ಶ್ರೀನಗರ: ರಿಯಾಸಿ ಜಿಲ್ಲೆಯ ತುಕ್ಸಾನ್‌ನಲ್ಲಿ ಗ್ರಾಮಸ್ಥರ ಮಹತ್ವದ ಸಹಕಾರದಿಂದಾಗಿ ಶಸ್ತ್ರಾಸ್ತ್ರಗಳ ಸಹಿತ ಎಲ್‌ಇಟಿಯ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಭಾನುವಾರ ಬಂಧಿಸಿವೆ.
ಬಂಧಿತರು ಮೋಸ್ಟ್ ವಾಂಟೆಡ್ ಉಗ್ರರಾಗಿದ್ದು, ಪುಲ್ವಾಮಾ ನಿವಾಸಿ ಫೈಝಲ್ ಅಹ್ಮದ್ ದಾರ್ ಮತ್ತು ರಾಜೌರಿ ನಿವಾಸಿ ತಾಲಿಬ್ ಹುಸೇನ್ ಎಂದು ಗುರುತಿಸಲಾಗಿದೆ.
ಇಬ್ಬರೂ ಅಮರನಾಥ ಯಾತ್ರೆಯ ಮೇಲೆ ದಾಳಿ ನಡೆಸಲು ಸಿದ್ಧರಾಗಿದ್ದರು ಎಂದು ಭದ್ರತಾ ಪಡೆಗಳು ತಿಳಿಸಿವೆ. ಬಂಧಿತರಿಂದ 2 ಎಕೆ ರೈಫಲ್‌ಗಳು, 7 ಗ್ರೆನೇಡ್‌ಗಳು ಮತ್ತು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.
”ಉಗ್ರರು ಕಳೆದ ಹಲವು ದಿನಗಳಿಂದ ಭದ್ರತಾ ಪಡೆಗಳಿಂದ ಒತ್ತಡ ಅನುಭವಿಸಿ ಪರಾರಿಯಾಗಿ ರಿಯಾಸಿಯ ಟಕ್ಸನ್ ಧಾಕ್ ಪ್ರದೇಶದಲ್ಲಿ ಆಶ್ರಯ ಪಡೆದಿದ್ದರು. ಸ್ಥಳೀಯರು ಅವರನ್ನು ಗುರುತಿಸುತ್ತಿದ್ದಂತೆ, ಇಬ್ಬರನ್ನು ಹಿಡಿದು ಪೊಲೀಸರು ಮತ್ತು ಸೇನೆಗೆ ಮಾಹಿತಿ ನೀಡಿದರು. ನಂತರ ಇಬ್ಬರನ್ನು ಬಂಧಿಸಲಾಯಿತು.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಗ್ರಾಮಸ್ಥರ ಧೈರ್ಯವನ್ನು ಶ್ಲಾಘಿಸಿ ಗ್ರಾಮಸ್ಥರು ತೋರಿದ ಈ ರೀತಿಯ ಸಂಕಲ್ಪದಿಂದ ಭಯೋತ್ಪಾದನೆಯ ಅಂತ್ಯದ ದಿನಗಳು ದೂರವಿಲ್ಲ ಎಂದು ಹೇಳಿದ್ದಾರೆ. ಗ್ರಾಮಸ್ಥರಿಗೆ 5 ಲಕ್ಷ ರೂಪಾಯಿ ನಗದು ಬಹುಮಾನವನ್ನೂ ಘೋಷಿಸಿದ್ದಾರೆ.ಗ್ರಾಮಸ್ಥರಿಗೆ ಜಮ್ಮು ಡಿಜಿಪಿ ಎಡಿಜಿಪಿ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.