಅದರಂತೆ 20 ಕೋಟಿ ರೂ. ಈ ವರ್ಷ ಹಂಚಿಕೆ ಮಾಡಲಿದ್ದೇವೆ ಎಂದರು.
ನಿಗಮದ ಮೂಲಕ ಸಮಾಜದ ಅಭಿವೃದ್ಧಿಗಾಗಿ ವಿವಿಧ ಕಾರ್ಯ ಚಟುವಟಿಕೆ ಹಮ್ಮಿಕೊಳ್ಳಲು 100 ಕೋಟಿ ರೂ. ಬೇಡಿಕೆ ಇದ್ದರೂ, ರೈತರ ಸಾಲ ಮನ್ನಾದಿಂದ ಪ್ರಥಮ ವರ್ಷದಲ್ಲಿ 20 ಕೋಟಿ ರೂ. ಹಂಚಿಕೆ ಮಾಡಲಿದ್ದು, ಮುಂದಿನ ಸಾಲಿನಲ್ಲಿ 200 ಕೋಟಿ ರೂ. ಹಣ ಒದಗಿಸಲು ಸಿದ್ಧ ಎಂದು ಭರವಸೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸವಿತಾ ಸಮಾಜದ ಕಾರ್ಯಚಟುವಟಿಕೆಗೆ ಸಮುದಾಯ ಭವನ ಹಾಗೂ ಸವಿತಾ ಮಹರ್ಷಿ ಪ್ರತಿಮೆ ಸ್ಥಾಪಿಸಲು ಅಗತ್ಯ ಜಾಗ ಗುರುತಿಸಲು ಸೂಚಿಸಲಾಗುವುದು. ಮುಜರಾಯಿ ದೇವಸ್ಥಾನಗಳಲ್ಲಿ ಸಂಗೀತ ನುಡಿಸುವುದು, ಪ್ರಮುಖ ಸ್ಥಳಗಳಲ್ಲಿ ಕ್ಷೌರಿಕ ಅಂಗಡಿಗಳ ಆರಂಭ, ವಸತಿ ಹಾಗೂ ಇನ್ನಿತರ ಸೌಲಭ್ಯಗಳನ್ನು ಹಂತ-ಹಂತವಾಗಿ ಒದಗಿಸಲು ಸರ್ಕಾರ ಬದ್ಧವಿದೆ. ಅಲ್ಲದೇ, ಈ ಸಮಾಜಕ್ಕೆ ಶೈಕ್ಷಣಿಕವಾಗಿ ಅಗತ್ಯ ಸಹಕಾರ ನೀಡಲಿದ್ದೇವೆ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಜಾತಿ ಸಮಸ್ಯೆಯಿಂದ ಸವಿತಾ ಸಮಾಜದ ಜನರು ವ್ಯಥೆ ಪಟ್ಟಿದ್ದಾರೆ. ಬುದ್ಧನಿಗೆ ಕ್ಷೌರ ಮಾಡಿದ ಸಮಾಜವಾಗಿದ್ದರೂ, ಶಾಸನ ಸಭೆಗೆ ಸದಸ್ಯ ಗಿಟ್ಟಿಸಲು ದಶಕಗಳ ಕಾಲ ಹಿಡಿದಿದೆ. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಂಘಟಿತರಾಗುವ ಜತೆಗೆ ಸಮಾಜದ ಮುಖ್ಯವಾಹಿನಿಗೆ ಬರಲು ಯತ್ನಿಸಿ, ಸರ್ಕಾರ ಇದಕ್ಕೆ ಸೂಕ್ತ ಸಹಕಾರ ನೀಡಲಿದೆ ಎಂದರು.
ಕೊಂಚೂರಿನ ಸವಿತಾ ಪೀಠದ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ದೇವರಾಜು ಅರಸು ಸಂಶೋಧನಾ ಸಂಸ್ಥೆ ನಿರ್ದೇಶಕ ಪ್ರೊ.ಎನ್.ವಿ.ನರಸಿಂಹಯ್ಯ ಉಪನ್ಯಾಸ ನೀಡಿದರು. ಸಚಿವರಾದ ಸಾ.ರಾ.ಮಹೇಶ್, ಜಮೀನ್ ಅಹಮದ್ ಖಾನ್, ವೆಂಕಟರಾವ್ ನಾಡಗೌಡ, ಮೇಲ್ಮನೆ ಸದಸ್ಯರಾದ ಬಸವರಾಜ ಹೊರಟ್ಟಿ, ಎಂ.ಸಿ.ವೇಣುಗೋಪಾಲ್, ರಮೇಶ್‌ಗೌಡ, ಕನ್ನಡ-ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಜಾನಕಿ, ಸವಿತಾ ಸಮಾಜದ ರಾಜ್ಯಾಧ್ಯಕ್ಷ ಯು.ಕೃಷ್ಣಮೂರ್ತಿ ಮತ್ತಿತರರಿದ್ದರು.