Advertisement

ಸರಕಾರಿ ಆಸ್ಪತ್ರೆ: 49.28 ಕೆವಿ ಸೋಲಾರ್‌ ಘಟಕ ಅನುಷ್ಠಾನ

11:32 AM Dec 19, 2018 | |

ಬೆಳ್ತಂಗಡಿ : ವಿದ್ಯುತ್‌ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಇದೀಗ ಕೇಂದ್ರದ ಸಮಗ್ರ ಇಂಧನ ಅಭಿವೃದ್ಧಿ ಯೋಜನೆ (ಐಪಿಡಿಎಸ್‌) ಮೂಲಕ ಬೆಳ್ತಂಗಡಿ ತಾಲೂಕಿಗೆ 2 ಸೋಲಾರ್‌ ಘಟಕ ಮಂಜೂರಾಗಿದೆ.

Advertisement

2 ಘಟಕಗಳಲ್ಲಿ ತಾ.ಪಂ.ನ ಸೋಲಾರ್‌ ಘಟಕ ಈಗಾಗಲೇ ಉದ್ಘಾಟನೆಗೊಂಡಿದ್ದು, ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಅನುಷ್ಠಾನ ಗೊಳಿಸಲಾದ ಘಟಕ ಇನ್ನಷ್ಟೇ ಉದ್ಘಾಟನೆಗೊಳ್ಳಬೇಕಿದೆ. ಸರಕಾರಿ ಆಸ್ಪತ್ರೆಯಲ್ಲಿ ಸುಮಾರು 37 ಲಕ್ಷ ರೂ. ವೆಚ್ಚದಲ್ಲಿ 49.28 ಕಿಲೋವ್ಯಾಟ್‌ ಸಾಮ ರ್ಥ್ಯದ ಸೋಲಾರ್‌ ಘಟಕ ಅನುಷ್ಠಾನಗೊಂಡಿದೆ.

ಸಮಗ್ರ ಇಂಧನ ಅಭಿವೃದ್ಧಿ ಯೋಜನೆಯಲ್ಲಿ ಮಂಜೂರಾದ ಸೋಲಾರ್‌ ಘಟಕಗಳನ್ನು ಮೆಸ್ಕಾಂ ನೋಡಲ್‌ ಏಜೆನ್ಸಿಯಾಗಿ ಅನುಷ್ಠಾನಗೊಳಿಸುತ್ತಿದ್ದು, ಪ್ರಸ್ತುತ ಸರಕಾರಿ ಆಸ್ಪತ್ರೆಯಲ್ಲಿ ಅನುಷ್ಠಾನಗೊಂಡು ಘಟಕದ ಮೆಸ್ಕಾಂನ ತಾಂತ್ರಿಕ ಭಾಷೆ ಯಲ್ಲಿ ಸಿಂಕ್ರೊನೈಝ್ ಕಾರ್ಯ ಪೂರ್ತಿಗೊಂಡಿದ್ದರೂ ಅಧಿಕೃತ ಉದ್ಘಾಟನೆ ಇನ್ನೂ ನಡೆದಿಲ್ಲ.

ಈ ಸೋಲಾರ್‌ ಘಟಕದ ಅನುಷ್ಠಾನದ ದೃಷ್ಟಿಯಿಂದ ಬೆಳ್ತಂಗಡಿಯ ಇತರ ಸರಕಾರಿ ಕಟ್ಟಡಗಳನ್ನು ಮೆಸ್ಕಾಂ ಪರಿಶೀಲನೆ ಮಾಡಿತ್ತು. ಆದರೆ ಘಟಕ ಸ್ಥಾಪನೆಗೆ ಸಾಕಷ್ಟು ಸ್ಥಳಾವಕಾಶದ ಜತೆಗೆ ಕಟ್ಟಡದ ಮಹಡಿ ಸಮತಟ್ಟಾಗಿರಬೇಕಾಗುತ್ತದೆ. ವಿನ್ಯಾಸದ ದೃಷ್ಟಿಯಿಂದ ಮಹಡಿಗಳು ಸಮತಟ್ಟು ಇಲ್ಲದಿದ್ದರೆ ಅನುಷ್ಠಾನ ಅಸಾಧ್ಯ. ಹೀಗಾಗಿ ಉತ್ತಮ ಸ್ಥಳಾವಕಾಶವಿರುವ ಕಟ್ಟಡಗಳಲ್ಲಿ ಘಟಕ ಅನುಷ್ಠಾನಗೊಂಡಿದೆ.

ವಿದ್ಯುತ್‌ ಸ್ವಾವಲಂಬನೆಯ ದೃಷ್ಟಿಯಿಂದ ಸರಕಾರ ಇನ್ನಷ್ಟು ಸರಕಾರಿ ಇಲಾಖೆಗಳ ಕಟ್ಟಡಗಳಿಗೆ ಇಂತಹ ಸೋಲಾರ್‌ ಘಟಕಗಳನ್ನು ನೀಡಿದಲ್ಲಿ, ಕಚೇರಿಗಳಿಗೆ ವಿದ್ಯುತ್‌ ಖರ್ಚು ಉಳಿಕೆಯ ಜತೆಗೆ ಮೆಸ್ಕಾಂಗೂ ಲಾಭವಾಗಲಿದೆ. ಅಂದರೆ ಹೆಚ್ಚುವರಿ ವಿದ್ಯುತ್ತನ್ನು ಯಾವುದೇ ಶುಲ್ಕ ಪಾವತಿಸದೆ ಮೆಸ್ಕಾಂ ಪಡೆಯಲಿದೆ.

Advertisement

ತಾ.ಪಂ.ನಲ್ಲಿ 24.32 ಕಿ.ವ್ಯಾ.
ಇದೇ ಯೋಜನೆಯಲ್ಲಿ ಬೆಳ್ತಂಗಡಿ ತಾ.ಪಂ.ನ ಸಾಮರ್ಥ್ಯ ಸೌಧದಲ್ಲಿ ಸುಮಾರು 17 ಲಕ್ಷ ರೂ.ವೆಚ್ಚದಲ್ಲಿ 24.32 ಕಿಲೋವ್ಯಾಟ್‌ ಸಾಮರ್ಥ್ಯದ ಸೋಲಾರ್‌ ಘಟಕವನ್ನು ಸ್ಥಾಪಿಸಲಾಗಿದ್ದು, ಅದು ಈಗಾಗಲೇ ಉದ್ಘಾಟನೆಗೊಂಡಿದೆ. ಇದರಿಂದ ವಾರ್ಷಿಕವಾಗಿ ಸುಮಾರು 35 ಸಾವಿರ ಯೂನಿಟ್‌ ವಿದ್ಯುತ್‌ ಉತ್ಪಾದನೆ ಸಾಧ್ಯವಾಗಲಿದ್ದು, ತಾ.ಪಂ.ನ ಬಳಕೆ ಬಳಿಕ ಹೆಚ್ಚುವರಿ ವಿದ್ಯುತ್‌ ಮೆಸ್ಕಾಂ ಪೂರೈಕೆಯಾಗಲಿದೆ. 

73 ಸಾವಿರ ಯೂನಿಟ್‌
ಆಸ್ಪತ್ರೆಯಲ್ಲಿ ಅನುಷ್ಠಾನಗೊಂಡ 49.28 ಕಿಲೋವ್ಯಾಟ್‌ ಸಾಮರ್ಥ್ಯದ ಸೋಲಾರ್‌ ಘಟಕದಿಂದ ವಾರ್ಷಿಕವಾಗಿ ಸುಮಾರು 73 ಸಾವಿರ ಯೂನಿಟ್‌ ಉತ್ಪಾದನೆಯಾಗಲಿದೆ. ಒಟ್ಟು ಉತ್ಪಾದನೆಯಲ್ಲಿ ಆಸ್ಪತ್ರೆಯ ಉಪಯೋಗಗಳಿಗೆ ಬಳಕೆ ಮಾಡಲಾಗುತ್ತದೆ. ಅದರಿಂದ ಉಳಿಕೆಯಾದ ಹೆಚ್ಚುವರಿ ವಿದ್ಯುತ್‌ ನೇರವಾಗಿ ಮೆಸ್ಕಾಂನ ಗ್ರಿಡ್‌ಗೆ ಪೂರೈಕೆಯಾಗುತ್ತದೆ. ಇದರಿಂದ ಆಸ್ಪತ್ರೆಗೆ ವಿದ್ಯುತ್‌ ಬಿಲ್‌ ಪಾವತಿ ಉಳಿಕೆಯಾಗಲಿದೆ. ಜತೆಗೆ ವಿದ್ಯುತ್‌ ಕಡಿತದ ತೊಂದರೆಯೂ ತಪ್ಪಲಿದೆ. ಮೆಸ್ಕಾಂ ಸಂಸ್ಥೆಗೂ ಕೂಡ ಉಳಿಕೆಯಾದ ವಿದ್ಯುತ್‌ ಉಚಿತವಾಗಿ ಲಭ್ಯವಾಗಲಿದೆ. 

 ಎರಡು ಘಟಕ ಮಂಜೂರು
ಬೆಳ್ತಂಗಡಿಯಲ್ಲಿ ಈ ಯೋಜನೆಯಲ್ಲಿ ಎರಡು ಘಟಕಗಳು ಮಂಜೂರಾಗಿದ್ದು, ತಾ.ಪಂ. ಹಾಗೂ ಸರಕಾರಿ ಆಸ್ಪತ್ರೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಎರಡೂ ಕಡೆಗಳ ಹೆಚ್ಚುವರಿ ವಿದ್ಯುತ್‌ ಮೆಸ್ಕಾಂಗೆ ಸಿಗುತ್ತದೆ. ಮೆಸ್ಕಾಂ ಇದರ ನೋಡಲ್‌ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿದೆ.
 - ಶಿವಶಂಕರ್‌
ಎಇಇ, ಮೆಸ್ಕಾಂ ಬೆಳ್ತಂಗಡಿ

 ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next